ರೈತನ ಮಗ-ಒಂದೇ ಬೆಂಚಿನ ಬಾಲ್ಯದ ಗೆಳೆಯ ಡಿಸಿಯಾದಾಗ ಅಭಿನಂದಿಸುತ್ತಾ.

ಆತ ಯಾವಾಗಲೂ ಮೆಲ್ಲಗೆ ತರಲೆ ಹುಡುಗ, ಅಷ್ಟೇ ಕಷ್ಟ ಬೀಳುವ ಹುಡುಗನೂ ಹೌದು, ಮನೆಯಲ್ಲಿ ಬಡತನ, ಒಂದೊತ್ತು ಊಟವಿದ್ದರೆ ಮತ್ತೊಂದು ಹೊತ್ತಿಗೆ ಊಟವಿರುತ್ತೋ ಇಲ್ಲವೋ ಎಂಬಂತಹ ಸ್ಥಿತಿ, ಊಟದ್ದೇ ಇಂತಹ ಸ್ಥಿತಿಯಾದರೆ, ಓದಿಗೆ ಬೇಕಾದ ಪೆನ್-ಪೆನ್ಸಿಲ್ ಕತೆ ತೆಗೆದುಕೊಳ್ಳ ಬೇಕಾದರೆ ಅದೊಂದು ದೊಡ್ಡ ಹರ ಸಾಹಸ ಅಷ್ಟೇ ಖುಷಿಯ ವಿಚಾರ ಏಕೆಂದರೆ ಆಗಿನ ಕಾಲಕ್ಕೆ ಒಬ್ಬನ ಹತ್ತಿರ ಪೆನ್ ಪೆನ್ಸಿಲ್ ಇದೆ ಅಂದರೆ ಅವನೇ ಶ್ರೀಮಂತ, ಇತರರಿಗೆ ಆ ಭಾಗ್ಯ ಯಾವಾಗ ಸಿಗುತ್ತದೋ ಎಂಬುದೇ ಚಿಂತೆ, ಇಲ್ಲ ಪಿನ್-ಪೆನ್ಸಿಲ್ ತಂದವನ ಪಾಟಿ ಚೀಲದಿಂದ ಕದಿಯುವ ಚಿಂತೆ ಇಂತಹ ದಿನಗಳಲ್ಲಿ ಓದಿದವರೆ ನಾವೆಲ್ಲಾ ಭಾಗ್ಯವಂತರು, ಅಂತಹ ಭಾಗ್ಯವಂತರಲ್ಲಿ ಈಗ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿರುವ ಒಂದೇ ಬೆಂಚಿನ ಬಾಲ್ಯದ ಗೆಳೆಯ ಪಿ.ಎನ್.ರವೀಂದ್ರ ಅವರು ಒಬ್ಬರು.

ರವೀಂದ್ರನಿಗೆ ಓದಬೇಕೆಂಬ ಛಲ ತುಂಬಾ ಇತ್ತು ನಾನು ಅವನು 5ರಿಂದ 7ತರಗತಿವರೆಗೆ ಒಂದೇ ಬೆಂಚಿನಲ್ಲಿ ಅಕ್ಕಪಕ್ಕ ಕೂತು ಓದಿದವರು, ನಾನು ಸ್ವಲ್ಪ ಗಣಿತ, ವಿಜ್ಞಾನದಲ್ಲಿ ಮುಂದೆ ಇದ್ದೆ, ಮೇಷ್ಟರು ಬೋರ್ಡಿನ ಮೇಲೆ ಲೆಕ್ಕ ಹಾಕಿದ ಒಂದೇ ನಿಮಿಷದಲ್ಲಿ ಲೆಕ್ಕ ಮಾಡಿ ರವೀಂದ್ರನಿಗೆ ಕಷ್ಟವಾದ ಲೆಕ್ಕ ತೋರಿಸುತ್ತಿದೆ, ಆತನು ಲೆಕ್ಕ ಬರೆದುಕೊಂಡ ಮೇಲೆ ಇಬ್ಬರೂ ನಾವು ಲೆಕ್ಕ ಮಾಡಿದ್ದೇವೆ ಎಂದು ಎದ್ದು ನಿಲ್ಲುತ್ತಿದ್ದೆವೆ, ಮೇಷ್ಟರು ಇಬ್ಬರ ಲೆಕ್ಕ ನೋಡಿ ಗುಡ್ ಎನ್ನುತ್ತಿದ್ದರು.


ರವೀಂದ್ರ ಶನಿವಾರ-ಭಾನುವಾರ ಅವರ ಮನೆಯಲ್ಲಿದ್ದ ದನ-ಕುರಿಗಳನ್ನು ಹೊಡೆದುಕೊಂಡು ಮೇಯಿಸಲು ಅವರ ತೋಟಕ್ಕೆ ಹೋಗುತ್ತಿದ್ದ, ರವೀಂದ್ರ ಅವರ ಸಂಬಂಧಿಕರ ಮತ್ತೊಬ್ಬ ಹುಡುಗ ಪಿ.ಎಂ.ಸಿದ್ದಪ್ಪ ಎಂಬುವವನು ಸಹ ನನ್ನ ಸಹ ಪಾಟಿ ಅವನು ಓದುವುದರಲ್ಲಿ ಬಹಳ ಹಿಂದೆ ಇದ್ದ, ಅದಕ್ಕೆ ಅವನು ನನ್ನ ನೋಟ್ಸ್‍ಗಳೆಲ್ಲ ಬಹುತೇಕ ಅವನ ರೂಂನಲ್ಲೇ ಇರುತ್ತಿದ್ದವು ಏಕೆಂದರೆ ನನ್ನ ನೋಟ್ಸ್ ನೋಡಿಕೊಂಡು ಅವನು ಬರೆದುಕೊಳ್ಳುತ್ತಿದ್ದ, ನನ್ನನ್ನು ಆತನ ರೂಂನಲ್ಲೇ ಕೆಲ ದಿನಿವಿಟ್ಟುಕೊಂಡು ಬಿಡುತ್ತಿದ್ದ, ಅವರ ಅಣ್ಣಂದಿರು, ಅಪ್ಪ-ಅಮ್ಮ ಅವನು ಇಲ್ಲೆ ಇರಲಿ ಎಂದು ಇಟ್ಟುಕೊಳ್ಳುತ್ತದ್ದರು, ನಮ್ಮುಡುಗ ಸ್ವಲ್ಪ ಕಲ್ತು ಎಸ್‍ಎಸ್‍ಎಲ್‍ಸಿ ಪಾಸಾಗಲಿ ಎಂಬುದು ಅವರದಾಗಿತ್ತು, ಪಿ.ಎಂ.ಸಿದ್ದಪ್ಪನು ಭಾನುವಾರ ಅವರ ತೋಟಕ್ಕೆ ದನಗಳನ್ನು ಮೇಯಿಸಲು ಹೋಗುವಾಗ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ. ಸಿದ್ದಪ್ಪನವರ ತೋಟದ ಪಕ್ಕದಲ್ಲೇ ರವೀಂದ್ರರ ತೋಟ ಇತ್ತು.

ರವೀಂದ್ರ ಅವರ ತೋಟದಲ್ಲಿ ಬಿದ್ದ ತೆಂಗಿನ ಗರಿಗಳನ್ನೆಲ್ಲ ಗುಡ್ಡೆ ಹಾಕಿ ತೆಂಗಿನ ಗರಿ ಸಿಗಿದು ಕಡ್ಡಿಗಳನ್ನು ಪ್ರತೇಕ ಮಾಡಿದ ನಂತರ ಅವುಗಳನ್ನು ಪೊರಕೆಯಾಗಿ ಕಟ್ಟುತ್ತಿದ್ದ, ಸುಮಾರು ಏಳೆಂಟು ಪೊರಕೆಗಳಾದರೆ ಅದರಲ್ಲಿ ಒಂದು ಪೊರಕೆಯನ್ನು ನನ್ನ ಕೈಗೆ ಕೊಟ್ಟು ಅವರ ಮನೆ ಸಮೀಪವಿದ್ದ ಅಂಗಡಿಗೆ ರವೀಂದ್ರ ಕೊಡಲು ನನಗೆ ಹೇಳುತ್ತಿದ್ದ. ಯಾಕೆ ಅಂಗಡಿಗೆ ಪೊರಕೆ ಕೊಡುತ್ತಿದ್ದ ಎಂದರೆ ಪೆನ್-ಪೆನ್ಸಿಲ್ ತೆಗೆದುಕೊಳ್ಳಬೇಕೆಂಬ ಆಸೆಯಿಂದ. ತೆಂಗಿನ ಕಡ್ಡಿ ಪೊರಕೆಗೆ 5 ಪೈಸೆ ಕೊಡುತ್ತಿದ್ದರು, ಒಂದು ಪೆನ್ಸಿಲ್, ಪೆನ್ ತೆಗೆದುಕೊಳ್ಳಲು ಎಂಟಾಣೆ (50 ಪೈಸೆ) ಬೇಕಾಗಿತ್ತು, ಪೆನ್-ಪೆನ್ಸಿಲ್ ತೆಗೆದುಕೊಳ್ಳಲು ಇಂತಹ ಹತ್ತು ಪೆÇರಕೆಗಳನ್ನು ಅಂಗಡಿಗೆ ಕೊಡಬೇಕಿತ್ತು, ಮಧ್ಯೆ ಏನಾದರೂ, ಬೆಲ್ಲನೋ, ಕಡ್ಲೆನೋ, ನಿಂಬೆ ಹುಳಿ ಚಾಕುಲೇಟೋ ತಿಂದರೆ ಪೆನ್-ಪೆನ್ಸಿಲ್ ಕತೆ ಮುಗಿಯಿತು, ಅದ್ಯಾವಾಗ ರವೀಂದ್ರ ಪೆನ್-ಪೆನ್ಸಿಲ್ ತಗೊಂಡನೋ ಗೊತ್ತಿಲ್ಲ.

7ನೇ ತರಗತಿಯವರೆಗೆ ಜೊತೆಯಾಗೆ ಇದ್ದ ರವೀಂದ್ರ ಕಡೂರಿಗೆ ಓದಲು ಹೋದರೆ, ನಾನು ದಾವಣೆಗೆರೆಗೆ ಓದಲು ಹೋದೆ, ಆನಂತರ ಆತ ಅಷ್ಟೇನು ನನ್ನ ಸಂಪರ್ಕಕ್ಕೆ ಸಿಗಲಿಲ್ಲ, ಈಗಿನಂತೆ ಮೊಬೈಲ್ ಇರಲಿಲ್ಲ, ಪತ್ರ ಬರೆಯಲು ಆಗಲಿಲ್ಲ.
ನನ್ನ ವಿದ್ಯಾಭ್ಯಾಸವೆಲ್ಲ ಮುಗಿದು, ಪತ್ರಕರ್ತನಾದ ಮೇಲೆ ಒಂದು ದಿನ ನಮ್ಮೂರಿಗೆ ಹೋಗುವಾಗ ಪಂಚನಹಳ್ಳಿಯಲ್ಲಿ ಅವರ ದೊಡ್ಡಣ್ಣ ಸಿಕ್ಕಿ ರವೀಂದ್ರ ಎ.ಸಿ.ಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಚಿತ್ರದುರ್ಗಕ್ಕೆ ಬಂದಾಗ ವಿಷಯ ತಿಳಿದು ಒಮ್ಮೆ ಹೋದಾಗ, ನನ್ನನ್ನು ಕಂಡು ಬಾಚಿ ತಬ್ಬಕೊಂಡು ತುಂಬಾ ಖುಷಿ ಪಟ್ಟು, ಊಟ ಕೊಡಿಸಿ ಕಳಿಸಿದ, ತದ ನಂತರ ನನ್ನ ಪತ್ರಿಕೆ ಮೈತ್ರಿನ್ಯೂಸ್‍ನ ವಾರ್ಷಿಕೋತ್ಸವಕ್ಕೆ ಬಂದು ನನ್ನ ಬಗ್ಗೆ ಪತ್ರಿಕೆಯ ಬಗ್ಗೆ ತುಂಬಾ ಆಪ್ತವಾಗಿ ಮಾತನಾಡಿದ, ಆ ಸಂದರ್ಭಲ್ಲಿ ವೆಂಕಟಾಚಲ ಲೆಕ್ಕವನ್ನು ಎಷ್ಟು ಚೆನ್ನಾಗಿ ಮಾಡುತ್ತಿದ್ದನೆಂದರೆ, ಮಾಸ್ಟರ್ ಬೋರ್ಡಿನ ಮೇಲೆ ಬರೆದ ಒಂದೆ ನಿಮಿಷದಲ್ಲಿ ಮಾಡಿರುತ್ತಿದ್ದ, ಆತ ಒಳ್ಳೆಯ ಹುದ್ದೆಗೆ ಹೋಗ ಬೇಕಿತ್ತು ಎಂದು ಆಶಯ ವ್ಯಕ್ತ ಪಡಿಸಿ, ಪತ್ರಕರ್ತನಾಗಿರುವುದಕ್ಕೆ ಖುಷಿ ವ್ಯಕ್ತ ಪಡಿಸಿದ.

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ಕೊರೊನಾ ತಡೆಗಟ್ಟಲು ದಿಟ್ಟ ನಿಲುವು ತೆಗೆದುಕೊಂಡ ಡಿ.ಸಿ. : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಬಂದ ಆರೇಳು ತಿಂಗಳಿಗೆ ಇಡೀ ಪ್ರಪಂಚದಲ್ಲಿ ಕೊರೊನಾ ಅಟ್ಟಹಾಸ ಪ್ರಾರಂಭವಾಯಿತು, ಇಡೀ ಪ್ರಪಂಚದ ವಿಮಾನಗಳೆಲ್ಲಾ ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಬಂದು ಇಳಿಯುತ್ತಿದ್ದವು, ಕೊರೊನಾ ಎಂದರೇನೆ ಸಾವಿರಾರು ಮೈಲಿ ಓಡುವಂತೆ ಭಯ ಹುಟ್ಟಿಸಲಾಯಿತು, ಇಂತಹ ಭಯಾನಕ ಪರಿಸ್ಥಿಯ ಸಂದರ್ಭದಲ್ಲೇ ಇವರು ಜಿಲ್ಲಾಧಿಕಾರಿಯಾಗಿದ್ದ ಬೆಂಗಳೂರು ಗ್ರಾಮಾಂತರದಲ್ಲೇ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬರುತ್ತಿತ್ತು. ಜಿಲ್ಲಾಧಿಕಾರಿಯಾಗಿದ್ದ ರವೀಂದ್ರರವರು ಇದನ್ನು ಸವಾಲಾಗಿ ತೆಗೆದುಕೊಂಡರು, ವಿದೇಶದಿಂದ ಬರುವವರನ್ನು ಕೋವಿಡ್-19 ಟೆಸ್ಟ್, ಮತ್ತು ವಿದೇಶಕ್ಕೆ ಉದ್ಯೋಗ, ವಿದ್ಯಾಭ್ಯಾಸಕ್ಕೆ ಹೋದವರನ್ನೆಲ್ಲಾ ಕರೆತರುವ, ಕೊರೊನಾ ಟೆಸ್ಟ್ ಮಾಡಿಸುವ ದೊಡ್ಡ ಜವಾಬ್ದಾರಿ ಇವರ ಮೇಲೆ ಬಿತ್ತು.

ಈಗ ಅವರಿಗೆ ಹಳ್ಳಿಯಲ್ಲಿ ಬಿಸಿಲು ಮಳೆ ಎನ್ನದೆ ಕೆಲಸ ಮಾಡಿ ಹ್ಯುಮ್ಮುನಿಟಿ ಕಾಪಾಟಿಕೊಂಡಿದ್ದು ಅವರ ಸಹಾಯಕ್ಕೆ ಬಂದಿತು, ಯಾವುದಕ್ಕೂ ಅಂಜದೆ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರೊನಾ ಟೆಸ್ಟ್‍ಗೆ ಪ್ರತೇಕ ವ್ಯವಸ್ಥೆ, ಕ್ವಾರೈಂಟೈನ್, ಮಾಸ್ಕ್, ಸಾನಿಟೈಸರ್, ಆಸ್ಪತ್ರೆ, ವೈದ್ಯಕೀಯ ಸೌಲಭ್ಯ ಸೇರಿದಂತೆ ಯಾವುದಕ್ಕೂ ಕೊರತೆಯಿಲ್ಲದಂತೆ ನಿಭಾಯಿಸಿದರು. ಇಡೀ ಪ್ರಪಂಚ ಸ್ಥಬ್ಧವಾದರೂ, ಜಿಲ್ಲಾಧಿಕಾರಿಯಾಗಿದ್ದ ರವೀಂದ್ರ ಅವರು ಕೊರೊನಾ ತಡೆಗಟ್ಟಲು ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೊರೊನಾ ತಡೆಗೆ ಕೈಗೊಂಡ ಕ್ರಮ ಇಡೀ ರಾಜ್ಯಕ್ಕೆ ಮಾದರಿಯಾದದ್ದು, ಜಿಲ್ಲಾಧಿಕಾರಿಯಾಗಿದ್ದ ಇವರಿಗೂ ಕೊರೊನಾ ಬಂದರೂ ಧೃತಿಗೆಡಲಿಲ್ಲ, ತಮ್ಮ ಕೆಲಸವನ್ನು ಮಾಡುತ್ತಾ ಹೋದರು. ಈ ಕಾರ್ಯ ಎಂದೆಂದಿಗೂ ಸ್ಮರಣೀಯ ಕಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ.
ಕೊರೋನಾವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಲ್ಲದೆ, ಅವರೂ ಕೊರೊನಾ ರೋಗಿಯಾಗಿ ಕ್ವಾರೈಂಟೈನಾಗಿ ಕೊರೊನಾ ಗೆದ್ದು ಬಂದು ಬೆ.ಗ್ರಾಂ. ಜಿಲ್ಲೆಯನ್ನು ಕೊರೊನಾ ಮುಕ್ತವನ್ನಾಗಿ ಮಾಡಿದರು

ನಂತರ ಗಣಿ-ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರಾಗಿ, ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ(ಯೋಜನೆಗಳು)ರಾಗಿದ್ದ ಪಿ.ಎನ್.ರವೀಂದ್ರ ್ದವರು ಬಿಬಿಎಂಪಿಯಲ್ಲಿ ಹಲವಾರು ಸಮಸ್ಯೆಗಳನ್ನು ಬೆಂಗಳೂರನ್ನು ಚೆಂದ ಸಿಟಿಯನ್ನಾಗಿ ಮಾಡುವ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಪಂಚನಹಳ್ಳಿ ಎಂಬ ಒಂದು ಚಿಕ್ಕ ಹಳ್ಳಿಯ ರೈತ ಪಿ.ಎಚ್.ನಿಂಗಪ್ಪ ಮತ್ತು ಇಂಡಮ್ಮ ಅವರ ಮಗನಾದ ರವೀಂದ್ರ ಎಂಬ ಹಳ್ಳಿಯ ಹುಡುಗನೊಬ್ಬ ಜಿಲ್ಲಾಧಿಕಾರಿಯಾಗುವುದುರಾಗುವುದು ಅಷ್ಟೇನು ಸುಲಭದ ಮಾತಲ್ಲ. ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ ಇದ್ದರೆ ಏನು ಬೇಕಾದರು ಆಗಬಹುದು ಎಂಬುದಕ್ಕೆ ರವೀಂದ್ರರವರೇ ಕಾರಣ, ರವೀಂದ್ರರನ್ನು ಜನ್ಮ ನೀಡಿದ ಪಿ.ಹೆಚ್.ನಿಂಗಪ್ಪ ಮತ್ತು ಇಂಡಮ್ಮ ಅವರು ತುಂಬಾ ಭಾಗ್ಯವಂತರು. ಹಳ್ಳಿ ಹುಡುಗ ಚಿಕ್ಕಬಳ್ಳಾಪುರಕ್ಕೆ ಜಿಲ್ಲಾಧಿಕಾರಿಯಾಗಿ ಬಂದಿರುವ ಗೆಳೆಯ ರವೀಂದ್ರ ಪಿ.ಎನ್. ಬಡವರಿಗೆ, ರೈತರಿಗೆ, ಒಳ್ಳೆಯದನ್ನು ಮಾಡಲಿ ಎಂಬುದೇ ಈ ಬಾಲ್ಯದ ಗೆಳೆಯನ ಆಶಯ.
-ವೆಂಕಟಾಚಲ.ಹೆಚ್.ವಿ.
ಸಂಪಾದಕರು, ಮೈತ್ರಿನ್ಯೂಸ್, ತುಮಕೂರು.

Leave a Reply

Your email address will not be published. Required fields are marked *