
ತುಮಕೂರು: ತುಮಕೂರು ನಗರವೂ ಸೇರಿದಂತೆ ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೈಗಾರಿಕಾ ಯೋಜನೆಗಳ ಬಗ್ಗೆ ಕರ್ನಾಟಕ ಕೌಶಲ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ನೇತೃತ್ವದ ತಂಡ ಬುಧವಾರ ಇಸ್ರೋ (ಹೆಚ್‍ಎಂಟಿ), ವಸಂತನರಸಾಪುರ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿದಾಗ ಕೇಂದ್ರ ಸರ್ಕಾರದ ಯೋಜನೆಗಳು ಅನುಷ್ಠಾನಗೊಳ್ಳುವುದಕ್ಕಿಂತ ನೆನೆಗುದಿಗೆ ಬಿದ್ದಿರುವ ದೃಶ್ಯ ಕಣ್ಣಿಗೆ ರಾಚಿತು.

ತುಮಕೂರು ನಗರದ ಹಳೆ ಹೆಚ್‍ಎಂಟಿಯನ್ನು ಇಸ್ರೋ ಸಂಸ್ಥೆಗೆ ನೀಡಿದ್ದು, ಅಲ್ಲಿ ಏನು ಡೆಯುತ್ತಿದೆ ಎಂಬುದು ಜನತೆಗೂ ತಿಳಿದಿಲ್ಲ, ಸರ್ಕಾರಕ್ಕೂ ತಿಳಿದಿದೆಯೋ ಗೊತ್ತಿಲ್ಲ. ಇಸ್ರೋ ಸಂಸ್ಥೆಯವರು ಈ ಜಾಗವನ್ನು ವಶಕ್ಕೆ ಪಡೆಯುವಾಗ 2ಸಾವಿರ ಮಂದಿಗೆ ಉದ್ಯೋಗ ನೀಡುವುದಾಗಿ ಮತ್ತು ಸ್ಪೇಸ್‍ಗೆ ಸಂಬಂಧಪಟ್ಟ ಉಪಕರಣಗಳನ್ನು ತಯಾರಿಸುವುದಾಗಿ ತಿಳಿಸಿದ್ದರು, ಆದರೆ ಇಲ್ಲಿವರೆವಿಗೂ ಯಾವುದನ್ನೂ ಮಾಡಿಲ್ಲ ಎಂದು ಮುರಳೀಧರ ಹಾಲಪ್ಪ ಹೇಳಿದರು.
ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ್ದ ತಂಡದ ಸದಸ್ಯರೊಂದಿಗೆ ಹಾಗೂ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಮುರಳೀಧರ ಹಾಲಪ್ಪ ಅವರು, ಕಳೆದ 7 ವರ್ಷಗಳ ಹಿಂದೆ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 120 ಎಕರೆಯಲ್ಲಿ ಆರಂಭಗೊಂಡ ಫುಡ್‍ಪಾರ್ಕ್‍ನ್ನು ಪ್ರಧಾನಿ ನರೇಂದ್ರ ಮೋದಿಯವರು ಅಮೋಘ ಕಾರ್ಯಕ್ರಮ ನಡೆಸಿ ಉದ್ಘಾಟನೆ ಮಾಡಿ ಇಲ್ಲಿ ಸುಮಾರು 2 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸುವ ವಾಗ್ದಾನವನ್ನು ನೀಡಿದ್ದರು. 8 ವರ್ಷಗಳು ಕಳೆದರೂ ಸಹ ಉದ್ಯೋಗ ಸೃಷ್ಠಿಯಾಗಿಲ್ಲ ಎಂದರು.

ಫುಡ್‍ಪಾರ್ಕ್ ಸ್ಥಿತಿ ನೋಡಿದರೆ ರಿಲಯನ್ಸ್ ಕಂಪನಿಗೆ ಈ ಜಾಗವನ್ನು ಮಾರಾಟ ಮಾಡುವ ಹುನ್ನಾರಗಳು ನಡೆಯುತ್ತಿದ್ದು, ಇದಕ್ಕೆ ಅವಕಾಶ ನೀಡದೆ ಫುಡ್‍ಪಾರ್ಕ್‍ನಲ್ಲಿ 2 ಲಕ್ಷ ಉದ್ಯೋಗ ಸೃಷ್ಠಿ ಮಾಡಿ ನಿಮ್ಮ ಮಾತನ್ನು ಉಳಿಸಿಕೊಳ್ಳಿ, ಯಾವುದೇ ಕಾರಣಕ್ಕೂ ರಿಲಯನ್ಸ್ ಕಂಪನಿಗೆ ಮತ್ತು ಫ್ಯೂಚರ್ ಗ್ರೂಪ್ ಕಂಪನಿಗೆ ಮಾರಾಟ ಮಾಡಬೇಡಿ ನಮ್ಮ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಲು ಅವಕಾಶ ನೀಡಬೇಡಿ ಎಂದು ತುಮಕೂರು ಸಂಸದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು.
ತುಮಕೂರು ನಗರಕ್ಕೆ ಸಮೀಪವಿರುವ ಅಂತರಸನಹಳ್ಳಿ, ವಸಂತನರಸಾಪುರ ಕೈಗಾರಿಕಾ ಪ್ರದೇಶಗಳನ್ನು ಕೈಗಾರಿಕಾ ಕಾರಿಡಾರ್ ಮಾಡಬೇಕೆಂದು ಕೆಐಎಡಿಬಿ ಕೆಎಸ್‍ಎಸ್‍ಐಡಿಸಿ ಸೇರಿಕೊಂಡು ವಸಂತನರಸಾಪುರ ಕೈಗಾರಿಕಾ ಅಭಿವೃದ್ಧಿ ಪಥದತ್ತ ಸಾಗಬೇಕೆಂಬ ಉದ್ಧೇಶದಿಂದ ಪ್ರಾರಂಭ ಮಾಡಲಾಯಿತು.

ವಸಂತನರಸಾಪುರ, ಅಂತರಸನಹಳ್ಳಿ, ಹಿರೇಹಳ್ಳಿ ತುಮಕೂರಿನ ಜೀವಾಳ. ಈ ಭಾಗದಲ್ಲಿ ಸ್ಥಳೀಯ ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸಬೇಕೆಂಬುದು ನಮ್ಮ ಉದ್ಧೇಶವಾಗಿದೆ. ಈ ಹಿಂದಿನ ಸರ್ಕಾರ ಮಲ್ಟಿ ಸ್ಕಿಲ್ ಡೆವಲೆಪ್‍ಮೆಂಟ್ ಸೆಂಟರ್ ಮಾಡಲು ಜಿಲ್ಲಾಡಳಿತದಿಂದ 27 ಎಕರೆ ಮಂಜೂರು ಮಾಡಿದ್ದರು. ಆದರೆ ಹಿಂದಿನ ಸರ್ಕಾರದಲ್ಲಿ ಟೇಕಾಫ್ ಆಗಲೇ ಇಲ್ಲ, 2017-18ರಲ್ಲಿ ಪ್ರಕ್ರಿಯೆ ಆರಂಭಗೊಂಡು ಅದಕ್ಕೆ ಕೌಶಲ್ಯ ಅಭಿವೃದ್ಧಿ ನಿಗಮದಿಂದ 28ಕೋಟಿ ಹಣವೂ ನಿಗಧಿಯಾಯಿತು. ಆದರೆ ಟೇಕಾಫ್ ಆಗಲೇ ಇಲ್ಲ, ಈಗಿನ ಸರ್ಕಾರದಲ್ಲಿ ಸಣ್ಣ ಕೈಗಾರಿಕೆ ಮತ್ತು ಬೃಹತ್ ಕೈಗಾರಿಕೆ ಮಂತ್ರಿಗಳು ಇತ್ತ ಗಮನ ಹರಿಸಿ ಮಲ್ಟಿ ಸ್ಕಿಲ್ ಡೆವಲೆಪ್ ಮೆಂಟ್ ಸೆಂಟರ್ ಮಾಡಲು ಜರೂರು ಕ್ರಮ ವಹಿಸುವಂತೆ ಮನವಿ ಮಾಡಿದರು.

ವಸಂತನರಸಾಪುರದಲ್ಲಿ ಜಪಾನೀಸ್ ಟೂಲ್ ಪಾರ್ಕ್, ಫುಡ್ ಪಾರ್ಕ್, ತುಮಕೂರು ಮೆಷಿನ್ ಟೂಲ್ ಸೆಂಟರ್ ನಿಧಾನಗತಿಯಲ್ಲಿ ಕಾರ್ಯಾರಂಭ ಮಾಡುತ್ತಿದ್ದರೂ, ಆ ಪ್ರದೇಶಗಳಲ್ಲಿ ನೀರಿನ ಸಂಪರ್ಕ, ಪೆÇಲೀಸ್ ಠಾಣೆ, ಭದ್ರತಾ ವ್ಯವಸ್ಥೆ, ವಿದ್ಯುತ್ ಸಂಪರ್ಕ ವ್ಯವಸ್ಥೆ, ಆರೋಗ್ಯ ಕೇಂದ್ರ, ಉತ್ತಮ ರಸ್ತೆ, ವ್ಯವಸ್ಥಿವಾದ ಒಳಚರಂಡಿ ವ್ಯವಸ್ಥೆ ಇಲ್ಲ ಹಾಗೂ ಬಂಡವಾಳ ಹೂಡಿಕೆಗೆ ಅನುಕೂಲವಾದ ವಾತಾವರಣ ಕಲ್ಪಿಸದೇ ಇರುವುದು ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಕುಂಠಿತಕ್ಕೆ ಕಾರಣವಾಗಿದೆ ಎಂದರು.
ಕ್ಯಾಂಪಸ್ ಸಂದರ್ಶನ ನಡೆಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕಿದ್ದ ಕೈಗಾರಿಕಾ ಸಂಸ್ಥೆಗಳು, ಇದುವರೆಗೂ ಜಿಲ್ಲೆಯ ಯಾವುದೇ ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಿಲ್ಲ. ಆದ್ದರಿಂದ ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಹೇಳಿದರು.
ಜಪಾನೀಸ್ ಟೂಲ್ ಪಾರ್ಕ್ 600 ಎಕರೆಯಿದ್ದು ಕೇವಲ 2 ಇಂಡಸ್ಟ್ರೀಸ್‍ಗಳು ಮಾತ್ರ ಕಾರ್ಯಾರಂಭ ಮಾಡುತ್ತಿವೆ. ಫುಡ್‍ಪಾರ್ಕ್ 120 ಎಕರೆಯಿದ್ದು ಕೇವಲ 6 ಇಂಡಸ್ಟ್ರೀಸ್‍ಗಳು ಕಾರ್ಯಾರಂಭ ಮಾಡುತ್ತಿವೆ. ತುಮಕೂರು ಮೆಷಿನ್ ಟೂಲ್ ಪಾರ್ಕ್ ಸೆಂಟರ್ 500 ಎಕರೆಯಿದ್ದು ಕೇವಲ 2 ಶೆಡ್‍ಗಳನ್ನು ಹಾಕಲಾಗಿದೆ.

ಹೀಗೆ ಹತ್ತು ಹಲವು ಸಮಸ್ಯೆಗಳು ಕಳೆದ 9 ವರ್ಷಗಳಿಂದಲೂ ಜಿಲ್ಲೆಯ ಜನತೆಯಲ್ಲಿ ಕಾಡುತ್ತಿದ್ದು, ಒಟ್ಟಾರೆ ತುಮಕೂರು ಜಿಲ್ಲೆ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿಗೊಳ್ಳುವಲ್ಲಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಹಾಗೂ ಇದಕ್ಕೆ ಪೂರಕವಾಗಿ ಅನುಷ್ಠಾನಗೊಳಿಸಬೇಕಿದ್ದ ರೈಲ್ವೆ, ನೀರಿನ ಪೂರೈಕೆ ಪ್ರಗತಿ ಕಾಣದೆ ಬರೀ ಭಾಷಣ, ಪತ್ರಿಕಾಗೋಷ್ಠಿಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಆರೋಪಿಸಿದರು.
ಹೆಚ್‍ಎಂಟಿ ಕಾರ್ಖಾನೆಯಲ್ಲಿ 2000 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇದರಿಂದ 4000 ಕುಟುಂಬಗಳಿಗೆ ಜೀವನಾಧಾರವಾಗಿತ್ತು. ಹೆಚ್‍ಎಂಟಿ ಕಾರ್ಖಾನೆಯನ್ನು ಮುಚ್ಚಿ ಜಾಗವನ್ನು ಇಸ್ರೋಗೆ ಹಸ್ತಾಂತರಿಸಿ ಹಲವು ವರ್ಷಗಳೇ ಕಳೆದರು ಇಸ್ರೋ ಸಂಸ್ಥೆ ಮಾತ್ರ ಆರಂಭಗೊಂಡಿಲ್ಲ ಎಂದರು.
ಹೆಚ್‍ಎಂಟಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ರೇವಣ ಸಿದ್ಧಯ್ಯ ಮಾತನಾಡಿ, ತುಮಕೂರು ನಗರದ ಹೆಚ್‍ಎಂಟಿ ಕಾರ್ಖಾನೆ ಜಾಗವನ್ನು ತುಮಕೂರಿನ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡರ ಅವಧಿಯಲ್ಲಿ ಇಸ್ರೋ ಸಂಸ್ಥೆಗೆ ಹಸ್ತಾಂತರಿಸಲಾಗಿತ್ತು. ಈವರೆಗೂ ಇಸ್ರೋ ಸಂಸ್ಥೆಯವರು ಅಭಿವೃದ್ಧಿ ಪಡಿಸಿ ಸ್ಥಳಿಯರಿಗೆ ಉದ್ಯೋಗ ಕಲ್ಪಿಸಲು ಸಾಧ್ಯವಾಗಿಲ್ಲ, ಕೂಡಲೇ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿ ಇಸ್ರೋ ಸಂಸ್ಥೆ ಆರಂಭಿಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕೆಂದು ಒತ್ತಾಯಿಸಿದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶ ಅಸೋಸಿಯೇಷನ್ ಅಧ್ಯಕ್ಷ ಜಿ.ವಿ.ರಾಮಮೂರ್ತಿ ಮಾತನಾಡಿ, ವಸಂತನರಸಾಪುರದಲ್ಲಿ ಮೂಲಭೂತ ಸೌಕರ್ಯಗಳಾದ ನೀರಿನ ವ್ಯವಸ್ಥೆ, ಶೌಚಾಲಯ, ರಸ್ತೆ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ, ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ ಆರಂಭಿಸಿ ಭದ್ರತೆ ಕಲ್ಪಿಸಿಕೊಟ್ಟರೆ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವವರಿಗೂ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಹೆಚ್‍ಎಂಟಿ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ರೇವಣ್ಣ ಸಿದ್ದಯ್ಯ, ತುಮಕೂರು ಗ್ರಾಮಾಂತರ ಪರಾಜಿತ ಅಭ್ಯರ್ಥಿ ಷಣ್ಮುಖಪ್ಪ, ಅಸೋಸಿಯೇಷನ್ ಅಧ್ಯಕ್ಷ ಜಿ.ವಿ.ರಾಮಮೂರ್ತಿ, ಕಾರ್ಯದರ್ಶಿ ಡಾ. ಹರೀಶ್, ಕೆಐಎಡಿಬಿ. ಇಇ ಟಿ.ಎಸ್ ಲಕ್ಷ್ಮೀಷ, ಟೂಡ ಮಾಜಿ ಅಧ್ಯಕ್ಷ ಸಿದ್ದಲಿಂಗೌಡ,
ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ, ಮಂಗಳಮ್ಮ, ಮಾಜಿ ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ, ಬಷೀರ್ ಅಹಮದ್, ನಿಸ್ಸಾರ್ ಅಹಮದ್, ತೇಶಿ ವೆಂಕಟೇಶ್, ಜಗದೀಶ್, ಮರಿಚೆನ್ನಮ್ಮ, ಚಂದ್ರಕಲ, ಯದು, ಡಾ. ರಾಘವೇಂದ್ರ, ಅಶ್ವತ್ಥನಾರಾಯಣ, ನಟರಾಜು, ದಿಲೀಪ್, ಗೀತಾ, ಸಾಹೇರ, ವಸುಂಧರ, ಜಯಶ್ರೀ ಮುಂತಾದವರು ಭಾಗವಹಿಸಿದ್ದರು.