ತುಮಕೂರು: ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಶ್ರೀ ಸಿದ್ಧಾರ್ಥ ವೈದ್ಯಕೀಯ ಮತ್ತು ಕಾಲೇಜಿನಲ್ಲಿ ಯಶಸ್ವಿಯಾಗಿ ಅಂಗಾಂಗ ಕಸಿ ಮಾಡಲಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳು, ಆಸ್ಪತ್ರೆಯ ನಿರ್ದೇಶಕರು ಮತ್ತು ಕರ್ನಾಟಕ ಸರ್ಕಾರದ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ಹರ್ಷ ವ್ಯಕ್ತಪಡಿಸಿದರು.
ನಗರದ ಅಗಳಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಆಯೋಜಿಸಿರುವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ವಿಜ್ಞಾನ ಬೆಳೆಯುತ್ತಿದ್ದಂತೆ ನೇತ್ರದಾನ, ದೇಹ ದಾನ, ಅಂಗಾಂಗ ದಾನಗಳೂ ತಮ್ಮ ಮಹತ್ವ ಹೆಚ್ಚಿಸಿಕೊಳ್ಳುತ್ತವೆ. ಜೀವ ಉಳಿಸುವುದಕ್ಕಿಂತ ದೊಡ್ಡ ದಾನ ಬೇರಿಲ್ಲ. ಗ್ರಾಮೀಣ ಜನರಿಗೆ ಅಂಗಾಂಗ ದಾನ ಮಾಡುವ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರೈತ ದಿವಂಗತ ಬಲರಾಮ್(47) ಅವರು ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರೀಯೆಗೊಂಡಿತು. ಈ ವಿಷಯವನ್ನು ತುಮಕೂರು ಜಿಲ್ಲಾ ಆಸ್ಪತ್ರೆ ಅಧಿಕಾರಿಗಳು ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯ ಸಹಾಯಕ ಕುಲಸಚಿವರಾದ ಡಾ. ಪವನ್ ಆರ್ ಅವರ ಗಮನಕ್ಕೆ ತಂದರು. ಆಗ ಮೆದುಳು ನಿಷ್ಕ್ರೀಯೆಗೊಂಡಿರುವ (ಬ್ರೈನ್ಡೆಡ್) ಬಲರಾಮ್ ಅವರ ದೇಹವನ್ನು ಜೀವಸಾರ್ಥಕತೆ ಸಂಸ್ಥೆಯ ಸಹಾಯದೊಂದಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ಡಾ.ವಿಶ್ವನಾಥ್ ತಂಡ ಪರೀಶೀಲಿಸಿ ಬ್ರೈನ್ಡೆಡ್ ಎಂದು ದೃಢೀಕರಿಸಿತ್ತು.
ಬಲರಾಮ ಅವರ ಪತ್ನಿ ಶ್ರೀಮತಿ ಲತಾ ಮತ್ತು ಅವರ ಪುತ್ರ ಇಂದ್ರಜಿತ್ ಅವರ ಗಮನಕ್ಕೆ ತಂದಾಗ ಅಂಗಾಂಗ ದಾನಕ್ಕೆ ಒಪ್ಪಿಕೊಂಡರು. ನಂತರ ಶ್ರೀ ಸಿದ್ಧಾರ್ಥ ಆಸ್ಪತ್ರೆಯ ವೈದ್ಯರ ತಂಡ ಬ್ರೈನ್ಡೆಡ್ ಗೆ ಒಳಗಾಗಿದ್ದ ಬಲರಾಮ್ ಅವರ ದೇಹದ ಭಾಗಗಳನ್ನು ರಕ್ಷಿಸುವ ಕಾರ್ಯಕ್ಕೆ ಮುಂದಾಯಿತು ಎಂದು ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯ ಮೂತ್ರಕೋಶ ತಜ್ಞರಾದ ಡಾ.ನವೀನ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮೂಲಕ 2ಕಿಡ್ನಿಗಳನ್ನು ತೆಗೆದು ಬಿಜಿಎಸ್ ಗ್ಲೋಬಲ್ ಹಾಸ್ಪಿಟಲ್ ಮತ್ತು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ಕಳುಹಿಸಲಾಯಿತು. ಹಾಗೆಯೇ ಹೃದಯ ಕವಾಟನ್ನು (Heart valves)ತೆಗೆದು ಜಯದೇವ ಹಾಸ್ಪಿಟಲ್ಗೆ ಕಳುಹಿಸಲಾಯಿತು.
ನೇತ್ರ ತಜ್ಞ ಡಾ.ರವಿಕುಮಾರ್ ಅವರ ತಂಡದಿಂದ ಕಾರ್ನೀಯಾವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದು ತುಮಕೂರು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ನಾಗರಾಜ್ ಅವರ ನೇತೃತ್ವದ ತಂಡ ಚರ್ಮದ ಕೋಶಗಳನ್ನು ತೆಗೆದು ಬೆಂಗಳೂರಿನ ವಿಕ್ಟೋರಿಯಾ ಸ್ಕಿನ್ ಬ್ಯಾಂಕ್ಗೆ ರವಾನಿಸಲಾಗಿದೆ.
ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜು ಆರೋಗ್ಯ ಜೊತೆಗೂಡಿ ಇಲಾಖೆ ಜೀವ ಸಾರ್ಥಕತೆ ಸಂಸ್ಥೆಯು ದಾನಿಗಳಿಂದ ಅಂಗಾಗಗಳನ್ನು ಸಂಗ್ರಹಿಸಿ ಅಗತ್ಯವಿರುವವರಿಗೆ ಅದನ್ನು ತಲುಪಿಸಿ ಜೀವ ಉಳಿಸುವ ಪುಣ್ಯದ ಕೆಲಸವನ್ನು ಜೀವ ಸಾರ್ಥಕತೆ ಸಂಸ್ಥೆ ಮಾಡುತ್ತಿದೆ. ಕರ್ನಾಟಕದಲ್ಲಿ 5 ಜೋನ್ಗಳಲ್ಲಿ ಈ ಸಂಸ್ಥೆಯು ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ 147 ಜನ ಅಂಗಾಂಗ ದಾನ ಮಾಡಿರುವ ಪ್ರಕರಣಗಳು ದಾಖಲಾಗಿದೆ. ಅಂಗಾಂಗ ದಾನ ಮಾಡುವ ಪ್ರಕ್ರಿಯೆಯಲ್ಲಿ ಭಾರತ ದೇಶವು 2ನೇ ಸ್ಥಾನದಲ್ಲಿದೆ.
ಉದ್ಯೋಗದ ಭರವಸೆ:
ದೇಹ ದಾನ ಮಾಡಿದ ಬಲರಾಮ ಅವರ ಕುಟುಂಬಕ್ಕೆ ಸಂಸ್ಥೆ ಅಭಾರಿಯಾಗಿದೆ. ಅವರ ಕುಟಂಬಕ್ಕೆ ಸರ್ವ ರೀತಿಯ ವೈದ್ಯಕೀಯ ನೆರವು ನೀಡುವುದರ ಜೊತೆಗೆ ಪುತ್ರ ಇಂದ್ರಜೀತ್ ಅವರಿಗೆ ಸಂಸ್ಥೆಯಲ್ಲಿ ಉದ್ಯೋಗ ನೀಡುವುದಾಗಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಪ್ರಕಟಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಾಲಕೃಷ್ಣ ಶೆಟ್ಟಿ, ರಿಜಿಸ್ಟ್ರಾರ್ ಡಾ. ಎಂ.ಝೆಡ್ ಕುರಿಯನ್, ಸಹಾಯಕ ಕುಲಸಚಿವರಾದ ಡಾ. ಪವನ್ ಆರ್, ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಶೀಲ್ಚಂದ್ರ ಮಹಾಪಾತ್ರ, ಉಪ ಪ್ರಾಂಶುಪಾಲರಾದ ಡಾ.ಪ್ರಭಾಕರ್, ನೇಪ್ರಾಲಜಿಯ ಮುಖ್ಯಸ್ಥರಾದ ಡಾ.ಸಂಜೀವ್, ಡಾ.ಶ್ರೀರಾಮ್, ಡಾ. ರಾಘವೇಂದ್ರ, ಡೆಂಟಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರವೀಣ್ ಕುಡವ, ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಮಂಜುನಾಥ, ಜೀವಸಾರ್ಥಕತೆ ಸಂಸ್ಥೆಯ ನೌಶದ್ ಮತ್ತು ಚೇತನ್ ಹಾಜರಿದ್ದರು.