
ತುಮಕೂರು:ನಗರದ ಸಿದ್ದಿವಿನಾಯಕ ಸಮುದಾಯದ ಭವನದಲ್ಲಿ ಸ್ಥಾಪಿಸಿರುವ ವಿನಾಯಕ ಮೂರ್ತಿಯ ವಿಸರ್ಜನಾ ಮಹೋತ್ಸವ ಅಕ್ಟೋಬರ್ 18 ರಂದು ಅಮಾನಿಕೆರೆಯಲ್ಲಿ ತೆಪೋತ್ಸವದ ಮೂಲಕ ನಡೆಯುವ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ್ ಹಾಲಪ್ಪ, ಟೂಡಾ ಆಯುಕ್ತರಾದ ಶಿವಕುಮಾರ್, ಇಂಜಿನಿಯರ್ ಅರುಣ್,ಆಯೋಜಕರಾದ ಜಗಜ್ಯೋತಿ ಸಿದ್ದರಾಮಯ್ಯ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿದ್ದಿವಿನಾಯಕ ಸೇವಾ ಮಂಡಳಿವತಿಯಿಂದ ಸ್ಥಾಪಿಸಿರುವ ಗಣೇಶಮೂರ್ತಿ ವಿಸರ್ಜನೆ ಕಾರ್ಯಕ್ರಮ ಅಕ್ಟೋಬರ್ 18ರ ಬೆಳಗ್ಗೆ 9ಗಂಟೆಗೆ ಆರಂಭಗೊಂಡು,ಸಂಜೆ ಆರು ಗಂಟೆಯ ವೇಳೆಗೆ ಅಮಾನೀಕೆರೆಯಲ್ಲಿ ತೆಪೋತ್ಸವದ ಮೂಲಕ ವಿಸರ್ಜಿಸಲು ತೀರ್ಮಾನಿಸಲಾಗಿದೆ.ಈ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ತೆಗೆದುಕೊಂಡಿರುವ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ,ಸಿದ್ದವಿನಾಯಕ ಸೇವಾ ಮಂಡಳಿವತಿಯಿಂದ ಸ್ಥಾಪಿಸಿರುವ ವಿನಾಯಕ ಮೂರ್ತಿಯ ವಿಸರ್ಜನೆ ಬುಧವಾರ ನಡೆಯಲಿದೆ.ಜಿಲ್ಲಾ ಉಸ್ತುವಾರಿ ಸಚಿವರು ಗಣಪತಿ ವಿಸರ್ಜನೆಗೆ ಚಾಲನೆ ನೀಡಲಿದ್ದಾರೆ.ತೆಪೋತ್ಸವದ ಮೂಲಕ ವಿಸರ್ಜಿಸುವ ಹಿನ್ನೆಲೆಯಲ್ಲಿ ಅಮಾನಿಕೆರೆ ಯ ನಿರ್ವಹಣೆ ಮಾಡುತ್ತಿರುವ ತುಮಕೂರು ನಗರಾಭಿವೃದ್ದಿ ಪ್ರಾಧಿಕಾರ ಕೈಗೊಂಡಿರುವ ಕ್ರಮಗಳು, ತೆಪ್ಪಗಳ ನಿರ್ಮಾಣ ಕುರಿತಂತೆ ಪರಿಶೀಲನೆ ನಡೆಸಿ ಮಾಹಿತಿ ಪಡೆದಿದ್ದು,ಯಾವುದೇ ಅವಘಡ ಸಂಬಂಧಿಸಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿರುವುದಾಗಿ ತಿಳಿಸಿದರು.
ಟೂಡಾ ಆಯುಕ್ತ ಶಿವಕುಮಾರ್ ಮಾತನಾಡಿ,ಸಿದ್ದಿವಿನಾಯಕ ಸೇವಾ ಮಂಡಳಿಯವರು ಸಂಜೆ 6 ರಿಂದ 7:30ರೊಳಗೆ ತೆಪೋತ್ಸವದ ಮೂಲಕ ವಿಸರ್ಜಿಸುವುದಾಗಿ ತಿಳಿಸಿದ್ದಾರೆ.ಇದಕ್ಕಾಗಿ ಈಗಾಗಲೇ ತೆಪ್ಪ ಸಿದ್ದಗೊಳಿಸುವಲ್ಲಿ ನುರಿತ ಕೆಲಸಗಾರ ರಿಂದ 12*18 ಅಳತೆ,ಬ್ಯಾರಲ್ ಸಹಾಯದಿಂದ ತೆಪ್ಪ ನಿರ್ಮಿಸಲಾಗಿದೆ.ಯಾವ ತೊಂದರೆಯೂ ಇಲ್ಲದಂತೆ ವಿಸರ್ಜಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.ವಿಸರ್ಜನೆ ಸಂದರ್ಭದಲ್ಲಿ ಟೂಡಾ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದು, ಎಲ್ಲ ರೀತಿಯ ಮುನ್ನಚ್ಚರಿಕೆ ವಹಿಸಲಿದ್ದಾರೆ ಎಂದರು.
ಸಿದ್ದಿವಿನಾಯಕ ಸೇವಾ ಮಂಡಳಿಯ ಜಗಜ್ಯೋತಿ ಸಿದ್ದರಾಮಯ್ಯ ಮಾತನಾಡಿ,1974ರಲ್ಲಿ ಡಾ.ಶ್ರೀಶಿವಕುಮಾರ ಸ್ವಾಮೀಜಿ ಗಳಿಂದ ಆರಂಭವಾದ ಸಿದ್ದಿವಿನಾಯಕ ಸೇವಾ ಮಂಡಳಿ ಸುಮಾರು 47 ವರ್ಷಗಳಿಂದ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬಂದಿದೆ.ಈ ಬಾರಿ ತೆಪೋತ್ಸವದ ಮೂಲಕ ಗಣಪತಿ ವಿಸರ್ಜಿಸಲು ಮುಂದಾಗಿದ್ದು,ಇದಕ್ಕೆ ಬೇಕಾದ ಅಗತ್ಯ ಸಿದ್ದತೆಗಳನ್ನು ಟೂಡಾ ಸಹಕಾರದೊಂದಿಗೆ ಮಾಡಲಾಗಿದೆ.ಗಣಪತಿ ವಿಸರ್ಜನತೆಗೆ ಸಿದ್ದಗೊಂಡಿರುವ ತೆಪ್ಪದಲ್ಲಿ ನುರಿತ ಈಜುಗಾರರನ್ನು ಮಾತ್ರ ಕಳುಹಿಸಲು ತೀರ್ಮಾನಿಸಲಾಗಿದೆ.ಸಾರ್ವಜನಿಕರು ವೀಕ್ಷಣೆಗೆ ಲೈಟಿಂಗ್ ವ್ಯವಸ್ಥೆ ಮಾಡಿದ್ದು, ತೆಪ್ಪದ ಪಕ್ಕಕ್ಕೆ ಬರದಂತೆ ಬ್ಯಾರಿಕೇಡ್ ನಿರ್ಮಿಸಲಾಗಿದೆ.ಈಗಾಗಲೇ ಟೂಡಾ ಅಧಿಕಾರಿಗಳು ತೆಪ್ಪ ನಿರ್ಮಾಣದ ಪರಿಶೀಲನೆ ನಡೆಸಿದ್ದು, ಪೊಲೀಸ್ ಅಧಿಕಾರಿಗಳು ವೀಕ್ಷಿಸಿ ಒಪ್ಪಿಗೆ ಸೂಚಿಸಿದ ನಂತರ ಗಣಪತಿ ವಿಸರ್ಜನೆ ನಡೆಯಲಿದೆ ಎಂದರು.
ಈ ವೇಳೆ ಟೂಡಾ ಇಂಜಿನಿಯರ್ ಅರುಣ್,ಮುಖಂಡರಾದ ಗೋವಿಂದೇಗೌಡ ಮತ್ತಿತರರಿದ್ದರು.