ಆಗಸ್ಟ್ 26 : ತಿಗಳರ ಜಾಗೃತಿ ಸಮಾವೇಶ

ತುಮಕೂರು:ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಹೆಚ್ಚಿದ್ದರೂ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ತಿಗಳ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಗಸ್ಟ್ 26 ರಂದು ತುಮಕೂರಿನ ಗಾಜಿನಮನೆಯಲ್ಲಿ ಗುರುವಂದನೆ ಹಾಗೂ ತಿಗಳರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ತಿಗಳ ಕ್ಷತ್ರಿಯ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸುಬ್ಬಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರಾಜ್ಯದಲ್ಲಿ ಸುಮಾರು 4 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದರೂ ಓರ್ವ ಶಾಸಕ, ಸಂಸದನಿಲ್ಲ. ನಮ್ಮನ್ನು ಕೇವಲ ಓಟ್‍ಬ್ಯಾಂಕಾಗಿ ರಾಜಕೀಯ ಪಕ್ಷಗಳು ಪರಿಗಣಿಸಿವೆ. 2 ಎ ಪಟ್ಟಿಯಲ್ಲಿರುವ ಎಲ್ಲಾ ಜಾತಿಗಳ ಅಭಿವೃದ್ದಿಗೆ ನಿಗಮ ಸ್ಥಾಪನೆ ಮಾಡಲಾಗಿದೆ. ಆದರೆ ತಿಗಳ ಅಭಿವೃದ್ದಿ ನಿಗಮ ಇದುವರೆಗೂ ಸ್ಥಾಪನೆ ಮಾಡಿಲ್ಲ. ಅಲ್ಲದೆ 2 ಎ ನಲ್ಲಿರುವ ಸಮುದಾಯವನ್ನು ಪ್ರವರ್ಗ 1ರ ಜಾತಿ ಪಟ್ಟಿಗೆ ಸೇರಿಸಲು ಹಲವಾರು ಹೋರಾಟ ಮಾಡಿದರೂ ಈ ಸರಕಾರ ಕಿವಿಗೋಡುತ್ತಿಲ್ಲ. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 26 ರಂದು ರಾಜ್ಯದ ಎಲ್ಲಾ ತಿಗಳನ್ನು ಒಗ್ಗೂಡಿಸಿ, ಸಾಮಾವೇಶ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ಬಿಬಿಎಂಪಿಯಲ್ಲಿ ಬಸವರಾಜು ಎಂಬುವವರು ಕಾರ್ಪೋರೇಟರ್ ಆಗಿದ್ದಾರೆ.ತುಮಕೂರು ನಗರಪಾಲಿಕೆಯಲ್ಲಿ ಐವರು ಕಾರ್ಪೋರೇಟರ್‍ಗಳು ಇದ್ದಾರೆ. ಉಳಿದಂತೆ ಜನಪ್ರತಿನಿಧಿಗಳಿಲ್ಲ.ಅನರಕ್ಷತೆ ಮತ್ತು ಒಗ್ಗಟ್ಟು ಇಲ್ಲದಿರುವುದೇ ನಾವು ರಾಜಕೀಯವಾಗಿ ಹಿಂದುಳಿಯಲು ಪ್ರಮುಖ ಕಾರಣ. ಹಾಗಾಗಿ ತಿಗಳ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಈ ಸಮಾವೇಶ ಬಹಳ ಪ್ರಮುಖವಾಗಿದೆ ಎಂದು ಸುಬ್ಬಣ್ಣ ತಿಳಿಸಿದರು.

ಮಾಜಿ ಶಾಸಕ ಹಾಗೂ ಕರ್ನಾಟಕ ತಿಗಳರ ವಿದ್ಯಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ , ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಮಾತನಾಡಿ,ತಿಗಳ ಸಮುದಾಯಕ್ಕೆ ನಾಲ್ಕು ಮಠಗಳಿವೆ.ಅವುಗಳಲ್ಲಿ ಶಿವಗಂಗೆಯ ಮಹಾಲಕ್ಷ್ಮಿ ಗುರುಪೀಠವೂ ಒಂದು. ಪೀಠಾಧ್ಯಕ್ಷರಾದ ಶ್ರೀಜ್ಞಾನಾನಂದಪುರಿ ಸ್ವಾಮೀಜಿಗಳ ಗುರುವಂದನೆ ನೆಪ ಮಾತ್ರಕ್ಕೆ ನಡೆಯುತ್ತಿದ್ದು, ರಾಜ್ಯ ಸಮಾವೇಶ ಬಹಳ ಮುಖ್ಯವಾಗಿದೆ.ಅಂಬೇಡ್ಕರ್, ಬುದ್ದ, ಬಸವ, ಪುಲೆ ದಂಪತಿಗಳು ಹಾಕಿಕೊಟ್ಟ ಮಾರ್ಗದರ್ಶದಲ್ಲಿ ಅತಿ ಹಿಂದುಳಿದ ಸಮುದಾಯಗಳು ಒಗ್ಗೂಡಿ ನಡೆದರೆ, ಶಿಕ್ಷಣದಲ್ಲಿ ಮುಂದೆ ಬರಲು ಸಾಧ್ಯ. ಹಾಗಾಗಿ ಆಗಸ್ಟ್ 26ರ ಸಮಾವೇಶದ ಮೂಲಕ ತಿಗಳ ಸಮುದಾಯವನ್ನು ಒಂದೆಡೆ ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಒಂದು ಸಮಾಜದಲ್ಲಿ ಒಗ್ಗಟ್ಟು ಮೂಡಬೇಕಾದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಮಾರ್ಗದರ್ಶನ ಅತಿ ಅಗತ್ಯ. ಈ ನಿಟ್ಟಿನಲ್ಲಿ ಗುರುವಂದನೆ ಬಹಳ ಮಹತ್ವ ಪಡೆದುಕೊಳ್ಳಲಿದೆ. ಸಮಾವೇಶಕ್ಕೆ 15 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಪಾಂಡುಚೇರಿ ಸಿ.ಎಂ.ರಂಗಸ್ವಾಮಿ,ಸಭಾಪತಿ ಸೇಲ್ವಂ ಅವರುಗಳು, ಸ್ಥಳೀಯ ಶಾಸಕರು, ಮಂತ್ರಿಗಳು, ಮುಖಂಡರು ಪಾಲ್ಗೊಳ್ಳುವರು. ಆದ್ದರಿಂದ ತಿಗಳ ಸಮುದಾಯದ ಎಲ್ಲಾ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ನರೇಂದ್ರಬಾಬು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಬಿಎಂಪಿ ಸದಸ್ಯ ಎ.ಹೆಚ್.ಬಸವರಾಜು, ನಗರ ಸಭಾ ಮಾಜಿ ಅಧ್ಯಕ್ಷೆ ಕಮಲಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಟಿ.ಹೆಚ್.ಕೃಷ್ಣಪ್ಪ ಅರ್ಜುನ್, ಟಿ.ವಿ.ರಾಮಣ್ಣ,ರೇವಣಸಿದ್ದಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *