ತುಮಕೂರು: ಜಿಲ್ಲಾ ಮಂಡಿ ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘದಿಂದ ಶನಿವಾರ ನಗರದ ಎಪಿಎಂಸಿ ಯಾರ್ಡಿನ ಸಂಘದ ಕಚೇರಿಯಲ್ಲಿ ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ದಿನ ಆಚರಿಸಿ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಲಾಯಿತು.
ಸಂಘದ ಪದಾಧಿಕಾರಿಗಳು ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರ ಕೊಡುಗೆ ಸ್ಮರಿಸಿದರು. ಈ ವೇಳೆ ಸಂಘದ ಅಧ್ಯಕ್ಷ ಚಿಕ್ಕಹನುಮಂತಯ್ಯ ಮಾತನಾಡಿ, ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನ ನೀಡಿ ನಮ್ಮಂತಹ ಕೂಲಿ ಕಾರ್ಮಿಕರು, ಶೋಷಿತರು ಸ್ವಾಭಿಮಾನದಿಂದ ಬಾಳುವಂತಹ ಶಕ್ತಿ ತಂದುಕೊಟ್ಟಿದ್ದಾರೆ. ಎಲ್ಲಾ ವೃತ್ತಿಗಳನ್ನು ಗೌರವಿಸುವಂತಹ, ಎಲ್ಲರೂ ಸಮಾನವಾಗಿ ಬಾಳುವಂತಹ ಸಮ ಸಮಾಜ ನಿರ್ಮಾಣಕ್ಕೆ ನೆರವಾಗಿದ್ದಾರೆ ಎಂದರು.
ಅಂಬೇಡ್ಕರ್ ಅವರು ಶೋಷಿತರ ಪರವಾದ ಹೋರಾಟ, ಸಂವಿಧಾನ ರಚನೆ ಮಾಡದಿದ್ದರೆ ಅನೇಕ ಸಮುದಾಯಗಳು ಇನ್ನೂ ಗುಲಾಮಗಿರಿಯಲ್ಲೇ ನರಳಬೇಕಾಗಿತ್ತು. ಇಂತಹ ಅಂಬೇಡ್ಕರ್ ಅವರು ನಮ್ಮ ಪಾಲಿನ ದೇವರಾಗಿದ್ದಾರೆ. ಅವರು ಕೊಟ್ಟ ಕೊಡುಗೆಗಳನ್ನು ಅನುಸರಿಸಿಕೊಂಡು ಸದಾ ಅವರನ್ನು ಸ್ಮರಿಸಬೇಕು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಮೂರ್ತಿ, ಕಾರ್ಯದರ್ಶಿ ಕೆ.ಹುಚ್ಚಹನುಮಯ್ಯ, ಸಹ ಕಾರ್ಯದರ್ಶಿ ರಾಮಚಂದ್ರ, ಖಜಾಂಚಿ ತರಕಾರಿ ಮಾರುಕಟ್ಟೆ ನಾಗರಾಜು, ನಿರ್ದೇಶಕರಾದ ಕೆಂಪಯ್ಯ, ಎಲ್.ಡಿ.ಪೂಜಯ್ಯ, ಟಿ.ವಿ.ಕಂಭಯ್ಯ, ಎಲ್.ಡಿ.ಕುಂಭಯ್ಯ ಸೇರಿದಂತೆ ಎಪಿಎಂಸಿ ಕಾರ್ಮಿಕರು ಹಾಜರಿದ್ದು ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದರು.