ತುಮಕೂರು: ಇಂದು ಸಂಶೋಧನೆಯ ಕಡೆಗೆ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸುತ್ತಿಲ್ಲ. ತರಗತಿಯ ಅಭ್ಯಾಸದ ಜೊತೆಗೆ ಸಂಶೋಧನೆಯಲ್ಲಿ ಹೆಚ್ಚಿನ ಗಮನ ವಹಿಸುವುದು ಅಗತ್ಯ. ಸಮಾಜಕ್ಕೆ ವೈದ್ಯರ ಅವಶ್ಯಕತೆ ಹೆಚ್ಚಾಗುತ್ತಿದ್ದು, ತಮ್ಮ ಕಾರ್ಯಶ್ರೇಷ್ಠತೆಯಿಂದ ಸಾಮಥ್ರ್ಯವನ್ನು ಉತ್ತಮಗೊಳಿಸಿಕೊಳ್ಳುವ ವೈದ್ಯ ಸಮುದಾಯ ಮುಂದಾಗಬೇಕಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಮಾಜಿ ಉಪಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ ರವರು ಕರೆ ನೀಡಿದರು
ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ‘ಕ್ರಿಯಾಶೀಲತೆ ಮತ್ತು ಆರೋಗ್ಯ ಶುಶ್ರೂಷೆಯಲ್ಲಿ ಕ್ರಿಯಾಶೀಲತೆಯ ಅಳವಡಿಕೆ’ ವಿಷಯ ಕುರಿತು ರಾಷ್ಟ್ರೀಯ ಸಮ್ಮೇಳನದಲ್ಲಿ ‘ಸೌವೆನೀಯರ್’ ನಿಯತಕಾಲಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಹೊಸ ಆರೋಗ್ಯ ಸಮಸ್ಯೆಗಳು ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ತಂತ್ರಜ್ಞಾನ ಜಾಗತೀಕರಣ, ಹೊಸ ಸವಾಲುಗಳು ಮತ್ತು ಅವಕಾಶಗಳನ್ನು ಆರೋಗ್ಯ ಕ್ಷೇತ್ರದ ಮುಂದಿಟ್ಟಿದೆ. ಆರೋಗ್ಯ ಕ್ಷೇತ್ರ ಈ ಎಲ್ಲಾ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಆರೋಗ್ಯ ಸಮಸ್ಯೆಗಳಿಗೆ ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಪಠ್ಯ ಭಾಗದಲ್ಲಿ ಸ್ವಲ್ಪ ಬದಲಾವಣೆ ಅಗತ್ಯವಿದೆ ಎಂದು ಡಾ. ಜಿ. ಪರಮೇಶ್ವರ ರವರು ನುಡಿದರು.
ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ಕೌಶಲ್ಯಭರಿತ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ. ಇದರ ಮೊದಲ ಹೆಜ್ಜೆಯೆಂಬಂತೆ ಭಾವಿ ವೈದ್ಯರುಗಳಿಗೆ ಅವರ ಯೋಚನೆ, ಚಿಂತನೆ, ಆವಿಷ್ಕಾರ ಮತ್ತು ಪರಿಹಾರಗಳನ್ನು ವ್ಯಕ್ತಪಡಿಸಲು ರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಮೊಟ್ಟ ಮೊದಲಬಾರಿಗೆ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಿರುವುದು ಸಂತಸದ ವಿಷಯ. ಮುಂದಿನ ಬಾರಿ ಅಂತರಾಷ್ಟ್ರೀಯ ಸಮ್ಮೇಳನವನ್ನು ಏರ್ಪಡಿಸಿ ವಿದ್ಯಾರ್ಥಿಗಳು ಹಾಗೂ ವೈದ್ಯರಲ್ಲಿ ವೃತ್ತಿ ಮನೋಭಾವ ಹೆಚ್ಚಿಸೋಣ ಎಂದು ಅವರು ಹೇಳಿದರು.
ಕಾಮನ್ ವೆಲ್ತ್‍ನ ವೈದ್ಯಕೀಯ ಸಂಘದ ಕಾರ್ಯದರ್ಶಿ ಹಾಗೂ ಪ್ರಾಧ್ಯಾಪಕರು ಮತ್ತು ವೈದ್ಯರಾದ ಜೆ ಎ ಜಯಲಾಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನಾರೋಗ್ಯಕ್ಕೆ ತುತ್ತಾದ ಪ್ರತಿಯೊಬ್ಬ ರೋಗಿಯನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವರಿಗೆ ಪುನರ್ಜನ್ಮ ನೀಡುವುದು ಪ್ರತಿಯೊಬ್ಬ ವೈದ್ಯರ ಕರ್ತವ್ಯ. ಈ ನಿಟ್ಟಿನಲ್ಲಿ ವೈದ್ಯರು ಧನಾತ್ಮಕ ಗುಣದಿಂದ ರೋಗಿಗಳನ್ನು ಪರೀಶಿಲಿಸಬೇಕು ಎಂದರು.
ಕುಟುಂಬ ದತ್ತು ಕಾರ್ಯಕ್ರಮ ವಿಷಯದ ಕುರಿತು ಬಿಬಿ ನಗರದ ಏಮ್ಸ್ ನಿರ್ದೇಶಕರಾದ ಡಾ|| ವಿಕಾಸ್ ಭಾಟಿಯಾ ಮತ್ತು ಸಾಕ್ಷಿ ಆಧಾರಿತ ಔಷಧಿ ಎಂಬ ವಿಷಯದ ಕುರಿತು ಡಾ|| ಸಂಜೀವ್ ಲೇವಿನ್ ವಿಶೇಷ ಉಪನ್ಯಾಸ ನೀಡಿದರು.
ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ. ಝಡ್ ಕುರಿಯನ್, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ|| ಸುಶೀಲ್ ಮಹಾಪಾತ್ರ, ಉಪಪ್ರಾಂಶುಪಾಲರಾದ ಡಾ.ಪ್ರಭಾಕರ್ ಜಿ ಎನ್, ಡಾ|| ಮಂಜುನಾಥ್ ಜಿ ಎನ್, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ|| ಪ್ರವೀಣ್ ಕುಡವ, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ|| ಸವಿತಾ ರಾಣಿ ಬಿ ಬಿ,ಸಾಹೇ ಕುಲಾಧಿಪತಿಯ ಸಲಹೆಗಾರರಾದ ವಿವೇಕ್ ವೀರಯ್ಯ ಹಾಗೂ ದೇಶದ ಎಲ್ಲಾ ಭಾಗಗಳಿಂದ ಸುಮಾರು ಸಾವಿರಕ್ಕೂ ಹೆಚ್ಚು ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಸಮ್ಮೇಳನದಲ್ಲಿ ದೇಶದಲ್ಲಿರುವ ಪ್ರಸ್ತುತ ಆರೋಗ್ಯ ಕುರಿತಾದ ಕಾಳಜಿ ಮತ್ತು ಶುಶ್ರೂಷೆಯ ಪಕ್ಷಿನೋಟ ಮತ್ತು ಕ್ಷೇತ್ರ ಪರಿಣಿತರಿಂದ ಕಲಿಕೆಗೆ ಅವಕಾಶಗಳ ಕುರಿತು ಗೋಷ್ಠಿಗಳಲ್ಲಿ ದೇಶದ ವಿವಿಧ ವೈದ್ಯಕೀಯ ಕಾಲೇಜುಗಳಿಂದ ಆಗಮಿಸಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು 200ಕ್ಕೂ ಹೆಚ್ಚು ವಿಷಯಗಳ ಕುರಿತು ವೈದ್ಯಕೀಯ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.