ಕುವೆಂಪು ಕವಿಶೈಲ ವಿದ್ಯಾರ್ಥಿಗಳಿಗೆ ಶ್ರದ್ದಾ ಕೆಂದ್ರ-ಮುರಳೀಧರ ಹಾಲಪ್ಪ

ತುಮಕೂರು:ಪ್ರಪಂಚದೆಲ್ಲೆಡೆ ಚದುರಿರುವ ಒಕ್ಕಲಿಗರ ಸಮುದಾಯದ ಪಾಲಿಗೆ ವಿಶ್ವಮಾನವ ಸಂದೇಶ ಸಾರಿದ ರಸಋಷಿ ಕುವೆಂಪು ಅವರು ಬಾಳಿ ಬದುಕಿದ ಮನೆ ಕವಿ ಶೈಲ ಒಂದು ಶ್ರದ್ದಾ ಕೇಂದ್ರವಾಗಿದ್ದು, ವಿದ್ಯಾರ್ಥಿಗಳಿಗೆ ಇದರ ಪರಿಚಯ ಮಾಡಿಸುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಮುರುಳೀಧರ ಹಾಲಪ್ಪ ತಿಳಿಸಿದರು.

ನಗರದ ಬೆಳಗುಂಬದಲ್ಲಿರುವ ವಿಕಾಸ್ ಪದವಿಪೂರ್ವ ಕಾಲೇಜಿನಲ್ಲಿ ತುಮಕೂರು ಜಿಲ್ಲಾ ಒಕ್ಕಲಿಗರ ನೌಕರರ ವೇದಿಕೆವತಿಯಿಂದ ಆಯೋಜಿಸಿದ್ದ ಕುವೆಂಪು ದಿನಾಚರಣೆ ಹಾಗೂ ಕುವೆಂಪು ರಚಿತ ಗೀತಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಕುವೆಂಪು ಬದುಕಿದ್ದ ಕಾಲದಲ್ಲಿ ಅವರು ಬಳಸುತಿದ್ದ ವಸ್ತುಗಳು, ಕೃಷಿ ಪರಿಕರಗಳು, ಮಲೆನಾಡಿನ ಪರಿಸರ ಇವೆಲ್ಲವುಗಳ ಪರಿಚಯ ನಮ್ಮ ಯುವಕರಿಗೆ ಆಗಬೇಕಿದೆ ಎಂದರು.

ತನ್ನ ಕವಿತೆಗಳ ಮೂಲಕ ವಿಶ್ವಮಾನವ ಸಂದೇಶ ಸಾರಿದ,ಅದರಂತೆ ನಡೆದುಕೊಂಡ ಕುವೆಂಪು ಈ ನಾಡು ಕಂಡ ಅತ್ಯಂತ ಶ್ರೇಷ್ಠರಲ್ಲಿ ಒಬ್ಬರು,ಇವರ ಕಾವ್ಯ,ನಾಟಕ,ಪ್ರಬಂಧಗಳು,ಕಾದAಬರಿಗಳು ಜಗತ್ತಿನ ಎಲ್ಲಾ ಭಾಷೆಗಳಿಗೂ ಭಾಷಾಂತರವಾಗಿ ಹೆಚ್ಚು ಜನರನ್ನು ತಲುಪುವಂತೆ ಸರಕಾರ ಮಾಡಬೇಕು.ಹಾಗೆಯೇ ಭಾರತ ಸರಕಾರ ಸಹ ಕುವೆಂಪು ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಮುರುಳೀಧರ ಹಾಲಪ್ಪ ಒತ್ತಾಯಿಸಿದರು.

ತುಮಕೂರು ಜಿಲ್ಲಾ ಒಕ್ಕಲಿಗರ ಸಂಘ ಮುಂದಿನ ದಿನಗಳಲ್ಲಿ ಕುವೆಂಪು ಜನ್ಮ ಜಯಂತಿಯನ್ನು ನಗರ ಪ್ರದೇಶಕ್ಕೆ ಬದಲಾಗಿ ಗ್ರಾಮೀಣ ಭಾಗದಲ್ಲಿ ಆಚರಿಸುವ ಮೂಲಕ ಹಳ್ಳಿಗಳಲ್ಲಿಯೂ ಕುವೆಂಪು ಅವರ ವೈಚಾರಿಕ ಚಿಂತನೆ,ಅವರ ತತ್ವಾದರ್ಶ ಗಳನ್ನು ಪರಿಚಯಿಸುವ ಕೆಲಸ ಮಾಡಬೇಕು.ಈ ಬಾರಿಯ ಕುವೆಂಪು ಗೀತ ಗಾಯನ ಸ್ಪರ್ಧೆಯಲ್ಲಿ ಮೊದಲ ಐದು ಬಹುಮಾನ ಪಡೆಯುವ ಸ್ಪರ್ಧಿಗಳಿಗೆ ಕುಪ್ಪುಳ್ಳಿಯ ಕುವೆಂಪು ಅವರ ಮನೆ ಸೇರಿದಂತೆ ಮಲೆನಾಡಿನ ಪ್ರವಾಸ ವ್ಯವಸ್ಥೆ ಮಾಡುವುದಾಗಿ ಮುರುಳೀಧರ ಹಾಲಪ್ಪ ಭರವಸೆ ನೀಡಿದರು.

ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆಯ ಜಿಲ್ಲಾಧ್ಯಕ್ಷ ಆಶ್ವಥ್‌ಕುಮಾರ್ ಮಾತನಾಡಿ,ಕಳೆದ ೧೬ ವರ್ಷಗಳಿಂದ ನೌಕರರ ವೇದಿಕೆ ಒಕ್ಕಲಿಗ ಸಮುದಾಯದ ಶೈಕ್ಷಣಿಕ ಬೆಳೆವಣಿಗೆಗಾಗಿ ಶ್ರಮಿಸುತ್ತಿದೆ.ಮಕ್ಕಳಿಗೆ ಪ್ರತಿಭಾಪುರಸ್ಕಾರ,ಕೌಶಲ್ಯ ತರಬೇತಿಯಂತಹ ಕಾರ್ಯಕ್ರಮಗಳು ಜರುಗುತಿದ್ದು,ಬರಗಾಲದಿಂದಾಗಿ ಈ ಬಾರಿ ತಡವಾಗಿ ಕಾರ್ಯಕ್ರಮ ಜರುಗುತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅರ್ಥಪೂರ್ಣವಾಗಿ ಕಾರ್ಯಕ್ರಮ ರೂಪಿಸಲಿದ್ದೇವೆ.ಇದುವರೆಗೂ ನೌಕರರ ವೇದಿಕೆ ಮಾಡಿದ ಎಲ್ಲಾ ಕಾರ್ಯಕ್ರಮಗಳಿಗೆ ಹಾಲಪ್ಪ ಪ್ರತಿಷ್ಠಾನ ತುಂಬು ಹೃದಯದ ಸಹಕಾರ ನೀಡಿದೆ. ಪ್ರತಿವರ್ಷದಂತೆ ಈ ವರ್ಷವೂ ಸಮುದಾಯದ ತಜ್ಞ ವೈದ್ಯರಾದ ವಿಜಯ ಆಸ್ಪತ್ರೆಯ ಡಾ.ವಿಜಯಕುಮಾರ್ ಅವರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಕಿತ್ತನಾಗಮಂಗಲದ ಅರೆ ಶಂಕರ ಮಠದ ಶ್ರೀಸಿದ್ದರಾಮ ಚೈತನ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ,ಸಮಾಜ ಇಷ್ಟು ಮುಂದುವರೆದಿದ್ದರೂ ನಾವು ಬರೆದಿದ್ದೇ ಶ್ರೇಷ್ಠ ಎನ್ನುವ ಕಾಲದಲ್ಲಿ, ಇದಕ್ಕಿಂತ ೭೦-೮೦ ವರ್ಷಗಳ ಹಿಂದೆಯೇ ಇವೆಲ್ಲವನ್ನು ಮೆಟ್ಟಿನಿಂತು,ಜನಸಾಮಾನ್ಯರಿಗಾಗಿ ಸಾಹಿತ್ಯ ರಚಿಸಿ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅದೇಷ್ಟು ಜನರನ್ನು ಎದುರು ಹಾಕಿಕೊಂಡಿರಬೇಕು ಎಂಬುದನ್ನು ನಾವು ಊಹಿಸಲಿಕ್ಕೂ ಸಾಧ್ಯವಿಲ್ಲ. ಕುವೆಂಪು ಅಂತಹ ವ್ಯಕ್ತಿ ನಾಲ್ಕು ಗೋಡೆಗಳಿಗೆ ಸಿಮೀತವಾಗಬಾರದು. ಅವರನ್ನು ಇಡೀ ಮನುಕುಲಕ್ಕೆ ಪರಿಚಯಿಸುವ ಕೆಲಸ ಆಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಮಕೂರು ಜಿಲ್ಲಾ ಒಕ್ಕಲಿಗ ನೌಕರರ ವೇದಿಕೆಯ ಅಧ್ಯಕ್ಷ ಅಶ್ವಥಕುಮಾರ್ ವಹಿಸಿದ್ದರು. ಕಾರ್ಯದರ್ಶಿ ಶಿವಣ್ಣ, ಸಮುದಾಯದ ಮುಖಂಡರಾದ ದೊಡ್ಡ ಲಿಂಗಪ್ಪ, ನೌಕರರ ವೇದಿಕೆ ಸಂಸ್ಥಾಪಕರಾದ ಬೋರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *