ಮೊಬೈಲ್ ಟ್ರ್ಯಾಕ್‍ಗೆ ಒಳಗಾಗದೇ ನಮ್ಮನ್ನು ಟ್ರ್ಯಾಕ್ ಮಾಡುವವರಿಂದ ಬಚಾವಾಗಬೇಕು -ಶಂಕರ್ ರಂಗನಾಥನ್

ತುಮಕೂರು : ನಮ್ಮ ಮೊಬೈಲ್ ಟ್ರ್ಯಾಕ್ ಮಾಡುತ್ತಾ ನಮ್ಮೆಲ್ಲಾ ವ್ಯವಹಾರ ಆಗುಹೋಗು, ನಾವು ಮೊಬೈಲ್ ಬಳಸುವ ರೀತಿ ನೀತಿಗಳನ್ನು ಅರಿಯುತ್ತಾ, ನಮ್ಮನ್ನು ಅತಿಯಾಸೆಗೆ ಒಳಪಡಿಸುತ್ತಾ ಮೋಸ ಮಾಡಿ ನಮ್ಮಲ್ಲಿನ ಹಣವನ್ನು ದೋಚುವ ಒಂದು ವ್ಯವಸ್ಥೆ ಇದೆ. ಅದೇ ಸೈಬರ್ ಕ್ರೈಮರ್ಸ್. ಅದಕ್ಕೆ ಮುಖ್ಯ ಕಾರಣ ಮೊಬೈಲ್‍ನಲ್ಲಿ ನಮಗೆ ಸರಿಯಾಗಿ ವ್ಯವಹಾರ ಮಾಡಲು ಬಾರದಿರುವುದು ಮತ್ತು ಆಫರ್‍ಗಳಿಗೆ ಮಾರುಹೋಗುವ ನಮ್ಮ ಅತಿಯಾಸೆ ಎಂದು ವಯಾ ವಿಕಾಸ್ ಸಂಸ್ಥೆಯ ಶಂಕರ್ ರಂಗನಾಥನ್ ತಿಳಿಸಿದರು.

ಅವರು ನಿವೃತ್ತರ ಸಂಘದಲ್ಲಿ ಏರ್ಪಡಿಸಿದ್ದ `ಡಿಜಿಟಲ್ ಲಿಟರಸಿ’ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಹಿರಿಯ ನಾಗರಿಕರಿಗೆ ಮೊಬೈಲ್ ಮೂಲಕ ನಡೆಸುವ ಎಲ್ಲಾ ವ್ಯವಹಾರದ ಅರಿವು ಕಡಿಮೆ ಇರುವುದರಿಂದ ತುಂಬಾ ಎಚ್ಚರ ವಹಿಸಬೇಕು ಇಂದು ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚುತ್ತಿವೆ ಎಂದರು.

ಎಲ್ಲೆಡೆ ನಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡಬಾರದು. ಕೆಲವು ಮೆಸೇಜ್ ಫೋನ್‍ಕಾಲ್‍ಗಳಿಗೆ ಸ್ಪಂದಿಸಬಾರದು, ತಕ್ಷಣ ಉತ್ತರಿಸದೇ ಪ್ರಮಾಣಿಸಿಕೊಳ್ಳಬೇಕು. ನಿಮ್ಮ ಮಗನಿಗೆ ಆಕ್ಸಿಡೆಂಟ್ ಆಗಿದೆ. ಆಸ್ಪತ್ರೆಗೆ ಸೇರಿಸಿದ್ದೇವೆ ತಕ್ಷಣ ಚಿಕಿತ್ಸೆ ನೀಡಬೇಕು ಇಲ್ಲದಿದ್ದರೆ ಜೀವಕ್ಕೆ ಅಪಾಯ ಕೂಡಲೇ ಇಷ್ಟು ಹಣ ಹಾಕಿ, ಫೋನ್ ಪೇ ಮಾಡಿ ಎಂಬಿತ್ಯಾದಿ ಕರೆಗಳು ಬರುತ್ತವೆ. ಗಾಬರಿಯಲ್ಲಿ ಹಣ ಹಾಕಿದರೆ ಮುಗಿಯಿತು. ನಿಮ್ಮ ಉಳಿತಾಯದ ಎಲ್ಲಾ ಹಣ ಖಾಲಿ. ಹಾಗೆ ಕರೆ ಬಂದಾಗ ಆಗಲಿ ನೋಡುತ್ತೇನೆ ಎಂದು ಉತ್ತರಿಸಿ ನಿಮ್ಮ ಮಗನಿಗೇ ನೇರ ಕರೆ ಮಾಡಿ ಆಗ ನಿಜವೇನು ಎಂಬುದು ತಿಳಿಯುತ್ತದೆ. ಇದೇ ರೀತಿ ಕೆ.ಇ.ಬಿ., ಬ್ಯಾಂಕು, ಸ್ನೇಹಿತರ ಹೆಸರಿನಲ್ಲಿ ಹೀಗೆ ಯಾವ ರೀತಿ ಬೇಕಾದರೂ ಕರೆ ಮಾಡಿ ಮೋಸಗೊಳಿಸಬಹುದು. ಈಗ 10 ಸಾವಿರ ಹಾಕಿದರೆ 3 ತಿಂಗಳಲ್ಲಿ 30 ಸಾವಿರ ಕೊಡುತ್ತೇವೆ ಎಂಬಂತಹ ಆಫರ್ ಕರೆಗಳೂ ಬರುತ್ತವೆ. ಇಂತಹವುಗಳು ನಮ್ಮ ದುರಾಸೆ ಅಥವಾ ಅತಿಯಾಸೆಯಿಂದ ಬರುವ ಸಂಕಟಗಳಾಗಿರುತ್ತವೆ. ಇಂತಹ ಸಂದರ್ಭದಲ್ಲಿ ನಾವು ವಹಿಸಬೇಕಾದ ಎಚ್ಚರಗಳನ್ನು ಕುರಿತು ಸವಿವರವಾಗಿ ತಿಳಿಸಿಕೊಟ್ಟರು.


 ಕರ್ನಾಟಕ ಛಾಪ್ಟರ್‍ನ ಅಡ್ವೈಸರ್ ಶ್ರೀನಿವಾಸ್ ಅವರು `ವಯೋವಿಕಾಸ್’ ಸಂಸ್ಥೆಯ ರೂಪುರೇಷೆ ಕಾರ್ಯವೈಖರಿಯನ್ನು ತಿಳಿಸುತ್ತಾ ಇಂದು ಹಿರಿಯರ ಸಂಖ್ಯೆ ಹೆಚ್ಚುತ್ತಿದೆ. ಸರಾಸರಿ ಆಯಸ್ಸಿನ ಪ್ರಮಾಣ 63 ರಿಂದ 78 ವರ್ಷಕ್ಕೆ ಏರಿರುವುದರಿಂದ ಇಂದು 14% ಹಿರಿಯರಿದ್ದಾರೆ. ಆದರೆ ಅವರ ಬಗ್ಗೆ, ಅವರ ಹಿತಾಸಕ್ತಿ ಕಲ್ಯಾಣದ ಬಗ್ಗೆ ಯಾರೂ ಎಲ್ಲಿಯೂ ಗಮನ ಹರಿಸುತ್ತಿಲ್ಲ ಮನೆಯವರನ್ನು ಮಕ್ಕಳೇ ಮೂಲೆಗುಂಪು ಮಾಡುತ್ತಿದ್ದಾರೆ. ಆದ್ದರಿಂದ ಅಂತಹವರ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಂಘಟಿಸಿ 4-5 ರೀತಿಯ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿದ್ದು, ಇದುವರೆಗೂ 65 ಸಾವಿರ ಸದಸ್ಯರನ್ನು ಒಳಗೊಂಡಿದೆ. ಸಾಮಾನ್ಯವಾಗಿ ಇವರು ಮಾನಸಿಕ ದೂಷಣೆ, ದೈಹಿಕ ದೂಷಣೆ, ಆರ್ಥಿಕ ದೂಷಣೆಗಳಿಗೆ ಒಳಗಾಗುವುದು ಹೆಚ್ಚು. ಇಂತಹವರಿಗೆ ಕಾನೂನು ನಿರ್ವಹಣೆ, ಲೀಗಲ್ ಸರ್ವೀಸ್ ನೀಡುವುದು ಮುಖ್ಯವಾದ ಕೆಲಸ. ಹಾಗೂ ಸುಲಭ ಮತ್ತು ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೇವೆ ದೊರಕುವಂತೆ ಮಾಡುವುದು ಸೇರಿದೆ. ಆದ್ದರಿಂದ ಹೆಚ್ಚು ಜನ ಸದಸ್ಯತ್ವ ಹೊಂದಿದರೆ (ಉಚಿತ) ಸರ್ಕಾರದೊಂದಿಗೆ ಒತ್ತಡಹಾಕಿ ಪರಿಹಾರ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಸಾಂಕೇತಿಕವಾಗಿ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ಮಂಜುಳಾದೇವಿ, ಭವಾನಮ್ಮ, ಲೀಲಾವತಿ ಮೊದಲಾದವರು ಪರಿಸರ ಗೀತೆ ಹಾಡಿದರು. ಉಪಾಧ್ಯಕ್ಷರಾದ ಅನಂತರಾಮಯ್ಯ, ಕುಣಿಗಲ್ ತಾಲ್ಲೂಕು ಸಂಘದ ಅಧ್ಯಕ್ಷರಾದ ಚನ್ನರಾಯಪ್ಪ,  ತುರುವೇಕೆರೆ ಅಧ್ಯಕ್ಷರಾದ ಶಿವಯ್ಯ, ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ವಿಶ್ವೇಶ್ವರಯ್ಯ ಮುಂತಾದವರು ಪರಿಸರ ಉಳಿಸುವ ಅವಶ್ಯಕತೆ ಕುರಿತು ಮಾತನಾಡಿದರು. ಬಾ.ಹ. ರಮಾಕುಮಾರಿ ಅವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ಲೀಲಾವತಿ ಅವರು ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ನಿವೃತ್ತ ತಹಶೀಲ್ದಾರ್ ಪುಟ್ಟನರಸಯ್ಯ ಅವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು. 

Leave a Reply

Your email address will not be published. Required fields are marked *