ತುಮಕೂರು: ಫೋಟೋಗ್ರಫಿ, ವಿಡಿಯೋಗ್ರಫಿ ಎಂಬುದು ವೃತ್ತಿಪರ ಕಲೆ. ಇಂತಹ ಫೋಟೊ, ವಿಡಿಯೋಗ್ರಾಫರ್‍ಗಳನ್ನು ಸರ್ಕಾರ ಅಸಂಘಟಿತ ಕಾರ್ಮಿಕರು ಎಂದು ಪರಿಗಣಿಸಿ ಕಾರ್ಮಿಕ ಇಲಾಖೆಯಿಂದ ದೊರೆಯುವ ಅಗತ್ಯ ಸವಲತ್ತು ನೀಡಬೇಕು ಎಂದು ಜಿಲ್ಲಾ ಫೋಟೋ ಮತ್ತು ವಿಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ಟಿ.ಹೆಚ್.ಅನಿಲ್‍ಕುಮಾರ್ ಸರ್ಕಾರವನ್ನು ಒತ್ತಾಯಿಸಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಫೋಟೋ, ವೀಡಿಯೋಗ್ರಾಫರ್‍ಗಳ ಬದುಕು ಭದ್ರತೆಯಿಲ್ಲದೆ ಸಂಕಷ್ಟದಲ್ಲಿದೆ, ಕೆಲಸವರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿಕೊಂಡು, ಕೆಲವರು ಸೀಮಿತ ಬಂಡವಾಳದಲ್ಲಿಯೇ ಛಾಯಾಗ್ರಹಣ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಇತ್ತೀಚಿನ ಇವೆಂಟ್ ಆರ್ಗನೈಜರ್ಸ್ ಹುಟ್ಟಿಕೊಂಡು ವೃತ್ತಿನಿರತ ಫೋಟೋ, ವಿಡಿಯೋಗ್ರಾಫರ್‍ಗಳ ಸ್ಪರ್ಧೆ ನೀಡಿ ನಮ್ಮ ವ್ಯವಹಾರ ಅತಂತ್ರವಾಗಿದೆ ಎಂದರು.
ಅಸಂಘಟಿತ ಕಾರ್ಮಿಕರಾದ ಫೋಟೋ, ವಿಡಿಯೋಗ್ರಾಫರ್‍ಗಳಿಗೆ ಇತರೆ ಅಸಂಘಟಿತ ವಲಯದವರಿಗೆ ನೀಡುವಂತೆ ಕಾರ್ಮಿಕ ಇಲಾಖೆಯಿಂದ ಟೂಲ್ ಕಿಟ್‍ಗಳನ್ನು ನೀಡಬೇಕು. 60 ವರ್ಷ ತುಂಬಿದ ನೋಂದಾಯಿತ ಫೋಟೋ, ವಿಡಿಯೋಗ್ರಾಫರ್‍ಗಳಿಗೆ ಮಾಸಾಶನ ಕೊಡಬೇಕು. ಚುನಾವಣೆ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಇಲಾಖೆ ಸಿಬ್ಬಂದಿಯೇ ಛಾಯಾಗ್ರಹಣ ವ್ಯವಹಾರ ಮಾಡುವುದನ್ನು ತಪ್ಪಿಸಿ ವೃತ್ತಿನಿರತರಿಗೆ ಅವಕಾಶ ಕಲ್ಪಿಸಿಬೇಕು ಎಂದು ಮನವಿ ಮಾಡಿದರು.

ಫೋಟೋ, ವಿಡಿಯೋಗ್ರಾಫರ್‍ಗಳಿಗೆ ಕಲ್ಯಾಣ ಮಂಟಪಗಳಲ್ಲಿ ನಡೆಯುವ ಶುಭ ಸಮಾರಂಭಗಳೇ ಜೀವನ ನಿರ್ವಹಣೆಗೆ ಸಹಕಾರಿ. ಆದರೆ ಕೆಲವು ಕಲ್ಯಾಣ ಮಂಟಪದ ಮಾಲೀಕರೇ ಎಲ್‍ಇಡಿ ಸ್ಕ್ರೀನ್ ಅಳವಡಿಸಿರುವ ಕಾರಣ ವೃತ್ತಿನಿರತ ಫೋಟೋ, ವಿಡಿಯೋಗ್ರಾಫರ್‍ಗಳ ವ್ಯವಹಾರ ಕಸಿಯುವಂತಾಗಿದೆ. ಇದಕ್ಕೆ ಸಂಬಂಧಿಸಿದ ಇಲಾಖೆ ಕಡಿವಾಣ ಹಾಕಬೇಕು. ಕಲ್ಯಾಣ ಮಂಟಪಗಳಲ್ಲಿ ಛಾಯಾಗ್ರಾಹಕರ ಲಕ್ಷಾಂತರ ರೂ. ಮೌಲ್ಯದ ಕ್ಯಾಮರಾಗಳು ಕಳವಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅನಿಲ್‍ಕುಮಾರ್ ಕೋರಿದರು.

ಕರ್ನಾಟಕ ಛಾಯಾಚಿತ್ರಗಾರರ ಸಂಘದ ಅಧ್ಯಕ್ಷ ನಾಗೇಶ್ ರಾವ್ ಮಾತನಾಡಿ, ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷ ಜನ ವೃತ್ತಿನಿರತ ಫೋಟೋ, ವಿಡಿಯೋಗ್ರಾಫರ್‍ಗಳಿದ್ದಾರೆ. ಇವೆಂಟ್ ಆರ್ಗನೈಸಜರ್ಸ್, ಮತ್ತಿತರ ಚಟುವಟಿಕೆಗಳಿಂದಾಗಿ ನಮ್ಮ ವೃತ್ತಿಗೆ ಹೊಡೆತ ಬಿದ್ದಿದೆ. ಈ ಪರಿಸ್ಥಿತಿಯಲ್ಲಿ ಸರ್ಕಾರ ನೆರವಿಗೆ ಬರಬೇಕು. ಅಸಂಘಟಿತ ಕಾರ್ಮಿಕ ವಲಯದ ಫೋಟೋ, ವಿಡಿಯೋಗ್ರಾಫರ್‍ಗಳು ಅಪಘಾತದಲ್ಲಿ ನಿಧನರಾದಾಗ ನೀಡುವ ಒಂದು ಲಕ್ಷ ರೂ. ಮೊತ್ತದ ಪರಿಹಾರ ಪ್ರಮಾಣ ಹೆಚ್ಚು ಮಾಡಬೇಕು. 60 ವರ್ಷ ಮೇಲ್ಪಟ್ಟವರಿಗೆ ಮಾಸಾಶನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಈ ಸಂಬಂಧವಾಗಿ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಅಲ್ಲದೆ ತುಮಕೂರಿನಲ್ಲಿ ಫೋಟೋ, ವಿಡಿಯೋಗ್ರಾಫರ್‍ಗಳ ರಾಜ್ಯಮಟ್ಟದ ಸಮಾವೇಶ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಫೋಟೋ ಮತ್ತು ವಿಡಿಯೋಗ್ರಾಫರ್‍ಗಳ ಸಂಘದ ಕಾರ್ಯಾಧ್ಯಕ್ಷ ಎನ್.ವೆಂಕಟೇಶ್ ಮಾತನಾಡಿ, ವೃತ್ತಿಪರತೆ, ವೃತ್ತಿಯಲ್ಲಿ ನೈಪುಣ್ಯತೆ ಮೂಡಿಸುವುದು, ಅವರ ಕಷ್ಟಸುಖಗಳಿಗೆ ಸ್ಪಂದಿಸುವ ನಿಟ್ಟನಲ್ಲಿ ರಾಜ್ಯ, ಜಿಲ್ಲಾ, ತಾಲ್ಲೂಕು ಫೋಟೋ, ವಿಡಿಯೋಗ್ರಾಫರ್‍ಗಳ ಸಂಘದಗಳು ಶ್ರಮಿಸುತ್ತಿವೆ. ಶುಭ ಸಮಾರಂಭ, ಇನ್ನಿತರ ಕಾರ್ಯಕ್ರಮಗಳಿಗೆ ಹೋಗುವ ಛಾಯಾಗ್ರಾಹಕರಿಗೆ ಸಂಘದಿಂದ ಗುರುತಿನ ಚೀಟಿ ನೀಡಲಾಗುತ್ತದೆ. ಇಂತಹವರಿಗೇ ಆವಕಾಶ ನೀಡಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಆರ್.ನವೀನ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಸಹ ಕಾರ್ಯದರ್ಶಿ ಟಿ.ಆರ್.ವಿನಯ್‍ಕುಮಾರ್, ಖಜಾಂಚಿ ಚಂಗಾವರ ಸಿ.ಎನ್.ರವಿಕುಮಾರ್, ಪದಾಧಿಕಾರಿಗಳಾದ ಶಿವಶಂಕರ್, ರೇಣುಕಾಪ್ರಸಾದ್, ಸಿ.ಕೆ.ರಂಗನಾಥ್, ಜಯಣ್ಣ ಮೊದಲಾದವರು ಭಾಗವಹಿಸಿದ್ದರು.