ಗುಬ್ಬಿ : ನವೆಂಬರ್ 19 ರಂದು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿಎಸ್ ಪುರ ಹೋಬಳಿಯ ಹೊಸಕೆರೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ತುರುವೇಕೆರೆ ಶಾಸಕ ಮಸಾಲ ಜಯರಾಂ ತಿಳಿಸಿದರು.
ತಾಲೂಕಿನ ಗಡಿ ಭಾಗವಾದ ದೊಡ್ಡ ಗೊರಘಟ್ಟ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತುರುವೇಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು ಏಳರಿಂದ ಎಂಟು ಬಾರಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಮಾಡಲಾಗಿದ್ದು ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಿ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದೆ. ಅದೇ ರೀತಿ ನಾಳೆ ನಡೆಯುವ ಸಿ ಎಸ್ ಪುರ ಹೋಬಳಿ ಹೊರಕೆರೆ ಗ್ರಾಮದಲ್ಲಿ ಆಯೋಜಿಸಲಾಗಿರುವ ಜಿಲ್ಲಾಧಿಕಾರಿಗಳ ನಡೆಯ ಕಡೆ, ಸಚಿವರ ನಡೆ ಕಡೆ, ಸಂಸದರ ನಡೆ ಹಳ್ಳಿ ಕಡೆ , ಹಾಗೂ ಶಾಸಕರ ನಡೆ ಹಳ್ಳಿಯ ಕಡೆ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದರಿಂದ ಸಿಎಸ್ ಪುರ ಹೋಬಳಿಯ ಎಲ್ಲಾ ಸಮಸ್ತ ನಾಗರಿಕರು, ರೈತಾಪಿ ವರ್ಗದವರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಸರಕಾರದ ಮಹತ್ತರ ಯೋಜನೆಗಳಾದ ಪಿಂಚಣಿ ಯೋಜನೆ, ಮಾಶಾಸನ ಯೋಜನೆ, ಇನ್ನು ಮುಂತಾದ ಯೋಜನೆಗಳನ್ನು ಸ್ಥಳದಲ್ಲೇ ಪಡೆದುಕೊಳ್ಳಬೇಕೆಂದು ಈ ಮೂಲಕ ತಿಳಿಸಿದರು.
ಸರ್ಕಾರ ಗ್ರಾಮೀಣ ಭಾಗದ ಜನತೆಗೆ ಅನುಕೂಲವಾಗಲಿ ಎಂದು ಈ ಯೋಜನೆಯನ್ನು ಜಾರಿ ಮಾಡಿದ್ದು ಗ್ರಾಮೀಣ ಭಾಗದ ಅಂಗವಿಕಲರು ಅಸಹಕರು ಕಡುಬಡವರು ಪ್ರತಿನಿತ್ಯ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರದ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಸದುದ್ದೇಶವನ್ನು ಹೊಂದಿದ್ದು ಸಾರ್ವಜನಿಕರು ಉಪಯೋಗವನ್ನು ಪಡೆದುಕೊಳ್ಳಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಹೋಬಳಿ ಮಟ್ಟದ ಎಲ್ಲಾ ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಆಗಮಿಸಿ ಸರ್ಕಾರದ ಯೋಜನೆಗಳನ್ನು ಪಡೆದು ಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಬಿ. ಆರತಿ, ತಾಲೂಕು ಪಂಚಾಯಿತಿ ಇಒ ಶಿವಪ್ರಸಾದ್, ಕಡಬ ಕಂದಾಯ ರಾಜಸ್ವ ನಿರೀಕ್ಷಕ ರಾಜಶೇಖರ್ ಹಾಗೂ ಇನ್ನಿತರರು ಹಾಜರಿದ್ದರು.