ಡಿಸೆಂಬರ್ 25 ಅಬ್ದುಲ್ ನಜೀರ್‍ಸಾಬ್ ರವರ ಜನ್ಮದಿನ. ಭಾರತದ ಪಂಚಾಯತ್ ರಾಜ್ ವ್ಯವಸ್ಥೆಗೆ ಹೊಸದಿಕ್ಕು ತೋರಿಸಿದ ನಜೀರ್ ಸಾಬ್ ರವರ ಜನ್ಮದಿನವನ್ನು “ ಪಂಚಾಯತ್ ರಾಜ್ ಸಬಲೀಕರಣ ದಿನ ” ವನ್ನಾಗಿ ಘೋಷಿ¸ಬೇಕೆಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟ ರಾಜ್ಯ ಸಕಾರವನ್ನು ಒತ್ತಾಯಿಸುತ್ತದೆ ಎಂದು ಪಂಚಾಯತ್‍ರಾಜ್ ಮಹಾಒಕ್ಕೂಟದ ರಾಜ್ಯಾಧ್ಯಕ್ಷರಾದ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದ್ದಾರೆ.
ಭಾರತ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು ರಾಷ್ಟ್ರದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಮೌನ ಕ್ರಾಂತಿಗೆ ನಾಂದಿ ಹಾಡಿದ ತಿದ್ದುಪಡಿಗಳು. ಗಾಂಧೀಜಿಯವರು “ಭಾರತದ ಆತ್ಮ ಏಳು ಲಕ್ಷ ಹಳ್ಳಿಗಳಲ್ಲಿದೆ. ಹಳ್ಳಿಗಳ ಉದ್ಧಾರದಿಂದ ಮಾತ್ರ ದೇಶದ ಉದ್ಧಾರ ಸಾಧ್ಯ’’ ಎಂದು ಪ್ರಬಲವಾಗಿ ಪ್ರತಿಪಾದಿಸಿದ್ದರು. ಹಳ್ಳಿಗಳು ಗಣರಾಜ್ಯವಾಗಬೇಕು. ಗ್ರಾಮ ಸ್ವರಾಜ್ಯದ ತಳಹದಿಯ ಮೇಲೆ ಸ್ವತಂತ್ರೋತ್ತರ ಭಾರತದ ನಿರ್ಮಾಣವಾಗಬೇಕು ಎಂಬುದು ಅವರ ಚಿಂತನೆಯಾಗಿತ್ತು.
``ಹಳ್ಳಿಗಳು ದೇಶವೆಂಬ ದೇಹದ ಜೀವಾಣುಗಳು. ಆ ಜೀವಾಣುಗಳು ಆರೋಗ್ಯವಾಗಿದ್ದರೆ ದೇಹಾರೋಗ್ಯ ಸರಿಯಾಗುವುದು. ಆದ್ದರಿಂದ ಗ್ರಾಮ ಸ್ವರಾಜ್ಯ ಸ್ಥಾಪಿಸಬೇಕು’’ ಎಂಬುದು ಶ್ರೀ ಅರವಿಂದರು ಹೇಳುತ್ತಿದ್ದರು.
ಮೇಲಿನ ಗಾಂಧಿ ಮತ್ತು ಅರವಿಂದರ ಗ್ರಾಮ ಸ್ವರಾಜ್ಯದ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ 1992ರಲ್ಲಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳ ಮೂಲಕ ದೇಶಾದ್ಯಂತ ಪಂಚಾಯತ್ ರಾಜ್ ಸಂಸ್ಥೆಗಳ ಸ್ಥಾಪನೆಗೆ ದಾರಿದೀಪವಾಗಿದ್ದು 1983ರ ಕರ್ನಾಟಕ ಜಿಲ್ಲಾ ಪರಿಷತ್ತು, ತಾಲ್ಲೂಕು ಪಂಚಾಯತಿ ಸಮಿತಿ, ಮಂಡಲ ಪಂಚಾಯತಿ ಮತ್ತು ನ್ಯಾಯ ಪಂಚಾಯತಿಗಳ ಕಾಯ್ದೆ.
ಈ ಕಾಯ್ದೆಯ ಮುಖ್ಯ ರೂವಾರಿಗಳು ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಶ್ರೀ ಅಬ್ದುಲ್ ನಜೀರ್ ಸಾಬ್ ಮತ್ತು ಅವರಿಗೆ ಬೆನ್ನೆಲುಬಾಗಿ ನಿಂತ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ರಾಮಕೃಷ್ಣ ಹೆಗಡೆಯವರು. ``ಪ್ರಜಾಪ್ರಭುತ್ವವೆಂದರೆ ಪ್ರಜೆಗಳ ಆಡಳಿತ’’, ದೇಶದ ಜನತೆ ವರ್ಗ, ಧರ್ಮ, ಜಾತಿ, ಭಾಷೆ, ಬಣ್ಣ, ಲಿಂಗ, ಪ್ರಾದೇಶಿಕತೆ ಹೀಗೆ ಯಾವುದೇ ಭಿನ್ನಭೇದವಿಲ್ಲದ ಹಾಗೆ ಪ್ರತಿಯೊಬ್ಬ ಪ್ರಜೆಯ ಭಾವಿಸುವಿಕೆಯ ಮೂಲಕ ನಡೆಯುವ ಆಡಳಿತ. ಈ ತತ್ವದ ಅಡಿಯಲ್ಲಿ ಕೇಂದ್ರೀಕೃತವಾಗಿದ್ದ ಆಡಳಿತವನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪರಿಷತ್ತುಗಳು ಹಾಗೂ ಗ್ರಾಮ ಮಟ್ಟದಲ್ಲಿ ಮಂಡಲ ಪಂಚಾಯತಿಗಳನ್ನು ಹಾಗೂ ``ಗ್ರಾಮ ಸಭಾ’’ಗಳನ್ನು ಅಸ್ತಿತ್ವಕ್ಕೆ ತರುವ ಮೂಲಕ `ಜನರ ಕೈಗೆ ಅಧಿಕಾರ’ ಎಂಬ ತಮ್ಮ ನಿಲುವನ್ನು ಸಾಕಾರಗೊಳಿಸಿದವರು ಶ್ರೀ ಅಬ್ದುಲ್ ನಜೀರ್ ಸಾಬ್‍ರವರು. ಮಂಡಲ ಪಂಚಾಯತಿಯ ಅಧ್ಯಕ್ಷನನ್ನು `ಪ್ರಧಾನ’ ಎಂದು ಕರೆಯುವ ಮೂಲಕ ದಿಲ್ಲಿಯ ಪ್ರಧಾನಿ ಹುದ್ದೆಯ ಗೌರವವನ್ನು ಹಳ್ಳಿಯ ಪ್ರಧಾನನಿಗೆ ನೀಡಿದರು. ಜಿಲ್ಲಾ ಪರಿಷತ್ತಿನ ಅಧ್ಯಕ್ಷರನ್ನು ಜಿಲ್ಲೆಯ ಮುಖ್ಯಮಂತ್ರಿ ಎಂದು ಸಂಬೋಧಿಸುವ ಮೂಲಕ ರಾಜ್ಯಾಡಳಿತವನ್ನು ಜಿಲ್ಲೆಯ ಹಂತಕ್ಕೆ ವಿಕೇಂದ್ರೀಕರಿಸಿದರು.
ಮಂಡಲ ಪಂಚಾಯತಿ ಹಾಗೂ ಜಿಲ್ಲಾ ಪರಿಷತ್‍ಗಳ ಸದಸ್ಯ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 25ರಷ್ಟು, ಪರಿಶಿಷ್ಟ ಜಾತಿಯವರಿಗೆ ಶೇ. 15 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ. 3ರಷ್ಟು ಮೀಸಲಾತಿಯ ಅವಕಾಶವನ್ನು ಕಲ್ಪಿಸುವ ಮೂಲಕ ಅಂಬೇಡ್ಕರ್‍ರವರು ಬಯಸಿದ್ದ ಸಮಸಮಾಜಕ್ಕೆ ರಾಜಕೀಯ ಮೀಸಲಾತಿಯ ಮೂಲಕ ಮುನ್ನುಡಿ ಬರೆದರು. ತನ್ಮೂಲಕ ದೇಶದಲ್ಲೇ ಮೊದಲ ಬಾರಿಗೆ ಒಂದು ರಕ್ತರಹಿತ ಮೌನಕ್ರಾಂತಿ ಮಾಡಿದರು. ಜಿಲ್ಲಾ ಪರಿಷತ್ತುಗಳಿಗೆ ಸಾಕಷ್ಟು ಜವಾಬ್ದಾರಿಗಳನ್ನು ಹಾಗೂ ಅಧಿಕಾರಗಳನ್ನು ಅದರಲ್ಲೂ ವಿಶೇಷವಾಗಿ ಯೋಜನೆಗಳನ್ನು ರೂಪಿಸುವ ಹಾಗೂ ಅವುಗಳನ್ನು ಅನುಷ್ಠಾನಗೊಳಿಸುವ ಅಧಿಕಾರಗಳನ್ನು ವಹಿಸಿಕೊಡುವ ಹಾಗೂ ಸಂಬಂಧಿಸಿದ ಹಣಕಾಸಿನ ವರ್ಗಾವಣೆಯನ್ನು ಮಾಡುವ ಮೂಲಕ ತಮ್ಮ ಸೈದ್ಧಾಂತಿಕ ಬದ್ಧತೆಯನ್ನು ತೋರಿದರು.
ತಮಿಳುನಾಡಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಕರ್ನಾಟಕಕ್ಕೆ ಬಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯನ್ನು ತಮ್ಮ ರಾಜಕೀಯ ಬದುಕಿನ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಪಟ್ಟಣ ಪಂಚಾಯತಿ ಸದಸ್ಯನಿಂದ ರಾಜ್ಯದ ಮಂತ್ರಿಯಾಗುವವರೆಗೆ ತಮ್ಮ ರಾಜಕೀಯ ಪ್ರಯಾಣವನ್ನು ಮಾಡಿ ತಮ್ಮ ಅತ್ಯಂತ ಜನಪರ, ಪ್ರಾಮಾಣಿಕ ಹಾಗೂ ಸರಳ ವ್ಯಕ್ತಿತ್ವದ ಮೂಲಕ ರಾಜಕಾರಣಿಗಳಿಗೇ ಅಪವಾದವಾದರು.
ತಮ್ಮ ರಾಜಕೀಯ ಗುರು ಶ್ರೀಮತಿ ನಾಗರತ್ನಮ್ಮನವರ ಮಡಿಲಿನ ಮಗನಾಗಿ ತಮ್ಮ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ವಿಕೇಂದ್ರೀಕರಣದ ಕನಸನ್ನು ಜನರ ಕೈಗೆ ಅಧಿಕಾರ ನೀಡುವ ಮೂಲಕ ನನಸು ಮಾಡಿದ ಆಪ್ತಮಿತ್ರನಾಗಿ, ಅಧಿಕಾರಿಗಳ ಪಾಲಿನ ಆತ್ಮೀಯ ಮಾರ್ಗದರ್ಶಿ ಒಡನಾಡಿಯಾಗಿ, ಬಾಯಾರಿದವರ ಪಾಲಿನ ಭಗೀರಥನಾಗಿ, ರಾಜ್ಯದ ಸಾವಿರಾರು ಹಳ್ಳಿಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ನೀರು ಕೊಟ್ಟು ಜನರ ಪ್ರೀತಿಯ ``ನೀರು ಸಾಬ’’ರಾದವರು ಶ್ರೀ ಅಬ್ದುಲ್ ನಜೀರ್ ಸಾಬ್‍ರವರು.
ಗದಗದಲ್ಲಿರುವ ಗ್ರಾಮ್ಭಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯದಲ್ಲಿ ಅಬ್ದುಲ್ ನಜೀರ್‍ಸಾಬ್ ಅಧ್ಯಯನ ಪೀಠವನ್ನು ಸ್ಥಾಪಿಸ ಬೇಕೆಂದು ಸರ್ಕಾರವನ್ನು ಕೋರುತ್ತೇವೆ.
ಮಹಾಒಕ್ಕೂಟವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದಲ್ಲಿ ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪ್ಭೆಟೆಯಲ್ಲಿ ನಜೀರ್ ಸಾಬ್ ರವರ ಜನ್ಮದಿನದ ಡಿಸೆಂಬರ್ 25 ರಂದು ಕಾರ್ಯಕ್ರಮವನ್ನು ಏರ್ಪಡಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಮ ಪಂಚಾಯತಿ ಸದಸ್ಯರು ಎಂಬ ಧ್ಯೇಯದೊಂದಿಗೆ “ 1. ಗ್ರಾಮ ಸ್ವರಾಜ್ಯದೆಡೆಗೆ ನಮ್ಮ ನಡೆ, 2. ಸದೃಢ ಗ್ರಾಮ ಸಭೆಯ ಮೂಲಕ ಜನರ ಕೈಗೆ ಅಧಿಕಾರ, 3. ಗ್ರಾಮ ಪಂಚಾಯತಿಗಳು ಶಾಖಾ ಕಛೇರಿಗಳಲ್ಲ ಹಾಗೂ 4. ಬ್ರಷ್ಠಾಚಾರ ರಹಿತ ಆಢಳಿತದೆಡೆಗೆ ನಮ್ಮ ಹೆಜ್ಜೆ ಎಂಬ ಘೋಷಣೆಗಳೊಂದಿಗೆ “ ಪಂಚಾಯತ್ ರಾಜ್ ಸಬಲೀಕರಣ ದಿನ ”ವನ್ನು ರಾಜ್ಯಾಧ್ಯಂತ ಆಚರಿಸಲಿದ್ದಾರೆ ಎಂದು ತಿಳಿಸಿದ್ದಾರೆ.