ಬೃಹತ್ ಟಾರ್ಗೆಟ್ ನಡುವೆಯೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಲಖನೌ ಸೂಪರ್ ಜೈಂಟ್ಸ್ ಮಣಿಸಿದೆ. ಆರ್‌ಸಿಬಿ ತವರಿನಲ್ಲೇ ಸ್ಫೋಟಕ ಆಟ ಪ್ರದರ್ಶಿಸಿದ ಸ್ಟೋಯ್ನಿಸ್ ಮತ್ತು ಪೂರನ್, ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 2 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು.
ಚೇಸಿಂಗ್ ನಡೆಸಿದ ಲಖನೌ, ಪೂರನ್ ಮತ್ತು ಸ್ಟೋಯ್ನಿಸ್ ದಾಖಲೆಯ ಅರ್ಧಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿ ಗೆದ್ದು ಬೀಗಿತು.
ಒಂದು ಹಂತದಲ್ಲಿ ಲಖನೌ ಸುಲಭವಾಗಿ ಗುರಿ ತಲುಪುವ ಹಂತಕ್ಕೆ ಬಂದಿತ್ತು. ಅಂತಿಮ ಓವರ್‌ನಲ್ಲಿ ಪಂದ್ಯ ರೋಚಕ ಹಂತ ತಲುಪಿತು. ಆದರೆ, ಕೊನೆಯ ಎಸೆತದಲ್ಲಿ ರವಿ ಬಿಷ್ಣೋಯ್ ಮತ್ತು ಆವೇಶ ಖಾನ್ ಒಂದು ರನ್ ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಆರ್‌ಸಿಬಿ ನೀಡಿದ ಬೃಹತ್ ಗುರಿ ಬೆನ್ನತ್ತಿದ ಲಖನೌ ಆರಂಭ ಉತ್ತಮವಾಗಿರಲಿಲ್ಲ. ಆರೇಂಜ್ ಕ್ಯಾಪ್ ರೇಸ್‌ನಲ್ಲಿದ್ದ ಕೈಲ್ ಮೇಯರ್ಸ್, ಮೊದಲ ಓವರ್‌ನಲ್ಲೇ ಮೊಹಮ್ಮದ್ ಸಿರಾಜ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು. ಅವರ ಬೆನ್ನಲ್ಲೇ 9 ರನ್ ಗಳಿಸಿದ್ದ ದೀಪಕ್ ಹೂಡಾ ಕೂಡಾ ಔಟಾದರು. ಕ್ರುನಾಲ್ ಪಾಂಡ್ಯ ಡಕೌಟ್ ಆದರು. ಇವರಿಬ್ಬರಿಗೂ ಆರ್‌ಸಿಬಿ ಬಳಗ ಸೇರಿಕೊಂಡ ಹೊಸ ಆಟಗಾರ ಪರ್ನೆಲ್ ಡಕೌಟ್ ದಾರಿ ತೋರಿಸಿದರು.
ಈ ವೇಳೆ ನಾಯಕ ರಾಹುಲ್ ಜೊತೆ ಸೇರಿಕೊಂಡು ಸ್ಫೋಟಕ ಆಟವಾಡಿದ ಸ್ಟೋಯ್ನಿಸ್, ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದರು. 30 ಎಸೆತಗಳಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 65 ರನ್ ಸಿಡಿಸಿದರು. ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದ ಅವರನ್ನು ಕರ್ಣ್ ಶರ್ಮಾ ಔಟ್ ಮಾಡಿ ನಿರ್ಣಾಯಕ ವಿಕೆಟ್ ಪಡೆದರು. ಅವರ ಬೆನ್ನಲ್ಲೇ ನಾಯಕ ಕೆಎಲ್ ರಾಹುಲ್ ಅವರನ್ನು ಮೊಹಮ್ಮದ್ ಸಿರಾಜ್ ಔಟ್ ಮಾಡಿದರು.
ಪೂರನ್ ವೇಗದ ಅರ್ಧಶತಕ
ಒಂದು ಹಂತದಲ್ಲಿ ಪಂದ್ಯ ಆರ್‌ಸಿಬಿ ಕೈಯಲ್ಲಿತ್ತು. ಆದರೆ ಈ ಗೆಲುವನ್ನು ನಿಕೋಲಸ್ ಪೂರನ್ ಕಸಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಆರ್‌ಸಿಬಿಗೆ ಕಂಟಕವಾದರು. ಇದು ಈ ಆವೃತ್ತಿಯ ಐಪಿಎಲ್‌ನಲ್ಲಿ ದಾಖಲಾದ ವೇಗದ ಅರ್ಧಶತಕ. ಅಲ್ಲದೆ ಐಪಿಎಲ್‌ನ ಎರಡನೇ ವೇಗದ ಅರ್ಧಶತಕ. ಅಂತಿಮವಾಗಿ ಅವರು 62 ರನ್ ಗಳಿಸಿ ಔಟಾದರು. ಈ ನಡುವೆ ಉತ್ತಮವಾಗಿ ಬ್ಯಾಟ್ ಬೀಸಿದ ಯುವ ಆಟಗಾರ ಆಯುಷ್ ಬದೋನಿ 30 ರನ್ ಗಳಿಸಿದರು.
ಹರ್ಷಲ್ ಪಟೇಲ್ ನೂರನೇ ವಿಕೆಟ್
ಈ ನಡುವೆ ಆರ್‌ಸಬಿಯ ಹರ್ಷಲ್ ಪಟೇಲ್ ನೂರು ವಿಕೆಟ್ ಪಡೆದ ಸಾಧನೆ ಮಾಡಿದರು. ಕೊನೆಯ ಓವರ್ ಎಸೆದ ಅವರು, ಮಾರ್ಕ್ ವುಡ್ ಅವರನ್ನು ಬೌಲ್ಡ್ ಮಾಡುವುದರೊಂದಿಗೆ ಶತಕ ಸಾಧಿಸಿದರು.
ಆರ್‌ಸಿಬಿ ಅಬ್ಬರ
ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ, ಆರಂಭದಿಂದಲೇ ಅಬ್ಬರಿಸಿತು. ಆರಂಭಿಕರಾಗಿ ಬಂದ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡುಪ್ಲೆಸಿಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಇವರಿಬ್ಬರೂ ಮೊದಲ ವಿಕೆಟ್‌ಗೆ 96 ರನ್‌ಗಳ ಭರ್ಜರಿ ಜೊತೆಯಾಟವಾಡಿದರು. ಭರ್ಜರಿ ಪ್ರದರ್ಶನ ನೀಡಿದ ವಿರಾಟ್, 44 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 61 ರನ್ ಸಿಡಿಸಿದರು. ಅರ್ಧಶತಕದ ಬಳಿಕ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದ ಕೊಹ್ಲಿ, ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದರು.