ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಇಂದಿನ ಯುವಪೀಳಿಗೆಗೆ ಮಾದರಿಯಾಗಲಿ- ಮುರಳೀಧರ ಹಾಲಪ್ಪ

ತುಮಕೂರು: ಸಹಸ್ರಾರು ಮಂದಿ ಹೋರಾಟಗಾರರು ಹಾಗೂ ದೇಶಭಕ್ತರ ಹೋರಾಟದಿಂದ ಇಂದು ನಾವು ಸುಖ, ನೆಮ್ಮದಿಯನ್ನು ಕಾಣುತ್ತಿದ್ದೇವೆ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನ ಇಂದಿನ ಯುವಪೀಳಿಗೆಗೆ ಮಾದರಿಯಾಗಲಿ ಅವರಿಗೆ ಅದನ್ನು ತಲುಪಿಸುವಂತಹ ಕೆಲಸಗಳನ್ನು ನಾವು ಮಾಡುತ್ತೇವೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ವಾಗ್ದಾನ ಮಾಡಿದರು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸರ್ವೋದಯ ಮಂಡಲದಿಂದ ವಿದುರಾಶತ್ವಕ್ಕೆ ಹೊರಟಿರುವ ಹಿರಿಯ ನಾಗರೀಕರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಗಾಂಧಿ ಸ್ಮಾರಕದಲ್ಲಿ ನಮನ ಸಲ್ಲಿಸಲು ಭಾನುವಾರ ಆಗಮಿಸಿದ್ದ ಸಂದರ್ಭದಲ್ಲಿ ಅವರಿಗೆ ಶುಭ ಕೋರಿ ಮಾತನಾಡಿದ ಅವರು, ಅಂದು ಹೋರಾಟಗಾರರು ಹತ್ತಾರು ದಿನಗಳಲ್ಲ, ತಿಂಗಳುಗಟ್ಟಲೇ, ವರ್ಷಗಟ್ಟಲೇ ಜೈಲುವಾಸ ಅನುಭವಿಸಿದರು. ಆದರೆ ಇಂದು ನಾವು ಸಾಂಕೇತಿಕವಾಗಿ ಹೋರಾಟ ಮಾಡಿ ಒಂದು ತಾಸು ಪೊಲೀಸ್ ಕಸ್ಟಡಿಯಲ್ಲಿದ್ದರೆ ಅದೇ ಒಂದು ದೊಡ್ಡ ಸಾಧನೆ ಎಂದು ಹೇಳಿಕೊಳ್ಳುವಂತಹ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರ, ಚಳುವಳಿಗಾರರ ತ್ಯಾಗ, ಬಲಿದಾನಗಳು ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಲಿ ಎಂದರು.

ಇಂದು ತುಮಕೂರಿನಿಂದ ವಿದುರಾಶತ್ವಕ್ಕೆ ಹೊರಟಿರುವವರ ಜೊತೆ ತುಮಕೂರು ಜಿಲ್ಲೆಯ ಪ್ರತಿಯೊಬ್ಬ ನಾಗರೀಕರು ಸಹ ನಿಮ್ಮ ಜೊತೆ ಇದ್ದಾರೆ ಎಂದು ಹೇಳುವ ಮೂಲಕ ಅವರಿಗೆ ಶುಭ ಹಾರೈಸಿದರು.
ಗಾಂಧಿವಾದಿ ಎಂ.ಬಸವಯ್ಯ ಮಾತನಾಡಿ, ಇದೊಂದು ಮಹಾಸುದೈವ, ಇಂತಹ ಸುದೈವ ನಮ್ಮ ಪೂರ್ವಜರಿಗೆ ಸಿಕ್ಕಿರಲಿಲ್ಲ, ಅವರ್ಯಾರು ಇಂತಹ ಸುದೈವವನ್ನು ನೋಡಿರಲಿಲ್ಲ, ನೀವು ನೋಡುತ್ತಿದ್ದೀರಿ, ಇದು ನಿಮ್ಮ ಪುಣ್ಯ, ಇಂತಹ ಅಮೃತಘಳಿಗೆಯಲ್ಲಿ ಈ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಮನಃ ಪೂರ್ವಕವಾಗಿ ಆಚರಿಸುತ್ತಿದ್ದೇವೆ ಎಂದರು.

ಈ ದೇಶ ಈ ದೇಶದ ಸ್ವಾತಂತ್ರ್ಯ ಸುರಕ್ಷಿತವಾಗಿ ಉಳಿಯಬೇಕು, ಈ ದೇಶ ಮುಂದೆ ಒಡಕಾದರೆ ಯಾರೂ ಶಾಂತಿಯಿಂದಿರಲು ಸಾಧ್ಯವಿಲ್ಲ, ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಗಾಂಧೀಜಿಯವರು ನಾಲ್ಕು ಭಾರಿ ಆಮರಣಾಂತರ ಉಪವಾಸ ಮಾಡುವಾಗಲೂ ಕೋಮು ಸೌಹಾರ್ಧತೆ, ಜನರ ಶಾಂತಿಗಾಗಿ ಸತ್ಯಾಗ್ರಹ ಮಾಡಿದರೆ ಹೊರತು ಬ್ರಿಟೀಷರ ವಿರುದ್ಧ ಹೋರಾಡಲಿಲ್ಲ, ನಮ್ಮ ಜನರನ್ನು ಶಾಂತಿ ಮಾರ್ಗಕ್ಕೆ ತರಲು, ನಮ್ಮ ಜನರಲ್ಲಿ ತಿಳುವಳಿಕೆ ಮೂಡಿಸುವುದಕ್ಕೆ, ವಿವೇಕವನ್ನು ಮೂಡಿಸುವುದಕ್ಕೆ ನಾನು ಉಪವಾಸ ಸತ್ಯಾಗ್ರಹ ಮಾಡುತ್ತೇನೆಂದು ಕುಳಿತರು. ಹಾಗೆ ಜನರನ್ನು ಪರಿವರ್ತನೆ ಮಾಡಿ, ಸಂಘಟನೆ ಮಾಡಿ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗವುದೇ ದೊಡ್ಡ ಸವಾಲಾಯಿತು. ಆ ಸವಾಲನ್ನು ಕೇವಲ ತಮ್ಮ ಸತ್ಯ ಮತ್ತು ಅಹಿಂಸೆ ಎರಡು ಅಸ್ತ್ರಗಳಿಂದ ಎದುರಿಸಿದರು. ಇಂತಹ ಯುಗಪುರುಷನನ್ನು ಇಂದು ನಾವು ಸ್ಮರಿಸುತ್ತಿದ್ದೇವೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದಂತಹ ಸಹಸ್ರ ಜನರಿಗೆ ಸ್ಮರಣೆ ಮಾಡೋಣ, ಅವರ ಆದರ್ಶದಲ್ಲಿ ನಾವು ಸ್ವಲ್ಪವಾದರೂ ಅವರ ಆದರ್ಶವನ್ನು ಪಾಲನೆ ಮಾಡಿಕೊಂಡು ಬದುಕೋಣ ಎಂದರು.

ಇಂದು ನೀವೆಲ್ಲಾ ಪಾದಯಾತ್ರೆ ಹೊರಟಿದ್ದೀರಿ, ನಾವು ಜೊತೆಯಲ್ಲಿ ಬರಬೇಕು ಎಂಬ ಆಸೆ ಇದೆ ಆದರೆ ವಯಸ್ಸಿನ ಕಾರಣ ಬರಲು ಸಾಧ್ಯವಾಗುತ್ತಿಲ್ಲ, ನಿಮ್ಮ ಜೊತೆಯಲ್ಲಿ ನಮ್ಮ ಮನಸ್ಸು ಸದಾ ಇರುತ್ತದೆ ಎಂದು ಹೇಳಿದರು.

ಪ್ರಕೃತಿ ಚಿಕಿತ್ಸಕ ಜಿ.ವಿ.ವಿ.ಶಾಸ್ತ್ರಿ ಮಾತನಾಡಿ, ಗಾಂಧೀಜಿಯವರು ಅಹಿಂಸಾ ತತ್ವದ ಮೇಲೆ ಹೋರಾಟ ನಡೆಸಿದವರು, ಅಹಿಂಸಾ ತತ್ವದ ಜೊತೆಯಲ್ಲಿ ಸತ್ಯವೂ ಬಂದಿತು. ಇಂದು ಪ್ರತಿಯೊಂದು ಬೀದಿಯಲ್ಲೂ ಒಂದೊಂದು ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಅಂದು ನಾವು ಗಾಂಧೀಜಿಯವರ ಮಾತು ಕೇಳಿದ್ದರೆ ಇಷ್ಟೊಂದು ನರ್ಸಿಂಗ್‍ಹೋಂಗಳು ಬೇಕಿರಲಿಲ್ಲ, ಅವರು ಪ್ರಕೃತಿಯನ್ನು ನಂಬಿದ್ದರು. ನಾವೂ ಕೂಡ ಪ್ರಕೃತಿಯನ್ನು ನಂಬಬೇಕು ಎಂದು ಸಲಹೆ ನೀಡಿದರು.

ಸರ್ವೋದಯ ಮಂಡಲದ ಆರ್.ವಿ.ಪುಟ್ಟಕಾಮಣ್ಣ ಮಾತನಾಡಿ, 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತುಮಕೂರಿನಿಂದ ಗೌರಿಬಿದನೂರುವರೆಗೆ ವಾಹನಗಳಲ್ಲಿ ತೆರಳಿ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ವಿದುರಾಶತ್ವಕ್ಕೆ ಸುಮಾರು 9 ಕಿ.ಮೀ. ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಿದ್ಧಗಂಗಯ್ಯ ಹೊಲತಾಳ್, ಅಕ್ಕಮ್ಮ, ನಾಗರಾಜು, ನಟರಾಜಶೆಟ್ಟಿ, ಸೋಮಶೇಖರ್, ಉಗಮಶ್ರೀನಿವಾಸ್, ನರಸಿಂಹಮೂರ್ತಿ, ಚಂದ್ರಶೇಖರಗೌಡ, ಪ್ರಕಾಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *