ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ಧೋರಣೆ ಮಿತಿ ಮೀರಿದೆ. ಹೀಗೇ ಮುಂದುವರೆದರೆ ರಾಜ್ಯ, ರಾಷ್ಟ್ರ ರಾಜಕಾರಣದ ಮೇಲೂ ಪರಿಣಾಮ ಬೀರಿ ಮುಂದೆ ರಾಷ್ಟ್ರೀಯ ಭದ್ರತೆಗೂ ಬೆದರಿಕೆವೊಡ್ಡುವ ಪರಿಸ್ಥಿತಿ ಬರಬಹುದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಯಿಯಿಂದ ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕರು, ತಾವು ಹಿಂದುಳಿದ ವರ್ಗದವರ ಚಾಂಪಿಯನ್ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರು ಈ ವರ್ಗಗಳಿಗೂ ಅನ್ಯಾಯ ಮಾಡಿ, ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದ್ದಾರೆ. ಎಸ್.ಸಿ, ಎಸ್.ಟಿ ಸಮುದಾಯಕ್ಕೆ ನೀಡಿದ್ದ ಅನುದಾಯವನ್ನು ಗ್ಯಾರಂಟಿ ಯೋಜನೆಗಳಿಗೆ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಮೊನ್ನೆಯ ಸದನದಲ್ಲಿ ಕ್ಯಾಬಿನೆಟ್ ಸಚಿವರು ತಮ್ಮ ಮೇಲೆ ಹನಿಟ್ರ್ಯಾಪ್ ಆಗಿದೆ ಎಂದು ಗೋಳಾಡಿದ್ದರು. ಗೃಹ ಸಚಿವರು ಪ್ರಕರಣದ ತನಿಖೆ ಮಾಡುವುದಾಗಿ ಹೇಳಿದ್ದರು. ಸರ್ಕಾರದ ಸಚಿವರ ವಿರುದ್ಧವೇ ನಡೆದ ಹನಿಟ್ರ್ಯಾಪ್ ವಿಚಾರ ಗಂಭೀರವಾದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ವಿವರ ನೀಡಬೇಕು ಎಂದು ವಿಪಕ್ಷದವರು ಒತ್ತಾಯ ಮಾಡಿದರೂ ಉತ್ತರಿಸಲಿಲ್ಲ. ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸಿದ ಸ್ಪೀಕರ್ 18 ಬಿಜೆಪಿ ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿದರು. ಈ ಗೊಂದಲದ ನಡುವೆ ಮುಸ್ಲೀಮರಿಗೆ ಕಾಮಗಾರಿಯಲ್ಲಿ ಶೇಕಡ 4ರಷ್ಟು ಮೀಸಲಾತಿ ನೀಡುವ ಬಿಲ್ ಪಾಸ್ ಮಾಡಿದರು ಎಂದು ಆರೋಪಿಸಿದರು.
ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗೆ 3-4 ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕಿಳಿದಿರುವ ಮುಖ್ಯಮಂತ್ರಿಗಳು ಇತರೆ ಸಮುದಾಯವನ್ನು ನಿರ್ಲಕ್ಷ ಮಾಡಿದ್ದಾರೆ. ಕಾಡುಗೊಲ್ಲ ಅಭಿವೃದ್ಧಿ ನಿಗಮಕ್ಕೆ, ಕುಂಭಾರ ನಿಗಮಕ್ಕೆ, ಒಕ್ಕಲಿಗ, ವೀರಶೈವ, ಬ್ರಾಹ್ಮಣರ ಅಭಿವೃದ್ಧಿ ನಿಗಮಕ್ಕೆ ನೀಡಿರುವ ಅನುದಾನ ಶೂನ್ಯ. ಪರಿಶಿಷ್ಟ ಜಾತಿ, ವರ್ಗಕ್ಕೆ ಮೀಸಲಾದ ಅನುದಾನವನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡಿದ್ದಾರೆ ಎಂದು ಜ್ಯೋತಿಗಣೇಶ್ ಸರ್ಕಾರದ ವಿರುದ್ಧ ಹರಿಹಾಯ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಮಾತನಾಡಿ, ಎಸ್ಸಿ, ಎಸ್ಟಿಗೆ ಮೀಸಲಿಟ್ಟಿರುವ ಹಣವನ್ನು ಅದೇ ಸಮುದಾಯಗಳ ಅಭಿವೃದ್ಧಿಗೆ ಬಳಸಬೇಕು, ಧರ್ಮ ಆಧಾರಿತವಾಗಿ ಮುಸ್ಲೀಂ ಸಮುದಾಯಕ್ಕೆ ನೀಡಿರುವ ಮೀಸಲಾತಿಯನ್ನು ರದ್ದುಪಡಿಸಬೇಕು. ವಿಧಾನ ಮಂಡಲ ಅಧಿವೇಶನದ ಸಮಯದಲ್ಲಿ ಸರ್ಕಾರದ ಜನವಿರೋಧಿ ನೀತಿ ಖಂಡಿಸಿದ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿರುವುದು ಖಂಡನೀಯ. ಅಮಾನತನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಭುತ್ವವನ್ನು ಹಾಗೂ ಶಾಸಕರುಗಳ ಹಕ್ಕು ರಕ್ಷಿಸುವ ದೃಷ್ಟಿಯಿಂದ ಸ್ಪೀಕರ್ ಅವರ ಏಕಪಕ್ಷೀಯ ನಿರ್ಣಯವನ್ನು ಕೈಬಿಟ್ಟು ಶಾಸಕರ ಅಮಾನತನ್ನು ವಾಪಸ್ ಪಡೆಯಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ ಹಿಂದೂ ವಿರೋಧಿ ಬಜೆಟ್, ಅಲ್ಪಸಂಖ್ಯಾತನ್ನು ತುಷ್ಟೀಕರಣ ಮಾಡುವ ಬಜೆಟ್ ಆಗಿದೆ. ಅಲ್ಪಸಂಖ್ಯಾತರನ್ನು ಓಲೈಸುವ ಮತ ಬ್ಯಾಂಕ್ ರಾಜಕಾರಣ ಮಾಡಿದ್ದಾರೆ ಎಂದು ಟೀಕಿಸಿದರು.
ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ರಾಜ್ಯ ರೈತ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್, ರಾಜ್ಯ ವಕ್ತಾರ ಹೆಚ್.ಎನ್.ಚಂದ್ರಶೇಖರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹೆಚ್.ಎ. ಆಂಜನಪ್ಪ, ಮುಖಂಡ ದಿಲೀಪ್‍ಕುಮಾರ್ ಮೊದಲಾದವರು ಧರ್ಮ ಆಧಾರಿತ ಮೀಸಲಾತಿ ಕ್ರಮ ಖಂಡಿಸಿ ಮಾತನಾಡಿದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಬಿಜೆಪಿಯ ವಿವಿಧ ಮೋರ್ಚಾಗಳ ಮುಖಂಡರಾದ ಹೆಚ್.ಎಂ.ರವೀಶಯ್ಯ, ಸಂದೀಪ್‍ಗೌಡ, ಟಿ.ಹೆಚ್.ಹನುಮಂತರಾಜು, ನವಚೇತನ್, ಧನುಷ್, ಮಲ್ಲಿಕಾರ್ಜುನ್, ಸಿ.ಎನ್.ರಮೇಶ್, ವಿಷ್ಣುವರ್ಧನ್, ಪುಟ್ಟರಾಜು, ಇಂದ್ರಕುಮಾರ್, ಟಿ.ಆರ್.ಸದಾಶಿವಯ್ಯ, ಸತ್ಯಮಂಗಲ ಜಗದೀಶ್, ಬೆಳ್ಳಿ ಲೋಕೇಶ್, ಗೂಳೂರು ಶಿವಕುಮಾರ್, ಸಾಗರನಹಳ್ಳಿ ವಿಜಯಕುಮಾರ್, ಜ್ಯೋತಿ ತಿಪ್ಪೇಸ್ವಾಮಿ, ಲತಾಬಾಬು, ವೆಂಕಟೇಶಾಚಾರ್, ನಂದಿನಾಥ್ ಮೊದಲಾದವರು ಭಾಗವಹಿಸಿದ್ದರು