ತುಮಕೂರು:ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿರುವುದಾಗಿ ಕಾಂಗ್ರೆಸ್ ಯುವ ಮುಖಂಡ ಎ.ಡಿ.ನರಸಿಂಹರಾಜು ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಳೆದ 20 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿರುವ ತಾವು ಕಾಂಗ್ರೆಸ್ ಯುವ ಘಟಕ ಹಾಗೂ ಎನ್ ಎಸ್ ಯು ಐ ಘಟಕದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಹಲವು ವರ್ಷದಿಂದ ಹಲವು ಸಮಾಜಮುಖಿ ಕೆಲಸಗಳನ್ನು ನಿರ್ವಹಿಸಿರುವುದಾಗಿ ತಿಳಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಲವಾರು ಮೂಲಭೂತ ಸೌಕರ್ಯಗಳ ಸಮಸ್ಯೆ ಎದ್ದು ಕಾಣುತ್ತಿದ್ದು,ಗ್ರಾಮಾಂತರ ಪ್ರದೇಶದಲ್ಲಿ ಹಲವು ಗ್ರಾಮಗಳಿಗೆ ರಸ್ತೆ, ಚರಂಡಿ ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳ ಸಮಸ್ಯೆ ಜೊತೆಗೆ ಶ್ರಮಿಕರು ಕಾರ್ಮಿಕರು ಸೇರಿದಂತೆ ಹಲವು ವರ್ಗದ ಜನರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ ಎಂದರು.
ಚುನಾವಣೆಗೆ ಸ್ಪರ್ಧಿಸಿ ಯುವ ಸಮೂಹವನ್ನು ಬಳಸಿಕೊಂಡು ಸ್ಥಳೀಯ ಯುವಕ ಯುವತಿಯರಿಗೆ ಉದ್ಯೋಗಾವಕಾಶ, ಉನ್ನತ ಶಿಕ್ಷಣ ಸೇರಿದಂತೆ ಹಲವು ಸೌಕರ್ಯಗಳನ್ನು ನೀಡಬೇಕು ಎಂಬುದು ನಮ್ಮ ಮೂಲ ಉದ್ದೇಶ ಎಂದ ಅವರು, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಹಾಗೂ ಮಾಜಿ ಶಾಸಕರು ಸಾವಿರಾರು ಕೋಟಿ ಅನುದಾನವನ್ನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ.ಆದರೆ ಇನ್ನೂ ಹಲವು ಗ್ರಾಮಗಳಿಗೆ ಸಂಚರಿಸಲು ಸರಿಯಾದ ರಸ್ತೆಯೇ ಇಲ್ಲ.ಇದರಿಂದ ಗ್ರಾಮಾಂತರ ಪ್ರದೇಶದ ಜನರು ಹೈರಾಣಾಗಿದ್ದಾರೆ ಎಂದು ಹಲವು ಉದಾಹರಣೆಗಳ ಮೂಲಕ ಎ.ಡಿ.ನರಸಿಂಹರಾಜು ವಿವರಿಸಿದರು.
ತುಮಕೂರು ಗ್ರಾಮಾಂತರ ಭಾಗದಲ್ಲಿ ಹಲವು ದಲಿತ ಕೇರಿಗಳು ಇದುವರೆಗೂ ಹಿಂದುಳಿದಿದ್ದು ಸರಕಾರದ ಎಸ್‍ಸಿಪಿ ಹಾಗೂ ಟಿಎಸ್‍ಪಿ ಅನುದಾನವನ್ನು ತಂದು ದಲಿತರ ಕೇರಿಗಳನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಆ ಅನುದಾನವನ್ನ ಬೇರೆ ಜಾಗದಲ್ಲಿ ವಿನಿಯೋಗಿಸುತಿದ್ದು,ಆ ಮೂಲಕ ದಲಿತ ಕೇರಿಗಳು ಇಂದಿಗೂ ಸಹ ಹಿಂದೆ ಉಳಿಯಲು ಕಾರಣವಾಗಿವೆ.ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸ್ಪರ್ಧೆಗೆ ಇಳಿಯಲು ನಿರ್ದರಿಸಿರುವುದಾಗಿ ತಿಳಿಸಿದರು.
ಮುಂಬರುವ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಹಿರಿಯ ನಾಯಕರಿಗೂ ಸಹ ಟಿಕೆಟ್ ನೀಡುವ ಸಂಬಂಧ ಮನವಿ ಮಾಡಿದ್ದು,ಟಿಕೆಟ್ ನೀಡುವ ನಿರೀಕ್ಷೆಯು ಸಹ ಇದೆ.ಈ ಮೂಲಕ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟವನ್ನು ಹಾರಿಸಲು ನಿರ್ಧರಿಸಿದ್ದೇವೆ. ಒಂದು ವೇಳೆ ಹೈಕಮಾಂಡ್ ಬೇರೆಯವರಿಗೆ ಟಿಕೇಟ್ ನೀಡಿದರೆ ಅವರ ಪರವಾಗಿ ಕೆಲಸ ಮಾಡಿ, ಗೆಲುವಿಗೆ ಸಹಕರಿಸುವುದಾಗಿ ಎ.ಡಿ.ನರಸಿಂಹರಾಜು ನುಡಿದರು.
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ರಜಿನಿಕಾಂತ್,ಮುಖಂಡರಾದ ಗೋವಿಂದರಾಜು,ನರಸಿಂಹಮೂರ್ತಿ ಭೀಮಸ್ವಾಮಿ, ತುಮಕೂರು ಗ್ರಾಮಾಂತರ ಎಸ್.ಸಿ ಘಟಕದ ಅಧ್ಯಕ್ಷ ಗಿರಿಸ್ವಾಮಿ,ಪ್ರಧಾನ ಕಾರ್ಯದರ್ಶಿ ಗ್ರಾಮಾಂತರ ಶಿವರಾಜು ಕುಚ್ಚಂಗಿ,ರಾಜೇಶ್ ಹೆಗ್ಗೆರೆ, ಸುದರ್ಶನ್ ಮತ್ತಿತರರು ಉಪಸ್ಥಿತರಿದ್ದರು.