ಅರ್ಥಶಾಸ್ತ್ರ ಉಪನ್ಯಾಸಕರು ಬದಲಾವಣೆಯನ್ನು ಒಪ್ಪಬೇಕು- ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ

ತುಮಕೂರು:ಶಿಕ್ಷಣವೆಂಬದು ನಿರಂತರ ಬದಲಾವಣೆಯನ್ನು ಕಾಣುತ್ತಿದೆ.ಬದಲಾವಣೆಗೆ ತಕ್ಕಂತೆ ಪಠ್ಯಕ್ರಮ, ಬೋಧನಾ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಅರ್ಥಶಾಸ್ತ್ರ ವಿಷಯವನ್ನು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಉಪಯುಕ್ತವನ್ನಾಗಿಸಲು ಅರ್ಥಶಾಸ್ತ್ರ ಉಪನ್ಯಾಸಕರು ಬದಲಾವಣೆಯನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಅನಿವಾರ್ಯತೆ ಇದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ ತಿಳಿಸಿದ್ದಾರೆ.

ನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮದರ್ಜೆ ಕಾಲೇಜು,ಅರ್ಥಶಾಸ್ತ್ರ ವಿಭಾಗ ತುಮಕೂರು, ತುಮಕೂರು ವಿವಿ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉನ್ನತ ಶಿಕ್ಷಣದಲ್ಲಿ ನಾವಿನ್ಯತೆ(ಇನೋವೇಷನ್ ಇನ್ ಹೈಯರ್ ಏಜುಕೇಷನ್) ಎಂಬ ವಿಷಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡುತಿದ್ದ ಅವರು, ಖಾಸಗಿ ಶಿಕ್ಷಣ ಸಂಸ್ಥೆಗಳು ಒಳ್ಳೆಯ ಮೂಲಭೂತ ಸೌರ್ಕಯದ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಮಕ್ಕಳಿಗೆ ವಿಷಯವನ್ನು ಅರ್ಥಮಾಡಿಸುವ ರೀತಿಯಲ್ಲಿಯೇ ನಾವುಗಳು ಕೂಡ ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಮಕ್ಕಳ ಸ್ನೇಹಿ ಪಠ್ಯಕ್ರಮದ ಮೂಲಕ ಅವರನ್ನು ಪೈಪೋಟಿಯ ಜಗತ್ತಿನಲ್ಲಿ ಈಜುವಂತಹ ಶಿಕ್ಷಣವನ್ನು ನೀಡಬೇಕಾಗಿದೆ ಎಂದರು.

ಇತ್ತೀಚಿಗೆ ಅರ್ಥಶಾಸ್ತ್ರ ವಿಷಯಕ್ಕೆ ನೊಂದಣಿಯಾಗುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ.ಇದಕ್ಕೆ ಕಾರಣ ಹಲವಾರು. ವಿಜ್ಞಾನ ವಿಷಯಕ್ಕಿಂತಲೂ ಕಠಿಣ.ಅರ್ಥವಾಗಲ್ಲ ಎಂಬ ಮಾತುಗಳು ಸರ್ವೆ ಸಾಮಾನ್ಯವಾಗಿವೆ.ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಕಾರ್ಯಒತ್ತಡ ಇಲ್ಲದೆ ಎಕನಾಮಿಕ್ಸ್ ಭೋಧಿಸುವ ಶಿಕ್ಷಕರು ಕೆಲಸವಿಲ್ಲದೆ ಇರಬೇಕಾದ ಪರಿಸ್ಥಿತಿ ಎದುರಾದರೂ ಆಶ್ಚರ್ಯವಿಲ್ಲ. ಹಾಗಾಗಿ ಈಗಲೇ ನಾವು ಎಚ್ಚೆತ್ತುಕೊಂಡು, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ನಾವು ಸಹ ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬದುಕುಬಲ್ಲವು ಎಂಬ ಆತ್ಮಸ್ಥೈರ್ಯವನ್ನು ಹುಟ್ಟು ಹಾಕಬೇಕಿದೆ. ಹಾಗಾಗಿ ನಾವು ಕೂಡ ನಮ್ಮ ಬೋಧನ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು, ಪಿಪಿಟಿ, ಐಸಿಟಿ ಮೂಲಕ, ವಾಟ್ಸ್‍ಫ್ ಮೂಲಕ ಬೋಧನೆ ಮಾಡಿ,ನಾವು ಮಾಡಿದ ಪಾಠ ಮಕ್ಕಳಿಗೆ ಅರ್ಥವಾಗಿದೆಯೇ, ಇಲ್ಲವೇ ಎಂದು ಕ್ರಾಸ್‍ಚೆಕ್ ಮಾಡಿಕೊಳ್ಳುವ ಅಗತ್ಯವಿದೆ.ಮಕ್ಕಳು ಹಾಗೂ ಸಮಾಜದ ಅಗತ್ಯ ಅರಿತು,ಪಠ್ಯಕ್ರಮಗಳಲ್ಲಿ ಅಗತ್ಯ ಬದಲಾವಣೆ ಮಾಡಿಕೊಂಡು ಕೆಲಸ ಮಾಡಿದರೆ ಮಾತ್ರ ಉತ್ತಮ ಭವಿಷ್ಯ ನಮ್ಮದಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಅರ್ಥಶಾಸ್ತ್ರ ಉಪನ್ಯಾಸಕರು ಹೊಸತನವನ್ನು ಅಳವಡಿಸಿಕೊಳ್ಳಲು ಮುಂದಾಗಬೇಕಿದೆ ಎಂದು ಕುಲಪತಿಗಳಾದ ಪ್ರೊ.ಕೆ.ಶಿವಚಿತ್ತಪ್ಪ ತಿಳಿಸಿದರು.

ಉನ್ನತಶಿಕ್ಷಣದಲ್ಲಿ ನಾವಿನ್ಯತೆ ಎಂಬ ವಿಷಯ ಕುರಿತು ಮಾತನಾಡಿದ ಹಿರಿಯ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ.ಬಿ.ರವೀಂದ್ರಕುಮಾರ್,ಇಂದಿನ ವಿಷಯ ಅತ್ಯಂತ ಅರ್ಥಪೂರ್ಣವಾಗಿದೆ. ಹೊಸತನಗಳನ್ನು ಮೈಗೂಡಿಸಿಕೊಳ್ಳದಿದ್ದರೆ ವಿದ್ಯಾರ್ಥಿಗಳನ್ನು ತಲುಪುವುದು ಕಷ್ಟವಾಗಲಿದೆ.ಉನ್ನತ ಶಿಕ್ಷಣದಲ್ಲಿ ಹೊಸತನಗಳನ್ನು ತರುವ ಉದ್ದೇಶದಿಂದಲೇ ಸರಕಾರ 1968,1986 ಮತ್ತು 2020ರಲ್ಲಿ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ.20-20 ಎಂಬುದು ಮನರಂಜನೆಗಾಗಿ ಅಲ್ಲ.ಉನ್ನತ ಶಿಕ್ಷಣದ ಉನ್ನತ್ತೀಕರಣಕ್ಕೆ, ಹಾಗಾಗಿ ಪ್ರಾದ್ಯಾಪಕರು ಕೂಡ ಬದಲಾವಣೆಯ ವೇಗವನ್ನು ಅರಿತು,ಅದಕ್ಕೆ ಸಿದ್ದರಾಗಿ,ಬದ್ದರಾಗಿ ಕೆಲಸ ಮಾಡಬೇಕಾಗಿದೆ.ನಾವಿನ್ಯತೆ ಎಂಬುದು ತಳಮಟ್ಟದಿಂದಲೇ ಆರಂಭವಾದರೆ ಹೆಚ್ಚಿನ ಲಾಭವಾಗಲಿದೆ.ಹೆಚ್ಚುವರಿ ಪಠ್ಯಕ್ರಮ, ಮಾರುಕಟ್ಟೆಯ ಬೇಡಿಕೆ ಅರಿತು ಪಠ್ಯ ಸಿದ್ದಪಡಿಸಿ, ಹೊಸ ಪೀಳಿಗೆಯಲ್ಲಿ ಸುಸ್ತಿರತೆ ಮತ್ತು ಪರಿಪೂರ್ಣತೆಯನ್ನು ತರಬೇಕಿದೆ.ಜಾತಿಗಿಂತ ಪ್ರತಿಭೆಗೆ ಪ್ರೋತ್ಸಾಹ ನೀಡುವ, ಪೂರ್ವಾಗ್ರಹ ಪೀಡಿತರಾಗದೆ, ವಿದ್ಯಾರ್ಥಿಗಳಿಂದ ಮಾತ್ರ ವಿಧೆಯತೆ ಬಯಸದೆ,ನಾವು ಸಹ ವಿಧೇಯರಾಗಿ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳ ಬೇಕಿದೆ.2047ಕ್ಕೆ ಉತ್ತನ ಶಿಕ್ಷಣ ನೊಂದಣಿ ಸಂಖ್ಯೆಯನ್ನು ಕನಿಷ್ಠ ಶೇ60ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲರು ಹೆಚ್ಚಿನ ಶ್ರಮ ಹಾಕಬೇಕಾಗಿದೆ ಎಂದರು.

ಉನ್ನತ ಶಿಕ್ಷಣದಲ್ಲಿ ನಾವಿನ್ಯತೆ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ.ಜಿ.ತಿಪ್ಪೇಸ್ವಾಮಿ, ಉನ್ನತ ಶಿಕ್ಷಣದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಹೇಗೆ ತಮ್ಮ ಬೋಧನಾ ಕ್ರಮಗಳಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಮಕ್ಕಳಿಗೆ ವಿಷಯವನ್ನ ಹೇಗೆ ಅರ್ಥ ಮಾಡಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಈ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.ಇವೆಲ್ಲದರ ಒಟ್ಟಾರೆ ಸಾರಾಂಶ ಜನಸಾಮಾನ್ಯರ ಜೀವನ ಹಸನು ಮಾಡುವುದು, ಅವರ ಜೀವನ ಮಟ್ಟ ಸುಧಾರಿಸುವುದೇ ಆಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಟಿ.ಡಿ.ವಸಂತ ಮಾತನಾಡಿ,ಎಲ್ಲ ಕ್ಷೇತ್ರದಲ್ಲಿಯೂ ನಾವಿನ್ಯತೆ ಎಂಬುದು ಅಗತ್ಯ.ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಂಡರೆ ಮಾತ್ರ ಉಳಿಯಲು ಸಾಧ್ಯ. ಇದು ಎಲ್ಲಾ ವಿಷಯಗಳಿಗೂ ಅನ್ವಯಿಸುತ್ತದೆ.ಸಂಶೋಧನೆಗಳತ್ತ ಅಧ್ಯಾಪಕ ವೃಂದ ಗಮನಹರಿಸಬೇಕಾಗಿದೆ ಎಂದರು. ವೇದಿಕೆಯಲ್ಲಿ ತುಮಕೂರು ವಿವಿ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಜಿ.ತಿಪ್ಪೇಸ್ವಾಮಿ,ತುಮಕೂರು ವಿವಿ ಅರ್ಥಶಾಸ್ತ್ರ ಪರೀಕ್ಷಾ ಮಂಡಳಿ ಅಧ್ಯಕ್ಷರಾದ ಗೋವಿಂದರಾಜು ಎನ್., ಐಕ್ಯೂಎಸಿ ಸಂಚಾಲಕರಾದ ಹರಿದಾಸ್ ಎಸ್, ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಜಿ.ಕೆ.ನಾಗರಾಜು, ಜಿ.ಕೆ.ಶಿವಲಿಂಗಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *