ದ್ವೇಷ ರಾಜಕಾರಣ ಹಿಮ್ಮೆಟ್ಟಿಸಿ-ಸೌಹಾರ್ದತೆ ಬೆಂಬಲಿಸುವಂತೆ ಜನಾಂದೋಲನ

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ರಕ್ಷಿಸುವ ಸೈದ್ಧಾಂತಿಕ ಹೋರಾಟದಲ್ಲಿ ಎಲ್ಲಾ ಪ್ರಜಾತಾಂತ್ರಿಕ ಪಕ್ಷಗಳೂ, ಜನಾಂದೋಲನಗಳೂ ಕೈ ಜೋಡಿಸುವ ತುರ್ತು ಅಗತ್ಯವಿದೆ. ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸಿ, ಸೌಹಾರ್ದತೆಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ತುಮಕೂರು ಜಿಲ್ಲೆಯ ಜನಾಂದೋಲನಗಳು ಮತ್ತು ಪ್ರಜ್ಞಾವಂತರು ಅಭಿಯಾನವನ್ನು ಹಮ್ಮಿಕೊಳ್ಳುತ್ತಿರುವುದಾಗಿ ಜಾಗೃತ ಮತದಾರರ ಬಳಗ ತಿಳಿಸಿದೆ.

ಈ ಅಭಿಯಾನಕ್ಕೆ ಚಿಂತಕರಾದ ದೊರೈರಾಜು, ಕೆ.ಪಿ.ನಟರಾಜು ಬೂದಾಳು, ಮಾರುತಿಪ್ರಸಾದ್, ಡಾ.ರಂಗಸ್ವಾಮಿ, ನಟರಾಜಪ್ಪ, ಬಾ.ಹ.ರಮಾಕುಮಾರಿ, ಜಿ.ವಿ.ಆನಂದಕುಮಾರ್, ಪಂಡಿತ್ ಜವಹರ್, ಡಾ.ಮುರುಳೀಧರ್, ಕೆ.ಪಿ.ನಟರಾಜು,ನರಸೀಯಪ್ಪ, ಕೆಂಚಮಾರಯ್ಯ, ಮ.ಲ.ನ.ಮೂರ್ತಿ, ನಟರಾಜ ಹೊನ್ನವಳ್ಳಿ, ಅಣೆಕಟ್ಟೆ ವಿಶ್ವನಾಥ್, ಪ್ರೊ.ಎಲ್.ಎನ್.ಮುಕುಂದರಾಜ್, ಸಿ.ಕೆ.ಉಮಾಪತಿ, ಕುಂದೂರು ತಿಮ್ಮಯ್ಯ, ತುಂಬಾಡಿ ರಾಮಯ್ಯ ಸೇರಿದಂತೆ ಜಿಲ್ಲೆಯ ಪ್ರಖ್ಯಾತ ಸಾಹಿತಿಗಳು, ಕಲಾವಿದರು, ವೈದ್ಯರು, ವಕೀಲರು, ರೈತ-ದಲಿತ-ಮಹಿಳಾ ಚಳುವಳಿಗಳ ನಾಯಕರು ಬೆಂಬಲ ಸೂಚಿಸಿರುವುದಾಗಿ ಬಳಗ ತಿಳಿಸಿದೆ.

ಕಳೆದ 4 ವರ್ಷಗಳಲ್ಲಿ ಜನಮತವಿಲ್ಲದಿದ್ದರೂ ರಚಿಸಲ್ಪಟ್ಟ ಕೋಮುವಾದಿ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲೂ ನಾಡನ್ನು ಅವನತಿಗೆ ತಳ್ಳಿದ್ದನ್ನು ನೋಡಿದ್ದೇವೆ. ತಿನ್ನುವ ಅನ್ನಕ್ಕೂ ಜಿಎಸ್ಟಿ ಹೇರಿ, ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆಗಳನ್ನೂ ಏರಿಸಿ, ಶಿಕ್ಷಣ, ಆರೋಗ್ಯದ ಹೆಸರಲ್ಲಿ ಲೂಟಿ ಮಾಡಿದ ಸರ್ಕಾರ, ರೈತರು ಮತ್ತು ದುಡಿಯುವವರನ್ನು ಅನಾಥರಾಗಿಸುವ ಕರಾಳ ಶಾಸನಗಳನ್ನು ತಂದಿತು. ಜನರ ಸಮಸ್ಯೆಗಳನ್ನು ಪರಿಹರಿಸಬೇಕಾದ ನಾಯಕರು ಸಮುದಾಯಗಳಲ್ಲಿ ದ್ವೇಷ, ಅಸೂಯೆಗಳನ್ನು ಹುಟ್ಟು ಹಾಕಿ ಅಶಾಂತಿ ಉಂಟುಮಾಡಿ ಕೇಕೆ ಹಾಕುವ ಮರ್ಯಾದೆ ಹೀನ ನಡವಳಕೆಗಳಲ್ಲಿ ತೊಡಗಿರುವುದನ್ನು ಖಂಡಿಸಿದ್ದಾರೆ.

ನಮ್ಮ ರಾಜ್ಯದ ಜನರಿಗೆ ಹೊರೆಯಾಗುವಂತಹ ಈ ಎಲ್ಲಾ ಬೆಳವಣಿಗೆಗಳು ನಿರ್ಧಾರವಾಗುವುದು ದೆಹಲಿಯಲ್ಲಿ. ಇತ್ತೀಚಿನ ವರ್ಷಗಳಲ್ಲಿ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಿ, ಏಕಾಧಿಪತ್ಯವನ್ನು ಸ್ಥಾಪಿಸುವ ಕಾರ್ಯಯೋಜನೆ (ಅಜೆಂಡಾ) ಜಾರಿಯಲ್ಲಿದೆ. ಸಂವಿಧಾನದ ಮೌಲ್ಯಗಳನ್ನು ದುರ್ಬಲಗೊಳಿಸುವ ಬೆಳವಣಿಗೆಗಳು ಆತಂಕಕಾರಿಯಾಗಿವೆ. ಉದಾಹರಣೆಗೆ, ತೆರಿಗೆಯಲ್ಲಿ ರಾಜ್ಯದ ಪಾಲು ನೀಡದಿರುವುದು, ಸ್ವಾಯತ್ತ ಸಂಸ್ಥಗಳ ನಿಯಂತ್ರಣ, ಸಾಂವಿಧಾನಿಕ ಸಂಸ್ಥೆಗಳ ಅಧಿಕಾರದಲ್ಲಿ ಹಸ್ತಕ್ಷೇಪವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

70 ವರ್ಷಗಳಲ್ಲಿ ಕಟ್ಟಿದ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗಿದೆ. ದೇಶದ ಉತ್ಪಾದನೆ ಸಂಪೂರ್ಣವಾಗಿ ಕುಸಿದಿದೆ. ಹಣದುಬ್ಬರ ಮತ್ತು ರೂಪಾಯಿ ಅಪಮೌಲ್ಯ ಹಾಗೂ ವಿದೇಶಿ ಸಾಲ ವಿಪರೀತವಾಗಿದೆ. 53 ಲಕ್ಷ ಕೋಟಿಗಳಷ್ಟಿದ್ದ ವಿದೇಶಿ ಸಾಲ ಏಳೆಂಟು ವರ್ಷಗಳಲ್ಲಿ 153 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಇನ್ನೊಂದು ಕಡೆ ನಿರ್ಗತಿಕರು ಮಾತ್ರವಲ್ಲದೆ ನಿರುದ್ಯೋಗಿಗಳು, ಗೃಹಿಣಿಯರು, ದುಡಿಯುವವರು, ಕಿರಾಣಿ ವ್ಯಾಪಾರಸ್ತರು, ಸಣ್ಣ ವಹಿವಾಟುದಾರರು, ಕೆಳಹಂತದ ಗುತ್ತಿಗೆದಾರರ ಆತ್ಮಹತ್ಯೆಗಳು ಹೆಚ್ಚುತ್ತಲೇ ಇವೆ. ಪ್ರವಾಹ ಕಾಲದಲ್ಲಿ, ಅತಿವೃಷ್ಟಿ-ಅನಾವೃಷ್ಟಿ ಕಾಲದಲ್ಲಿ, ಕೊರೋನಾ ಕಾಲದಲ್ಲಿ ಸಾವಿರಾರು ಜನ ಸತ್ತರೂ ನಿರ್ದಯತೆಯಿಂದ ಮೆರೆದಿರುವುದು ನಮ್ಮ ಕಣ್ಣ ಮುಂದಿದೆ.ಇಂತಹ ನಿರ್ದಯ ರಾಜಕಾರಣವನ್ನು ಈ ಹಿಂದೆ ಕಂಡಿರಲಿಲ್ಲ ಎಂದಿದ್ದಾರೆ.

ಬಹುಸಂಖ್ಯಾತ ಜನಸಮುದಾಯಗಳ ಆಹಾರ, ಉಡುಪು, ಭಾಷೆ ಮತ್ತು ದೇವರುಗಳನ್ನು ಅಪಮಾನಿಸಲಾಗುತ್ತಿದೆ. ಸುಪ್ರೀಂಕೋರ್ಟ್ ಎಚ್ಚರಿಕೆಯನ್ನು ಧಿಕ್ಕರಿಸಿ ದ್ವೇóಷ ಭಾóಣಗಳಿಗೆ ಪ್ರಚೋದನೆ ಕೊಡಲಾಗುತ್ತಿದೆ ಎಂದಿದ್ದಾರೆ.

ಆಗ ಮುಸಲ್ಮಾನರ ಮನೆಗೆ ಹೋಗಿ ಬಿರಿಯಾನಿ, ಕ್ರಿಶ್ಚಿಯನ್ನರ ಮನೆಗೆ ಹೋಗಿ ಕೇಕ್ ತಿಂದು ಬರ ಬಹುದಿತ್ತು.ಅವರು ಹಿಂದೂ ಬಾಂಧವರ ಮನೆಗಳಲ್ಲಿ ಹೋಳಿಗೆ, ಪಾಯಸ ತಿನ್ನ ಬಹುದಾದ ಕಾಲವಿತ್ತು, ನಾವು ಮಸೀದಿಗೂ, ಚರ್ಚಿಗೂ ಸಲೀಸಾಗಿ ಹೋಗುತ್ತಿದ್ದೆವು, ಅವರು ದೇವಸ್ಥಾನಗಳಿಗೆ ಬರುತ್ತಿದ್ದರು ಆದರೆ ಈಗ ಹಾಗಿಲ್ಲ ಎಂದು ತಿಳಿಸಿದ್ದಾರೆ.

ಆಗ ಯಾರು ಯಾರನ್ನು ಬೇಕಾದರೂ ಪ್ರೀತಿಸುವ ವಾತಾವರಣವಿತ್ತು, ಪ್ರೀತಿ ಪೂರ್ವಕವಾಗಿ ಬೇರೆ ಜಾತಿಯವನನ್ನೂ, ಧರ್ಮದವರನ್ನೂ ಬೈದು ವಿಶ್ವಾಸ ಉಳಿಸಿಕೊಳ್ಳಬಹುದಿತ್ತು, ಆಗ ನಾವೆಲ್ಲರೂ ಒಂದೇ ಎಂದು ಚೆನ್ನಾಗಿಯೇ ಇದ್ದೆವು,ನಮಗೆ ಇಷ್ಟವಾದ ಆಹಾರ ತಿನ್ನಬಹುದಿತ್ತು, ಇಷ್ಟವಾದ ಬಟ್ಟೆ ಉಡುತ್ತಿದ್ದೆವು. ಆದರೆ ಈಗ?

ಈ ರೀತಿಯ ನಮ್ಮ ಬಹುತ್ವದ ಸಹಬಾಳ್ವೆಯ ಬದುಕಿಗೆ ಹುಳಿ ಹಿಂಡಿತ್ತಿರುವವರು ಯಾರು ಎಂದು ಪ್ರಶ್ನಿಸಿದ್ದು, ಜಿಲ್ಲೆಯ ವಿದ್ಯಾರ್ಥಿ ಮತ್ತು ಯುವ ತಂಡಗಳ ನೇತೃತ್ವದಲ್ಲಿ ಅಭಿಯಾನದ ಕಾರ್ಯಕ್ರಮಗಳು ನಡೆಯಲಿವೆ ಎಂದು ಜಾಗೃತ ಮತದಾರರ ಬಳಗ ತಿಳಿಸಿದೆ.

Leave a Reply

Your email address will not be published. Required fields are marked *