ತಿಪಟೂರು: ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಹಾಲು, ಮೊಸರು ಸೇರಿ ಎಲ್ಲಾ ಅಗತ್ಯತೆಗಳಿಗೆ ಜಿಎಸ್ ಟಿ ವಿಧಿಸಿರುವ ಕೇಂದ್ರ ಸರಕಾರ ಉಸಿರಾಡುವ ಗಾಳಿಗೆ ಜಿಎಸ್ ಟಿ ತಂದರೂ ಅಚ್ಚರಿಯಿಲ್ಲ ಎಂದು ಸಿ.ಬಿ.ಶಶಿಧರ್ ವಾಗ್ದಾಳಿ ನಡೆಸಿದರು.
ಅವರು ಗುರುವಾರ ಕಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರ ಸಂಚಾರಕ್ಕೆ ಚಾಲನೆ ನೀಡಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಜನರ ಸಮಸ್ಯೆಗಳಿಗೆ ಧ್ವನಿಯಾಗುವುದು ಹಾಗೂ ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸುವುದು ಕ್ಷೇತ್ರ ಸಂಚಾರದ ಪ್ರಮುಖ ದ್ಯೇಯವಾಗಿದೆ, ಎರಡು ತಿಂಗಳು ನಿರಂತರವಾಗಿ ಕ್ಷೇತ್ರದಲ್ಲಿ ಸಂಚರಿಸುತ್ತೇನೆ. ಜನರ ಕಷ್ಟಗಳನ್ನು ಅರಿತು ಕೈಲಾದ ಸಹಾಯ ಮಾಡುವ ಹಾಗೂ ಮುಖ್ಯವಾಗಿ ಅವರ ಧ್ವನಿಯಾಗುವ ಪ್ರಯತ್ನ ಮಾಡುತ್ತೇನೆಂದರು.
ಬಿಜೆಪಿ ಸರಕಾರ 40 ಪರ್ಸೆಂಟ್ ಸರಕಾರವೆಂದು ಜಗಜ್ಜಾಹಿರವಾಗಿದೆ. ಸಿಎಂ ಬೊಮ್ಮಾಯಿ ಪೇಸಿಎಂ ಎಂದೇ ಕುಖ್ಯಾತರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಇದುವರೆಗೆ ಯಾವುದೇ ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಟಿಕೆಟ್ ವಿಶ್ವಾಸ:
ಪಕ್ಷ ಯುವಕರಿಗೆ ಆದ್ಯತೆ ನೀಡುತ್ತಿದ್ದು, ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತನಗೆ ಸಿಗುವ ಆಶಾಭಾವನೆ ಇದೆ ಎಂದು ಶಶಿಧರ್ ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡರಾದ ತ್ರಿಯಂಬಕ, ಶ್ರೀಕಾಂತ್ ಕೆಳಹಟ್ಟಿ, ಶರತ್ ಕಲ್ಲೇಗೌಡನ ಪಾಳ್ಯ, ಮಹಾಲಿಂಗಪ್ಪ, ಮಲ್ಲೇಶ್, ಉಮಾಮಹೇಶ್, ಪ್ರಕಾಶ್, ಸ್ವಾಮಿ, ವೀರೇಶ್ ಮತ್ತಿತರರಿದ್ದರು.
ಕ್ಷೇತ್ರಸಂಚಾರಕ್ಕೆ ಚಾಲನೆ ನೀಡಿದ ಬಳಿಕ ತಿಪಟೂರು ವಿಧಾನಸಭಾ ಕ್ಷೇತ್ರದ ನಕ್ಷೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಟೂಡಾ ಶಶಿಧರ್ ಫಾರ್ ತಿಪಟೂರು ವೆಲ್ ಫೇರ್ (ತಿಪಟೂರು ಕಲ್ಯಾಣಕ್ಕೆ ಟೂಡಾ ಶಶಿಧರ್) ಎಂಬ ಘೋಷವಾಕ್ಯವನ್ನು ಪೋಸ್ಟರ್ ಹೊಂದಿದೆ.
ಮುಖಂಡ ಮಹಾಲಿಂಗಪ್ಪ ಮಾತನಾಡಿ, ಯುವ ನಾಯಕರಾದ ಸಿ.ಬಿ.ಶಶಿಧರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವುದು ನಿಶ್ಚಿತವಾಗಿದ್ದು, ಅವರ ನೇತೃತ್ವದಲ್ಲಿ ಕ್ಷೇತ್ರದ ಪ್ರತಿಹಳ್ಳಿಗೂ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.