ತುಮಕೂರು:ಕೊಬ್ಬರಿಗೆ ಕ್ವಿಂಟಾಲ್‍ಗೆ 20 ಸಾವಿರ ಕನಿಷ್ಠ ಬೆಂಬಲ ಬೆಲೆ ನೀಡಬೇಕು,ರೈತರಿಗೆ ಕನಿಷ್ಠ 8 ಗಂಟೆಗಳ ಕಾಲ ತ್ರಿಪೇಸ್ ವಿದ್ಯುತ್ ಸರಬರಾಜು ಮಾಡಬೇಕು ಹಾಗೂ ಕೃಷಿ ಪೂರಕ ವಸ್ತುಗಳ ಬೆಲೆಗಳ ಹೆಚ್ಚಳವನ್ನು ಕಡಿತಗೊಳಿಸ ಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ತುಮಕೂರು ಜಿಲ್ಲಾ ಘಟಕದವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಅವರ ನೇತೃತ್ವದಲ್ಲಿ ನೂರಾರು ರೈತರು ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಡಿಸೀ ಕಚೇರಿ ಬಳಿ ಸಮಾವೇಶಗೊಂಡರು.ಈ ವೇಳೆ ಸರಕಾರ ಕೂಡಲೇ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 20 ಸಾವಿರ ರೂಗಳನ್ನು ನೀಡಬೇಕು,ರೈತರ ಪಂಪಸೆಟ್‍ಗಳಿಗೆ ದಿನದ 8 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ,ಇಂದು ಇಡೀ ರಾಜ್ಯದಲ್ಲಿ ಕೊಬ್ಬರಿ,ತೊಗರಿ, ಭತ್ತ,ಕಬ್ಬು,ಅಡಿಕೆ,ರಾಗಿ ಸೇರಿದಂತೆ ಕೃಷಿ ಉತ್ಪನ್ನಗಳ ಬೆಲೆ ಕುಸಿದಿದೆ.ಸರಕಾರವೇ ನಿಗದಿ ಪಡಿಸಿದ ಬೆಂಬಲ ಬೆಲೆಗಿಂತಲೂ ಅತಿ ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದರೂ ಸರಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ.ಕೃಷಿ ಉತ್ಪನ್ನಗಳ ಬೆಲೆಗಳು ಕುಸಿದಾಗ ನೆರವಿಗೆ ಬೇರಬೇಕಾಗಿದ್ದ ಅರ್ವತ ನಿಧಿ ಕೇವಲ ಹೆಸರಿಗೆ ಮಾತ್ರ ಇದೆ.ಆದರೆ 7ನೇ ವೇತನ ಆಯೋಗಕ್ಕಾಗಿ ಸರಕಾರಿ ನೌಕರರು ಒಂದು ದಿನ ಮುಷ್ಕರ ಮಾಡಿದ್ದಕ್ಕೆ ಸರಕಾರ ಅವರ ವೇತನವನ್ನು ಶೇ17ರಷ್ಟು ಹೆಚ್ಚಳ ಮಾಡಿದೆ.ಆದರೆ ರೈತರು ಸಹಾಯಧನ ಹೆಚ್ಚಳ ಕೇಳಿದರೆ ಬಜೆಟ್‍ಗೆ ಹೊರೆಯಾಗುತ್ತದೆ ಎಂಬ ನೆಪವನ್ನು ಸರಕಾರ ಹೇಳುತ್ತಿದೆ.ಸರಕಾರಿ ನೌಕರರಿಗಿಂತ ಹೆಚ್ಚು ನಷ್ಟದಲ್ಲಿ ರೈತರಿದ್ದಾರೆ. ಹಾಗಾಗಿ ಸರಕಾರ ರೈತರ ನೆರವಿಗೆ ಬರಬೇಕಾಗಿದೆ ಎಂದರು.
ರೈತರಲ್ಲಿ ಒಗ್ಗಟ್ಟಿನ ಕೊರತೆ ಮತ್ತು ಸ್ಪಷ್ಟ ರಾಜಕೀಯ ನಿಲುವು ಇಲ್ಲದಿರುವುದೇ ಈ ರೀತಿಯ ಸಂಕಷ್ಟಕ್ಕೆ ಸಿಲುಕಲು ಕಾರಣ.ಇದನ್ನು ಅರ್ಥ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು ಇನ್ನಿಲ್ಲದ ಬಣ್ಣದ ಮಾತುಗಳನ್ನಾಡಿ, ವಂಚಿಸುತ್ತಿವೆ.ಹಾಗಾಗಿ ರೈತರು ಚುನಾವಣಾ ಸಂದರ್ಭದಲ್ಲಿಯಾದರೂ ಒಂದು ಸ್ಪಷ್ಟ ನಿಲುವು ಕೈಗೊಂಡು, ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಬಡಗಲಪುರ ನಾಗೇಂದ್ರ ಕರೆ ನೀಡಿದರು.
ರೈತ ಸಂಘ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ರಾಜ್ಯದ 13ಜಿಲ್ಲೆಗಳಲ್ಲಿ ಕೊಬ್ಬರಿಯನ್ನು ಉತ್ಪಾಧಿಸಲಾಗುತ್ತದೆ. ಅದರಲ್ಲಿ ತುಮಕೂರು ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿದೆ.2022ರಲ್ಲಿ ಒಂದು ಕ್ವಿಂಟಾಲ್ ಕೊಬ್ಬರಿ ಬೆಲೆ 18 ಸಾವಿರ ರೂ ಇದ್ದು, ಪ್ರಸ್ತುತ ಅದು 8 ಸಾವಿರ ರೂಗಳಿಗೆ ಕುಸಿದಿದೆ.ಇದಕ್ಕೆ ಕೇಂದ್ರ ಸರಕಾರದ ಅಮದು ನೀತಿಯೇ ಕಾರಣ.ಚುನಾವಣಾ ದೃಷ್ಟಿಯಿಂದ ಅಮದು ಸುಂಕ ಕಡಿತಗೊಳಿಸಿದ ಕಾರಣ. ನೆರೆಯ ಮಲೆಷಿಯಾ, ಶ್ರೀಲಂಕಾ, ಇಂಡೋನೇಷ್ಯಾದಿಂದ ತೆಂಗಿನ ಉತ್ಪನ್ನಗಳ ರಫ್ತು ಹೆಚ್ಚಾಗಿ, ಭಾರತದ ತೆಂಗಿನ ಬೆಲೆ ಕುಸಿದಿದೆ. ಸರಕಾರ ಕೂಡಲೇ ಅಮುದು ಸುಂಕವನ್ನು ಹೆಚ್ಚಿಸಿ ರೈತರ ನೆರವಿಗೆ ಬರಬೇಕು. ಹಾಗೆಯೇ ಈ ವರ್ಷದ ಮುಂಗಾರಿನಲ್ಲಿ ಆದ ಅತಿ ಹೆಚ್ಚು ಮಳೆಯಿಂದ ಕರೆ ಕಟ್ಟೆಗಳು ತುಂಬಿದ್ದು, ಬೆಳೆ ಹಾನಿಯಾಗಿತ್ತು. ಆ ಬೆಳೆಯನ್ನು ಹಿಂಗಾರಿನಲ್ಲಿ ತೆಗೆಯಲು ರೈತರು ಪಂಪ್‍ಸೆಟ್‍ಗಳನ್ನು ಚಾಲು ಮಾಡಿದ್ದಾರೆ.ಆದರೆ ಬೆಸ್ಕಾಂ ರೈತರೊಂದಿಗೆ ಚಲ್ಲಾಟವಾಡುತ್ತಿದೆ.ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ.ದಿನದ ಕನಿಷ್ಠ 8 ಗಂಟೆ ಕಾಲ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ ಎಂದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನೂಲೆನೂರು ಶಂಕರಪ್ಪ,ಜಿಲ್ಲಾ ಪದಾಧಿಕಾರಿಗಳಾದ ಜಿ.ಸಿ.ಶಂಕರಪ್ಪ, ದೊಡ್ಡಮಾಳಯ್ಯ, ರವೀಶ್, ಯುವಘಟಕದ ಚಿರತೆ ಚಿಕ್ಕಣ್ಣ,ವಿವಿಧ ತಾಲೂಕುಗಳ ಪದಾಧಿಕಾರಿಗಳಾದ ಕೆ.ಎನ್.ವೆಂಕಟೇಗೌಡ, ಸಿ.ಜಿ.ಲೋಕೇಶ್, ಭಾಗ್ಯಮ್ಮ, ಚಿಕ್ಕಬೋರೇಗೌಡ, ರಂಗಸ್ವಾಮಯ್ಯ, ಕೃಷ್ಣಪ್ಪ, ಡಿ.ಕೆ.ರಾಜು, ಪೂಜಾರಪ್ಪ, ರಂಗಹನುಮಯ್ಯ, ಶಬ್ಬೀರ್ ಪಾಷ ಸೇರಿದಂತೆ ನೂರಾರು ಜನ ರೈತರು ಪಾಲ್ಗೊಂಡಿದ್ದರು.