ತುಮಕೂರು: ವೈದ್ಯರು ಹಣದ ಆಮಿಷಕ್ಕೆ ಒಳಗಾಗದೇ ವೃತ್ತಿ ಬದ್ಧತೆಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಜನಮುಖಿ ಸೇವೆ ಮಾಡಬೇಕು ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಕರೆ ನೀಡಿದರು.
ನಗರದ ಅಗಳಕೋಟೆಯಲ್ಲಿನ ಶಿಕ್ಷಣ ಶಿಲ್ಪಿ ಡಾ.ಎಚ್.ಎಂ.ಗಂಗಾಧರಯ್ಯ ಸ್ಮಾರಕಭವನದಲ್ಲಿ ಆಯೋಜಿಸಿದ್ದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಟಿ.ಬೇಗೂರು ಕ್ಯಾಂಪನ್‍ನ 2023-24ನೇ ಶೈಕ್ಷಣಿಕ ಸಾಲಿನ ಶೈಕ್ಷಣಿಕ ಚಟುವಟಿಕೆ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಜ್ಞಾನ ಪಡೆದುಕೊಳ್ಳಲು ವೈದ್ಯರು ನಿರಂತರ ಅಧ್ಯಯನ ಮಾಡಿದಾಗ ಮಾತ್ರ ಹೊಸತನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ನಿರಂತರ ಅಧ್ಯಯನದಿಂದ ವೃತ್ತಿಪರತೆ ಹೆಚ್ಚಾಗುತ್ತದೆ. ರೋಗಿಗಳ ಸೇವೆಯಲ್ಲಿ ಸಂತೋಷವನ್ನು ಕಾಣುವುದು ವೈದ್ಯರಿಗೆ ರಕ್ತಗತವಾಗಬೇಕು. ವೈದ್ಯರು ಹಣದ ಆಮಿಷಕ್ಕೆ ಒಳಗಾಗದೇ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕತೆಯಿಂದ ಜನಮುಖಿ ಸೇವೆ ಮಾಡಬೇಕೆಂದು ಡಾ.ಜಿ.ಪರಮೇಶ್ವರ ಅವರು ಕರೆ ನೀಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ವೈದ್ಯರಿಗೆ ಶಿಕ್ಷಣ ತುಂಬಾ ಅನಿವಾರ್ಯ. ಪ್ರತಿ ದಿನದ ಕಲಿಕೆ ಅವರಿಗೆ ತುಂಬಾ ಮಹತ್ವದ್ದು. ಹೀಗಾಗಿ ವೈದ್ಯರು ನಿರಂತರ ಅಧ್ಯಯನ ಮಾಡಿದರೆ ಮಾತ್ರ ಹೊಸತನಕ್ಕೆ ಹೊಂದಿಕೊಳ್ಳಲು ಸಾಧ್ಯ. ವೈದ್ಯರನ್ನು ಯಾರೂ ಅನುಮಾನದಿಂದ ನೋಡಬಾರದು. ಇದರಿಂದ ವೃತ್ತಿಗೆ ಅಪಮಾನವಾಗುತ್ತದೆ. ಹೀಗಾಗಿ ಎಲ್ಲರೂ ಸಮರ್ಪಣೆ ಮಾಡಿಕೊಂಡು ವೈದ್ಯ ವೃತ್ತಿ ಮಾಡಬೇಕು ಎಂದು ಡಾ.ಪರಮೇಶ್ವರ ಅವರು ನುಡಿದರು.
ಹಣದಿಂದ ವೈದ್ಯರ ಸೇವೆಯನ್ನು ಅಳೆಯಲು ಸಾಧ್ಯವಿಲ್ಲ. ವೈದ್ಯರು ವೃತ್ತಿಪರವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜ ಅವರನ್ನು ಗುರುತಿಸಿ ಗೌರವಿಸುತ್ತದೆ. ವೈದ್ಯರು ಕೇವಲ ಔಷಧಿ ಮಾತ್ರ ಕೊಡುವುದಿಲ್ಲ, ಬದಲಾಗಿ ರೋಗಿಯನ್ನು ಅಂತಃಕರಣದಿಂದ ಆರೈಕೆ ಮಾಡುತ್ತಾರೆ ಎಂದು ಅವರು ಹೇಳಿದರು.
ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಲೋಕೇಶ್ ವಿಶ್ವನಾಥ್ ಅವರು ಮಾತನಾಡಿ, ಮಾನವೀಯತೆ ಗುಣಧರ್ಮ ವೈದ್ಯರ ಮಂತ್ರವಾಗಬೇಕು. ರೋಗಿಗಳನ್ನು ಉತ್ತಮ ರೀತಿಯಲ್ಲಿ ಉಪಚರಿಸಿ, ಸೂಕ್ತ ಚಿಕಿತ್ಸೆ ನೀಡಬೇಕು. ವೃತ್ತಿ ಬಗ್ಗೆ ಹೆಮ್ಮೆ-ಗೌರವ ಇರಬೇಕು. ಆಗ ಮಾತ್ರ ರೋಗಿಗಳನ್ನು ಗುಣಪಡಿಸಲು ಸಾಧ್ಯ. ವೈದ್ಯಕೀಯ ಕೋರ್ಸ್ ಅಧ್ಯಯನದ ಅವಧಿಯಲ್ಲಿನ ಶ್ರಮ ನಿಮ್ಮ ಉಜ್ವಲ ಭವಿಷ್ಯಕ್ಕೆ ಪೂರಕವಾಗಲಿದೆ ಎಂದರು.
ಪ್ರಾಣ ನೀಡುವುದು ದೇವರಾದರೆ ಅದನ್ನು ರಕ್ಷಿಸುವವರು ವೈದ್ಯರಾಗಿದ್ದಾರೆ. ತಮ್ಮ ಪ್ರಾಣವನ್ನು ಲೆಕ್ಕಿಸದೆ ರೋಗಿಗಳ ಸೇವೆಗೈಯ್ಯುವ ವೈದ್ಯರ ಸೇವೆ ಅನುಕರಣೀಯವಾಗಿದೆ. ರೋಗಿಯನ್ನು ಉಪಚರಿಸಲು ಹೋಗಿ ವೈದ್ಯರೇ ರೋಗಕ್ಕೆ ತುತ್ತಾದ ಅನೇಕ ಘಟನೆಗಳಿವೆ ಎಂದು ಅವರು ವಿಷಾದದಿಂದ ನುಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ, ಅವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಬಿಳಿಕೋಟು ಧರಿಸಿ, ಕರ್ತವ್ಯ ಪ್ರಜ್ಞೆಯ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಕನ್ನಿಕಾ ಪರಮೇಶ್ವರ, ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಡಾ.ಎಂ.ಝಡ್.ಕುರಿಯನ್, ಕುಲಾಧಿಪತಿಗಳ ಸಲಹೆಗಾರರಾದ ವಿವೇಕ್ ವೀರಯ್ಯ, ದಂತ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರವೀಣ್ ಕುಳುವ, ಟಿ.ಬೇಗೂರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ದಿವಾಕರ್, ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್, ಪರೀಕ್ಷಾಂಗ ನಿಯಂತ್ರಕರಾದ ಡಾ.ಜಿ.ಗುರುಶಂಕರ್ ಸೇರಿದಂತೆ ವಿವಿಧ ವಿಭಾಗ ಮುಖ್ಯಸರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.