ಹೌದು ಆತ ಕರಲಕಟ್ಟೆಯ
ತಿಳಿ ನೀರಲ್ಲಿ ದೊಪ್ಪನೆ ಎತ್ತಿ ಹಾಕಿದ
ನೀರು ಆಕಾಶದೆತ್ತರಕ್ಕೆ ಚಿಮ್ಮಿತು
ಮುಳುಗಿದೆನೋ ತೇಲಿದೆನೋ
ಆ ಗೆಳೆಯನಿಗೆ ಮಾತ್ರ ಗೊತ್ತು
ಕರಲಕಟ್ಟೆ ನನ್ನ ಕೊಳಕಾದ ಅಂಗಿ-ಚೆಡ್ಡಿ
ಗಳನ್ನು ಚೌಳು ಮಣ್ಣಿನಲ್ಲಿ ಥಳ-ಥಳ
ಫಳ-ಫಳ ಹೊಳೆವಂತೆ ಮೈಸೂರು ಬಾರ್
ಬೇಕಿಲ್ಲದಂತೆ ತಿಳಿ ಬಿಳಿ ಮೋಡದಂತೆ ಮಾಡದವಳು
ಅವಳು ಹಾಗೆಯೇ ಬೇಸಿಗೆ ಬಂದರೆ ಮುಕ್ಕಾಲು
ಭಾಗ ಒಣಗಿ ತೋಟ-ತುಡಿಕೆಗಳಿಗೆ ಕರಲ ಮಣ್ಣು ಕೊಡುವಳು
ಉಳಿದ ನೀರಲ್ಲಿ ಪಂಚನಹಳ್ಳಿಯ ಜನರ ಬಟ್ಟೆಯ ಜಾಲಿಸಿ ಬಿಳಿಗೊಳಿಸುವಳು
ಯಾರಾದರೇನು ಅವಳು ಜಲದೇವತೆ
ಬಾಯಾರಿದರೆ ಕುಡಿಯಲು, ಕೊಳೆಯಾದರೆ ತೊಳೆಯುವಳು
ಬೆವತರೆ ಈಜಾಡಲು ಎಲ್ಲರಿಗೂ ಬೇಕಾದವಳು
ಅವಳ ಎದೆಯಗೂಡಲಿ ಬೆಳೆದ ಮೀನು, ಕಪ್ಪೆ, ಏಡಿಗಳೆಲ್ಲ
ತಿಳಿನೀರಲಿ ಸ್ವಚ್ಛಂದವಾದ ಬದುಕು
ಇಂತಹ ತಿಳಿನೀರ ಕಟ್ಟೆಗೆ ಅದ್ಯಾರು ಕರಲಕಟ್ಟೆ ಎಂದರೋ
ಅವರಿಗೆ ಕೋಟಿ ನಮನಗಳು
ಕೆಂದಾವರೆಯ ಮುಗಿಲ ಕಡೆ ಮುಖ ಮಾಡಿ
ತಿಳಿ ನೀರಲಿ ಬೇರ ಇಟ್ಟುಕೊಂಡು
ನೀ ನಗು ನೀ ನಗು
ಎಳೆಯ ಕಂದನಂತೆ
ಎಂದೇಳುವ ತಿಳಿನೀರ ಕರಲಕಟ್ಟೆ
ಆತ ಕರಲಕಟ್ಟೆಗೆ ದೊಪ್ಪನೆ ಬಿಸುಟ ಕ್ಷಣಕ್ಕೆ
ಹಿಮ್ಮುಖವಾಗಿ ಓಡಿದೆ ಓಡಿದೆ
ನೆನಪಾದವು ಗಿಳಿ ಹಿಂಡಿನಂತೆ ಹಾಸ್ಟಲ್ ಗೆಳೆಯರೆಲ್ಲಾ
ಕಣಕಟ್ಟೆ-ಕರಲಕಟ್ಟೆಯಲ್ಲಿ ಬಟ್ಟೆ ತೊಳೆದು ಮಿಂದು
ಎದ್ದು ಬರುವ ವೇಳೆಗೆ ಸಂಜೆ ಮೂರೊತ್ತು
ದಾರಿಯ ನೇರಳೆ, ಮಾವು, ಬಿದ್ದ ತೆಂಗು
ಅವೇ ನಮ್ಮ ಊಟ, ನಮ್ಮ ನೋಟವೆಲ್ಲ
ಗಣಿತ-ವಿಜ್ಞಾನ ನೋಟ್ಸ್ ಕಡೆಗೆ
ಅವನು-ಅವಳು ನನ್ನ ನೋಟ್ಸ್
ಇಸ್ಕೊಂಡು ಬರಕೊಂಡು ಶಬ್ಬಾಸ್ ಎನ್ನಲ್ಲಿ ಅಂತ
ಊಟಕ್ಕಿತ್ತೋ ಇಲ್ಲವೋ ತಿಳಿಯದು
ಶ್ರೀಮಂತ, ಬಡವ ಎನ್ನದೆ ಆ ನೋಟ್ಸ್‍ಗಾಗಿ
ನನ್ನ ಸುತ್ತಲೇ ಸುತ್ತುವ ಗೆಳೆಯ-ಗೆಳೆತಿಯರು
ಆ ಲೆಕ್ಕ ತೋರಿಸಿದ್ದರೆ ಶ್ರೀಪತಿ ತಂದ ಹಸಿ
ದೊಣ್ಣೆ ಪೆಟ್ಟು ಬೀಳುತ್ತಿರಲಿಲ್ಲ ಎಂದು ಕೆಕ್ಕರಿಸಿ
ಕೆಂಗಣ್ಣಿನಿಂದ ಬೆದರಿಸುವ ಹುಡುಗಿಯರು
ಜಗಳಕ್ಕೆ ಬೀಳುವ ಹುಡುಗರು
ಕೊಟ್ಟರೆ ಚೀಲದಲ್ಲಿಟ್ಟುಕೊಂಡು ಅಂದು ಲೆಕ್ಕ ತೋರಿಸಲಿಲ್ಲ
ಇಂದು ಏಟು ಬೀಳಲಿ ಎಂದು ಏಟು ಕೊಡಿಸುವ ತುಂಟ ಹುಡುಗ-ಹುಡಿಗಿಯರು
ಹುಡಿಗಿಯರಿಗೆ ಲೆಕ್ಕ ತೋರಿಸುತ್ತೀಯ ಎಂದು ಮತ್ತೊಂದು ಹಸಿ ಕೋಲಿನ ಏಟು
ಛೇ ಎಂತಹ ಬಿಸಿ ಬಿಸಿಯಾದ ಏಟು ಉರಿಯುತ್ತಾ ಇದೆ, ಕಾಲೆತ್ತಿ ಹೊಡೆದರಲ್ಲ ಮೇಷ್ಟರು
ಇನ್ನ ಕೊಡಬಾರದು ನೋಟ್ಸ್ ಹುಡುಗಿಯರಿಗೆ-ಹುಡುಗರಿಗೆ
ಮುಂಜಾನೆಯೇ ಹಾಜರ್ ಹಾಸ್ಟಲ್ ಗೇಟಿನ ಬಳಿ
ಯಾರಿಗೆ ಕೊಡಲಿ ಯಾರಿಗೆ ಬಿಡಲಿ
ಇನ್ನ ನಿನಗೆ ಹೊದೆ ಕೊಡಿಸೊಲ್ಲ
ಎಂಬ ಆಣೆ-ಪ್ರಮಾಣ, ಜೋರು ಮಾತು, ಮೆಲು ಮಾತು, ಪ್ರೀತಿ ಮಾತು
ಕರಗಿತು ಹೃದಯ, ಕೊಟ್ಟೆ ಬಿಟ್ಟೆ ನೊಟ್ಸ್
ಓ ಎನ್ನುತ್ತಾ ಓಡುವ ಗೆಳೆಯ-ಗೆಳೆತಿಯರು
ಈಗ ಬರೀ ನೆನಪು ಐವತ್ತು ದಾಟಿತು
ಆ ಏಳು ಮಂದಿ ಏಳು ಕೋಟೆಯಂತೆ ಸೇರಿ
ನಕ್ಕೆವು, ಕಿಸಾಯಿಸಿದೆವು, ಕೆನ್ನೆ ಚಿವುಟಿಕೊಂಡೆವು,
ಕೈ ಕೈ ಹಿಡಿದುಕೊಂಡೆವು ಅಯ್ಯೋ ಅದೇ ಚೆಂದ
ಅದೇ ಚೆಂದ ಆ ನೊಟ್ಸ್ ಕೇಳುವ, ರೇಗುವ
ಹಸಿ ಬೆತ್ತದ ಏಟು…
ಎಲ್ಲರೂ ಏನೇನೋ ಆದರೂ ಆದರೆ ನಮ್ಮ
ಚಲ ಕರಲಕಟ್ಟೆ ಎಂದು ಆತ ಕರೆದೇ ಬಿಟ್ಟ, ನಾಮಕರಣವಾಗಿಯೇ ಹೋಯಿತು
ಎಲ್ಲರೋ ಓ ಓ ಆಹಾ ಆಹಾ ಎಂದು ನಕ್ಕರು
ಛೇ ನಮ್ಮಪ್ಪ ಬ್ರಾಹ್ಮಣರಿಗೆ ಗೋದಾನ ಮಾಡಿ ಇಟ್ಟ ಹೆಸರಿಗಿಂತ
ಕರಲಕಟ್ಟೆಯಾಗುವುದೇ ವಾಸಿ, ಇಲ್ಲಿ ತಳುಕಿಲ್ಲ, ಮೋಸ ಇಲ್ಲ
ಸುಳ್ಳಿಲ್ಲ, ಎಲ್ಲಾ ನಮ್ಮ ಕರಲಕಟ್ಟೆಯ ತಿಳಿ ನೀರು
ಆ ಗೆಳೆಯನ ಆಸೆಯಂತೆ ನಾನೀಗ ಕರಲಕಟ್ಟೆ
ನಾನೀಗ ಕರಲಕಟ್ಟೆ
-ವೆಂಕಟಾಚಲ.ಹೆಚ್.ವಿ.