ಜನರಿಗೆ ತೊಂದರೆಯಾಗದ ಹಾಗೆ ಕುಡಿಯುವ ನೀರನ್ನು ಪೂರೈಸಿ-ಸಚಿವ ಡಾ: ಜಿ. ಪರಮೇಶ್ವರ್

ತುಮಕೂರು : ಜಿಲ್ಲೆಯಾದ್ಯಂತ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆಯಾಗಬೇಕು. ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಅಧಿಕಾರಿಗಳು ಸಮರೋಪಾದಿಯಲ್ಲಿ ಟ್ಯಾಂಕರ್, ಕೊಳವೆ ಬಾವಿ ಮತ್ತು ಇತರೆ ಪರ್ಯಾಯ ನೀರಿನ ವ್ಯವಸ್ಥೆಯನ್ನು ಕೈಗೊಂಡು ಕುಡಿಯುವ ನೀರನ್ನು ಪೂರೈಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ: ಜಿ. ಪರಮೇಶ್ವರ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸಮರ್ಪಕ ಕುಡಿಯುವ ನೀರಿನ ಪೂರೈಕೆ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈದಾಳ, ಹೆಬ್ಬಾಕ, ಅಮಾನಿಕೆರೆ, ಗಂಗಸಂದ್ರ, ಮರಳೂರು ಕೆರೆಗಳಿಂದ ಶುದ್ಧ ಕುಡಿಯುವ ನೀರು ಪೂರೈಸುವ ಸಂಬಂಧ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆಯ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಹೇಮಾವತಿ ಮುಖ್ಯ ಶಾಖಾ ನಾಲೆ 96, 97, 98 ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ನಾಲೆ ಕುಸಿದು ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದನ್ನು ಈ ತಿಂಗಳ 23ರೊಳಗಾಗಿ ಕಡ್ಡಾಯವಾಗಿ ಪೂರ್ಣಗೊಳಿಸಿ ಜೂನ್ 25 ರೊಳಗಾಗಿ ಹೇಮಾವತಿ ನೀರನ್ನು ಜಿಲ್ಲೆಗೆ ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತುಮಕೂರು ನಗರದಲ್ಲಿ ಅಂದಾಜು 4ಲಕ್ಷ ಜನಸಂಖ್ಯೆ ಇದ್ದು, ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಿ ನೀರು ಪೂರೈಸಬೇಕಾಗುತ್ತದೆ. ಈಗ ಪ್ರತಿ 5 ದಿನಕ್ಕೊಮ್ಮೆ ನೀರು ಪೂರೈಸುತ್ತಿರುವುದಾಗಿ ತಿಳಿಸಿದ್ದೀರಿ. ಹೀಗಾದಲ್ಲಿ ಜನ ಹೇಗೆ ಬದುಕಬೇಕು. ವಾಸ್ತವ ಪರಿಸ್ಥಿತಿ ಅರಿತಿದ್ದೀರಾ.? ಬೇಸಿಗೆಯಲ್ಲಿ ಜನರಿಗೆ ವ್ಯವಸ್ಥಿತವಾಗಿ ನೀರು ಪೂರೈಕೆ ಮಾಡುವ ಸಂಬಂಧ ಈ ಹಿಂದೆಯೇ ಏಕೆ ಯೋಜನೆ ರೂಪಿಸಿಲ್ಲವೆಂದು ಸಚಿವರು ಅಧಿಕಾರಿಗಳನ್ನು ಪ್ರಶ್ನಿಸಿದರು.

ತುಮಕೂರು ಜಿಲ್ಲೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇನ್ನು 10 ವರ್ಷದಲ್ಲಿ ತುಮಕೂರು ಜಿಲ್ಲೆ ಊಹಿಸಲಸಾಧ್ಯ ವೇಗದಲ್ಲಿ ಬೆಳೆಯಲಿದೆ. ಮೆಟ್ರೋ ರೈಲು ಸೇರಿದಂತೆ ಬೆಂಗಳೂರಿನಿಂದ ಹಲವು ಯೋಜನೆಗಳು ಮುಂದಿನ ದಿನಗಳಲ್ಲಿ ತುಮಕೂರಿಗೆ ವರ್ಗಾಯಿಸಲ್ಪಟ್ಟಲ್ಲಿ ತುಮಕೂರು ಜಿಲ್ಲೆ ಮತ್ತಷ್ಟು ವೇಗವಾಗಿ ಬೆಳೆಯುತ್ತದೆ. ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನೀರಿನ ಪರ್ಯಾಯ ವ್ಯವಸ್ಥೆಗಳು ಕಾಲಕಾಲಕ್ಕೆ ತಕ್ಕಂತೆ ಆಗಬೇಕು ಎಂದು ಸಚಿವರು ಸೂಚಿಸಿದರು.

ಅಧಿಕಾರಿಗಳ ವಿವರಣೆ : ತುಮಕೂರು ನಗರದ 35 ವಾರ್ಡ್‍ಗಳಿಗೆ ಒಟ್ಟು 70ಸಾವಿರ ನೀರಿನ ಗೃಹ ಸಂಪರ್ಕಗಳಿದ್ದು, ಬುಗುಡನಹಳ್ಳಿ ಕೆರೆ ನಗರಕ್ಕೆ ನೀರಿನ ಮೂಲವಾಗಿರುತ್ತದೆ. ಈ ಕೆರೆಯ ಸಾಮಥ್ರ್ಯ 300 mcft ಇದ್ದು, ಪ್ರಸ್ತುತ ಕೆರೆಯಲ್ಲಿರುವ ನೀರಿನ ಪ್ರಮಾಣ 32 mcft , ನಗರದ ಪ್ರತಿದಿನದ ಬೇಡಿಕೆ 54 mld (1.8 mcft ). ಪ್ರಸ್ತುತ ಸರಬರಾಜು ಮಾಡುತ್ತಿರುವ ಹೇಮಾವತಿ ನೀರಿನ ಪ್ರಮಾಣ 38 mld(1.3 mcft) ಇದ್ದು, 2022-23ನೇ ಸಾಲಿನಲ್ಲಿ ಹೇಮಾವತಿ ನಾಲೆಯಿಂದ ಬುಗುಡನಹಳ್ಳಿ ಕೆರೆಗೆ ಒಟ್ಟು 322.75 ಎಂಸಿಎಫ್‍ಟಿ ನೀರನ್ನು ಹರಿಸಲಾಗಿದೆ. ಕಳೆದ ವರ್ಷ ಉತ್ತಮ ಮಳೆಯಾದ ಕಾರಣ ಜುಲೈ ಅಂತ್ಯದವರೆಗೂ ಕೆರೆಯಲ್ಲಿ ನೀರು ಸಂಗ್ರಹವಾಗಿದ್ದು, ಜುಲೈ ಕೊನೆಯ ವಾರದಲ್ಲಿ ಕೆರೆಗೆ ನೀರು ಹರಿಸಲು ಪ್ರಾರಂಭಿಸಲಾಗಿತ್ತು. ಹಾಗೂ ಡಿಸೆಂಬರ್ ಕೊನೆಯ ವಾರದಲ್ಲಿ ನಾಲಾ ನೀರು ಸರಬರಾಜು ನಿಲ್ಲಿಸಲಾಯಿತು. ಒಟ್ಟು ಪಾಲಿಕೆ ವ್ಯಾಪ್ತಿಯ ಕೊಳವೆ ಬಾವಿಗಳ ಸಂಖ್ಯೆ 700 ಇದ್ದು, ಕೊಳವೆ ಬಾವಿಗಳಿಂದ ಸರಬರಾಜಾಗುವ ನೀರಿನ ಪ್ರಮಾಣ 05 mಟಜ ಇದ್ದು, ನಗರದಲ್ಲಿ ನೀರಿನ ಅಭಾವ ಇರುವ ಕಡೆ ಪ್ರಸ್ತುತ ಪಾಲಿಕೆ ಒಡೆತನದ 6 ಟ್ಯಾಂಕರ್‍ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಸಿಇಓ ಡಾ: ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *