ತುಮಕೂರು:ಕಳೆದ 20 ವರ್ಷಗಳಿಂದ ತುಮಕೂರು ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕುರುಬ ಸಮುದಾಯದ ಮುಖಂಡರಿಗೆ ರಾಜಕೀಯ ಪ್ರಾತಿನಿಧ್ಯ ನೀಡದೆ ನಿರ್ಲಕ್ಷ ಮಾಡಲಾಗುತ್ತಿದೆ ಎಂದು ಕನಕ ಸೇನೆಯ ಜಿಲ್ಲಾಧ್ಯಕ್ಷ ಕೆಂಪರಾಜು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸುಮಾರು 4.50 ಲಕ್ಷ ದಷ್ಟು ಜನಸಂಖ್ಯೆಯನ್ನು ಹೊಂದಿರುವ ಕುರುಬ ಸಮುದಾಯ ಜಿಲ್ಲೆಯಲ್ಲಿದೆ.ಜಿಲ್ಲೆಯ ತಿಪಟೂರು,ಚಿಕ್ಕನಾಯಕನಹಳ್ಳಿ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾರರನ್ನು ಹೊಂದಿದೆ. ಅಲ್ಲದೆ ಉಳಿದ ಕ್ಷೇತ್ರಗಳಲ್ಲಿಯೂ ನಿರ್ಣಯ ಮತದಾರರಾಗಿದ್ದರೂ ಕಾಂಗ್ರೆಸ್ ಪಕ್ಷ ನಮ್ಮನ್ನು ಕಡೆಗಣಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ 2000 ಇಸವಿಯವರೆಗೆ ಪ್ರತಿ ಚುನಾವಣೆ ಸಂದರ್ಭದಲ್ಲಿ ಕನಿಷ್ಠ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ನೀಡಿ, ಜನಾಂಗದ ಜನರ ರಾಜಕೀಯ ಬೆಳವಣಿಗೆಗೆ ಸ್ಪಂದಿಸಿ ಪಕ್ಷ ಕೆಲಸ ಮಾಡುತ್ತಿತ್ತು.ಆದರೆ ತದನಂತರ ನಡೆದು ಐದು ಚುನಾವಣೆಗಳಲ್ಲಿ 11 ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಜನರಿಗೆ ಟಿಕೇಟ್ ನೀಡಿಲ್ಲ.ಜಿಲ್ಲೆಯ ನಾಯಕರಾದ ಡಾ.ಜಿ.ಪರಮೇಶ್ವರ್, ಟಿ.ಬಿ.ಜಯಚಂದ್ರ ಮತ್ತು ಕೆ.ಎನ್.ರಾಜಣ್ಣ ಸೇರಿದಂತೆ ಎಲ್ಲಾ ನಾಯಕರ ಪರವಾಗಿ ಕುರುಬ ಸಮುದಾಯ ಕೆಲಸ ಮಾಡುತ್ತಿದೆ.ಆದರೆ ಕುರುಬ ಸಮುದಾಯದ ಮುಖಂಡರಿಗೆ ಟಿಕೇಟ್ ಕೊಡಿಸುವ ನಿಟ್ಟಿನಲ್ಲಿ ಯಾರು ಸಹ ಸಹಕಾರ ನೀಡುತ್ತಿಲ್ಲ. ಒಂದು ರೀತಿಯ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಇದು ಸರಿಯಲ್ಲ. ಮುಂದಿನ ಚುನಾವಣೆಯಲ್ಲಿ ಕನಿಷ್ಠ 2 ಜನ ಅಭ್ಯರ್ಥಿಗಳಿಗೆ ಟಿಕೇಟ್ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ನಿರ್ಧಾರಗಳನ್ನು ಸಮುದಾಯದ ಜನರೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಗುವುದು ಎಂದು ಕೆಂಪರಾಜು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕರು, ಅವರು ಮಾಡಿರುವ ಯೋಜನೆಗಳು ಇಡೀ ರಾಜ್ಯದ ಬಡವರ ಪರವಾಗಿವೆ. ಕುರುಬ ಸಮುದಾಯಕೆಂದೆ ಯಾವುದೇ ಯೋಜನೆಯನ್ನು ಅವರು ಘೋಷಿಸಿಲ್ಲ.ಅಲ್ಲದೆ ಎರಡನೇ ಸಾಲಿನ ಲೀಡರ್ ಕೊರತೆ ನೀಗಬೇಕೆಂದರೆ ಕಾಂಗ್ರೆಸ್ ಪಕ್ಷದ ಹೊಸಬರಿಗೆ ಟಿಕೇಟ್ ನೀಡಬೇಕು ಎಂಬುದು ನಮ್ಮ ಒತ್ತಾಯಪೂರ್ವಕ ಅಭಿಪ್ರಾಯವಾಗಿದೆ ಎಂದು ಕೆಂಪರಾಜು ಹೇಳಿದರು.
ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭೈಲಪ್ಪ ಮಾತನಾಡಿ,ಕುರುಬ ಸಮುದಾಯದ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯನಿರ್ವಹಿಸುತ್ತಿವೆ. ಬಿಜೆಪಿಯಲ್ಲಿ ಬಿ.ಕೆ.ಮಂಜುನಾಥ್,ಡಾ.ಹುಲಿನಾಯ್ಕರ್, ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಆರ್.ಸಿ.ಆಂಜನಪ್ಪ ಇದ್ದಾರೆ. ಆದರೆ ಕಾಂಗ್ರೆಸ್‍ನಲ್ಲಿ ಪಕ್ಷದ ಹುದ್ದೆಗಳಲ್ಲಿಯೂ ನಮ್ಮನ್ನು ಕಡೆಗಣಿಸಲಾಗಿದೆ.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ನಾವು ಬೇಕು, ನಮಗೆ ಮಾತ್ರ ಅಧಿಕಾರವಿಲ್ಲ. ಈ ರೀತಿಯ ಧೋರಣೆಯನ್ನು ನಾವು ಖಂಡಿಸುತ್ತೇವೆ. ಇದನ್ನುತಿದ್ದಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸುವುದು ಅನಿವಾರ್ಯ ಎಂದು ತಿಳಿಸಿದರು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ,ರಾಜ್ಯದಲ್ಲಿ ಸುಮಾರು 11 ರಿಂದ 12 ಕ್ಷೇತ್ರಗಳಲ್ಲಿ ಗೆಲ್ಲುವ ಕೆಚ್ಚು ಕುರುಬ ಸಮುದಾಯಕ್ಕಿದೆ. ಆದರೆ ಟಿಕೇಟ್ ನೀಡುವ ವಿಚಾರದಲ್ಲಿಯೇ ಕ್ಷೇತ್ರಗಳನ್ನು ಕಡಿತಗೊಳಿಸಲಾಗುತ್ತಿದೆ. ಕುರುಬ ಸಮುದಾಯದ ಜನರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಲು ಇರುವ ಕ್ಷೇತ್ರಗಳಲ್ಲಿ ತುಮಕೂರು ಸಹ ಒಂದು. ಹಾಗಾಗಿ 2023ರ ಚುನಾವಣೆಯಲ್ಲಿ ಪಕ್ಷ ಕುರುಬ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.
ಮಾಜಿ ಶಾಸಕ ಲಕ್ಕಪ್ಪ ಮಾತನಾಡಿ,ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷ ನಮ್ಮನ್ನು ಕೈಬಿಟ್ಟರೂ ನಾವು ಕಾಂಗ್ರೆಸ್ ಪಕ್ಷವನ್ನು ಕೈಬಿಟ್ಟಿಲ್ಲ. ಆದರೆ ಜಿಲ್ಲೆಯಲ್ಲಿ ರಾಜಕೀಯ ಪ್ರಾತಿನಿಧ್ಯವಿಲ್ಲದ ಕುರುಬ ಸಮುದಾಯ ಸೊರಗುತ್ತಿದೆ. ಯುವಜನರು ಯಾವ ವಿಶ್ವಾಸದಿಂದ ಪಕ್ಷಕ್ಕೆ ಸೇರಬೇಕು ಎಂದು ಪ್ರಶ್ನಿಸಿದ ಅವರು,ಮುಂದಿನ ಚುನಾವಣೆಯಲ್ಲಿ ಇದುವರೆಗೂ ಆಗಿರುವ ತಪ್ಪುಗಳನ್ನು ಕಾಂಗ್ರೆಸ್ ಪಕ್ಷದ ಮುಖಂಡರು ತಿದ್ದಿಕೊಳ್ಳಬೇಕು. ಈ ಸಂಬಂಧ ಎಲ್ಲಾ ಮುಖಂಡರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೈಲಾರಪ್ಪ,ಅನಿಲ್ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.