ತುಮಕೂರು : ಹಾಲನೂರು ಲೇಪಾಕ್ಷಯ್ಯನವರು ಬಿಜೆಪಿ ತೊರೆದು ಶಾಸಕ ಡಿ.ಸಿ.ಗೌರಿಶಂಕರ್ ಮತ್ತು ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಸಮ್ಮುಖದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್.ಸಿ.ಆಂಜಿನಪ್ಪರವರಿಂದ ಪಕ್ಷದ ಬಾವುಟ ತೆಗೆದುಕೊಳ್ಳುವುದರ ಮೂಲಕ ಅಧಿಕೃತವಾಗಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.
ಅವರಿಂದು ತುಮಕೂರಿನ ಜೆಡಿಎಸ್ ಕಛೇರಿಯಲ್ಲಿ ಪಕ್ಷ ಸೇರ್ಪಡೆಗೊಂಡ ನಂತರ ಪತ್ರಕರ್ತರ ಜೊತೆ ಮಾತನಾಡಿ, ನಾನು 20 ವರ್ಷಗಳಿಂದ ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದೇನೆ, ಆದರೆ ಶಿಕ್ಷಕರ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ನನಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಜಿ.ಎಸ್.ಬಸವರಾಜು ಆವರುಗಳು ಟಿಕೆಟ್ ದೊರೆಯದಂತೆ ದ್ರೋಹ ಬಗೆದರು, ಚುನಾವಣೆಗೆ ನಾಮಪತ್ರ ಸಲ್ಲಿಸಬೇಕು ಎಂದು “ಬಿ”ಫಾರಂ ತೆಗೆದುಕೊಂಡಿದ್ದರೂ, ಯಡಿಯೂರಪ್ಪ ಮತ್ತು ಜಿ.ಎಸ್.ಬಸವರಾಜು ಅವರುಗಳು ನನಗೆ ಪಕ್ಷದಲ್ಲಿ ಸ್ಥಾನ ನೀಡುವುದಾಗಿ ಹೇಳಿ ಸೋತಿದ್ದ ನಾರಾಯಣಸ್ವಾಮಿಗೆ ವಿಧಾನ ಪರಿಷತ್ ಟಿಕೆಟ್ ನೀಡಿ ಮೋಸ ಮಾಡಿದರು ಎಂದು ದೂರಿದರು.
ಆಗ್ನೇಯ ಶಿಕ್ಷಕರ ಚುನಾವಣೆಯಲ್ಲಿ ಪಕ್ಷವನ್ನೇ ಕಟ್ಟದ ಚಿದಾನಂದರಂತವರಿಗೆ ಟಿಕೆಟ್ ನೀಡಿದರು, ಆಗ ನಾನು ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತೆ, ಇದರಿಂದ ನನ್ನನ್ನು ಪಕ್ಷದಿಂದ ಉಚ್ಛಾಟಿಸಲಾಯಿತು, ಆದರೆ ಈಗ ಚುನಾವಣೆ ಹತ್ತಿರ ಬಂದಾಗ ಹಾಲಿ ಶಾಸಕರು, ಬಿಜೆಪಿ ಮುಖಂಡರುಗಳಿಗೆ ನನ್ನ ಅವಶ್ಯಕತೆ ಇದೆ ಅನ್ನಿಸಿ ನನ್ನ ಬಳಿ ಬಂದಿದ್ದರು, ಆದರೆ ನಾನು ಪಕ್ಷದಲ್ಲಿ ಇರಲು ಒಪ್ಪಲಿಲ್ಲ ಎಂದರು. ನಾನು ಬಿಜೆಪಿ ಮುಖಂಡರ ವರ್ತನೆಗೆ ಬೇಸತ್ತು ಜೆಡಿಎಸ್ ಪಕ್ಷದ ತತ್ವ-ಸಿದ್ಧಾಂತಗಳನ್ನು ಒಪ್ಪಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.
ಬಿಜೆಪಿಯಿಂದ ನನಗೆ ಮೋಸವಾಗಿರುವುದರಿಂದ ಆ ಪಕ್ಷದಲ್ಲಿ ಇರಲು ನಾನು ಮತ್ತು ನನ್ನ ಬೆಂಬಲಿಗರ ಮನಸ್ಸು ಒಪ್ಪದ ಕಾರಣ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯಿಂದ ಪ್ರೇರಿತನಾಗಿ ನಾನು ಜೆಡಿಎಸ್ ಪಕ್ಷವನ್ನು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆದ ಪಂಚರತ್ನ ಯಾತ್ರೆ ಸಂದರ್ಭದಲ್ಲೇ ನಾನು ಪಕ್ಷದ ಶಾಲನ್ನು ಪಡೆಯುವ ಮೂಲಕ ಸೇರ್ಪಡೆಗೊಂಡಿದ್ದೆ, ಇಂದು ಪಕ್ಷದ ಕಚೇರಿಯಲ್ಲಿ ಸಾರ್ವಜನಿಕವಾಗಿ ನನ್ನ ಬೆಂಬಲಿಗರೊಂದಿಗೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.
ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ ಮಾತನಾಡಿ ಲೇಪಾಕ್ಷಯ್ಯನವರು ಪಕ್ಷದ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಅವರನ್ನು ಸಂತೋಷದಿಂದ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡಿರುವುದಾಗಿ ತಿಳಿಸದರು.
ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ ಹಾಲನೂರು ಲೇಪಾಕ್ಷಯ್ಯರವರು ವೀರಶೈವ-ಲಿಂಗಾಯಿತರ ಪ್ರಭಾವಿ ನಾಯಕರಾಗಿದ್ದು, ಅವರು ಜೆಡಿಎಸ್ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಬಲ ಬಂದಂತಾಗಿದೆ, ಸಧ್ಯದಲ್ಲೇ ಅವರನ್ನು ಜೆಡಿಎಸ್‍ನ ರಾಜ್ಯ ವಕ್ತರರನ್ನಾಗಿ ಮಾಡಲು ನಮ್ಮ ರಾಜ್ಯ ನಾಯಕರು ಒಪ್ಪಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಗೋವಿಂದರಾಜು, ಕಾರ್ಯಾಧ್ಯಕ್ಷರಾದ ಟಿ.ಆರ್.ನಾಗರಾಜು, ಜೆಡಿಎಸ್ ನಗರಾಧ್ಯಕ್ಷರಾದ ವಿಜಯಕುಮಾರ್ ಮುಂತಾದವರಿದ್ದರು.