ಪ್ರಶಸ್ತಿಗಳು, ಬಹುಮಾನಗಳು, ಅಭಿನಂದನೆಗಳು ಹಲವರಿಗೆ ಹಲವು ಕಾರಣಗಳಿಗೆ ಸಿಗಬಹುದು, ಅದೇ ರೀತಿ ತುಮಕೂರಿನ ಐ,ಎಂ.ಎ. ಹಮ್ಮಿಕೊಂಡಿರುವ ವೈದ್ಯರ ದಿನಾಚರಣೆಯಲ್ಲಿ ,ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾಗಿರುವ ಡಾ.ಬಸವರಾಜು ಅವರನ್ನು ಅಭಿನಂದಿಸುತ್ತಿರುವುದು ವೈದ್ಯಕೀಯ ಸೇವೆಗೆ ಸಿಕ್ಕ ಅರ್ಹ ಅಭಿನಂದನೆಯಾಗಿದೆ.
ಬಡತನದಿಂದ ಬಂದ ಡಾ.ಬಸವರಾಜು ಅವರು, ವೈದ್ಯರಾಗಿ ಇಂದಿಗೂ ಮಾನವೀಯ ನೆಲೆಯೊಳಗೆ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ತಮ್ಮ ರೋಗಿಗಳಲ್ಲೇ ಬುದ್ಧನ ಕರುಣೆ, ಪ್ರೀತಿ, ಮೈತ್ರಿಯನ್ನು ಕಾಣುತ್ತಿರುತ್ತಾರೆ.
ಡಾ.ಬಸವರಾಜು ಅವರು 1964ರಲ್ಲಿ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ಮಾದೇನಹಳ್ಳಿ ದಿವಂಗತ ಯಲ್ಲಮ್ಮ ಮತ್ತು ದಿವಂಗತ ನರಸಿಂಯ್ಯನವರ ಕಿರಿಯ ಮಗನಾಗಿ ಜನಿಸಿದರು, ಇವರಿಗೆ ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರು.
ಪ್ರಾಥಮಿಕ ಶಿಕ್ಷಣ ವನ್ನು, ಮಾದೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ,ಒಂದೇ ಕೊಠಡಿಯ ,ಏಕೋಪಾಧ್ಯಾಯ ಶಾಲೆಯಲ್ಲಿ,ಓದಿದರು. ಸರ್ಕಾರಿ ಪ್ರೌಢಶಾಲೆ ,ಶಿರಾದಲ್ಲಿ ಪ್ರೌಢಶಿಕ್ಷಣವನ್ನು ಮುಗಿಸಿದರು. ತುಮಕೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಪಡೆದರು. ಆನಂತರ , ಎಂಬಿಬಿಎಸ್ ಪದವಿಯನ್ನು ಜೆ.ಜೆ.ಎಂ.ಸಿ. ವೈದ್ಯಕೀಯ ಕಾಲೇಜು, ದಾವಣಗೆರೆಯಲ್ಲಿ ಪಡೆದರು ಮತ್ತು ಸ್ತ್ರೀ ರೋಗ ಮತ್ತು ಪ್ರಸೂತಿ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಯನ್ನು (ಡಿಜಿಓ) ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಪಡೆದರು.
1991 ರಲ್ಲಿ ವೈದ್ಯಾಧಿಕಾರಿಯಾಗಿ ಸರ್ಕಾರಿ ಸೇವೆಗೆ ಸೇರಿ, ಕಾರವಾರ ಜಿಲ್ಲೆ ,ಹೊನ್ನಾವರ ತಾಲ್ಲೂಕಿನ ಕಾಡಿನಂಚಿನ ಪುಟ್ಟ ಗ್ರಾಮ ಸಾಲ್ಕೋಡ್ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರ.
ಬೀದಿ ನಾಯಿಗಳ ,ಬೀಡಾಡಿ ಹಸುಗಳ ತಂಗುದಾಣವಾಗಿದ್ದ ಸದರಿ ಆಸ್ಪತ್ರೆಯನ್ನು , ನೂರಾರು ರೋಗಿಗಳು ಬಂದು ಶುಶ್ರೂಷೆ ಪಡೆಯುವಂತೆ ಪರಿವರ್ತಿಸಿದರು. ಆಗ ಆ PHC ಯ ವ್ಯಾಪ್ತಿಯಲ್ಲಿ ಕಾಣಿಸಿದ ಮಂಗನ ಕಾಯಿಲೆಯನ್ನು ಸಮರ್ಥವಾಗಿ ನಿರ್ವಹಿಸಿದರು. ಮೂರು ವರ್ಷಗಳ ನಂತರ, ತುಮಕೂರು ಜಿಲ್ಲೆಗೆ ವರ್ಗಾವಣೆಯಾಗಿ ಬಂದು ,ಜಿಲ್ಲೆಯಪಾವಗಡ ತಾಲ್ಲೂಕಿನ ತಿರುಮಣಿ ಚಿ.ನಾ.ಹಳ್ಳಿ ತಾಲ್ಲೊಕಿನ ಕಂದಿಕೆರೆ, ಗುಬ್ಬಿ ತಾಲ್ಲೋಕಿನ ತಿಪ್ಪೂರು, ಮತ್ತು ಶಿರಾ ತಾಲ್ಲೊಕಿನ ಪಟ್ಟನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
2000 ಇಸವಿಯಲ್ಲಿ, ಸ್ನಾತಕೋತ್ತರ ಪದವಿ ಪಡೆದು , ಸ್ತ್ರೀ ರೋಗ ಮತ್ತು ಪ್ರಸೂತಿತಜ್ಞರಾಗಿ ಸರ್ಕಾರಿ ಆಸ್ಪತ್ರೆ ಕೊರಟಗೆರೆಯಲ್ಲಿ ಸೇವೆಗೆ ಸೇರ್ಪಡೆಯಾದರು,2002 ರಲ್ಲಿ ,ಜಿಲ್ಲಾ ಆಸ್ಪತ್ರೆ ತುಮಕೂರು ಇಲ್ಲಿಗೆ,ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾಗಿ ವರ್ಗಾವಣೆಯಾಗಿ ಬಂದರು. ಯಾವುದೇ ವಿವಾದಗಳಿಗೆ ಆಸ್ಪದವಿಲ್ಲದಂತೆ ಎಂಟು ವರ್ಷಗಳಷ್ಟು ದೀರ್ಘಕಾಲ ಇಲ್ಲಿ ಸೇವೆ ಸಲ್ಲಿಸಿದರು .
ತುಮಕೂರಿನ ಜಿಲ್ಲಾ ಆಸ್ಪತ್ರೆ ಯಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ,2003ರಲ್ಲಿ ಚೆನ್ನೈನ ,ಕುರಿಯನ್ ಜೋಸೆಫ್ ಆಸ್ಪತ್ರೆ ಯಲ್ಲಿ , ಕುರಿಯನ್ ಜೋಸೆಫ್ ರವರ ಗರಡಿಯಲ್ಲಿ ಲ್ಯಾಪ್ರಸ್ಕೋಪಿಕ್ ಸರ್ಜರಿಯ ತರಬೇತಿ ಪಡೆದರು.
ಭಾರತ ಸರ್ಕಾರವು, EMOC ಪ್ರಾಜೆಕ್ಟ್ ನ Master trainee ಆಗಿ, ರಾಜ್ಯದಲ್ಲಿ ಆರು ಜನ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರನ್ನು ಆಯ್ಕೆಮಾಡಿ CMC ವೆಲ್ಲೂರಿನಲ್ಲಿ ತರಬೇತಿ ನೀಡಿತು , ಆ ಆರು ಜನರಲ್ಲಿ ,ಇವರೂ ಸಹ ಒಬ್ಬರು.
CMC ವೆಲ್ಲೂರಿನಿಂದ ತರಬೇತಿ ಪಡೆದು ಬಂದ ಇವರ ಬಳಿ,ಸರ್ಕಾರವು ,ರಾಜ್ಯದ ಬೇರೆ ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರದ , ವೈದ್ಯಾಧಿಕಾರಿಗಳನ್ನು EMOC ತರಬೇತಿಗೆ ನಿಯೋಜಿಸುತ್ತಿತ್ತು. ಹೀಗೆ ಬಂದ ಹಲವಾರು ವೈದ್ಯಾಧಿಕಾರಿಗಳಿಗೆ ,emergency maternity and obstetric care ನಲ್ಲಿ ತರಬೇತಿ ಕೊಟ್ಟು , ಅವರು ಸಮರ್ಥವಾಗಿ ಕೆಲಸನಿರ್ವಹಿಸುವಂತೆ, ಆ ಮೂಲಕ ಹಲವಾರು ತಾಯಂದಿರ ಮತ್ತು ನವಜಾತ ಶಿಶುಗಳ ಜೀವ ಉಳಿಸುವಂತೆ ಇವರು ತಯಾರು ಮಾಡಿದರು.
ಇವರ ಈ ಸೇವೆಯನ್ನು ಮೆಚ್ಚಿದ ಭಾರತ ಸರ್ಕಾರವು ,ಇವರಿಗೆ ರಾಷ್ಟ್ರ ಪತಿಗಳ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿತು.
2008 ರಲ್ಲಿ, ಸರ್ಕಾರಿ ಆಸ್ಪತ್ರೆ ಶಿರಾಗೆ ವರ್ಗಾವಣೆಯಾಗಿ ಎರಡು ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ 2010 ರಲ್ಲಿ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ತುಮಕೂರಿನಲ್ಲಿ ಸ್ವಂತವಾಗಿ ಚರಕ ಆಸ್ಪತ್ರೆ ಪ್ರಾರಂಭಿಸಿ, ನಡೆಸುತ್ತಿರುವರು. ವೈದ್ಯವೃತ್ತಿಯ ಜೊತೆಗೆ ,ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಇವರು ಸಮಾಜ ಮುಖಿಯಾಗಿರುವರು.
KGMOA ಸಂಘದ ತುಮಕೂರು ಜಿಲ್ಲಾ ಶಾಖೆ ಅಧ್ಯಕ್ಷರಾಗಿ,ರಾಜ್ಯದ ಗೌರವಾಧ್ಯಕ್ಷರಾಗಿ
ಸೇವೆ ಸಲ್ಲಿಸಿರುವರು. IMA ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷರಾಗಿ, ರಾಜ್ಯ ಬಿಲ್ಡಿಂಗ್ ಕಮಿಟಿ
ಸದಸ್ಯರಾಗಿ ಸೇವೆ ಸಲ್ಲಿಸಿರುವರು.
ಕರ್ನಾಟಕ ವೈದ್ಯಕೀಯ ಮಂಡಳಿಗೆ 2013 ರಲ್ಲಿ ,ಚುನಾವಣೆ ಮೂಲಕ ಸದಸ್ಯರಾಗಿ ಆಯ್ಕೆಯಾಗಿ ,ಈಗಲೂ ಸೇವೆ ಸಲ್ಲಿಸುತ್ತಿರುವರು.
ತುಮಕೂರಿನ ಜನಪರ ,ಜೀವಪರ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡಿರುವರು.
ವಿದ್ಯಾರ್ಥಿ ಯಾಗಿ ಇದ್ದಾಗಲೇ ಸಮಾಜವಾದಿ ಅಧ್ಯಯನ ಕೇಂದ್ರ, ಕರ್ನಾಟಕ ರಾಜ್ಯ ರೈತ ವಿದ್ಯಾರ್ಥಿ ಒಕ್ಕೂಟದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಈಗಲೂ ನೆಲಸಿರಿ ,ಸಮತಾ ಸಂಘಟನೆ ಮತ್ತು ಮಾನವ ಮಂಟಪ ಮೊದಲಾದ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ
.
ಸಾವಯವ ಕೃಷಿಯ ಬಗ್ಗೆ ಪ್ರೀತಿ ಇದ್ದು ವಾರಾಂತ್ಯದ ಕೃಷಿಕರಾಗಿರುವರು
ಇವರ ಪತ್ನಿ ಜಿ.ಮಲ್ಲಿಕಾ. ಇಬ್ಬರು ಪುತ್ರರು ಮತ್ತು ಇಬ್ಬರು ಸೊಸೆಯಂದಿರು
ಹಿರಿಯ ಮಗ ಡಾ|| ಅತೀಶ್ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಡಿಎನ್‍ಬಿ ಯೂರೋಲಾಜಿ ಮಾಡುತ್ತಿದ್ದು, ಹಿರಿಯ ಸೊಸೆ ಡಾ|| ರಂಜಿತಾ ಅವರು ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾಗಿದ್ದಾರೆ, ಕಿರಿಯ ಮಗ ಡಾ|| ಮಿಲಿಂದ ಅವರು ಎಂಬಿಬಿಎಸ್ ಮುಗಿಸಿ ಸ್ನಾತಕೋತ್ತರ ಪದವಿಗೆ ನಡೆಯುವ ಪರೀಕ್ಷಗೆ ಅರ್ಹತೆ ಪಡೆಯಲು ಓದುತ್ತಿದ್ದು, ಮತ್ತು ಕಿರಿಯ ಸೊಸೆ ಭೂಮಿಕಾ ಅವರು ಎಂಎಸ್ಸಿ ಬೈಯೋ ಕೆಮಿಸ್ಟ್ರಿ ಪದವಿದರರಾಗಿದ್ದಾರೆ.
ಮತ್ತು ಪುಟ್ಟ ಮೊಮ್ಮಗ ಚಿ|| ಸುಮೇರು ಉಳ್ಳ ತುಂಬು ಕುಟುಂಬ ಇವರದು.
ಭಾರತೀಯ ವೈದ್ಯಕೀಯ ಸಂಘ ತುಮಕೂರು ಜಿಲ್ಲಾ ಶಾಖೆಯು 2023ರ ಜುಲೈ 9ನೇ ತಾರೀಕಿನ ಭಾನುವಾರ ಆಚರಿಸಲಿರುವ ವೈದ್ಯರ ದಿನಾಚರಣೆ ಯಂದು ಇವರನ್ನು ಅಭಿನಂದಿಸಲಿದೆ.
ಇವರಿಗೆ ಶುಭವಾಗಲಿ, ಇವರ ಸೇವೆಗೆ ಇನ್ನೂ ಹೆಚ್ಚು ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಲಭಿಸಲಿ.
ವೈದ್ಯರ ದಿನಾಚರಣೆಯು ತುಮಕೂರಿನ ಎಸ್.ಐ.ಟಿ.ಯ ಬಿರ್ಲಾ ಆಡಿಟೋರಿಯಂನಲ್ಲಿ ಜುಲೈ 9ನೇ ತಾರೀಕಿನ ಭಾನುವಾರ ಸಂಜೆ 4.30 ನಡೆಯಲಿದೆ. ಅಧ್ಯಕ್ಷತೆಯನ್ನು ತುಮಕೂರು ಐ.ಎಂ.ಎ. ಅಧ್ಯಕ್ಷರಾದ ಡಾ.ಚಂದ್ರಶೇಖರ್.ಎನ್. ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೂಡ್ಲಗಿ ಶಾಸಕರಾದ ಡಾ|| ಶ್ರೀನಿವಾಸ ಎನ್.ಟಿ. ಭಾಗವಹಿಸಲಿದ್ದು, ರಾಜ್ಯ ಐಎಂಎ ಅಧ್ಯಕ್ಷರಾದ ಡಾ||ಶಿವಕುಮಾರ್ ಬಿ.ಲಕ್ಕೋಲ್ ಮತ್ತು ನ್ಯೂ ಡೆಲ್ಲಿ ಐಎಂಎ ಯ ಎ.ಕೆ.ಎನ್. ಸಿನ್ಹ ಇನ್ಸಿಟ್ಯೂಟಿನ ನಿರ್ದೇಶಕರಾದ ಡಾ|| ಜಿ.ಎನ್.ಪ್ರಭಾಕರ್ ಅವರು ವೈದ್ಯಕೀಯ ವೃತ್ತಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ವೈದ್ಯರುಗಳನ್ನು ಅಭಿನಂದಿಸಲಿದ್ದಾರೆ.
_ವೆಂಕಟಾಚಲ.ಹೆಚ್.ವಿ.