ಜಾತಿ, ಮತ್ತು ವರ್ಗಕ್ಕೆ ಚಲನೆ ಇಲ್ಲ. ಹೀಗಾಗಿ ಜಾತಿ ವ್ಯವಸ್ಥೆ ನಿಂತ ನೀರಾಗಿದ್ದು ಚಲನೆ ಇಲ್ಲವಾಗಿದೆ. ಇದಕ್ಕೆ ಆರ್ಥಿಕ ಚಲನೆ ಸಿಕ್ಕಾಗ ಮಾತ್ರ ಜಾತಿಯಲ್ಲೂ ಚಲನೆ ಸಿಗುತ್ತದೆ. ಈ ಚಲನೆ ಸಿಗಬೇಕಾದರೆ ಶಿಕ್ಷಣದ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕುರುಬ ಸಾಂಸ್ಕೃತಿಕ ಪರಿಷತ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕುರುಬ ಸಮಾಜದ ಸಾಂಸ್ಕೃತಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ, ಕುರುಬ ಸಮುದಾಯದ ಸಂಸ್ಕೃತಿ ದರ್ಶನ ಮಾಲೆಯ 31 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜಾತಿಮುಕ್ತ ಮಾನವೀಯ ಸಮಾಜ ನಿರ್ಮಾಣ ನಮ್ಮ ಸಂವಿಧಾನದ ಆಶಯ ಮತ್ತು ಬದ್ಧತೆ. ಆದರೆ ಇವತ್ತಿಗೂ ಅಸ್ಪೃಶ್ಯತೆ ಹೋಗಿಲ್ಲದಿರುವುದು, ಶೈಕ್ಷಣಿಕ ಸಮಾನತೆ ಇಲ್ಲದಿರುವುದು ಬೇಸರದ ಸಂಗತಿ ಎಂದರು. ನಾನು ಶಿಕ್ಷಣ ಪಡೆದಿರುವುದು ನನ್ನ ಸ್ವಾರ್ಥಕ್ಕೆ ಅಲ್ಲ. ಅವಕಾಶ ವಂಚಿತ ಸಮುದಾಯಗಳ ಬಿಡುಗಡೆಗಾಗಿ ವಿದ್ಯೆ ಸಂಪಾದನೆ ಮಾಡಿದ್ದೇನೆ ಎನ್ನುವ ಅಂಬೇಡ್ಕರ್ ಅವರ ಮಾತನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಸಂವಿಧಾನ ಬರದೇ ಇದ್ದರೆ ನಾವು, ನೀವು ಶಿಕ್ಷಣ ಪಡೆಯಲು ಸಾಧ್ಯವಿರಲಿಲ್ಲ. ಮನುಸ್ಮೃತಿ ಕಾರಣದಿಂದ ಜಾತಿ ಅಸಮಾನತೆ, ಜಾತಿ ಶೋಷಣೆ, ಜಾತಿ ದೌರ್ಜನ್ಯ ಹೆಚ್ಚಾಯಿತು, ಪಟ್ಟಭದ್ರರು ಹಿಂದಿನ ಜನ್ಮದ ಕರ್ಮ ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದಾರೆ. ಅದಕ್ಕೇ ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದರು. ನಿಮ್ಮಲ್ಲಿ ಎಷ್ಟು ಜನ ಕರ್ಮ ಸಿದ್ಧಾಂತ ತಿರಸ್ಕರಿಸಿದ್ದೀರೋ ಗೊತ್ತಿಲ್ಲ ಎಂದು ಹೇಳಿದರು.
ಬ್ರಹ್ಮ ಒಬ್ಬರಿಗೆ ಶಿಕ್ಷಣ, ಮತ್ತೊಬ್ಬರಿಗೆ ಅನಕ್ಷರತೆ ಸಿಗಲಿ ಅಂತ ಬರೆದರಾ? ಒಬ್ಬನಿಗೆ ಬಡವನಾಗು, ಮತ್ತೊಬ್ಬನಿಗೆ ಶ್ರೀಮಂತನಾಗು ಅಂತ ಬ್ರಹ್ಮ ಬರೆದರಾ ? ಒಬ್ಬ ಹೊಟ್ಟೆತುಂಬ ಉಣ್ಣಬೇಕು, ಉಳಿದವರು ಹಸಿವಿನಿಂದ ಬಿದ್ದಿರಬೇಕು ಎಂದು ಬ್ರಹ್ಮ ಬರೆದುಬಿಟ್ಟರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಪಟ್ಟಭದ್ರರು ಬಸವಣ್ಣನವರ ಕ್ರಾಂತಿ ಮುಂದುವರೆಸಲು ಬಿಡಲಿಲ್ಲ. ಆದ್ದರಿಂದ ನಾವು ವೈಜ್ಞಾನಿಕವಾಗಿ, ವೈಚಾರಿಕವಾಗಿ ಚಿಂತಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಅಹಿಂದ ಸಮಾಜ ಮತ್ತು ಎಲ್ಲಾ ಜಾತಿ, ಧರ್ಮಗಳ ಬಡತನ, ಹಸಿವು ನಿವಾರಣೆ ಆಗಬೇಕು. ಅನ್ನಕ್ಕಾಗಿ ಯಾರೂ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಿ ನಿಲ್ಲಬಾರದು ಎನ್ನುವ ಕಾರಣದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆ ಎಂದು ಸ್ಮರಿಸಿದರು.
ಎಲ್ಲಾ ಶ್ರಮಿಕ ವರ್ಗಗಳ ಸಂಸ್ಕೃತಿ, ಆಚಾರ, ವಿಚಾರ ಹೊರಗೆ ಬರಬೇಕು. ಇದಕ್ಕಾಗಿ ಎಲ್ಲರೂ ಸಾಹಿತ್ಯ ರಚನೆಯಲ್ಲಿ ತೊಡಗೇಕು ಎಂದರು. ಹಿಂದೆ ಸಂಸ್ಕೃತ ಕಲಿಯುವವರಿಗೆ ಕಾದ ಸೀಸದ ಶಿಕ್ಷೆ ನಿಗಧಿಯಾಗಿತ್ತು. ಆದರೆ ಈಗ ಶಿಕ್ಷಣ ಸಿಕ್ಕಿದೆ. ನಿಮ್ಮ ನಿಮ್ಮ ಅನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ನಮ್ಮ ಜ್ಞಾನ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು ಎಂದರು.