ತುಮಕೂರು ಗ್ರಾಮಾಂತರಕ್ಕೆ ಹಿಂದುಳಿದ ವರ್ಗಕ್ಕೆ ಕಾಂಗ್ರೆಸ್‍ನಿಂದ ಟಿಕೆಟ್

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಕ್ಕೆ ಹಿಂದುಳಿದ ನಾಯಕರೊಬ್ಬರಿಗೆ ಟಿಕೆಟ್ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು ಗ್ರಾಮಾಂತರ ಕ್ಷೇತ್ರದ ಪಂಚಾಯತ್ ಮತ್ತು ಬೂತ್ ಮಟ್ಟದ ಅಧ್ಯಕ್ಷರು,ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಕೆಂಪಣ್ಣ,ಕಳೆದ ಮೂರು ಚುನಾವಣೆಗಳಿಗೆ ಹೊಲಿಕೆ ಮಾಡಿದರೆ ಕಾಂಗ್ರೆಸ್ ಪಕ್ಷ ಕುಸಿಯುತ್ತಿರುವುದು ಸ್ಪಷ್ಟವಾಗಿರುವ ಹಿನ್ನೇಲೆಯಲ್ಲಿ,ಅತಿ ಹೆಚ್ಚು ದಲಿತ,ಹಿಂದುಳಿದ ಮತದಾರರನ್ನು ಹೊಂದಿರುವ ಗ್ರಾಮಾಂತರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಈ ಬಾರಿ ಹಿಂದುಳಿದ ವರ್ಗದ ಅಭ್ಯರ್ಥಿಯೊಬ್ಬರನ್ನು ಕಣಕ್ಕೆ ಇಳಿಸುವ ಚಿಂತನೆಯಲ್ಲಿ ಕಾಂಗ್ರೆಸ್ ಪಕ್ಷವಿದ್ದು,ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು,ಮುಖಂಡರ ಸಭೆಯನ್ನು ಆಯೋಜಿಸಿದ್ದು,ಹಿಂದುಳಿದ ವರ್ಗದ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ನಿವೃತ್ತ ಎಇಇ ಜಿ.ಹೆಚ್.ಷಣ್ಮುಖಪ್ಪ,

ಸೂರ್ಯಮುಕುಂದರಾಜ್,ಶ್ರೀನಿವಾಸ್,ಆರ್.ನಾರಾಯಣ್,ಹೆಚ್.ನಿಂಗಪ್ಪ, ನರಸಿಂಹರಾಜು ಅವರುಗಳು ಪ್ರಬಲ ಆಕಾಂಕ್ಷಿಗಳಿದ್ದು, ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಜಿ.ಹೆಚ್.ಷಣ್ಮುಖಪ್ಪ ಅವರು ಅಭ್ಯರ್ಥಿಯಾಗುವ ಎಲ್ಲಾ ನಿರೀಕ್ಷೆಗಳಿದ್ದು, ನಾವೆಲ್ಲರೂ ಅವರ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸಬೇಕೆಂದು ಮನವಿ ಮಾಡಿದರು.

ಡಿಸಿಸಿ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ ಮಾತನಾಡಿ, ತುಮಕೂರು ಗ್ರಾಮಾಂತರದಲ್ಲಿ ಎಸ್ಸಿ, ಎಸ್ಟಿ, ಓಬಿಸಿಯ ಸುಮಾರು 1.50ಲಕ್ಷ ಮತದಾರರಿದ್ದಾರೆ.ಇವರುಗಳನ್ನು ಕೇಂದ್ರೀಕರಿಸಿದರೆ ಗೆಲುವು ಸಾಧ್ಯ.ಬಡವರು, ದಲಿತರು, ಹಿಂದುಳಿದ ವರ್ಗದವರಿಗೆ ಅನ್ನ, ಆಶ್ರಯ, ಶಿಕ್ಷಣ ನೀಡಿದಂತಹ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಿದರೆ ಹಾಲಿ ಮತ್ತು ಮಾಜಿ ಶಾಸಕರಿಗೆ ಸಡ್ಡು ಹೊಡೆಯಬಹುದಾಗಿದೆ ಎಂದರು.

ಬಯಲು ಸೀಮೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎ.ದೇವರಾಜು ಮಾತನಾಡಿ,ಗ್ರಾಮಾಂತರದಲ್ಲಿ ಸ್ಥಳೀಯರಿಗೆ ಟಿಕೇಟ್ ನೀಡದ ಪರಿಣಾಮ ಕಾರ್ಯಕರ್ತರ ಸಂಖ್ಯೆ ಕುಸಿಯುತ್ತಿದೆ.ಸಮರ್ಥ ನಾಯಕನ ಅಗತ್ಯವಿದೆ.ಹಾಗಾಗಿ ಕೆ.ಪಿ.ಸಿ.ಸಿ. ಜಿ.ಹೆಚ್.ಷಣ್ಮುಖಪ್ಪ ಅವರಿಗೆ ಟಿಕೇಟ್ ನೀಡಿದರೆ ಪಕ್ಷದಿಂದ ದೂರ ಸರಿದಿರುವ ಕಾರ್ಯಕರ್ತರನ್ನು ಒಗ್ಗೂಡಿಸಿ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲರೂ ಕೆಲಸ ಮಾಡಬೇಕಿದೆ.ಸಂಭಾವ್ಯ ಅಭ್ಯರ್ಥಿಯಾಗಿರುವ ಷಣ್ಮುಖಪ್ಪ ಇಂದಿನಿಂದಲೇ ಕ್ಷೇತ್ರದಲ್ಲಿ ಪ್ರಚಾರ ಅರಂಭಿಸಲಿ,ಇದರ ಜೊತೆಗೆ ಜಿಲ್ಲೆಯ ಎಲ್ಲಾ ನಾಯಕರು ಒಗ್ಗೂಡಿ ಸಮಾವೇಶ ನಡೆಸಿ, ಪಕ್ಷದ ಅಭ್ಯರ್ಥಿಗೆ ಬಲ ತುಂಬುವ ಕೆಲಸ ಮಾಡಬೇಕಾಗಿದೆ ಎಂದರು.
.
ನಿವೃತ್ತ ಎಇಇ ಹಾಗೂ ಗ್ರಾಮಾಂತರ ಟಿಕೇಟ್ ಆಕಾಂಕ್ಷಿ ಜಿ.ಹೆಚ್.ಷಣ್ಮುಖಪ್ಪ ಮಾತನಾಡಿದರು.

ಸಭೆಯಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಕೆ.ಜಿ.ವೆಂಕಟೇಶ್, ಮುಖಂಡರಾದ ಸೂರ್ಯ ಮುಕುಂದರಾಜ್,ಎಸ್ಟಿ ಘಟಕದ ನರಸಿಂಹಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನರಸಿಂಹಮೂರ್ತಿ,ಎಸ್ಸಿ ಘಟಕದ ಲಿಂಗರಾಜು,ಓಬಿಸಿ ಘಟಕದ ಪುಟ್ಟರಾಜು,ಕಾರ್ಮಿಕ ಘಟಕದ ಸೈಯದ್ ದಾದಾಪೀರ್, ಸಂಜೀತಕುಮಾರ್,ಕೈದಾಳ ರಮೇಶ್, ಓ.ಸಿ.ಕೃಷ್ಣಪ್ಪ,ಗೂಳರಿಮೆ ನಾಗರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *