ಮಳೆಯಿಂದ ಉಂಟಾಗುವ ಹಾನಿಗೆ ಶೀಘ್ರ ಪರಿಹಾರ ನೀಡಲು ಜಿಲ್ಲಾಧಿಕಾರಿ ಸೂಚನೆ

ತುಮಕೂರು : ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗುತ್ತಿದ್ದು, ಅನೇಕ ಭಾಗಗಳಲ್ಲಿ ಮಳೆಯಿಂದಾಗಿ ಸಂಭವಿಸುತ್ತಿರುವಂತಹ ಹಾನಿಗಳಿಗೆ ಶೀಘ್ರ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

 ಜಿಲ್ಲಾಧಿಕಾರಿಗಳ ಕಚೇರಿಯ ವೀಡಿಯೋ ಕಾನ್ಪೆರೆನ್ಸ್ ಸಭಾಂಗಣದಲ್ಲಿ  ನಡೆದ ಮುಂಗಾರು ಹಾಗೂ ಬರ ನಿರ್ವಹಣೆಗೆ ಸಂಬಂಧಿಸಿದ ಸಭೆಯ ಅಧ್ಯಕ್ಷತೆವಹಿಸಿ  ಮಾತನಾಡಿದ  ಅವರು, ಶಿರಾ ತಾಲೂಕಿನಲ್ಲಿ  ಸಿಡಿಲಿನ ಹೊಡೆತಕ್ಕೆ   ಇಬ್ಬರು ವ್ಯಕ್ತಿಗಳು ಬಲಿಯಾಗಿದ್ದು, ಅವರ ಕುಟುಂಬಕ್ಕೆ  ತಕ್ಷಣವೇ ಪರಿಹಾರ ಹಣವನ್ನು  ನೀಡಬೇಕು ಎಂದು ಸೂಚಿಸಿದರಲ್ಲದೆ,  ಪ್ರಸಕ್ತ ವರ್ಷದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇರುವುದರಿಂದ  ಮಳೆ ಬಂದ ಸಂದರ್ಭದಲ್ಲಿ ಹಾನಿಗೊಳಗಾಗುವ ಪ್ರದೇಶಗಳನ್ನು ಗುರುತಿಸಿ  ಅವುಗಳ ನಿರ್ವಹಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

 ಮಳೆಯಿಂದಾಗುವ ಹಾನಿ ಮತ್ತು ಪ್ರವಾಹದ ಸ್ಥಿತಿ ಎದುರಾದ ಸಂದರ್ಭದಲ್ಲಿ ಅವುಗಳ  ನಿರ್ವಹಣೆಗೆ ತೆಗೆದುಕೊಳ್ಳಬಹುದಾದ  ಕ್ರಮಗಳ ಕುರಿತು   ಎಲ್ಲಾ ತಹಶೀಲ್ದಾರ್‍ಗಳಿಗೂ  ಸಮಗ್ರ ಯೋಜನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು. 

 ಬರ ನಿರ್ವಹಣೆಗಾಗಿ ಜಿಲ್ಲೆಯಲ್ಲಿ ತೆರೆಯಲಾಗಿದ್ದ 21 ಮೇವು ಬ್ಯಾಂಕುಗಳಲ್ಲಿ  ಸಂಪೂರ್ಣವಾಗಿ ಮೇವಿನ ಬೇಡಿಕೆ  ಕಡಿಮೆಯಾಗಿರುವುದರಿಂದ  ಮೇವು ಬ್ಯಾಂಕುಗಳಿಗೆ ಸಂಬಂಧಿಸಿದ ಹಣ ಪಾವತಿಗಾಗಿ ಎರಡು ಮೂರು ದಿನದೊಳಗಾಗಿ ಬಿಲ್ಲುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸಲ್ಲಿಸುವಂತೆ ತಿಳಿಸಿದರು. 

ತಿಪಟೂರು ತಾಲೂಕಿನ ಈಚನೂರು ಕೆರೆಗೆ ಸೇರುತ್ತಿದ್ದಂತಹ ಮಲೀನಯುಕ್ತ ನೀರನ್ನು ಬೇರೆ ಕಡೆ ಹರಿಯುವಂತೆ ಮಾಡಿರುವ ಬಗ್ಗೆ ಮಾಹಿತಿ ಪಡೆದು ಯಾವುದೇ ಕೆರೆಗಳಿಗೆ ಕಲುಷಿತ ನೀರು ಸೇರಿದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಜಿಲ್ಲೆಯಾದ್ಯಂತ 94 ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಮಳೆಯಿಂದ ಕೊಳವೆಬಾವಿಗಳಿಗೆ ಜಲ ಮರುಪೂರಣವಾಗಿ ಅಂತರ್ಜಲಮಟ್ಟ ಹೆಚ್ಚುತ್ತಿದೆ. ಈ ಬಗ್ಗೆ ಮರುಪರಿಶೀಲನೆ ನಡೆಸಿ ಖಾಸಗಿ ಕೊಳವೆಬಾವಿಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಅವುಗಳ ಹಣ ಪಾವತಿಯನ್ನು ಜೂನ್ 15 ರೊಳಗಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

Leave a Reply

Your email address will not be published. Required fields are marked *