ಗುಬ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್ ಚಿಹ್ನೆ ಕುಕ್ಕರ್ ಹಂಚಿಕೆ : ಕ್ರಮ ಜರುಗಿಸದ ತಹಶೀಲ್ದಾರ್ –ಕಾಂಗ್ರೆಸ್ ಮುಖಂಡರ ಖಂಡನೆ

ಗುಬ್ಬಿ : ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆಯುಳ್ಳ ಮತ್ತು ಹಾಳಿ ಶಾಸಕರ ಭಾವಚಿತ್ರವಿರುವ ಕುಕ್ಕರ್‍ಗಳನ್ನು ಹಂಚುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದ ತಾಲ್ಲೂಕು ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ್ ನಿರ್ಲಕ್ಷವನ್ನು ಕಾಂಗ್ರೆಸ್ ಮುಖಂಡರು ತೀವ್ರವಾಗಿ ಖಂಡಿಸಿ, ಕೂಡಲೇ ಕ್ರಮ ಜರುಗಿಸಲು ತಹಶೀಲ್ದಾರ್ ಬಿ.ಆರತಿಯವರನ್ನು ಒತ್ತಾಯಿಸಲಾಯಿತು.
ಕಾಂಗ್ರೆಸ್ ಮುಖಂಡರಾದ ಜಿ.ಎಸ್.ಪ್ರಸನ್ನಕುಮಾರ್ ಮತ್ತು ಬೆಟ್ಟಸ್ವಾಮಿ ನೇತೃತ್ವದಲ್ಲಿ ತಹಶೀಲ್ದಾರ್ ಅವರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿ ಕುಕ್ಕರ್ ಹಂಚುತ್ತಿರುವ ಚಿತ್ರಗಳನ್ನು ನೀಡಿ, ಕಾನೂನು ರೀತ್ಯ ಕ್ರಮ ಜರುಗಿಸಲು ಒತ್ತಾಯಿಸಿದರು.

ಮತದಾರರಿಗೆ ಆಮೀಷ್ಯ ಒಡ್ಡುವ ನಿಟ್ಟಿನಲ್ಲಿ ಕಾಂಗ್ರೆಸ್ ಹಸ್ತದ ಚಿಹ್ನೆ ಜೊತೆಗೆ ಶಾಸಕರ ಭಾವಚಿತ್ರ ಇರುವ ಕುಕ್ಕರ್ ಗುಬ್ಬಿ ಕ್ಷೇತ್ರದಲ್ಲಿ ಶಾಸಕರ ಪತ್ನಿ, ಪುತ್ರ ಹಾಗೂ ಹಿಂಬಾಲಕರು ಹಂಚುತ್ತಿದ್ದಾರೆ. ಕಳಪೆ ಗುಣಮಟ್ಟದ ಕುಕ್ಕರ್ ಬ್ಲಾಸ್ಟ್ ಆಗಿರುವ ಹಿನ್ನಲೆ ಮತದಾರರ ಜೀವಕ್ಕೆ ಅಪಾಯವಿದೆ. ಈ ಹಿನ್ನಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕುಕ್ಕರ್ ಹಂಚಿಕೆ ಇಡೀ ಕ್ಷೇತ್ರದಲ್ಲಿ ಕಂಡು ಬಂದಿದೆ. ಕಳೆದ 20 ವರ್ಷದ ಶಾಸಕರು ಈ ರೀತಿ ಮತದಾರರಿಗೆ ಆಸೆ ಆಮೀಷ ತೋರಿರುವುದು ಅವರಿಗೆ ಶೋಭೆಯಲ್ಲ. ಈ ರೀತಿ ಕಳಪೆ ಗುಣಮಟ್ಟದ ಕುಕ್ಕರ್ ಈಗಾಗಲೇ ಬ್ಲಾಸ್ಟ್ ಆಗಿದೆ. ಶಾಸಕರ ಪತ್ನಿ, ಪುತ್ರ ಹಾಗೂ ಬೆಂಬಲಿಗರು ಮನೆ ಮನೆ ಬಾಗಿಲಿಗೆ ಕುಕ್ಕರ್ ಹಂಚಿ ಕಾಂಗ್ರೆಸ್ ಹಸ್ತದ ಚಿಹ್ನೆ ಸ್ಟಿಕ್ಕರ್ ಮನೆ ಬಾಗಿಲಿಗೆ ಅಂಟಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಸೇರ್ಪಡೆಯಾಗದೆ ಮತದಾರರಿಗೆ ಕಡಿಮೆ ಗುಣಮಟ್ಟದ ಕುಕ್ಕರ್ ಕೊಡುಗೆಯಾಗಿ ನೀಡುತ್ತಿರುವುದು ಪಕ್ಷಕ್ಕೆ ಅಪಮಾನ ಮಾಡಿದಂತೆ ಎಂದು ಕಾಂಗ್ರೆಸ್ ಮುಖಂಡರು ತಹಶೀಲ್ದಾರ್ ಅವರಿಗೆ ದೂರು ಸಲ್ಲಿಸಿದರು.

ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ಮಾತನಾಡಿ ಸ್ವಾಭಿಮಾನಕ್ಕೆ ದಕ್ಕೆ ಬಂತು ಎಂದು ಹೇಳುವ ಗುಬ್ಬಿ ಶಾಸಕರಿಗೆ ಸ್ವಾಭಿಮಾನ ಇರುವಂತೆ ಎಲ್ಲರಿಗೂ ಸ್ವಾಭಿಮಾನ ಇರುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ನಮಗೆ ದಕ್ಕೆ ಆಗುತ್ತಿರುವಾಗ ನಮಗೂ ಸ್ವಾಭಿಮಾನ ಇರೋದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ ಶಾಸಕರು ಈಗಾಗಲೇ 20 ವರ್ಷ ಶಾಸಕರಾಗಿ ಕ್ಷೇತ್ರದ ಜನತೆಗೆ ಅಭಿವೃದ್ದಿ ಮೂಲಕ ಹತ್ತಿರ ಆಗಬೇಕಿತ್ತು. ಆದರೆ ಸ್ವಾಭಿಮಾನ ಹೆಸರು ಹೇಳುತ್ತಾ ಮತ್ತೊಂದು ಪಕ್ಷಕ್ಕೆ ಹಾರುವ ತಾವು ಮತ್ತೊಬ್ಬರ ಸ್ವಾಭಿಮಾನಕ್ಕೆ ದಕ್ಕೆ ತರಬಹುದೇ. ಹನ್ನೆರೆಡು ಸಾವಿರದ ಗೂಡಿಗೆ ನಿಮ್ಮ ಅವಶ್ಯಕತೆ ಇಲ್ಲ. ಈಗಾಗಲೇ ಕಾಂಗ್ರೆಸ್ ಗೆಲ್ಲುವ ಎಲ್ಲಾ ಅವಕಾಶವಿದೆ. ಇದನ್ನು ತಿಳಿದು ಈಗ ಪಕ್ಷ ಸೇರುವ ನೀವು ಕಳಪೆ ಕುಕ್ಕರ್ ಹಂಚಬಾರದಿತ್ತು. ಬ್ಲಾಸ್ಟ್ ಆಗಿರುವ ಕುಕ್ಕರ್ ಹಂಚುವವರ ವಿರುದ್ದ ಲಿಖಿತ ದೂರು ಕೊಟ್ಟರೂ ಚೇಳೂರು ಪೆÇಲೀಸ್ ಠಾಣೆಯಲ್ಲಿ ತಿರಸ್ಕರಿಸಿ ದೂರು ದಾಖಲಿಸಲು ಹಿಂಜರಿದಿದ್ದಾರೆ. ಈ ಬಗ್ಗೆ ತಾಲ್ಲೂಕು ಆಡಳಿತಕ್ಕೆ ದೂರು ನೀಡಿದ್ದೇವೆ. ಶೀಘ್ರ ಕ್ರಮ ವಹಿಸದಿದ್ದರೆ ಮೇಲಾಧಿಕಾರಿಗಳು ಹಾಗೂ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ. ಮತ್ತೊಂದು ದೂರು ಕೆಪಿಸಿಸಿ ಹಾಗೂ ಎಐಸಿಸಿಗೆ ಬರೆಯುತ್ತೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ನಾಲ್ಕು ಬಾರಿ ಶಾಸಕರಾಗಿ ಗಾಂಭೀರ್ಯ ಕಳೆದುಕೊಂಡಿದ್ದೀರಿ. ಇಂತಹ ಕಳಪೆ ಕುಕ್ಕರ್ ಹಂಚುವ ನಿಮಗೆ ಸೋಲಿನ ಭೀತಿ ಕಾಡಿದೆ. ಕಾಂಗ್ರೆಸ್ ಪಕ್ಷಕ್ಕೆ ಈವರೆವಿಗೂ ಸೇರ್ಪಡೆ ಆಗದೆ ಪಕ್ಷ ಚಿಹ್ನೆ ಬಳಸಿರುವುದು ಸಹ ತಪ್ಪಾಗಿದೆ. ಕುಕ್ಕರ್ ಕೂಡಾ ಹಲವು ಕಡೆ ಹಾಳಾಗಿದೆ. ಬ್ಲಾಸ್ಟ್ ಸಹ ಆಗಿದೆ. ಈ ಬಗ್ಗೆ ದೂರು ಕೊಟ್ಟರೆ ಪರಿಗಣಿಸದ ಪೆÇಲೀಸರು ದೂರು ದಾಖಲು ಮಾಡಲು ಹಿಂದೇಟು ಹಾಕಿದ್ದಾರೆ ಎಂದ ಅವರು ಮೊದಲು ಪಕ್ಷ ಸೇರ್ಪಡೆಯಾಗಿ ನಂತರ ರಾಜಕಾರಣ ಮಾಡಿ. ರಾಜೀನಾಮೆ ಸಲ್ಲಿಸಲು ಮೀನಾ ಮೇಷ ಎಣಿಸುವ ನೀವು ಪಕ್ಷಕ್ಕೆ ಬರುವ ಮುನ್ನವೇ ಮತದಾರರನ್ನು ಸೆಳೆಯಲು ಕುಕ್ಕರ್ ಆಮೀಷಯೊಡ್ಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮುಖಂಡರಾದ ಜಿ.ಎಂ.ಶಿವಾನಂದ್, ಪಾಪಣ್ಣ, ಹೇಮಂತ್ ಕುಮಾರ್, ಬೆಟ್ಟದಹಳ್ಳಿ ಸಿದ್ದೇಶ್, ನವೀನ್, ರಾಜಣ್ಣ ಇತರರು ಇದ್ದರು.

Leave a Reply

Your email address will not be published. Required fields are marked *