ತುಮಕೂರು:ಎಲ್ಲಾ ವಿಧದಲ್ಲಿಯೂ ಹಿಂದುಳಿದು,ಸಮಾಜದ ಮುಖ್ಯವಾಹಿನಿಗೆ ಬರಲಾಗದೆ ಪರಿತಪಿಸುತ್ತಿರುವ ಅಲೆಮಾರಿ,ಅರೆ ಅಲೆಮಾರಿ,ಬುಡಕಟ್ಟು ಸಮುದಾಯಗಳಿಗೆ ಪ್ರತ್ಯೇಕ ಆಯೋಗ ಸ್ಥಾಪಿಸಬೇಕೆಂಬ ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಬೇಡಿಕೆಯನ್ನು ಮುಖ್ಯಮಂತ್ರಿಗಳು ಭಾಗಶಃ ಒಪ್ಪಿದ್ದಾರೆ ಎಂದು ಕೆಪಿಸಿಸಿ ಸೋಷಿಯಲ್ ಜೆಸ್ಟೀಸ್ ವಿಭಾಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಅನೇಕ ಸಮಸ್ಯೆಗಳನ್ನು ರಾಜಕೀಯ ಪ್ರಾತಿನಿಧ್ಯ ದೊರೆಯದ ತಳಸಮುದಾಯಗಳಿಗೆ ದ್ವನಿಯಾಗಿ ಆಯೋಗ ಕೆಲಸ ಮಾಡುವಂತಾದರೆ,ರಾಜ್ಯದಲ್ಲಿರುವ ಎಲ್ಲಾ ಬುಡುಕಟ್ಟು, ಅಲೆಮಾರಿ ಸಮುದಾಯಗಳಿಗೆ ನ್ಯಾಯ ದೊರಕಿದಂತಾಗುತ್ತದೆ ಎಂದರು.
ಆದಿವಾಸಿಗಳು ಪ್ರಮುಖವಾಗಿ ಸೂರು ಮತ್ತು ಭೂಮಿಯ ಕೊರತೆಯ ಜೊತೆಗೆ, ಜಾತಿ ಪ್ರಮಾಣ ಪತ್ರದ ಗೊಂದಲವನ್ನು ಎದುರಿಸುತ್ತಿದೆ.ಇದರ ಬಗ್ಗೆ ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ಸಾಕಷ್ಟು ಬಾರಿ ಪ್ರಸ್ತಾವನೆಯನ್ನು ಮುಂದಿಟ್ಟಿದೆ.ಕೆಲ ಆದಿವಾಸಿ,ಅಲೆಮಾರಿ ಸಮುದಾಯಗಳು ಓಬಿಸಿ ಮತ್ತು ಪರಿಶಿಷ್ಟ ಪಂಗಡ ಜಾತಿ ಪಟ್ಟಿಯಲ್ಲಿವೆ.ಇದರಿಂದ ಯಾವುದರಲ್ಲಿ ಅವರನ್ನು ಉಳಿಸಿಕೊಳ್ಳಬೇಕು ಎಂಬ ಗೊಂದಲವಿದೆ.ಇವುಗಳನ್ನು ಒಂದೇ ಬಾರಿಗೆ ಬಗೆಹರಿಸಲು ಸಾಧ್ಯವಿಲ್ಲ.ಹಾಗಾಗಿ ಇವುಗಳ ಪರಿಹಾರಕ್ಕೆ ಆಯೋಗ ರಚನೆಯಾದರೆ ಹಂತ ಹಂತವಾಗಿ ಬಗೆಹರಿಸಲು ಸಾಧ್ಯವೆಂಬುದು ನಮ್ಮ ಒತ್ತಾಯವಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರೆ ಸಚಿವರು ಸ್ಪಂದಿಸಿದ್ದಾರೆ.ಹಣಕಾಸು ಇಲಾಖೆಯ ಅನುಮತಿ ದೊರೆತರೆ ಶೀಘ್ರದಲ್ಲಿಯೇ ಆಯೋಗ ರಚನೆಯಾಗಲಿದೆ ಎಂಬ ವಿಶ್ವಾಸವನ್ನು ಡಾ.ಸಿ.ಎಸ್.ದ್ವಾರಕಾನಾಥ್ ವ್ಯಕ್ಪಡಿಸಿದರು.
ಅತಿ ಹಿಂದುಳಿದ ವರ್ಗದಲ್ಲಿರುವ ಕಾಡುಗೋಲ್ಲ, ಮ್ಯಾಸಬೇಡರ ಸ್ಥಿತಿ ರಾಜ್ಯದಲ್ಲಿ ತೀರ ಗಂಭೀರವಾಗಿದೆ.ಕಾಡುಗೊಲ್ಲರನ್ನು ಹಲವಾರು ವರ್ಷಗಳ ಹೋರಾಟದ ಫಲವಾಗಿ ಅವರನ್ನು ಪ್ರವರ್ಗ 1 ಕ್ಕೆ ಸೇರಿಸಲಾಗಿದೆ.ಜೊತೆಗೆ ಇವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಶಿಫಾರಸ್ಸನ್ನು ಕೂಡ ಕೇಂದ್ರ ಸರಕಾರಕ್ಕೆ ಈ ಹಿಂದಿನ ಸಿದ್ದರಾಮಯ್ಯ ಸರಕಾರ ಕಳುಹಿಸಿದ್ದು, ಕೆಲ ತಾಂತ್ರಿಕ ಕಾರಣಗಳಿಂದ ವಾಪಸ್ಸಾಗಿದ್ದು,ತಾಂತ್ರಿಕ ಕಾರಣಗಳ ತಿದ್ದುಪಡಿ ಮಾಡಿ ಕಳುಹಿಸಲು ಸಹ ಸರಕಾರದ ಮೇಲೆ ಒತ್ತಡ ತರಲಾಗಿದೆ.ಹಾಗಾಗಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡದ ಜೊತೆಗೆ,ಅಲೆಮಾರಿ ಸಮುದಾಯದ ಪಟ್ಟಿಗೂ ಸೇರಿಸಬೇಕು.ಆಗ ಮಾತ್ರ ಅವರಿಗೆ ನ್ಯಾಯ ದೊರೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರದೊಂದಿಗೆ ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ಮಾತುಕತೆ ನಡೆಸಲಿದೆ ಎಂದು ಡಾ.ಸಿ.ಎಸ್.ದ್ವಾರಕಾನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸಾಮಾಜಿಕ ನ್ಯಾಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಫರ್ಜಾನಾ,ಸದಸ್ಯರಾದ ಪದ್ಮ ಶಿವಮೊಗ್ಗ, ಕಾಡುಗೊಲ್ಲ ಹೋರಾಟ ಸಮಿತಿಯ ನಾಗರಾಜು, ವೇಣು, ಬಿಲಾವರ ರಾಮು, ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಜಿ.ಕೆ.ನಾಗಣ್ಣನ ಮತ್ತಿತರರು ಉಪಸ್ಥಿತರಿದ್ದರು