ತುಮಕೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ರ್ಯಾಂಪ್, ಶೌಚಾಲಯ, ಕುಡಿಯುವ ನೀರು, ಇತ್ಯಾದಿ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳು ಲಭ್ಯವಿರುವ ನಿಟ್ಟಿನಲ್ಲಿ ಆರ್‍ಓ ಹಾಗೂ ಎಆರ್‍ಓಗಳು ಖಾತರಿಪಡಿಸಿಕೊಂಡು ತಮಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಾ, ಮತಗಟ್ಟೆಗಳಿರುವ ಕಟ್ಟಡಗಳಲ್ಲಿ ಶೌಚಾಲಯದ ಸುಸ್ಥಿತಿ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಮತಗಟ್ಟೆಗಳಲ್ಲಿ ರ್ಯಾಂಪ್ ಕಡ್ಡಾಯವಾಗಿರುತ್ತದೆ. ಆದರೆ ನೆಲಮಟ್ಟದ ಕಟ್ಟಡವಿರುವ ಮತಗಟ್ಟೆಗಳಿಗೆ ಇದು ಅನ್ವಯಿಸುವುದಿಲ್ಲ. ಅಶೂರ್ಡ್ ಮಿನಿಮಮ್ ಸೌಕರ್ಯಗಳ ಬಗ್ಗೆ ತಹಶೀಲ್ದಾರರು ರೂಪುರೇಷೆ ರಚಿಸಿಕೊಂಡು ಗ್ರಾಮಪಂಚಾಯತಿ ಹಾಗೂ ನಾಡಕಚೇರಿಗಳಿಂದ ಈ ಸೌಕರ್ಯಗಳನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸೆಕ್ಟರ್ ಮ್ಯಾಪ್, ರೂಟ್ ಮ್ಯಾಪ್ ರಚಿಸಿ ವಾಹನಗಳ ಅವಶ್ಯಕತೆಗಳ ಬಗ್ಗೆ ಶೀಘ್ರದಲ್ಲೇ ತಮಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾಗಿರುವಂತಹ 10-15 ಮತಗಟ್ಟೆಗಳನ್ನು ಆಯ್ಕೆ ಮಾಡಿಕೊಂಡು, ಕಡಿಮೆ ಮತದಾನಕ್ಕೆ ಕಾರಣವೇನೆಂಬುದನ್ನು ತಹಶೀಲ್ದಾರರು ಮತ್ತು ಇಓಗಳು ಪತ್ತೆ ಹಚ್ಚಬೇಕು ಮತ್ತು ಮತದಾನ ಹೆಚ್ಚಳದ ಬಗ್ಗೆ ಕ್ರಮವಹಿಸಬೇಕು ಮತ್ತು ಈ ಕುರಿತು ತಮಗೆ ವರದಿ ನೀಡಬೇಕೆಂದು ತಿಳಿಸಿದರು.
ಎಸಿ, ತಹಶೀಲ್ದಾರರುಗಳು ಕೇಂದ್ರ ಸ್ಥಾನ ಬಿಡುವ ಮುನ್ನ ತಮಗೆ ಮಾಹಿತಿ ಸಲ್ಲಿಸಬೇಕು. ಮತ್ತು ಜಿಲ್ಲೆಗೆ ಹೊಸ ತಹಶೀಲ್ದಾರರುಗಳು ವರ್ಗಾವಣೆಯಾಗಿ ಬಂದಿದ್ದು, ತಮ್ಮ ಕಾರ್ಯ ವ್ಯಾಪ್ತಿಯ ಬಗ್ಗೆ ಅರಿಯಬೇಕು ಎಂದು ತಿಳಿಸಿದರು.
ಜಿಲ್ಲೆಯ 3 ಉಪವಿಭಾಗಗಳ ಉಪವಿಭಾಗಾಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯ ಮತಗಟ್ಟೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಮತಗಟ್ಟೆಗಳ ಬದಲಾವಣೆ ಬಗ್ಗೆ ಈಗಾಗಲೇ ಪ್ರಸ್ತಾವನೆಗಳನ್ನು ತಮಗೆ ಕಳುಹಿಸಿದ್ದು, ಇನ್ನು ಮುಂದೆ ಈ ಕುರಿತ ಪ್ರಸ್ತಾವನೆ ಸಲ್ಲಿಸಬಾರದು ಎಂದ ಜಿಲ್ಲಾಧಿಕಾರಿಗಳು, ತಮ್ಮ ಮತಗಟ್ಟೆಗಳ ಬಗ್ಗೆ ಶೇ. 100ರಷ್ಟು ಜ್ಞಾನವನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಹೊಂದಿರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಉಪಸ್ಥಿತರಿದ್ದರು.