ರಾಹುಲ್ ಗಾಂಧಿ ಅನರ್ಹತೆ-ಬಿಜೆಪಿಯ ಸೇಡಿನ ಕ್ರಮ

ತುಮಕೂರು:ಕಾಂಗ್ರೆಸ್ ಮುಖಂಡರ ರಾಹುಲ್‍ಗಾಂಧಿ ಅವರನ್ನು ಸಂಸತ್ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಿರುವ ಸರಕಾರದ ಕ್ರಮ ಅಸಂವಿಧಾನಿಕವಾಗಿದ್ದು,ವಿರೋಧಪಕ್ಷದ ನಾಯಕರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಈ ರೀತಿಯ ಸೇಡಿನ ಕ್ರಮವನ್ನು ಬಿಜೆಪಿ ಅನುಸರಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2018ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮಾಡಿದ ಭಾಷಣದ ಸಂಬಂಧ ಹೂಡಲಾಗಿದ್ದ ಪ್ರಕರಣವನ್ನು ಮುಂದಿಟ್ಟುಕೊಂಡು,ಚುನಾವಣಾ ಸಮಯದಲ್ಲಿ ಅವರನ್ನು ಜೈಲಿಗೆ ಕಳುಹಿಸುವ ಹುನ್ನಾರವಾಗಿ ಬಿಜೆಪಿ ಮಾಡಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಟೀಕೆಗಳು ಒಳ್ಳೆಯ ಲಕ್ಷಣ.ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ರಾಜೀವ್‍ಗಾಂಧಿ ಅವರ ಮೇಲೆ ಇದೇ ಬಿಜೆಪಿ ಪಕ್ಷದವರು ಗಲಿಗಲಿಮೇ ಷೋರ್ ಐ ರಾಜೀವ್‍ಗಾಂಧಿ ಚೋರ್ ಐ ಎಂಬ ಘೋಷಣೆ ಮುಳುಗಿಸಿ ದಾಗ,ವಿರೋಧಪಕ್ಷಗಳ ಟೀಕೆಯನ್ನು ರಾಜೀವ್‍ಗಾಂಧಿ ಸ್ವಾಗತಿಸಿದ್ದರು.ಆದರೆ ಮೋದಿ ಮತ್ತು ಅದಾನಿ ಕುರಿತಾಗಿ ಕಾಂಗ್ರೆಸ್ ಮುಖಂಡರಾದ ರಾಹುಲ್‍ಗಾಂಧಿ ಕೇಳುತ್ತಿರುವ ದಿನಕ್ಕೊಂದು ಪ್ರಶ್ನೆಗೆ ಉತ್ತರಿಸಲಾಗದೆ ಈ ರೀತಿಯ ದ್ವೇಷದ ಕ್ರಮ ಕೈಗೊಂಡಿರುವುದು ಸರಿಯಲ್ಲ. ಇದರ ವಿರುದ್ದ ಸಂಸತ್ತಿನ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ನಿರಂತರ ಹೋರಾಟ ನಡೆಸಲಿದೆ ಎಂದು ಚಂದ್ರಶೇಖರಗೌಡ ನುಡಿದರು.

ಕಾಂಗ್ರೆಸ್ ಪಕ್ಷಕ್ಕೆ ಸೆರೆಮನೆ ಹೊಸದಲ್ಲ. ಏಕೆಂದರೆ ದೇಶದ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ಕಾಂಗ್ರೆಸ್ ನಾಯಕರು ಸೆರೆಮನೆ ವಾಸ ಅನುಭವಿಸಿದ್ದಾರೆ. ಕಾಂಗ್ರೆಸ್‍ನವರಿಗೆ ಸೆರೆಮನೆಯೇ ಅರಮನೆಯಿದ್ದಂತೆ,ಅಮಿತ್‍ಷಾ ಮತ್ತು ನರೇಂದ್ರಮೋದಿ ಅವರು ಚುನಾವಣೆ ಹೊಸ್ತಿಲಿನಲ್ಲಿ ಇ ರೀತಿಯ ಕ್ರಮ ಕೈಗೊಳ್ಳುವ ಮೂಲಕ ಪಕ್ಷದ ನೈತಿಕ ಸ್ಥೈರ್ಯ ಕುಗ್ಗಿಸಲು ಹೊರಟಿದ್ದಾರೆ.ಇದನ್ನು ಪಕ್ಷ ಸವಾಲಾಗಿ ಸ್ವೀಕರಿಸಲಿದೆ ಎಂದು ಚಂದ್ರಶೇಖರಗೌಡ ನುಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ ಮಾತನಾಡಿ,ಬಿಜೆಪಿ ಇಬ್ಬರು ಶಾಸಕರಾದ ಎಂ.ಪಿ.ಕುಮಾರಸ್ವಾಮಿ ಮತ್ತು ನೆಹರು ಒಲೇಕಾರ್ ಅವರಿಗೆ ನ್ಯಾಯಾಲಯ ತಲಾ ನಾಲ್ಕು ಮತ್ತು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಆದೆರ ಇದುವರೆಗೂ ಸ್ವೀಕರ್ ಅವರಾಗಲಿ,ಪಕ್ಷದ ಅಧ್ಯಕ್ಷರಾಗಲಿ ಅವರ ಶಾಸಕತ್ವ ವಜಾ ಮಾಡಿಲ್ಲ.ಆದರೆ ನ್ಯಾಯಾಲಯದ ತೀರ್ಪು ಬಂದ 24 ಗಂಟೆಯೊಳಗೆ

ರಾಹುಲ್‍ಗಾಂಧಿಯವರ ಸಂಸತ್ ಸದಸ್ಯತ್ವ ರದ್ದು ಪಡಿಸಿರುವುದು ಅತುರದ ಮತ್ತು ಸೇಡಿನ ಕ್ರಮವಾಗಿದೆ.ತಾತ್ವಿಕವಾಗಿ ಅವರನ್ನು ಎದುರಿಸಲಾಗದೆ ಹತಾಶೆಯ ಕ್ರಮವಾಗಿದೆ.ಪ್ರಸ್ತುತ ಬಿಜೆಪಿಯಲ್ಲಿರುವ ಮುದ್ದಹನುಮೇ ಗೌಡರು ಸೋತು ರಾಜಕೀಯದಿಂದ ಮೂಲೆಗುಂಪಾಗಿದ್ದಾಗ,ಅವರನ್ನುಗುರುತಿಸಿ ಕರೆತಂದು ಪಕ್ಷದ ನಾಯಕರ ವಿರೋಧದ ನಡುವೆಯೂ ಅವರನ್ನು ಸಂಸತ್ ಸದಸ್ಯರನ್ನಾಗಿ ಮಾಡಿದವರು ಡಾ.ಜಿ.ಪರಮೇಶ್ವರ್ ಮತ್ತು ನಮ್ಮ ನಾಯಕ ರಾಹುಲ್‍ಗಾಂಧಿ, ಅಂತಹವರಿಗೆ ಮೆಚ್ಯೂರಿಟಿ ಇಲ್ಲ ಎಂದು ಹೇಳಿಕೆ ನೀಡಿರುವುದು ಮುದ್ದಹನುಮೇಗೌಡರಿಗೆ ಶೋಭೆ ತರುವಂತಹದ್ದಲ್ಲ ಎಂದರು.

ಡಿಸಿಸಿ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಕೆಂಚಮಾರಯ್ಯ ಮಾತನಾಡಿ, ಇಂದು ದೇಶದಲ್ಲಿ ಆಘೋಷಿತ ತುರ್ತು ಪರಿಸ್ಥಿತಿ ಇದೆಏ ಎಂಬುದಕ್ಕೆ ರಾಹುಲ್ ಗಾಂಧಿ ಅವರ ಸದಸ್ಯತ್ವ ರದ್ದು ಪ್ರಕರಣವೇ ಸಾಕ್ಷಿ.ಅರ್ಥಿಕವಾಗಿ ದಿವಾಳಿ ಅಂಚಿನಲ್ಲಿರುವ ಅದಾನಿ ಅವರಿಗೆ ಹೂಡಿಕೆ ಮಾಡಲು 20 ಸಾವಿರ ಕೋಟಿ ಎಲ್ಲಿಂದು ಬಂತು ಎಂಬ ರಾಹುಲ್‍ಗಾಂಧಿ ಅವರ ಪ್ರಶ್ನೆಗೆ ಹೆದರಿದ ಪ್ರಧಾನಿ ಮತ್ತು ಗೃಹಸಚಿವರು ಇಂತಹ ನೀಚಮಟ್ಟಕ್ಕೆ ಇಳಿದಿದ್ದಾರೆ.ಒಳಮೀಸಲಾತಿಗೆ ಸಂಬಂಧಿಸಿದಂತೆ ಡಾ.ಜಿ.ಪರಮೇಶ್ವರ್ ನಿರಂತರವಾಗಿ ಸಹಕಾರ ನೀಡಿದ್ದಾರೆ. ಚಿತ್ರದುರ್ಗದಲ್ಲಿ ನಡೆದ ಐಕ್ಯತಾ ಸಮಾವೇಶದಲ್ಲಿ ಒಳ್ಳಮೀಸಲಾತಿ ಜಾರಿಗೊಳಿಸುವ ನಿರ್ಧಾರ ಪ್ರಕಟಿಸಿದ್ದರಿಂದ ತರಾತುರಿಯಲ್ಲಿ ಜಾರಿಗೆ ತರಲು ಹೋಗಿ ಬೊಮ್ಮಾಯಿ ಸರಕಾರ ಎಡವಟ್ಟು ಮಾಡಿಕೊಂಡಿದೆ. ಹಾಗಾಗಿಯೇ ಲಂಬಾಣಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಇದೊಂದು ಚುನಾವಣಾ ಗಿಮಿಕ್ ಎಂದರು.

ಹಿರಿಯ ಮುಖಂಡ ರೆಡ್ಡಿ ಚಿನ್ನಯಲ್ಲಪ್ಪ ಮಾತನಾಡಿ, ಒಂದು ಸಣ್ಣ ಸಮುದಾಯವನ್ನು ಗುರುತಿಸಿ ಅಧಿಕಾರ ನೀಡಿದ್ದರೆ ಅದು ಕಾಂಗ್ರೆಸ್ ಮಾತ್ರ. ಜಿಲ್ಲೆಯಲ್ಲಿ 10 ಸಾವಿರ ಜನಸಂಖ್ಯೆ ಇಲ್ಲದ ನನ್ನನ್ನು ಟೂಡಾ ಅಧ್ಯಕ್ಷನನ್ನಾಗಿ ಮಾಡಿದ್ದರು. ಪಕ್ಷದಲ್ಲಿಯೂ ಅಧಿಕಾರ ನೀಡಿದೆ.2017ರಲ್ಲಿ ಪ್ರಧಾನಿ ನರೇಂದ್ರಮೋದಿ ಮದ್ಯಪ್ರಾಚ್ಯ ದೇಶಗಳಿಗೆ ಹೋಗಿ ನಾನು ಭಾರತದಲ್ಲಿ ಹುಟ್ಟಭಾರತದಿತ್ತು ಎಂದು ಹೇಳಿಕೆ ಕೊಟ್ಟಾಗ ಏಕೆ ಅವರ ವಿರುದ್ದ ಕ್ರಮ ಕೈಗೊಳ್ಳಲಿಲ್ಲ.ವಿರೋಧಪಕ್ಷಗಳ ಬಾಯಿ ಮುಚ್ಚಿಸಲು ಮಾಡುತ್ತಿರುವ ಈ ಕೆಲಸ ಪ್ರಜಾಪ್ರಭುತ್ವ ವಿರೋಧಿ ಎಂದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆತೀಕ್ ಅಹಮದ್ ಮಾತನಾಡಿ, ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಪ್ರವರ್ಗ 2 ಎ ನಲ್ಲಿ ಮುಸ್ಲಿಂರಿಗೆ ನೀಡುತ್ತಿದ್ದ ಮೀಸಲಾತಿಯನ್ನು ರದ್ದು ಪಡಿಸಿರುವುದು ಖಂಡನೀಯ. ಶೀಘ್ರದಲ್ಲಿಯೇ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದರು.

ಮಾಜಿ ಟೂಡಾ ಅಧ್ಯಕ್ಷ ಸಿದ್ದಲಿಂಗೇಗೌಡ ಮಾತನಾಡಿ,ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ.ಕೆ.ಶಿ ಸಹೋದರರು ಮತ್ತು ಡಾ.ಜಿ.ಪರಮೇಶ್ವರ್ ಅವರ ಬಗ್ಗೆ ಮುದ್ದಹನುಮೇಗೌಡ ಅವರ ಹೇಳಿಕೆ ಖಂಡನೀಯ.ರಾಜಕೀಯ ಅಧಿಕಾರವಿಲ್ಲದೆ ತೋಟದ ಮನೆಯಲ್ಲಿ ಕುಳಿತಿದ್ದ ಮುದ್ದಹನುಮೇಗೌಡರನ್ನು ಪಕ್ಷಕ್ಕೆ ಕರೆತಂದು ಸಂಸದರನ್ನಾಗಿ ಮಾಡಿದ್ದು ಕಾಂಗ್ರೆಸ್, ಇಂತಹ ನಾಯಕರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡಿರುವುದು ಖಂಡನೀಯ. ಇವರ ಹೇಳಿಕೆ ಹೀಗೆಯೇ ಮುಂದುವರೆದರೆ ಎಸ್.ಪಿ.ಮುದ್ದ ಹನುಮೇಗೌಡರ ವಿರುದ್ದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾರಾಯಣಸ್ವಾಮಿ,ನರಸಿಂಹಯ್ಯ,ಮಂಜುನಾಥ್,ಅಂಬರೀಷ್,ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ನರಸಿಂಹಮೂರ್ತಿ,ಸಂಜೀವಕುಮಾರ್,ಶಿವಾಜಿ,ವಾಲೆಚಂದ್ರಯ್ಯ,ಟಿ.ಜಿ.ಲಿಂಗರಾಜು,ಪಟ್ಟರಾಜು,ಸುಜಾತ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *