ಕೊರಟಗೆರೆ: ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರವರು ಮಂಗಳವಾರದಂದು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭ ಮಾಡಿದರು.
ಚನ್ನರಾಯನದುರ್ಗದ ಶ್ರೀಮುರಾರಿಸ್ವಾಮಿಗೆ ಪೂಜೆ ಸಲ್ಲಿಸಿ ದೇವರ ಸನ್ನಿಧಿಯಲ್ಲಿ ಉಪಾಹಾರ ಸೇವಿಸಿ ಇಂದು ಅಧಿಕೃತವಾಗಿ ಚನ್ನರಾಯನದುರ್ಗ ಗ್ರಾಮದಲ್ಲಿ ಚುನಾವಣಾ ಪ್ರಚಾರ ಪ್ರಾರಂಭಿಸಿದರು. ಗ್ರಾಮಸ್ಥರು ಶಾಸಕರಾದ ಡಾ ಜಿ ಪರಮೇಶ್ವರ ಅವರಿಗೆ ಆರತಿ ಎತ್ತುವುದರ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.
ಅನುಪುಲು, ಮಾರಿಪಾಳ್ಯ, ಮರೇನಾಯಕನಹಳ್ಳಿ, ಜೋನಿಗರಹಳ್ಳಿ ಗ್ರಾಮದಲ್ಲಿ ಶಾಸಕರಾದ ಡಾ ಜಿ ಪರಮೇಶ್ವರ ರವರಿಗೆ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಅದ್ದೂರಿ ಸ್ವಾಗತ ದೊರೆಯಿತು. ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿಯ ಕೆಲಸಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವ ಮೂಲಕ ಡಾ.ಜಿ.ಪರಮೇಶ್ವರ ಅವರು 30 ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದರು.
ಕುರಂಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಡಾ.ಜಿ.ಪರಮೇಶ್ವರ್ ರವರು ನಡೆಸಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅತಿ ಉತ್ಸಾಹದಲ್ಲಿ ಗ್ರಾಮಕ್ಕೆ ಪರಮಾಡಿಕೊಂಡ ಗ್ರಾಮಸ್ಥರು ತಮ್ಮ ಮನೆಯ ಬಾಗಿಲಿಗೆ ಬಂದ ಸಂದರ್ಭದಲ್ಲಿ ಆರತಿ ಬೆಳಗಿ ಸ್ವಾಗತಿಸಿದರೆ, ಹಾರ ಶಾಲು ಹೊದಿಸಿ ಗೌರವಿಸಿ ಸ್ವಾಗತಿಸಿದ್ದು ವಿಶೇಷವಾಗಿತ್ತು
ಮರೇನಾಯಕನಹಳ್ಳಿ ಗ್ರಾಮದ ಪ್ರಚಾರ ಸಭೆಯನ್ನುದೇಶಿಸಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಜನಪ್ರಿಯ ಶಾಸಕರಾದ ಡಾ.ಜಿ.ಪರಮೇಶ್ವರ್, ಬಾರಿಯೂ ಕ್ಷೇತ್ರದ ಮತದಾರರು ನನಗೆ ಕೈಹಿಡಿದಿದ್ದು , ಈ ಬಾರಿ ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಇನ್ನಷ್ಟು ಮತದಾರರ ಸಂಖ್ಯೆ ಹೆಚ್ಚಾಗಿದ್ದು ಹೆಚ್ಚಿನ ಶಕ್ತಿ ಬಂದಿದೆ. ಈ ಬಾರಿ ನನ್ನನ್ನು ಮತದಾರರು ಕೈ ಹಿಡಿದು ಶಾಸಕರನ್ನಾಗಿ ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಮಾಡಿಕೊಡುತ್ತಾರೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಜಿ.ಪರಮೇಶ್ವರ ವ್ಯಕ್ತಪಡಿಸಿದರು.
ಕೊರಟಗೆರೆ ಕ್ಷೇತ್ರದ ಜನಾಶೀರ್ವಾದದಿಂದ ನಾನು 2008ರಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದಲ್ಲದೇ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ ಸತತ 8 ವರ್ಷಗಳ ಕಾಲ ಸುಧೀರ್ಘ ಅವಧಿಗೆ ಅಧ್ಯಕ್ಷನಾಗಿ ನನ್ನ ನೇತೃತ್ವದಲ್ಲಿ ಪಕ್ಷವು 2013ರಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಂತಾಯಿತು. ಮುಂದೆ, 2018ರಲ್ಲಿ ನಾನು ಪುನರಾಯ್ಕೆಯಾಗುವ ಮೂಲಕ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ತಮ್ಮಗಳ ಸೇವೆಯನ್ನು ಸಲ್ಲಿಸುವ ಸುವರ್ಣಾವಕಾಶವು ಕೂಡ ಒದಗಿ ಬಂದಿತು. ಇದೆಲ್ಲದರ ಹಿಂದಿರುವ ಶಕ್ತಿ ಕೊರಟಗೆರೆಯ ಮಹಾಜನತೆ ಎಂಬುದು ಇತಿಹಾಸದ ಪುಟಗಳನ್ನು ಸೇರಿಕೊಂಡಿದೆ ಎಂದು ಮತದಾರರು ನೀಡಿದ ಅವಕಾಶವನ್ನು ಅವರು ಸ್ಮರಿಸಿದರು.
ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಕೊರಟಗೆರೆ ಕ್ಷೇತ್ರದಲ್ಲಿ ಕಳೆದ 05 ವರ್ಷಗಳಲ್ಲಿ ಸುಮಾರು ರೂ. 2500 ಕೋಟಿಗಳ ಅನುದಾನದಲ್ಲಿ ಹಲವಾರು ಜನಪರವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯು ನಮ್ಮೆಲ್ಲರಿಗೂ ಅತ್ಯಂತ ಮಹತ್ವದ್ದಾಗಿದ್ದು, ಪಕ್ಷದ ನಿರ್ದೇಶನದಂತೆ ನಾನು ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸುತ್ತಿದ್ದು ತಾವೆಲ್ಲರೂ ನನಗೆ ಆಶೀರ್ವದಿಸಿ ಹೆಚ್ಚಿನ ಬಹುಮತದಿಂದ ನನ್ನನ್ನು ಪುನರಾಯ್ಕೆ ಮಾಡಿ ತಮ್ಮ ಸೇವೆಯನ್ನು ಮಾಡಲು ನನಗೆ ಶಕ್ತಿ ತುಂಬುವಂತೆ ಮತದಾರರಲ್ಲಿ ಡಾ.ಜಿ.ಪರಮೇಶ್ವರ ಮನವಿ ಮಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಡಳಿತದಿಂದ ಮತ್ತು ಕೋವಿಡ್ ಮಹಾಮಾರಿಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವು ಇದನ್ನು ಸವಾಲಾಗಿ ಸ್ವೀಕರಿಸುವ ಮೂಲಕ ರಾಜ್ಯದ ಜನಸಾಮಾನ್ಯರು ಹಾಗೂ ಬಡವರ ಪರವಾಗಿ ನಿಲ್ಲುವಂತ ಕೆಲಸವನ್ನು ಮಾಡಿದೆ. ಇದಕ್ಕೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ದೃಢ ನಿರ್ಧಾರವನ್ನು ತೆಗೆದುಕೊಂಡು ಚುನಾವಣಾ ಪ್ರಣಾಳಿಕಾ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿ ಶ್ರೀ ಸಾಮಾನ್ಯರು ಅನುಭವಿಸುತ್ತಿರುವ ನೋವು ಮತ್ತು ಸಂಕಷ್ಟಗಳಿಗೆ ಪರಿಹಾರ ನೀಡಲು ಮುಂದಾಗಿ “ಗೃಹ ಲಕ್ಷ್ಮೀ” ಯೋಜನೆಯಡಿ ಪ್ರತಿ ಮನೆಯೊಡತಿಗೆ ಮಾಸಿಕ 2,000ರೂ.ಗಳು, ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್, 10 ಕೆ.ಜಿ. ಉಚಿತ ಅಕ್ಕಿ ಹಾಗೂ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ರೂ.3000ಗಳು ಮತ್ತು ಡಿಪ್ಲೊಮಾ ಓದಿದವರಿಗೆ ಮಾಸಿಕ ರೂ. 1,500ಗಳನ್ನು ಎರಡು ವರ್ಷಗಳ ವರೆಗೆ ನೀಡುವ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಡಾ.ಜಿ.ಪರಮೇಶ್ವರ ವಿವರಿಸಿದರು.
ಚುನಾವಣಾ ಪ್ರಚಾರ ಪ್ರಚಾರ ಕಾರ್ಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರ್, ಮುಖಂಡರಾದ ವಾಲೆ ಚಂದ್ರಯ್ಯ , ಟಿ ಡಿ ಪ್ರಸನ್ನಕುಮಾರ್, ಕೃಷ್ಣಪ್ಪ, ನವೀನಾ, ಗೊಂಡಿಹಳ್ಳಿ ರಂಗರಾಜು, ಜಟ್ಟಿ ಅಗ್ರಹಾರ ನಾಗರಾಜು ಮುಂತಾದವರು ಪಾಲ್ಗೊಂಡರು.