ಡಿ. 05 ಜೆ.ಇ.(ಮೆದುಳು ಜ್ವರ) ಲಸಿಕಾ ಅಭಿಯಾನ

ತುಮಕೂರು,ಡಿ. ಜೆ.ಇ.(ಮೆದುಳು ಜ್ವರ) ಲಸಿಕಾ ಅಭಿಯಾನ-2022’ ಅಂಗವಾಗಿ ಜಿಲ್ಲೆಯಲ್ಲಿ 5,23,544 ಮಕ್ಕಳಿಗೆ ಜೆ.ಇ. ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಕೇಶವ ರಾಜ್ ಜಿ. ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ‘ಮೆದುಳು ಜ್ವರ ಲಸಿಕಾ ಅಭಿಯಾನ-2022’ ಕುರಿತು ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದವರಿಗೆ ಇಂದು ಏರ್ಪಡಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 ಜಿಲ್ಲೆಯಾದ್ಯಂತ ಮೆದುಳು ಜ್ವರ (ಜೆ.ಇ) ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಕ್ಕಳಲ್ಲಿ ಜಿ.ಇ ಜ್ವರವನ್ನು ತಡೆಗಟ್ಟುವ ಉದ್ದೇಶದಿಂದ ಡಿಸೆಂಬರ್ 5 ರಿಂದ ಮೂರು ವಾರಗಳ ಕಾಲ ಜಿಲ್ಲೆಯ ಎಲ್ಲಾ ಶಾಲೆಯ ಮಕ್ಕಳಿಗೆ, ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ, ಅಂಗನವಾಡಿ ಮಕ್ಕಳು, ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳು, ಇತರೆ ವಲಸೆ ಪ್ರದೇಶಗಳಲ್ಲಿನ ಮಕ್ಕಳು ಹಾಗೂ ಶಾಲೆಯಿಂದ ಹೊರಗುಳಿದ 1 ರಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಗುರುತಿಸಿ ಅವರಿಗೆ ಜಪಾನೀಸ್ ಎನ್‍ಸೆಫಲೈಟಿಸ್ (ಜೆಇ) ಮೆದುಳು ಜ್ವರ ಲಸಿಕೆ ನೀಡಲಾಗುತ್ತದೆ  ಅರ್ಹ ಮಕ್ಕಳಿಗೆ ಜೆ.ಇ. ಲಸಿಕೆ ನೀಡುವ ಮೂಲಕ ಮಕ್ಕಳನ್ನು ಮೆದುಳು ಜ್ವರದಿಂದ ರಕ್ಷಿಸುವುದು ಎಲ್ಲರ ಜವಬ್ದಾರಿಯಾಗಿದೆ, ಆರೋಗ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಿ ಮೆದುಳು ಜ್ವರ (ಜೆ.ಇ) ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
https://youtu.be/U83GIxOxJsU
 ಮೆದುಳು ಜ್ವರ ಖಾಯಿಲೆಗೆ ಜಪಾನೀಸ್ ಎನ್‍ಸೆಫಲೈಟಿಸ್ (ಜೆಇ) ಮುಖ್ಯ ಕಾರಣವಾಗಿದ್ದು, ಈ ವೈರಾಣು ಕ್ಯೂಲೆಕ್ಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಪ್ರಪಂಚದಾದ್ಯಂತ 24 ರಾಷ್ಟ್ರಗಳಲ್ಲಿ ಜಪಾನೀಸ್ ಎನ್‍ಸೆಫಲೈಟಿಸ್ (ಜೆಇ) ಎಂಡೆಮಿಕ್ ಎಂದು ಗುರುತಿಸಲ್ಪಟ್ಟಿದೆ. ಇವುಗಳಲ್ಲಿ ಭಾರತ ಸೇರಿದಂತೆ 11 ಏಷ್ಯಾ ರಾಷ್ಟ್ರಗಳು ಸೇರಿದ್ದು, ಪ್ರತಿ ವರ್ಷ 68000 ಪ್ರಕರಣಗಳು ವರದಿಯಾಗುತ್ತಿವೆ. ಇವುಗಳಲ್ಲಿ ಮರಣ ಪ್ರಮಾಣ ಶೇ. 20 ರಿಂದ ಶೇ.30 ರಷ್ಟಿದ್ದು, ಗುಣಹೊಂದಿದವರಲ್ಲಿ ಶೇ. 30 ರಿಂದ ಶೇ. 50ರಷ್ಟು ಪ್ರಕರಣಗಳಲ್ಲಿ ನರದೌರ್ಬಲ್ಯ, ಬುದ್ದಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆ ಉಂಟಾಗುತ್ತದೆ. ಜೆಇ ಖಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯು ಜ್ವರ ಪೀಡಿತನಾಗಿದ್ದು, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಹೊಂದಿದ್ದು, ಅಪಸ್ಮಾರವು ಉಂಟಾಗಬಹುದು. ಜಪಾನೀಸ್ ಎನ್‍ಸೆಫಲೈಟಿಸ್ (ಜೆಇ) ಮಾರಕ ಖಾಯಿಲೆಯನ್ನು ತಡೆಗಟ್ಟಲು ಜೆಇ ಲಸಿಕೆ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ.

 ಈಗಾಗಲೆ ರಾಜ್ಯದಲ್ಲಿ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆ ಈ 10 ಎಂಡಮಿಕ್ ಜಿಲ್ಲೆಗಳಲ್ಲಿ ಜೆಇ ಲಸಿಕೆಯನ್ನು ಮಕ್ಕಳಿಗೆ 9 ತಿಂಗಳು ತುಂಬಿದ ನಂತರ ಮೊದಲನೆ ಡೋಸ್ ಮತ್ತು 1 1/2 ವರ್ಷದ ವಯಸ್ಸಿನಲ್ಲಿ 2ನೇ ಡೋಸ್ ಜೆಇ ಲಸಿಕೆ ಚುಚ್ಚುಮದ್ದು ನೀಡಲಾಗುತ್ತಿದೆ.

ಮುಂದುವರೆದು AES (Acute Encephalitis Syndrome) ಪ್ರಕರಣಗಳನ್ನಾಧರಿಸಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ 25 ಆಗಸ್ಟ್ 2022 ರ ನಿರ್ದೇಶನದಂತೆ ಹೆಚ್ಚುವರಿಯಾಗಿ ಬಾಲಗಕೋಟೆ, ದಕ್ಷಿಣ ಕನ್ನಡ, ಗದಗ, ಹಾಸನ, ಹಾವೇರಿ, ಕಲ್ಬುರ್ಗಿ, ತುಮಕೂರು, ರಾಮನಗರ, ಉಡುಪಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಜೆ.ಇ. ಲಸಿಕಾ ಅಭಿಯಾನ ಹಮ್ಮಿಕೊಳ್ಳಲು ನಿರ್ದೇಶಿಸಲಾಗಿರುತ್ತದೆ. ಈ ಅಭಿಯಾನದಲ್ಲಿ 1 ರಿಂದ 15 ವರ್ಷದ ಮಕ್ಕಳಿಗೆ ಒಂದು ಡೋಸ್ ಜೆಇ ಲಸಿಕೆ ಚುಚ್ಚುಮದ್ದು ನೀಡಲಾಗುವುದು.
5ನೇ ಡಿಸೆಂಬರ್ 2022 ರಿಂದ ಚಾಲನೆಗೊಳ್ಳುವ ಈ ಅಭಿಯಾನದ ಮೊದಲನೇ ವಾರದಲ್ಲಿ ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ಆಯೋಜಸಿ ಲಸಿಕೆಯನ್ನು ನೀಡಲಾಗುವುದು. ನಂತರದ ಎರಡು ವಾರಗಳಲ್ಲಿ ಅಂಗನವಾಡಿ ಕೇಂದ್ರಗಳು ಹಾಗೂ ಇನ್ನಿತರೆ ಸಮುದಾಯ ಪ್ರದೇಶಗಳಲ್ಲಿ ಲಸಿಕಾರಣ ನಡೆಸಲಾಗುವುದು. ಈ ಅಭಿಯಾನದ ದಿನಾಂಕಗಳಲ್ಲಿ ಪ್ರಾಥಮಿಕ ಆರೋಗ್ಯ, ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಕೂಡ ನೀಡಲಾಗುವುದು.

  ಈ ಅಭಿಯಾನದ ದಿನಾಂಕಗಳಲ್ಲಿ ತುಮಕೂರು ಜಿಲ್ಲೆಯಲ್ಲಿ 5,23,544 ಮಕ್ಕಳಿಗೆ ಜೆ.ಇ. ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, 826 ಲಸಿಕಾಕಾರರು, 207 ಮೇಲ್ವಿಚಾರಕರ ಸಿಬ್ಬಂದಿ, ಆಶಾ/ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಾ ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟು 6974 ಲಸಿಕಾ ಶಿಬಿರಗಳನ್ನು ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಕೇಶವ ರಾಜ್ ಜಿ. ತಿಳಿಸಿದರು.

Leave a Reply

Your email address will not be published. Required fields are marked *