ತುಮಕೂರು: 2023ರ ಚುನಾವಣೆಯ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೆ ಆಗಲಿದ್ದೇನೆ, ನನ್ನ ಅಭಿವೃದ್ಧಿ ಕೆಲಸ ಪರಿಗಣಿಸಿ ನನಗೆ ಟಿಕೆಟ್‍ನ್ನು ಪಕ್ಷ ನೀಡಲಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಅವರಿಂದ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ತುಮಕೂರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಮಾರ್ಚ್ 5ರಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಸೇರಿದಂತೆ, ಸಚಿವರುಗಳು ಮತ್ತು ಪಕ್ಷದ ನಾಯಕರುಗಳು ಆಗಮಿಸುತ್ತಿದ್ದಾರೆ, ನನಗೆ ಟಿಕೆಟ್ ನೀಡಲು ನನ್ನ ಅಭಿವೃದ್ಧಿ ಕೆಲಸಗಳೇ ಸಾಕು, ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಪಕ್ಷದಲ್ಲಿ ನಡೆದುಕೊಂಡು ಬಂದಿದೆ ಎಂದರು.
ಟಿಕೆಟ್ ನೀಡುವಾಗ ಯಾರು ಗೆಲ್ಲುತ್ತಾರೆ ಎಂಬುದನ್ನು ಸಹ ಪಕ್ಷವು ಪರಿಗಣನೆಗೆ ತೆಗೆದುಕೊಳ್ಳಲಿದೆ, 2018ರಲ್ಲಿ ನನಗೆ ಟಿಕೆಟ್ ನೀಡಿದಾಗ ಪ್ರತಿರೋಧ ಇದ್ದರೂ ಗೆದ್ದು ಬಂದಿದ್ದೇನೆ ಎಂದ ಶಾಸಕರು, ಬಿಜೆಪಿಯನ್ನು ತೊರೆಯುತ್ತೇನೆ ಎಂಬುದು ಸುಳ್ಳು ಸುದ್ದಿ, ಮತ್ತೊಮ್ಮೆ ರಾಜ್ಯದಲ್ಲಿ ಮತ್ತು ದೇಶದಲ್ಲಿ ಬಿಜೆಪಿ ಸರ್ಕಾರ ತರುವುದೇ ನಮ್ಮ ಗುರಿ ಎಂದರು.
ಪ್ರಜಾಪ್ರಭುತ್ವದಲ್ಲಿ ಪಕ್ಷದ ಟಿಕೆಟ್ ಅಕಾಂಕ್ಷಿಗಳು ಹಲವಾರು ಜನ ಇರುತ್ತಾರೆ, ಟಿಕೆಟ್ ಕೇಳುವುದು ಅವರ ಹಕ್ಕು, ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನು ತೀರ್ಮಾನ ಮಾಡುವುದು ಪಕ್ಷದ ನಾಯಕರುಗಳು ಎಂದರು.
ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವ ಆಲೋಚನೆ ನನಗಿಲ್ಲ ಎಂದು ಸ್ಪಷ್ಟಪಡಿಸಿದರು. ಏಪ್ರಿಲ್‍ನಲ್ಲಿ ಯಾರು ಅಭ್ಯರ್ಥಿ ಎಂಬುದು ನಿಮಗೆ ತಿಳಿಯಲಿದೆ ಎಂದು ಮಾರ್ಮಿಕವಾಗಿ ಹೇಳಿದರು.