ನೆನ್ನೆ ಆಗಷ್ಟೇ ಕಾಟೇರ ಸಿನೆಮಾ ನೋಡಿದೆ . ಕ್ರೌರ್ಯ ಜಾಸ್ತಿ ತೋರಿಸಿದ್ದಾರೆ ಅನ್ನಿಸಿತಾದರೂ ಜಾತಿ ವ್ಯವಸ್ಥೆಯಲ್ಲಿ ಇದಕ್ಕಿಂತ ಹೆಚ್ಚು ಕ್ರೂರ ಕಠೋರ ಸತ್ಯ ಅಡಗಿರುವುದು ಸುಳ್ಳಲ್ಲ, ಅತ್ಯುತ್ತಮ ಕಥೆ ಹಾಗು ಸಂಭಾಷಣೆ..ಬಹಳ ಜಾಗರೂಕತೆಯಿಂದ ಯಾವ ವ್ಯಕ್ತಿ ಸಂಘಟನೆಗೂ ಧಕ್ಕೆ ಬಾರದ ಹಾಗೆ ಸಿನೆಮಾ ಮೂಡಿ ಬಂದಿದೆ.
ನನ್ನನೇಕೆ ಸಿನೆಮಾ ಕಾಡುವುದು ಎಂದರೆ ಸಿನೆಮಾದ ಉದ್ದಕ್ಕೂ ಬರುವ “ಕುಲುಮೆ” ಯ ದೃಶ್ಯಗಳು.
ನನ್ನ ತಂದೆ ಕೆ.ಬೀ ಸಿದ್ದಯ್ಯ ರ ತಂದೆ ಕೆ.ಬೈಲಪ್ಪ ಅಂದರೆ ನಮ್ಮ ತಾತ ಗಾಡಿ ಬೈಲಪ್ಪಾ ಎಂದೇ ಪ್ರಸಿದ್ಧರು ವೃತ್ತಿಯಲ್ಲಿ ಎತ್ತಿನ ಗಾಡಿ ತಯಾರಿಸುತ್ತಿದ್ದರಿಂದ ಆ ಹೆಸರಿತ್ತು.. ಸುತ್ತಾ ಮುತ್ತಾ ಹಳ್ಳಿಗಳಿಂದ ಅಂದರೆ hoಟಿಟಿuಜiಞe, ಸೋಲುರು,ರಾಮನಗರ,ಮಾಗಡಿ ಇಂದ ಜನರು ನಮ್ಮ ತಾತ ನ ಹತ್ತಿರವೇ ಮಾಡಿಸ್ಸಿಕೊಳ್ಳುತ್ತಿದ್ದರಂತೆ..ಹಳ್ಳಿ ಮನೆಯ ಹೊರ ಗೋಡೆಗೆ ಬೈಲಪ್ಪ ಗಾಡಿ ಕಾರ್ಖನೆ ಎಂಬ ಬೋರ್ಡ್ ಇದ್ದದ್ದು ನೆನಪಿದೆ..ನಾನಾ ತಂದೆಯ ಅಣ್ಣ ಬಾಲಕೃಷ್ಣಪ್ಪ ಕುಲುಮೆ ಕೆಲಸ ಮಾಡುತ್ತಿದ್ದರು ಅವ್ರೂ ಉತ್ತಮ ಕೆಲಸಗಾರ ದೂರದ ಊರುಗಳಿಂದ ಜನ ಬಂದು ಕುಡ್ಲು, ಮಚ್ಚು ಮತ್ತು ಉಳುಮೆಗೆ ಬೇಕಾದ ವಸ್ತುಗಳನ್ನು ಮಾಡಿಸುತ್ತಿದ್ದರು..ದೊಡ್ಡಪ್ಪ ಕಬ್ಬಿಣದ ತುಂಡನ್ನು ನಿಗಿ ನಿಗಿ ಕೆಂಡದಲ್ಲಿ ಕಾಯಿಸಿ ಚೆನ್ನಾಗಿ ತಟ್ಟಿ ಕುಡ್ಲು ಮಾಡೋ ದನ್ನ ನೋಡುತ್ತಾ ನಿಲ್ಲುತಿದ್ದೆ..ತಿದಿ ಎಳೆಯಲು ಒಮ್ಮೆ ದೊಡ್ಡಮ್ಮ ಇರುತಿತ್ತು.
ಮತ್ತೊಮ್ಮೆ
ಇನ್ಯಾರೋ..ಊರಿಗೆ ಬಂದಾಗ ನನ್ನ ತಂದೆಯೂ ತಿದಿ ಎಳೆಯುತ್ತಿದ್ದ ದೃಶ್ಯ ಕಣ್ಮುಂದೆ ಬರುತ್ತೆ..
ಹಾಗೆಯೇ ಕುಲುಮೆಗೆ ಬೇಕಾದ ವಸ್ತುಗಳಲ್ಲಿ ಭತ್ತದ ಹೊಟ್ಟು,ಇದ್ದಿಲು ಇತ್ಯಾದಿಗಳನ್ನು ದೊಡ್ಡಪ್ಪ ಕುದೂರು ಅಥವಾ ತುಮಕೂರಿನಿಂದ ತರಿಸಿ ಇಟ್ಟಿರುತಿತ್ತು..ಸಂಜೆ ಆಗುತ್ತಿದ್ದ ಹಾಗೆ ತಿದಿ ಕಳಚಿ ಮನೆ ಒಳಗೆ ಇಡಬೇಕಾಗಿತ್ತು … ಕಳ್ಳರ ಕಾಟ ಬೇರೆ…ಬೆಳಕು ಹರಿಯುವ ಹೊತ್ತಿಗೆ ತಿದಿ ಇಡೋ ಒಲೆ ಶುಭ್ರ ಮಾಡಿ ಅರಿಶಿನ ಕುಂಕುಮ ಹಚ್ಚಿ ದೊಡಮ್ಮ ಕಾಫಿ ಮಾಡಲು ದೊಡ್ಡಪ್ಪ ಕೈ ಮುಗಿದು ತಿದಿ ಜೋಡಿಸುತಿತ್ತು ಸಿನೆಮಾದ ಉದ್ದಕ್ಕೂ ಇಂತಹ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ಮತ್ತು ನನಗೆ ಆ ದೃಶ್ಯಗಳು ನನ್ನ ಊರು ದೊಡ್ಡಪ್ಪ ಕುಲುಮೆ ಇಂದ ಮೇಲೆ ಏಳುತ್ತಿದ್ದ ಬಿಳಿ ಮೋಡದಂತ ಹೊಗೆ ಚಳಿಗೆ ಬೆಚ್ಚಗಿನ ಅಪ್ಪುಗೆ ನೀಡುತ್ತಿದ್ದ ತಿದಿ ಒಲೆ…ಒಮ್ಮೊಮ್ಮೆ ಅದೇ ಒಲೆಯಲ್ಲೆ ಕಾಯುಸುತ್ತಿದ್ದ ಕಾಫಿ, ಗಾಡಿ ಚಕ್ರ ತಯಾರಿಸಲು ಪಟ ಬಿಡುವುದು , ಟೈರ್ ಗಾಡಿ ಬಂದ ಮೇಲೆ ಮರದ ಚಕ್ರಕ್ಕೆ ಬೇಡಿಕೆ ಕಮ್ಮಿ ಆದದ್ದು ಸ್ಟೀಲ್ ಚಾಕು ಬಂದ ಮೇಲೆ ಕಬ್ಬಿಣ ದ ಚೂರಿಗಳು ಕಮ್ಮಿ ಆದದ್ದು ,ಟ್ರಾಕ್ಟರ್‍ಗಳು ಎತ್ತಿನ ಮತ್ತು ನೇಗಿಲುಗಳ ಜಾಗವನ್ನು ಆಕ್ರಮಿಸಿದ …ಎಲ್ಲವನ್ನೂ ನೆನಪಿನ ಪಟಲಕ್ಕೆ ಬೆಚ್ಚು ಬೀಳುವಂತೆ ಅಪ್ಪಳಿಸುತ್ತದೆ. ಯಾಕೆಂದರೆ ಆ ಕುಲುಮೆಯಲ್ಲಿ ಕೆರಳುತ್ತಿದ್ದ ಜಾತಿ ಎಂಬ ಬೆಂಕಿ ಎಂದೂ ಆರದ ಕಿಡಿ..ಜಾತಿಪದ್ಧತಿಯ ಅಸ್ಪೃಶ್ಯತೆಯ ಬಿಸಿಯನ್ನು ಎಂದೂ ಮರೆಯದಂತೆ ಮಾಡಿದ, ಮನಸಿನ ಮೇಲೆ ಬರೆ ಎಳದ ಬೆಂಕಿ…
ಸಿನೆಮಾದಲ್ಲಿ ತೋರಿಸುವಂತೆ ನನ್ನ ದೊಡ್ಡಪ್ಪನೂ ಸಹ ಬೀಡಿ ಸೇದುವ ಅಭ್ಯಾಸ ಇದ್ದವರು ಕುಲುಮೆ ಕೆಲಸ ಮಾಡುವಾಗ
ಕಬ್ಬಿಣ ತಟ್ಟುವಾಗ ಕೈ ಬಿಡುವಾಗದಿದ್ದರೆ ಬಾಯಲ್ಲಿ ಬೀಡಿ ಇಟ್ಟು ಕೊಂಡು ಇಕ್ಕಳದ ತುದಿಯಿಂದ ಕೆಂಡದ ತುಂಡನ್ನು ಹಿಡಿದು ಬೀಡಿ ಅಂಟಿಸಿಕೊಳ್ಳೋದು..ಮುಂದೆ ಬೀಡಿ ಹೊಗೆ ಕುಲುಮೆ ಹೊಗೆ ಏರೆದರಿಂದಲೂ ಗಂಟಲು ಕ್ಯಾನ್ಸರ್ ಆಗಿ ತೀರಿಕೊಂತು …
ಇದೆ ದೊಡ್ಡಪ್ಪನ ಹೆಂಡತಿ ನಮ್ಮ ದೊಡ್ಡಮ್ಮ ಒಮ್ಮೆ ಐನೋರ್ ಒಬ್ಬರ ಮನೆಗೆ ಏನೋ ಶಾಸ್ತ್ರ ಕೇಳಲು ನನ್ನನ್ನು ಕರೆದುಕೊಂಡು ಹೋಯ್ತು ಮತ್ತೆ ಅಲ್ಲೇ ಅಂಗಳದಲ್ಲೇ ನಿಂತು ಮಾತಾಡುತಿತ್ತು, ಒಳಗಿಂದ ಅವರ ಹೆಂಡತಿ ಒಂದು ಸಣ್ಣ ಚೆಂಬಿನಲ್ಲಿ ಕಾಫಿ ತಂದರು ದೊಡಮ್ಮಾ ತಂತಾನೇ ಅಲ್ಲೇ ಬಿದ್ದಿದ್ದ ಚಿಪ್ಪೊಂದನ್ನು ದೂರದಿಂದ ನೀರು ಹಾಕಿಸಿಕೊಂಡು ತೊಳೆದುಕೊಂಡು ಕಾಫಿ ಹಾಕಿಸಿಕೊಂಡು ನನ್ನ ಕಡೆ ನೋಡಿತು ಐನೋರು ಕಿಟಕಿ ಮೇಲಿದ್ದ ನೀಲಿ ಪ್ಲಾಸ್ಟಿಕ್ ಲೋಟ ಒಂದನ್ನು ತೋರಿಸಿ ತೆಗೆದುಕೋ ಎನ್ನಲು ನಾನು ತೆಗೆದುಕೊಂಡು ನಿಂತೆ ಆಯಮ್ಮ ಕಾಫಿ ಹಾಕಿತು.. ಹೀಗೇ ಮಾತಿನಲ್ಲಿ ಅವರೆಲ್ಲ ಮಗ್ನ ಆದಾಗ ನಾನು ಗಿಡದ ಮರೆಗೆ ಕಾಫಿ ಚೆಲ್ಲಿಬಿಟ್ಟೆ… ಕಾಟೆರ ಸಿನೆಮಾದಲ್ಲಿ ಇಂತದೊಂದು ಮಜ್ಜಿಗೆ ಹಾಕುವ ದೃಶ್ಯ ಇದೆ…
ಇಂತಹ ಅನುಭವಗಳು ಅನೇಕ…. ಇವುಗಳನ್ನ ಹೇಳುವುದರ ಉದ್ದೇಶ ನಾನು ಯಾವುದೇ ರೀತಿಯ ಅನುಕಂಪ ಬಯಸುತ್ತಿದ್ದೇನೆ ಅಂತಲೂ ಅಲ್ಲ ಅಥÀವಾ ನನ್ಗೆ ಕೀಳರಿಮೆ ಉಂಟಾಯಿತು ಅಂತಲೂ ಅಲ್ಲ ಆದರೆ ಖಂಡಿತ ನನ್ನ ಮೈ ರಕ್ತ ಕುದಿಯುವಷ್ಟು ಅವಮಾನ ಮುಜುಗರ ಆಗಿದ್ದು ಸುಳ್ಳಲ್ಲ…ನಂತರದ ಕಾಲದಲ್ಲಿ ನಾನು ಆಲೋಚಿಸಿ ವ್ಯಥೆ ಪಡುತಿದ್ದದ್ದು ಏನೆಂದರೆ ನಮ್ಮ ದೊಡ್ಡಪ್ಪ ತಟ್ಟಿಕೊಡುತ್ತಿದ್ದ ಕುಡುಗೋಲು ಕೊಡಲಿ ಮಚ್ಚುಗಳಲ್ಲಿ ಇಲ್ಲದ ಮಡಿ ಮೈಲಿಗೆ ನಮ್ಮ ನೆರಳು ನಾವು ಕೂತ ಜಾಗ ನಾವು ಮುಟ್ಟ ವಸ್ತುಗಳಿಗೆ ಹೇಗೆ ಬಂದೀತು..
ಕ್ರಮೇಣ ನಾನು ನನ್ನ ತಂದೆಯ ಕೃಪೆ ಇಂದ ವಿದ್ಯಾವಂತೆ ಎನಿಸಿಕೊಂಡೆ…ಇದಕ್ಕೆ ಸಾವಿತ್ರಿ ಬಾಯಿ ಫುಲೆ, ಅಂಬೇಡ್ಕರ್ ಇಂತವರ ತ್ಯಾಗದ ಫಲದಿಂದ ಜಾತಿ ವ್ಯವಸ್ಥೆಯಲ್ಲಿ ಇರೋ ಕ್ರೂರತನ ವಿರುದ್ಧ ಹೋರಾಡಲು ನಮಗೆ ಇರುವುದು ಒಂದೇ ಮಾರ್ಗ ಎಂದರೆ ಅಕ್ಷರ ಜ್ಞಾನ ಎಂಬುದನ್ನು ನನ್ನ ಸ್ವಂತ ಅನುಭವದಿಂದ ತಿಳಿದುಕೊಂಡೆ.. ಜಾತಿ ಗಣತಿ,ಒಳ ಮೀಸಲಾತಿ, ರಾಮಮಂದಿರ ಎಂದು ದೇಶ ಉರಿಯುತ್ತಿರುವ ಸಂದರ್ಭದಲ್ಲಿ ಕಾಟೇರ ಸಿನೆಮಾ ಬಹಳ ದಿನಗಳ ನಂತರ ಬಂದ ಒಂದು ಒಳ್ಳೆ ಕಥೆ ಆಗಿದೆ..ಸಮಾಜದಲ್ಲಿ ಇವಾಗಲೂ ಇರುವ ದರಿದ್ರ ಆಚರಣೆಗಳು ಅದರ ಅಡ್ಡ ಪರಿಣಾಮಗಳು ವೈಯುಕ್ತಿಕವಾಗಿ ಆಗುವ ನೋವು ನಷ್ಟಗಳಿಗೆ ಹಿಡಿದ ಕನ್ನಡಿಯಂತಿದೆ….
–ಪಲ್ಲವಿ
04/01/2024