ಕೆಡಿಪಿ ಸಭೆಯ ಕೆಲ ವಿಶೇಷಗಳು : ನಿದ್ದೆಗೆ ಜಾರಿದ ಅಧಿಕಾರಿ,ಕುಸಿಯುತ್ತಿರುವ ಜಿ.ಪಂ. ಗೋಡೆ, ಕೊಬರಿ ಪ್ರದರ್ಶಿಸಿದ ಎಂ.ಟಿ.ಕೃಷ್ಣಪ್ಪ

ತುಮಕೂರು : ಇಂದು ಡಾ.ಜಿ.ಪರಮೇಶ್ವರ್ ಅವರ ಚೊಚ್ಚಲ ಕೆ.ಡಿ.ಪಿ.ಸಭೆಯಲ್ಲಿ ಹಲವಾರು ವಿಶೇಷತೆಗಳು ನಡೆದವು.

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೆ, ಇಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಗೃಹ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.

ಇಂದಿನ ಸಭೆಯು 11 ಗಂಟೆಗೆ ಪ್ರಾರಂಭವಾಯಿತು, ಒಳಗೆ ಕೆಡಿಪಿ ಸಭೆ ನಡೆಯುತ್ತಿದ್ದರೆ ಹೊರಗೆ ಜಿಲ್ಲಾ ಪಂಚಾಯಿತಿ ಹೊರಾಂಗಣವೆಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸರಿಂದ ತುಂಬಿ ತುಳುಕುತಿತ್ತು, ಕೆಡಿಪಿ ಸಭೆ ನಡೆಯುವ ಜಿ.ಪಂ. ಸಭಾಂಗಣದ ಬಾಗಿಲಲ್ಲೆ ಪೊಲೀಸರು ಸರ್ಪಗಾವಲು ಹಾಕಿ ಕಾಯುತ್ತಿದ್ದರು.


ಪತ್ರಕರ್ತರು ಒಳ ಹೋಗಲು ಸಹ ಕಿರಿಕಿರಿ ಮಾಡಿದ್ದಲ್ಲದೆ ಜಿ.ಪಂ.ನಲ್ಲಿ ಏನೋ ನಡೆಯುತ್ತಿದೆ, ಅದಕ್ಕೆ ಇಷ್ಟೊಂದು ಪೊಲೀಸ್ ಸೆಕ್ಯೂರಿಟಿ ಹಾಕಿದ್ದಾರಪ್ಪ ನಾವು ಆ ಕಡೆ ಹೋಗೋದೆ ಬೇಡ ಎಂದು ಬಿ.ಹೆಚ್.ರಸ್ತೆಗೆ ಹೋಗುವವರು ಶಿವಕುಮಾರಸ್ವಾಮಿಗಳ ಸರ್ಕಲ್‍ನತ್ತ ಪೇರಿ ಕಿತ್ತರು.

ಪ್ಲೇವುಡ್ ಗೆದ್ದಲು ತಿಂದು ಉದುರಿ ಹೋಗಿರುವ ಸ್ಥಳ

ಪತ್ರಕರ್ತರ ಗ್ಯಾಲರಿಯ ಬಳಿ ಜಿಲ್ಲಾ ಪಂಚಾಯಿತಿ ಸಭಾಂಗಣದ ಗೋಡೆಗೆ ಅಂಟಿಸಿರುವ ಪ್ಲೆವುಡ್ ಗೆದ್ದಲು ಹಿಡಿದು ಉದುರಿ ಹೋಗಿದ್ದು ಪ್ಲೇವುಡ್ ಗೆದ್ದಲು ತಿಂದು ಉದುರಿ ಹೋಗಿರುವ ಸ್ಥಳದಲ್ಲಿ ಕಡಜ ಗೂಡು ಕಟ್ಟಿದ್ದು, ಗೂಡಿನಿಂದ ಹೊರ ಬಂದ ಕಡಜ ಸಾವಿರಾರು ಜನ ಕೂತಿರುವುದನ್ನು ಕಂಡು ಗಾಬರಿಯಾಗಿ ಅಲ್ಲಿ ಕುಳಿತಿದ್ದ ಪತ್ರಕರ್ತರೊಬ್ಬರಿಗೆ ನನ್ನ ಜಾಗದಲ್ಲಿ ಬಂದು ಕೂತಿದ್ದೀರಾ? ಎಂದು ತನ್ನ ಮೂತಿ ಮುಳ್ಳಿನಿಂದ ಕಚ್ಚಿಯೇ ಬಿಟ್ಟಿತು, ಪತ್ರಕರ್ತರು ಪಾಪ ಮಧ್ಯಾಹ್ನದ ಊಟದ ತನಕ ಭಯದಿಂದಲೇ ತಮ್ಮ ಬೆನ್ನು ತುರಿಸಿಕೊಂಡು ಕುಳಿತಿದ್ದರು.

ನಿದ್ರೆಗೆ ಜಾರಿದ ಅಧಿಕಾರಿ : ಸಭೆ ಪ್ರಾರಂಭವಾಗಿ ಅರ್ಧ ಗಂಟೆಯೂ ಆಗಿಲ್ಲ, ಪತ್ರಕರ್ತರ ಗ್ಯಾಲರಿಗೆ ಹತ್ತಿರ ಕೊನೆಯ ಸಾಲಿನಲ್ಲಿ ಕುಳಿತಿದ್ದ ಅಧಿಕಾರಿ ಗಡ್ಡದ್ದಾಗಿ ನಿದ್ದೆಗೆ ಜಾರಿದ್ದು, ಊದೋರು ಊದಿಕೊಳ್ಳಿ ಸ್ವಾಮಿ ಕಛೇರಿಯಲ್ಲೂ ನಿದ್ದೆ, ಕೆಡಿಪಿ ಸಭೆಯಲ್ಲೂ ನಿದ್ದೆಗೆ ಜಾರಿದ್ದು ಯಾರ ಭಯವೂ ಅನ್ನುವಂತಿತ್ತು.


ಕರ್ಕಶವಾಗಿ ಕೇಳಿಸುತ್ತಿದ್ದ ಮೈಕ್ ಧ್ವನಿ : ಜಿಲ್ಲಾ ಪಂಚಾಯಿತಿಯಲ್ಲಿ 2022ರ ಡಿಸೆಂಬರ್ 9ರಂದು ನಡೆದ ಕೆಡಿಪಿ ಸಭೆಯೇ ಕೊನೆಯ ಸಭೆಯಾಗಿದ್ದು, ಆ ನಂತರ ಚುನಾವಣೆ ತರಬೇತಿಗೆ ಈ ಸಭಾಂಗಣ ಬಳಸಿದರೂ ಅಷ್ಟಾಗಿ ಮೈಕ್ ಮತ್ತು ಸ್ಪೀಕರ್‍ಗಳನ್ನು ಬಳಸದೇ ಇದ್ದುದರಿಂದ ಸಚಿವರು ಅಧಿಕಾರಿಗಳು ಮಾತನಾಡುವುದು ಯಾರು ಯಾರಿಗೆ ಏನು ಹೇಳುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ, ಆಗಾಗ ಸ್ಪೀಕರ್‍ಗಳು ಕೊರ್ ಕೊರ್ ಎಂಬ ಶಬ್ದ ಮಾಡುತ್ತಿದ್ದವು.

ಕೊಬ್ಬರಿ ಪ್ರದರ್ಶಿಸಿದ ಎಂ.ಟಿ.ಕೃಷ್ಣಪ್ಪ : ಜಿಲ್ಲೆಯಲ್ಲಿ ಕೊಬ್ಬರಿ ಬೆಲೆ ರೂ.7700ಕ್ಕೆ ಕುಸಿದಿರುವುದರಿಂದ ತುಂಬಾ ಸಂಕಷ್ಟ ಅನುಭವಿಸುತ್ತಿದ್ದಾರೆ, ಕೊಬ್ಬರಿ ಕಳೆದ ವರ್ಷ ಹೆಚ್ಚು ಮಳೆ ಬಿದ್ದ ಹಿನ್ನಲೆಯಲ್ಲಿ ಸ್ವಲ್ಪ ಹಸಿ ಇರುತ್ತದೆ, ಇದನ್ನೇ ನೆಪ ಮಾಡಿಕೊಂಡು ಕೊಬ್ಬರಿಯನ್ನು ಕೊಂಡುಕೊಳ್ಳದೆ ವಾಪಸ್ಸು ಕಳಿಸುತ್ತಿದ್ದಾರೆ, ಇದರಿಂದ ರೈತನಿಗೆ ಕೊಬ್ಬರಿ ತುಂಬಿಕೊಂಡು ಬಂದ ವಾಹನ ಬಾಡಿಗೆ ಸಹ ಕೊಡಲು ಆಗದಂತಹ ಸ್ಥಿತಿ ಬಂದೊದಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ತಾವು ತಂದಿದ್ದ ಒಂದು ಸಣ್ಣ, ಮತ್ತೊಂದು ದಪ್ಪ ಉಂಡಿ ಕೊಬರಿಯನ್ನು ಪ್ರದರ್ಶಿಸಿ ಕೊಬ್ಬರಿಗೆ ಸೂಕ್ತ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿದರು.
ಇದಲ್ಲದೆ ಮಂಡಿಗೆ ಕೊಬ್ಬರಿ ಬಿಡುವಾಗ 600ಗ್ರಾಂ ಕೊಬ್ಬರಿಯನ್ನು ಚೀಲದಿಂದ ತೆಗೆದುಕೊಳ್ಳುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ನೆಫೆಡ್ ಅಧಿಕಾರಿಗಳನ್ನು ಕರೆಸಿ ಮಾತಾಡಿದ್ದು, ಸೋಮವಾರ ಬೆಂಗಳೂರಿನಲ್ಲಿ ನೆಫಡ್ ಅಧಿಕಾರಿಗಳ ಸಭೆ ಕರೆದಿರುವುದಾಗಿ ತಿಳಿಸಿದರು.
ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಮಾತನಾಡಿ ರಾಮನಗರದ ರೇಷ್ಮೆ ಮಾರುಕಟ್ಟೆಗೆ ರೈತರು ತಂದ ರೇಷ್ಮೆಯನ್ನು ದೇವರಿಗೆ ಅಂತ ಒಂದೊಂದು ಕೆಜಿ ತೆಗೆಯುತ್ತಾರೆ ಅದೇ ರೀತಿ ದೇವರಿಗೆ ಅಂತ ಕೊಬ್ಬರಿ ತೆಗೆಯುತ್ತಾರ ಎಂದು ಹಾಸ್ಯ ಚಟಾಕಿ ಹಾರಿಸಿದರು.

ರೈತರೊಬ್ಬರು ಎಷ್ಟು ಸಲ ಸರ್ಕಾರಿ ಕಛೇರಿಗೆ ಅಲೆದರೂ ನನ್ನ ಕೆಲಸ ಮಾಡಿ ಕೊಟ್ಟಿಲ್ಲ ಸಚಿವರಾದ ಡಾ.ಜಿ.ಪರಮೇಶ್ವರ್ ಅವರನ್ನು ಕಂಡು ಅರ್ಜಿ ನೀಡಬೇಕೆಂದು ಪೊಲೀಸರ ಜೊತೆ ಜಟಾಪಟಿ ನಡಿಸಿದರು, ಕೊನೆಗೂ ರೈತನಿಗೆ ಸಚಿವರ ಭೇಟಿ ಸಾಧ್ಯವಾಗಲಿಲ್ಲ ಪೊಲೀಸರ ತಡೆಯಿಂದ, ಕೊನೆಗೆ ರೈತ ಪೊಲೀಸರಿಗೆ ಇವತ್ತು ಬಂದು ಬಿಟ್ಟಿದ್ದಾರೆ, ಕಳ್ಳರಿದ್ದಾರ ಇಲ್ಲಿ, ಮಿನಿಷ್ಟರ್ ಇರೋದು ಅಂತ ಗೊಣಗಿಕೊಂಡು ಹೊರಟರು.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *