ದೀನರಿಗೆ ದಿಕ್ಕಾದ ದಿಗ್ಗಜೆ ,ಸಾವಿತ್ರಿಬಾಯಿ ಫುಲೇಯವರ ಜನ್ಮದಿನ ಸಂಸ್ಮರಣೆ

ಆತ್ಮೀಯರೇ: 

      ಕಳೆದ ಬುಧವಾರ, ಸಾವಿತ್ರಿಬಾಯಿ ಫುಲೇಯವರ ಜನ್ಮದಿನದಂದು ನಾನು ಅವರ ಚೇತನಕ್ಕೆ ಸಲ್ಲಿಸಿದ್ದ  ಚಿಕ್ಕ ಬರಹವೊಂದಕ್ಕೆ ಪ್ರತಿಕ್ರಿಯಿಸಿ, ಅವರ ಜೀವನ-ಸಾಧನೆಗಳನ್ನು ಕುರಿತು ಸ್ವಲ್ಪ ವಿವರಗಳನ್ನು ತಿಳಿಯಲು ಕೆಲವು ಗೆಳೆಯರು ಕುತೂಹಲ ತೋರಿದ ಮೇರೆಗೆ, ಅವರ ಬಗ್ಗೆ ಒಂದು ಕಿರುನೋಟವನ್ನು ಕೊಡಬಹುದಾದಂಥ ಬರಹವೊಂದನ್ನು, ನನಗೆ ಒಡನೆಯೇ ದೊರೆತ ತುಸು ಮಾಹಿತಿಯ ಆಧಾರದ ಮೇಲೆ ತಯಾರಿಸಿ, ಇಲ್ಲಿ ನಿಮ್ಮ ನೋಟಕ್ಕೂ ಇಟ್ಟಿದ್ದೇನೆ. ಬಿಡುವಾದಾಗ ದಯಮಾಡಿ ಕಣ್ಣಾಡಿಸಿ; ಬೇಕೆನಿಸಿದರೆ ನಿಮ್ಮ ಬಳಗಕ್ಕೂ ತಲುಪಿಸಿ. – S.G. ಸೀತಾರಾಮ್. 

~~~

      ’ಸಾವಿತ್ರಿಬಾಯಿ ಫುಲೇ’ ಭಾರತದ ಮಟ್ಟ ಮೊದಲ ಶಿಕ್ಷಕಿಯರಲ್ಲೊಬ್ಬರು ಮತ್ತು ಅಗ್ರಗಾಮಿ ಸಮಾಜ ಸುಧಾರಕರು. ಅವರು ತಮ್ಮ ಪತಿ (“ಮಹಾತ್ಮ”) ಜ್ಯೋತಿಬಾ ಪುಲೇ ಸಂಗಡ, ಭಾರತದಲ್ಲಿ ಸ್ತ್ರೀಯರ ಹಕ್ಕುಗಳನ್ನು ಚಲಾವಣೆಗೆ ತರಲು ಮಹತ್ತರ ಪಾತ್ರವನ್ನು ನಿರ್ವಹಿಸಿದರು. ಹೆಣ್ಣು ಮಕ್ಕಳ ಅಕ್ಷರ ಕಲಿಕೆಗೆ ಓನಾಮ ಬರೆದರು. ಲಿಂಗ ಮತ್ತು ಜಾತಿ ಭೇದಗಳಿಂದ ಆಗುತ್ತಿದ್ದ ಅನ್ಯಾಯವನ್ನು ತೊಡೆದುಹಾಕಲು ಹೋರಾಡಿದರು. 

      ಸಾವಿತ್ರಿಬಾಯಿಯವರು “3 January 1831” ದಿನಾಂಕದಲ್ಲಿ ಮಹಾರಾಷ್ಟ್ರದ ಸಾತರಾ ಜಿಲ್ಲೆಯ, ಪುಣೆ ಬಳಿಯ ಗ್ರಾಮವೊಂದರಲ್ಲಿ, ತೋಟಗಾರರ (“ಮಾಲಿ”) ಪರಿವಾರವೊಂದರಲ್ಲಿ ಜನಿಸಿದರು.  ತಮ್ಮ ೯-೧೦ ವಯಸ್ಸಿನಲ್ಲಿ, ೧೩ ವಯಸ್ಸಿನ ‘ಜ್ಯೋತಿಬಾ ಫುಲೇ’ಯವರನ್ನು ಲಗ್ನವಾದರು. ಆಗ ಅವರು ಅಕ್ಷರಸ್ಥರಾಗಿರಲಿಲ್ಲ. ಜ್ಯೋತಿಬಾರವರು ತಮ್ಮ ತೋಟದ ಕೆಲಸದೊಟ್ಟಿಗೆ ತಮ್ಮ ಸೋದರಸಂಬಂಧಿ ’ಸಗುಣಾಬಾಯಿ’ (ಕ್ರಾಂತಿಕಾರಿ ಸ್ತ್ರೀವಾದಿ ಮತ್ತು ಜ್ಯೋತಿಬಾರವರ ’ಬುದ್ಧಿವಾದಿ’) ಅವರೊಂದಿಗೆ, ಸಾವಿತ್ರಿಬಾಯಿಯವರಿಗೂ ಮನೆಯಲ್ಲೇ ಪ್ರಾಥಮಿಕ ಶಿಕ್ಷಣವನ್ನು ನೀಡಿದರು. ಸಾವಿತ್ರಿಬಾಯಿಯವರು ಮುಂದಕ್ಕೆ (ಅಹಮದ್‍ನಗರ ಮತ್ತು ಪುಣೆಯ) ಎರಡು ಸಂಸ್ಥೆಗಳಲ್ಲಿ ಶಿಕ್ಷಣ ತರಬೇತಿಯನ್ನು ಪಡೆದರು. ಹೀಗಾಗಿ ಅವರು “ಭಾರತದ ಮೊದಲ ಶಿಕ್ಷಿತ ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯಿನಿ” ಆಗಿದ್ದಿರಬಹುದು. ಈ ತರಬೇತಿಯ ಬಲದ ಮೇಲೆ ಸಾವಿತ್ರಿಬಾಯಿಯವರು ಸಗುಣಾಬಾಯಿಯವರೊಡಗೂಡಿ, ಪುಣೆಯಲ್ಲಿ ಹುಡುಗಿಯರಿಗೆ ಪಾಠ ಹೇಳತೊಡಗಿದರು. ಕೆಲಸಮಯಾನಂತರ, ಎಂದರೆ ೧೮೪೮ರಲ್ಲಿ, ಪುಲೇ ದಂಪತಿ ಮತ್ತು ಸಗುಣಾಬಾಯಿ ಒಗ್ಗೂಡಿ, ತಮ್ಮ ಅಭಿಮಾನಿ  ’ತಾತ್ಯಾ ಸಾಹೇಬ್ ಭಿಡೇ’ ಎಂಬುವರ ಪುಣೆ ನಿವಾಸದಲ್ಲಿ ಹೆಣ್ಣು ಮಕ್ಕಳಿಗಾಗಿ ಮಟ್ಟ ಮೊದಲ ’ಮನೆ ಪಾಠಶಾಲೆ’ಯನ್ನು ಶುರುಮಾಡಿ, ಗಣಿತ, ವಿಜ್ಞಾನ, ಸಮಾಜಶಾಸ್ತ್ರ ಮುಂತಾದ ವಿಷಯಗಳನ್ನು ಕಲಿಸತೊಡಗಿದರು. ಇದಾದ ಮೂರೇ ವರ್ಷಗಳಲ್ಲಿ, ಪುಲೇ ದಂಪತಿಯು ಪುಣೆಯಲ್ಲೇ ಹೆಣ್ಣು ಮಕ್ಕಳ ಮೂರು ಶಾಲೆಗಳನ್ನು ನಡೆಸುತ್ತಿದ್ದರು. ಇವುಗಳಲ್ಲಿ ಒಟ್ಟು ೧೫೦ ಬಾಲೆಯರಿದ್ದು, ಓದುತ್ತಿದ್ದ ವಿಷಯಗಳೂ, ಬೋಧನಕ್ರಮವೂ ಸರ್ಕಾರಿ ಶಾಲೆಗಳಿಗಿಂತ ಭಿನ್ನವಾಗಿದ್ದುವು, ಉತ್ತಮವಾಗಿದ್ದುವು.  ’ಪುಲೇ ವಿಧಾನ’ಗಳ ವಿಶೇಷತೆಯಿಂದಾಗಿ, ಅವರ ಶಾಲೆಗಳಲ್ಲಿ ಓದುತ್ತಿದ್ದ ಹುಡುಗಿಯರ ಸಂಖ್ಯೆಯು ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿದ್ದ ಹುಡುಗರ ಸಂಖ್ಯೆಯನ್ನು ಮೀರತೊಡಗಿತು.

      ಆದರೆ, ಈ ಬೆಳವಣಿಗೆಯಿಂದ ಹಿಗ್ಗುವ ಬದಲಾಗಿ, ಹುಡುಗಿಯರ ಓದನ್ನು ಸಹಿಸದ ಸ್ಥಳಿಕ ರೂಢಿಗ್ರಸ್ತ ಜನರು ಕೆರಳಿ, ಕಲ್ಲು, ಕೆಸರು, ಸಗಣಿ ಮತ್ತು ಬೈಗುಳಗಳಿಂದ ಸಾವಿತ್ರಿಬಾಯಿಯವರ ಮೇಲೆ ಹಲ್ಲೆ ಮಾಡಹತ್ತಿದರು. ಹೀಗಾಗಿ ಅವರು ಶಾಲೆಗೆ ಹೋಗುವಾಗ ತಮ್ಮ ಚೀಲದಲ್ಲಿ ಒಂದು ಹೆಚ್ಚುವರಿ ಸೀರೆಯನ್ನು ಯಾವಾಗಲೂ ಒಯ್ಯುತ್ತಿರಬೇಕಾಯಿತಂತೆ! ಸ್ತ್ರೀಯರಿಗೆ ವಿದ್ಯಾದಾನ ಮಾಡುತ್ತಿದ್ದ ಇವರ “ಪುಣ್ಯಕಾರ್ಯ”ವನ್ನು “ಪಾಪದ ಕೆಲಸ” ಎಂದು ಜರೆದು, ಪ್ರತಿಗಾಮಿ, ಮಡಿವಂತ ಶಕ್ತಿಗಳು ಕೊಡುತ್ತಿದ್ದ ಕಾಟವನ್ನು ತಾಳಲಾರದೆ, ಜ್ಯೋತಿಬಾರವರ ತಂದೆಯವರು ತಮ್ಮೊಡನೆ ವಾಸಿಸುತ್ತಿದ್ದ ಈ ಮಗ-ಸೊಸೆ ಜೋಡಿಯನ್ನು ಮನೆಯಿಂದ ಹೊರಹಾಕಬೇಕಾಗಿ ಬಂದಿತು. ಆ ಅತಿ-ಪ್ರತಿಕೂಲ ಪರಿಸ್ಥಿತಿಯಲ್ಲಿ ಇವರ ಸಮುದಾಯದಲ್ಲಿ ಇವರಿಗೆ ಜಾಗವನ್ನಾಗಲೀ, ಇವರ ಶಾಲೆಗಳಿಗೆ ನೆರವನ್ನಾಗಲೀ ನೀಡಲು ಯಾರೂ ಮುಂದಾಗಲಿಲ್ಲ. ಇವರ ಶಾಲೆಗಳಿಗೆ ಹೆಣ್ಣು ಮಕ್ಕಳನ್ನು ಕಳುಹಿಸುವುದಕ್ಕೂ ಯಾರಿಗೂ ಇಷ್ಟವಾಗಲಿಲ್ಲ. ಆಗ ಪುಲೇ ದಂಪತಿಯು, ಮಿತ್ರ “ಉಸ್ಮಾನ್ ಶೇಖ್‍”ರವರ ಮನೆಯಲ್ಲಿ ಆಶ್ರಯ ಪಡೆಯಬೇಕಾಯಿತು. ಅಲ್ಲಿ ಸಾವಿತ್ರಿಬಾಯಿಯವರಿಗೆ, ಉಸ್ಮಾನ್ ಶೇಖ್‍ರವರ ಸೋದರಿ “ಫಾತಿಮಾ ಬೇಗಮ್ ಶೇಖ್”ರವರ ಗೆಳೆತನವು ದೊರೆತು, ಮುಂದಕ್ಕೆ ಇವರಿಬ್ಬರೂ ಒಂದೇ ಶೈಕ್ಷಣಿಕ ಕಾರ್ಯದಲ್ಲಿ ನಿಕಟ ಸಹವರ್ತಿಗಳಾದರು. ಶಿಕ್ಷಣ ತರಬೇತಿಯನ್ನು ಪಡೆದಿದ್ದ ಫಾತಿಮಾರವರು ತರುವಾಯ ಸಾವಿತ್ರಿಬಾಯಿಯವರೊಂದಿಗೆ ಪುಣೆಯ “Normal School” ಮಾದರಿಯ ಶಿಕ್ಷಕ ಪ್ರಶಿಕ್ಷಣ ಸಂಸ್ಥೆಯಲ್ಲಿ ದಾಖಲಾಗಿ, ಇನ್ನೂ ಹೆಚ್ಚಿನ ದರ್ಜೆಗಳಿಗೆ ಒಟ್ಟಿಗೇ ತೇರ್ಗಡೆಯಾದರು. ಫಾತಿಮಾರವರು “ಭಾರತದ ಮಟ್ಟ ಮೊದಲ ಮುಸಲ್ಮಾನ ಉಪಾಧ್ಯಾಯಿನಿ” ಎಂಬ ಕೀರ್ತಿಗೆ ಪಾತ್ರರಾದರು. ೧೮೪೯ರಲ್ಲಿ ಇವರಿಬ್ಬರೂ ಕೈಜೋಡಿಸಿ, ತಾವಿದ್ದ ಶೇಖ್ ಸಾಹೇಬರ ಮನೆಯಲ್ಲೇ ಪಾಠಶಾಲೆಯೊಂದಕ್ಕೆ ಚಾಲನೆಯಿತ್ತರು. ಆ ಬಳಿಕ ಸಾವಿತ್ರಿಬಾಯಿ-ಜ್ಯೋತಿಬಾ ದಂಪತಿಯು “ಬಹುಜನ”ರಿಗಾಗಿ (“ಹಿಂದುಳಿದವರು”) ಎರಡು ’ಶಿಕ್ಷಣ  ಟ್ರಸ್ಟ್‌’ಗಳನ್ನು ಸ್ಥಾಪಿಸಿದರು ಮತ್ತು ಅವುಗಳಡಿಯಲ್ಲಿ ಹಲವಾರು ಶಾಲೆಗಳು ನೆಲೆಗೊಂಡು, ಮೊದಲು  ಸಾವಿತ್ರಿಬಾಯಿಯವರ, ಬಳಿಕ ಫ಼ಾತಿಮಾ ಬೇಗಮ್‍ರವರ ನೇತೃತ್ವದಲ್ಲಿ ಮುನ್ನಡೆದುವು. ಕಡೆಗೆ ವಿವಿಧ ಜಾತಿಮತಗಳವರ ವ್ಯಾಸಂಗಕ್ಕಾಗಿ ಫುಲೇ ದಂಪತಿಯಿಂದ ’ಹದಿನೆಂಟು ವಿದ್ಯಾಶಾಲೆ’ಗಳು ಶುರುವಾದುವು ಎಂದು ತಿಳಿಯುತ್ತದೆ.

      ಶಾಲೆಗಳೇ ಅಲ್ಲದೆ, ಫುಲೇ ದಂಪತಿಯು, ಅತ್ಯಾಚಾರಕ್ಕೊಳಗಾಗಿದ್ದ  ಗರ್ಭಿಣಿಯರು ಹೆರುತ್ತಿದ್ದ ಕೂಸುಗಳ ಕೊಲೆಯನ್ನು ತಪ್ಪಿಸಲು “ಬಾಲಹತ್ಯಾ ಪ್ರತಿಬಂಧಕ ಗೃಹ” ಎಂಬ ಆಸರೆಯನ್ನು ಒದಗಿಸಿ, ಅಲ್ಲಿ ಅಂಥ ಹೆಂಗಸರು ಸುರಕ್ಷಿತವಾಗಿ ಹಡೆದು, ಹೆತ್ತ ಮಕ್ಕಳನ್ನು ಉಳಿಸಿಕೊಳ್ಳಲು ಅಥವಾ ಇಷ್ಟವಿದ್ದರೆ ದತ್ತು ನೀಡಲು ಅನುಕೂಲ ಮಾಡಿದರು. ದಲಿತರ, ಹೆಂಗಸರ ಮತ್ತು ರೈತರ ನೋವು-ನಷ್ಟ-ನರಳಾಟಗಳನ್ನು ತಗ್ಗಿಸಲು ಈ ದಂಪತಿಯು “ಸತ್ಯ ಶೋಧಕ ಸಮಾಜ” ಎಂಬುದನ್ನು ಸ್ಥಾಪಿಸಿದ್ದು, ಸಾವಿತ್ರಿಬಾಯಿಯವರು ಅದರ ಸ್ತ್ರೀ ವಿಭಾಗಕ್ಕೆ ಮುಖ್ಯಸ್ಥೆಯಾಗಿದ್ದರು.

      ಸಾವಿತ್ರಿಬಾಯಿಯವರಿಗೆ ಮಕ್ಕಳಿರಲಿಲ್ಲ. ಅವರ ಪ್ರಾಂತದಲ್ಲಿ ೧೮೯೭ರಲ್ಲಿ ಪ್ಲೇಗ್ ಮಾರಿಯು ಬಡಿದಾಗ, ತಮ್ಮ ದತ್ತುಪುತ್ರ ಯಶವಂತರಾವ್‍ರವರ ಜೊತೆ ಪುಣೆಯ ಹೊರಭಾಗದಲ್ಲಿ ಪ್ಲೇಗ್ ರೋಗಿಗಳಿಗಾಗಿ ಅವರು ಚಿಕಿತ್ಸಾಲಯವೊಂದನ್ನು ತೆರೆದರು. ಆಗ ಪ್ಲೇಗ್ ತಗುಲಿದ್ದ ೧೦ ವರ್ಷದ ದಲಿತ ಹುಡುಗನೊಬ್ಬನನ್ನು ತಾವೇ ಬೆನ್ನ ಮೇಲೆ ಹೊತ್ತು ಆಸ್ಪತ್ರೆಗೆ ತರುವಂಥ ಪರಿಸ್ಥಿತಿಯು ಒದಗಿ, ಕಡೆಗೆ ಆ ಹುಡುಗನು ಉಳಿದು, ಸಾವಿತ್ರಿಬಾಯಿಯವರೇ ಪ್ಲೇಗ್ ಅಂಟಿಸಿಕೊಂಡು ಅದಕ್ಕೆ ಬಲಿಯಾಗಿಹೋದರು. ಹೀಗೆ ’ವೀರಮರಣ’ವನ್ನಪ್ಪಿದಾಗ ಅವರಿಗೆ ೬೬ ವಯಸ್ಸಷ್ಟೆ. ಇದಕ್ಕೆ ಏಳು ವರ್ಷಗಳ ಮುನ್ನ ಜ್ಯೋತಿಬಾರವರು ತಮ್ಮ ೬೩ನೆಯ ವಯಸ್ಸಿನಲ್ಲೇ ಕಾಲವಾಗಿದ್ದರು.

      ಸಾವಿತ್ರಿಬಾಯಿಯವರು ಎರಡು ಮುಖ್ಯ ಕವಿತಾ ಸಂಕಲನಗಳನ್ನು ಬರೆದರು. ಹೀನಸ್ಥಿತಿಯಲ್ಲಿದ್ದವರನ್ನು ಕಲಿಯಲು ಹುರಿದುಂಬಿಸಲು “ಜಾ ಶಿಕ್ಷಣ ಮಿಳವಾ!” (“ಹೋಗು, ಕಲಿಕೆಯನ್ನು ಪಡೆ”) ಎಂದು ಕರೆಯೀಯುವ ಅವರ ಕವಿತೆಯು ವಿಶ್ರುತವಾಯಿತು. “ಮಹಿಳಾ ಸೇವಾ ಮಂಡಲ” ಎಂಬ, ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಅರಿವನ್ನು ಅರಳಿಸುವ ಕೂಟವನ್ನು ಹುಟ್ಟುಹಾಕಿದರು. ಜಾತಿ-ಮತ ಮತ್ಯಾವ ಭೇದವೂ ಇಲ್ಲದೆ ಸ್ತ್ರೀಯರು ಒಟ್ಟಾಗಿ ಕೂಡುವುದನ್ನು ಉತ್ತೇಜಿಸಿದರು. ಬಾಲ್ಯವಿವಾಹ ನಿವಾರಣೆಗೂ, ವಿಧವಾ ವಿವಾಹ ಪ್ರವರ್ತನೆಗೂ ಶ್ರಮಿಸಿದರು.  

      ಸಾವಿತ್ರಿಗೆ ಸಾವೆಲ್ಲಿಯದು? ಶೋಷಿತರಿಗೆ, ಅದರಲ್ಲೂ ಹೆಣ್ಣು ಮಕ್ಕಳಿಗೆ ಆದರ್ಶವಾಗಿ ಅವರು ’ಚಿರಂಜೀವಿ’ಯಾಗಿಯೇ ರಾಜಿಸುತ್ತಿದ್ದಾರೆ. ಅವರ ಗೌರವಾರ್ಥ, ಪುಣೆ ವಿಶ್ವವಿದ್ಯಾಲಯದ ಹೆಸರನ್ನು “ಸಾವಿತ್ರಿಬಾಯಿ ಫುಲೇ ಪುಣೆ ವಿಶ್ವವಿದ್ಯಾಲಯ” ಎಂದು ೨೦೧೫ರಲ್ಲಿ ವಿಸ್ತರಿಸಲಾಯಿತು. ಈಚೆಗೆ ಅಲ್ಲಿ ಅವರ ಸುಮಾರು ೧೨ ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ಪುಲೇ ದಂಪತಿಯ ಹೆಸರಿನಲ್ಲಿ ಸಂಗ್ರಹಾಲಯ-ಸಭಾಂಗಣ ಸೇರಿರುವ ಸ್ಮಾರಕವೊಂದನ್ನು ಪುಣೆಯಲ್ಲಿ ಸ್ಥಾಪಿಸಲಾಯಿತು. ಸಾವಿತ್ರಿಬಾಯಿಯವರ ಹುಟ್ಟುಹಬ್ಬವನ್ನು ಮಹಾರಾಷ್ಟ್ರದಲ್ಲಿ, ವಿಶೇಷವಾಗಿ ಹುಡುಗಿಯರ ಶಾಲೆಗಳಲ್ಲಿ “ಬಾಲಿಕಾ ದಿನ” ಎಂದು ಆಚರಿಸಲಾಗುತ್ತದೆ. “ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೇ” ಮತ್ತು “ಸಾವಿತ್ರಿ ಜ್ಯೋತಿ” ಎಂಬ ಅವರ ಜೀವನಾಧಾರಿತ ಎರಡು ಧಾರಾವಾಹಿಗಳು TVಯಲ್ಲಿ ಪ್ರಸಾರವಾಗಿವೆ. ಅವರ ಜೀವನಚರಿತ್ರೆಯು ಕನ್ನಡದಲ್ಲೂ ಚಲನಚಿತ್ರವೊಂದರ ರೂಪದಲ್ಲಿ ೨೦೧೮ರಲ್ಲಿ ತೆರೆಕಂಡಿತು.

      ನವ್ಯ ವಿದ್ಯಾಯುಗಕ್ಕೆ ’ಉದ್ಘಾಟನ ಜ್ಯೋತಿ’ ಹಚ್ಚಿದ, “ಸಾವಿತ್ರಿಬಾಯಿಯವರ ಬದುಕೇ ಒಂದು ಮಹಾಪಾಠ, ಅವರೇ ಒಂದು ವಿಶ್ವವಿದ್ಯಾಲಯ”. ಆ ’ಪರಮಗುರು’ವಿಗೆ ಇದೋ ಶರಣು! ಅಬಲೆಯರು ಸಬಲೆಯರಾಗುವಂತೆ ವಿಪುಲವಾಗಿ ಬಲದುಂಬಿ, ಅನಿಷ್ಟ ಸಾಮಾಜಿಕ ಪದ್ಧತಿಗಳಿಗೆ ಸೆಡ್ಡು ಹೊಡೆದು, ಕಲಿಕೆಯ ಮತ್ತು ಸಮಾಜದ ತಳಮಟ್ಟದಲ್ಲಿ ಆ ಕಾಲಮಾನದಲ್ಲೇ ’ಸುಂಟರಗಾಳಿಯನ್ನುಂಟಾಗಿಸಿದ’ ಆ “ಹೆಣ್ಣುಗಲಿ”ಗೆ (ಅಂದ ಹಾಗೆ, ಝಾನ್ಸಿ ಲಕ್ಷ್ಮಿಬಾಯಿ, ಸಾವಿತ್ರಿಬಾಯಿಯವರಿಗಿಂತ ಮೂರೇ ವರ್ಷ ಹಿರಿಯರು ಮತ್ತು ಮೂಲತಃ ಮಹಾರಾಷ್ಟ್ರದವರೇ), “ದಿಕ್ಕೆಟ್ಟವರಿಗೆ ದಿಕ್ಕು ಕೊಟ್ಟ ದಿಗ್ಗಜೆಗೆ”, ಮಹಾಬಲ ಪ್ರಫುಲ್ಲ ಪುಲೇ ದಂಪತಿಗೆ ಇದೋ ಶರಣು! 

ಅಡಿನುಡಿ

೧) “ಸಾವಿತ್ರೀ” ಎಂದರೆ “ಸೂರ್ಯಕಿರಣ”, “ಬೆಳಕಿನ ಮಿನುಗು”. ಸುತ್ತಲಿಗೆಲ್ಲ ಬೆಳಕನ್ನೀಯುತ್ತ ತಾವೇ ’ಇಮ್ಮಡಿ ಬೆಳಕಾದ’ “ಸಾವಿತ್ರಿ-ಜ್ಯೋತಿ” ಜೊತೆಯು ಈ ಅರ್ಥದಲ್ಲಿ ಇನ್ನಷ್ಟು ಕಂಗೊಳಿಸುತ್ತದೆ.

೨) “ಮಕ್ಕಳ ಮೇಲೆ ತಾಯಂದಿರ ಪ್ರಭಾವ ಬಹುಮುಖ್ಯ ಹಾಗೂ ಹಿತಕರ. ಆದ ಕಾರಣ, ಮೊದಲು ಸ್ತ್ರೀಯರ ವಿದ್ಯಾಭ್ಯಾಸಕ್ಕೆ ಗಮನವಿತ್ತರೆ, ದೇಶದ ಕ್ಷೇಮಾಭ್ಯುದಯಕ್ಕೂ ಪ್ರೋತ್ಸಾಹವಿತ್ತಂತಾಗುತ್ತದೆ.  ಈ ದೃಷ್ಟಿಯಿಂದಲೇ ನಾನು ಬಾಲಿಕಾ ಪಾಠಶಾಲೆಗಳನ್ನು ತೆರೆದದ್ದು” –ಜ್ಯೋತಿಬಾ ಫುಲೇ. 

Leave a Reply

Your email address will not be published. Required fields are marked *