
ತುಮಕೂರು: ಲಿಂಗ,ಧರ್ಮ,ಜಾತಿ ಭೇದವಿಲ್ಲದೆ ಎಲ್ಲರಲ್ಲಿಯೂ ಬುದ್ದಿ ಎಂಬುದು ಇರುತ್ತದೆ.ಆದರೆ ಅದನ್ನು ಗುರುತಿಸಿ ಕೊಂಡು,ತನ್ನ ಸಾಧನೆಗೆ ಅದನ್ನು ಬಳಸಿಕೊಳ್ಳುವವನೇ ದೊಡ್ಡ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ.ಇಂದು ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಭಾರತೀಯ ವೈದ್ಯರು,ಇಂಜಿನಿಯರ್‍ಗಳು,ಇನ್ನಿತರ ವೃತ್ತಿಯನ್ನು ಕೈಗೊಂಡವರು ನಮಗೆ ಸಿಗುತ್ತಾರೆ.ಇದಕ್ಕೆ ನಮ್ಮ ಪೂರ್ವಜರು ನೀಡಿದ ಶಿಕ್ಷಣ ಕಾರಣ ಎಂದು ಕೆ.ಎನ್.ರಾಜಣ್ಣ ನುಡಿದರು.
ನಗರದ ಸಿದ್ದಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ 2023-24ನೇ ಸಾಲಿನ ಎರಡನೇ ಬ್ಯಾಚ್‍ನ ಮೊದಲನೇ ವರ್ಷದ ಎಂ.ಬಿ.ಬಿ.ಎಸ್ ತರಗತಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಶಿಕ್ಷಣವೊಂದೇ ಬಳಸಿದಷ್ಟು ಬೆಳೆಯುವಂತಹ,ಯಾರಿಂದಲು ಅಪಹರಿಸಲಾಗದ ಸಂಪತ್ತು. ಹಾಗಾಗಿ ಎಲ್ಲರು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಲಿ ಎಂದರು.
ಸಿದ್ದಗಂಗಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಇದು ಹೆಮ್ಮೆ ಪಡುವ ವಿಚಾರ.ಕುಗ್ರಾಮದಿಂದ ಬಂದ ಬಡವರ ಮಕ್ಕಳು ಮೆಡಿಕಲ್ ಶಿಕ್ಷಣ ಪಡೆಯಬಹುದು ಎಂಬುದನ್ನು ಸಿದ್ದಗಂಗಾ ಮಠ ಮಾಡಿ ತೋರಿಸಿದೆ.ವಿದ್ಯೆ ಎಂಬುದು ಸಾಧಕರಿಗೆ ಮಾತ್ರ ಒಲಿಯುವಂತದ್ದು, ಶ್ರದ್ದೆ ಮತ್ತು ನಿರಂತರ ಪರಿಶ್ರಮದಿಂದ ಶಿಕ್ಷಣ ಪಡೆದಾತನಿಗೆ ಎಲ್ಲವನ್ನು ತನ್ನದಾಗಿಸಿಕೊಳ್ಳುವ ಶಕ್ತಿ ಬರುತ್ತದೆ, ಸಮಾಜದ ಶಕ್ತಿಯಾಗಿರುವ ಯುವಜನತೆ,ಗುಣಮಟ್ಟದ ಶಿಕ್ಷಣ ಪಡೆದು,ಸರ್ವಸ್ವವನ್ನು ತಮ್ಮದಾಗಿಸಿ ಕೊಳ್ಳುವತ್ತ ಮುನ್ನೆಡೆಯಬೇಕೆಂದು ತಿಳಿಸಿದರು.
ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ದೃಢ ನಿರ್ಧಾರ ತೆಗೆದುಕೊಂಡು ಮೆಡಿಕಲ್ ಕಾಲೇಜು ಸ್ಥಾಪಿಸಿದ್ದಾರೆ.ವೈದ್ಯಕೀಯ ವಿದ್ಯಾರ್ಥಿಗಳು ಪದವಿ ಶಿಕ್ಷಣ ಮುಗಿದ ನಂತರ ಸೇವಾ ಮನೋಭಾವದಿಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಬೇಕು.ನೋವಿಲ್ಲದೆ ಕ್ಯಾನ್ಸರ್‍ಗೆ ಚಿಕಿತ್ಸೆ ನೀಡುವ ವಿಧಾನ ಸಂಶೋಧಿಸಿದ ಡಾ.ಸಿ.ಪಳಿನಿವೇಲು ಅಂತಹವರು ನಿಮಗೆ ಮಾದರಿಯಾಗಬೇಕು ಎಂದು ಅವರು ಸಲಹೆ ನೀಡಿದರು.
ತಮಿಳುನಾಡಿನ ಕೊಯಂಬತ್ತೂರು ಜೆಮ್ ಆಸ್ಪತ್ರೆಯ ಛೇರ್ಮನ್ ಡಾ.ಸಿ.ಪಳನಿವೇಲು ಮಾತನಾಡಿ,ಬಡತನದಂತಹ ಪರಿಸ್ಥಿತಿಯಲ್ಲಿಯೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಬದ್ಧತೆಯಿಂದ ಶ್ರಮಪಟ್ಟಲ್ಲಿ ಗುರಿಮುಟ್ಟಬಹುದು ಎಂಬುದಕ್ಕೆ ನಾನೇ ಜೀವಂತ ಉದಾಹರಣೆ.ಬಡತನದ ಕಾರಣಕ್ಕೆ ಶಾಲೆ ಬಿಟ್ಟು,ನಂತರ ಓದು ಮುಂದುವರೆಸಿ 20ನೇ ವರ್ಷಕ್ಕೆ ಎಸ್.ಎಸ್. ಎಲ್.ಸಿ ಮುಗಿಸಿ,ನಿರ್ಧಿಷ್ಟ ಗುರಿಯೊಂದಿಗೆ ಮುನ್ನೆಡೆದಿದ್ದರಿಂದ ಒಳ್ಳೆಯ ವೈದ್ಯ ಎಂದು ಜನರು ಗುರುತಿಸುವಂತಾಗಿದೆ. ವೈದ್ಯಕೀಯ ವೃತ್ತಿ ಸಮಾಜದ ಬಡವರಿಗೆ ಉತ್ತಮ ಸೇವೆ ಸಲ್ಲಿಸುವ ಅವಕಾಶ ನೀಡುವ ಪವಿತ್ರವಾದ ವೃತ್ತಿಯಾಗಿದೆ. ಇದನ್ನು ವೈದ್ಯಕೀಯ ವಿದ್ಯಾರ್ಥಿಗಳು ಈಗಿನಿಂದಲೇ ಅರ್ಥೈಸಿಕೊಂಡು ಸಮಾಜದ ಆಸ್ತಿಗಳಾಗಬೇಕು.ಕರ್ನಾಟಕ ಸರಕಾರ ಅತ್ಯುತ್ತಮ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಹಾಗೂ ಆರೋಗ್ಯವೇ ಮನುಷ್ಯನ ಸಂತೋಷದ ಮೂಲಾಧಾರವಾಗಿದೆ.ಇದು ನಮ್ಮ ದೇಶದ ಮಣ್ಣಿನಲ್ಲೇ ಅಡಗಿದೆ ಎಂದ ಅವರು,ಮಾನವೀಯತೆಗಾಗಿ ಸೇವೆ ಸಲ್ಲಿಸಲು ವೈದ್ಯಕೀಯ ಶಿಕ್ಷಣ ಪಡೆಯಬೇಕು.ಕೇವಲ ಇಂಜಕ್ಷನ್,ಮಾತ್ರೆ ನೀಡುವವರು ವೈದ್ಯರಾಗಲು ಸಾಧ್ಯವಿಲ್ಲ.ರೋಗಿಯ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಚಿಕಿತ್ಸೆ ನೀಡುವವನೇ ನಿಜವಾದ ವೈದ್ಯ.ಸಂಶೋಧನೆಯ ಕಡೆಗೂ ಹೆಚ್ಚಿನ ಗಮನಹರಿಸಬೇಕೆಂದು ಎಂದು ಕಿವಿ ಮಾತು ಹೇಳಿದರು.
ಸಿದ್ದಗಂಗಾ ಮಡಿಕಲ್ ಕಾಲೇಜಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ.ಸಚ್ಚಿದಾನಂದ ಮಾನತಾಡಿ,ದೇಶದಲ್ಲಿ ಪ್ರತಿವರ್ಷ 20 ಲಕ್ಷ ಜನ ನೀಟ್ ಪರೀಕ್ಷೆ ಬರೆಯುತ್ತಾರೆ.ಇವರಲ್ಲಿ ಶೇ50ರಷ್ಟು ಅಂದರೆ 10 ಲಕ್ಷ ಜನ ತೇರ್ಗಡೆ ಹೊಂದಿದರೆ, ಅವರಲ್ಲಿ 1.06ಲಕ್ಷ ಜನರಿಗೆ ಮಾತ್ರ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ದೊರೆಯುತ್ತದೆ.ಹಾಗಾಗಿ ಇಲ್ಲಿ ಬಂದಿರುವ ನೀವೆಲ್ಲರೂ ಬುದ್ದಿವಂತರೇ ಆಗಿದ್ದೀರಿ.ಎಂ.ಬಿ.ಬಿ.ಎಸ್ ಶಿಕ್ಷಣ ಪಡೆದರೆ ವೈದ್ಯ ವೃತ್ತಿಯ ಜೊತೆಗೆ,ಹಲವಾರು ಅವಕಾಶಗಳಿವೆ, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಐಎಎಸ್, ಕೆ.ಎಸ್.ಎಸ್,ಐಎಂಎಸ್,ವೈದ್ಯಕೀಯ ಶಿಕ್ಷಣದ ಉಪನ್ಯಾಸಕರಾಗಿ,ಉದ್ಯಮಿಗಳು ಆಗಲು, ವೈದ್ಯಕೀಯ ಪರಿಕರ ಉತ್ಪಾದಿಸುವ ಕಂಪನಿಗಳಲ್ಲಿ ಸಿಇಓ ನಂತರ ಹುದ್ದೆಗಳಿಗೆ ಸೇರಲು ಅವಕಾಶವಿದೆ.ಆಯ್ಕೆ ನಿಮ್ಮದು,ನಿಮ್ಮ ಕನಸಿಗೆ ರೆಕ್ಕೆಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ಸಿದ್ದಗಂಗ ಸಂಸ್ಥೆ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ಮಾತನಾಡಿ,ಸಿದ್ದಗಂಗಾ ಮೆಡಿಕಲ್ ಕಾಲೇಜು ಎರಡನೇ ವರ್ಷದ ಕೂಸು. ಕಾಲೇಜು ಆರಂಭಗೊಂಡಿದ್ದೇ ಒಂದು ಪವಾಡ.ಒಳ್ಳೆಯ ವೈದ್ಯರ ತಯಾರು ಮಾಡುವುದರ ಜೊತೆಗೆ,ಗುಣಮಟ್ಟದ ಶುಶ್ರೂಸೆ ನಮ್ಮ ಗುರಿಯಾಗಿದೆ.ಸಿದ್ದಗಂಗಾ ಮೆಡಿಕಲ್ ಕಾಲೇಜು ಗುಣಮಟ್ಟದಲ್ಲಿ ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ.ತಾವೆಲ್ಲರೂ ವ್ಯಸನ ಮುಕ್ತರಾಗಿ, ಆಲಸ್ಯದಿಂದ ದೂರವಿದ್ದು,ಒಳ್ಳೆಯ ವೈದ್ಯರಾಗಿ ಹೊರಹೊಮ್ಮಿ ಎಂದು ಶುಭಕೋರಿದರು.
ಸಿದ್ದಗಂಗಾ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಡಾ.ಪರಮೇಶ್, ಸಿದ್ದಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ಮಾತನಾಡಿದರು.
ವೇದಿಕೆಯಲ್ಲಿ ಸಿದ್ದಗಂಗಾ ಎಜುಕೇಶನ್ ಸೊಸೈಟಿಯ ಟಿ.ಕೆ. ನಂಜುಂಡಪ್ಪ,ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಸಹಕಾರ್ಯದರ್ಶಿ ಡಾ.ಶಿವಕುಮಾರಯ್ಯ,ಸೂಪರ್ ಸ್ಪೆμÁಲಿಟಿ ವಿಭಾಗದ ಮುಖ್ಯಸ್ಥರಾದ ಡಾ.ಭಾನುಪ್ರಕಾಶ್ ಹೆಚ್.ಎಂ.,ಮೆಡಿಕಲ್ ಅಧೀಕ್ಷಕ ರಾದ ಡಾ. ನಿರಂಜನಮೂರ್ತಿ, ಕಾಲೇಜಿನ ವೈದ್ಯರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.