ತುಮಕೂರು : ನಾನು ಕಾಂಗ್ರೆಸ್‍ನಿಂದ ಟಿಕೆಟ್ ಕೊಡಿ ಎಂದು ಇದುವರೆವಿಗೂ ಯಾವ ಕಾಂಗ್ರೆಸ್ ಮುಖಂಡರನ್ನು ಕೇಳಿಲ್ಲ, ಯಾರಿಗೆ ಟಿಕೆಟ್ ನೀಡಿದರೂ ಅವರ ಗೆಲುವಿಗೆ ಶ್ರಮಿಸುವುದಾಗಿ ಗುಬ್ಬಿಯ ಮಾಜಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ಅವರಿಂದು ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ಸೇರಿದ ನಂತರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಟಿಯಯಲ್ಲಿ ಮಾತನಾಡುತ್ತಿದ್ದರು.
ನನಗೆ ಟಿಕೆಟ್ ಕೊಡುತ್ತೇನೆ ಎಂದು ಯಾವ ನಾಯಕರು ಹೇಳಿಲ್ಲ, ಯಾವುದೇ ಬೇಡಿಕೆಯನ್ನು ಪಕ್ಷದ ಹಿರಿಯ ನಾಯಕರಲ್ಲಿ ಇಟ್ಟಿಲ್ಲ, ಡಿ.ಕೆ.ಶಿವಕುಮಾರ್ ಬಳಿಯೂ ಟಿಕೆಟ್ ಕೇಳಿಲ್ಲ, ಯಾರಿಗೆ ಟಿಕೆಟ್ ನೀಡಿದರೂ ಪ್ರಾಮಾಣಿಕವಾಗಿ ಕಾಂಗ್ರೆಸ್ ಗೆಲ್ಲಿಸಲು ಪ್ರಯತ್ನಿಸುತ್ತೇನೆ ಎಂದರು.
ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿದ ಜಿ.ಎಸ್.ಪ್ರಸನ್ನಕುಮಾರ್ ಮತ್ತು ಹೊನ್ನಗಿರಿಗೌಡ ಅವರನ್ನು ಹಿರಿಯರ ಸಮ್ಮುಖದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್‍ನ್ನು ಕ್ಷೇತ್ರದಲ್ಲಿ ಗೆಲ್ಲಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಕುಕ್ಕರ್ ಹಂಚುತ್ತಿರುವ ಪ್ರಶ್ನೆಗೆ ಉತ್ತರಿಸಿದ ಶಾಸಕರು ಹೊಸ ವರ್ಷಕ್ಕೆ ಹಂಚಿರುವುದು ನಿಜ ಎಂದರು, ಕಾಂಗ್ರೆಸ್‍ನವರೇ ನಿಮ್ಮನ್ನು ಸೋಲಿಸಲು ಹೊರಟಿದ್ದಾರೆ ಎಂಬ ಪತ್ರಕರ್ತರ ಮಾತಿಗೆ ಗರಂ ಆದ ಎಸ್.ಆರ್. ಶ್ರೀನಿವಾಸ್ ಅವರು, ನಾನು 4ಚುನಾವಣೆಗಳನ್ನು ಎದುರಿಸಿದ್ದೇನೆ ಯಾರೋ ಒಂದಿಬ್ಬರು ಸೋಲು-ಗೆಲುವು ನಿರ್ಧಾರ ಮಾಡುವುದಾಗಿದ್ದರೆ ಮತದಾರರು ಏಕೆ ಇರಬೇಕು, ನಮ್ಮ ಭವಿಷ್ಯ ಮತದಾರರರ ಮೇಲೆ ನಿಂತಿದೆ, ಯಾವ ವ್ಯಕ್ತಿಗಳಿಂದಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಸದಸ್ಯತ್ವ ಪತ್ರ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್‍ಗೌಡ ಅವರು ಗುಬ್ಬಿಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ರಣ ಕಲಿಗಳು ಬೇಕಿತ್ತು, ಅಂತಹ ರಣಕಲಿ ವಾಸಣ್ಣ ಇಂದು ಎಲ್ಲಾ ಅಸ್ತ್ರಗಳೊಂದಿಗೆ ಯುದ್ಧಕ್ಕೆ ನಿಲ್ಲಲಿದ್ದಾರೆ ಎಂದರು.
ಎಸ್.ಆರ್.ಶ್ರೀನಿವಾಸರಿಗೆ ಟಿಕೆಟ್ ಘೋಷಿಸಿದ ಚಂದ್ರಶೇಖರಗೌಡ: ಎಸ್.ಆರ್.ಶ್ರೀನಿವಾಸ್ ಅವರು ಪಕ್ಷದ ಅಭ್ಯರ್ಥಿಯಾಗಿದ್ದು, ಅವರು ನಮ್ಮ ಜಿಲ್ಲೆಯ ನಾಯಕರಾದ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಗೆದ್ದು ಬರಲಿದ್ದಾರೆ ಎಂದು ಹೈಕಮಾಂಡ್ ಅಭ್ಯರ್ಥಿ ಘೋಷಣೆಗೆ ಮುಂಚಿತವೇ ಘೋಷಿಸಿ ನಗೆ ಪಾಟಲಿಗೆ ಗುರಿಯಾದರು.
ಕೈ ಕೊಟ್ಟ ವಿದ್ಯುತ್ : ಎಸ್.ಆರ್.ಶ್ರೀನಿವಾಸ್ ಅವರು ಮಾತನಾಡಲು ಮೈಕ್ ತೆಗೆದುಕೊಂಡ ಕೂಡಲೇ ವಿದ್ಯುತ್ ಕೈ ಕೊಟ್ಟತು, ಎಸ್.ಆರ್.ಶ್ರೀನಿವಾಸರ ಧ್ವನಿ ಕ್ಷೀಣ ಧ್ವನಿಯಾಗಿದ್ದರಿಂದ ಅವರೇನು ಮಾತನಾಡುತ್ತಿದ್ದಾರೆ ಎಂಬುದು ಕೇಳಿಸುತ್ತಲೇ ಇರಲಿಲ್ಲ, ಪತ್ರಕರ್ತರು ಜೋರಾಗಿ ಮಾತನಾಡಿ ಎಂದರೂ ಅವರ ಧ್ವನಿ ಎತ್ತರಗೊಳ್ಳಲಿಲ್ಲ, ಅಷ್ಟರ ವೇಳೆಗೆ ವಿದ್ಯುತ್ ಬಂದಿತು.
ದಂಡನ್ನೇ ಕರೆ ತಂದಿದ್ದ ವಾಸಣ್ಣ : ಯುದ್ಧಕ್ಕೆ ಹೋಗುವಂತೆ ಸುಮಾರು 150ಕ್ಕೂ ಹೆಚ್ಚು ಜನರ ದಂಡನ್ನೇ ಕರೆ ತಂದಿದ್ದರು, ಇವರು ಆಗಾಗ್ಗೆ ಜಯಕಾರ, ಚಪ್ಪಾಳೆ, ಸಿಳ್ಳೆ, ಕೂಗಾಟ ಅಲ್ಲಿದ್ದ ಕಾಂಗ್ರೆಸ್‍ನ ನಾಯಕರು ಸೇರಿದಂತೆ ಹಲವರಿಗೆ ಕಿರಿಕಿರಿ, ಮುಜಗರವನ್ನುಂಟು ಮಾಡಿದರು, ಈ ಸಭೆಯಲ್ಲಿ ಹಲವರು ವಿವಿಧ ಪಕ್ಷಗಳನ್ನು ತೊರೆದು ವಾಸಣ್ಣನ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಪತ್ರಕಾಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ಗುಬ್ಬಿ ತಾಲ್ಲೂಕಿನ ಕಾಂಗ್ರೆಸ್ ಅಧ್ಯಕ್ಷ ಚಿಕ್ಕರಂಗಪ್ಪ, ಪಾವಗಡ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಉಪಸ್ಥಿತರಿದ್ದರು.