ತುಮಕೂರು: ಕೊರೊನಾ ಸಂಕಷ್ಟ ಕಾಲದಲ್ಲೂ ಯಾವುದೇ ನೆಪ ಹೇಳದೇ-ನನ್ನ ಅವಧಿಯಲ್ಲಿ ಯಾರಿಗೂ ನೋವುಂಟು ಮಾಡದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸಿದ ಹೆಗ್ಗಳಿಕೆ ತಮ್ಮದಾಗಿದ್ದು, 6 ವರ್ಷಗಳ ಅಧ್ಯಕ್ಷಗಿರಿಯ ಸಂತೃಪ್ತಭಾವದೊಂದಿಗೆ ನಿರ್ಗಮಿಸುತ್ತಿರುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರಲ್ಲಿ ಅಂದಿನ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಅವರು,ನನಗೆ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಮಾಡಿದ್ದರು. ಮೊದಲು ಜನರಿಂದ ದೂರವಿದ್ದ ಕಾಂಗ್ರೆಸ್ ಕಚೇರಿಯನ್ನು ನಗರದ ಮಧ್ಯಭಾಗದಲ್ಲಿ ನನ್ನ ಸ್ವಂತ ಖರ್ಚಿನಲ್ಲಿ ತೆರೆದು, ಕಾಂಗ್ರೆಸ್ ಕಾರ್ಯಕರ್ತರು ಸರಾಗವಾಗಿ ಕಚೇರಿಗೆ ಬಂದು ಹೋಗುವಂತೆ ಮಾಡಿದಲ್ಲದೆ, ಎಐಸಿಸಿ ಮತ್ತು ಕೆ.ಪಿ.ಸಿ.ಸಿ ಕಾಲ ಕಾಲಕ್ಕೆ ನೀಡಿದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಗಿಸಿದ್ದೇನೆ. ಮನೆ ಮನೆಗೆ ಕಾಂಗ್ರೆಸ್,ಶಕ್ತಿ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದಿದ್ದು, ಶಕ್ತಿ ಕಾರ್ಯಕ್ರಮದಲ್ಲಿ ತುಮಕೂರು ರಾಜ್ಯದಲ್ಲಿಯೇ 6ನೇ ಸ್ಥಾನ ಪಡೆದಿದ್ದು, ಒಂದು ಉತ್ತಮ ಬೆಳವಣಿಗೆ ಎಂದು ತಿಳಿಸಿದರು.

ದೇಶದಾದ್ಯಂತ 2019ರಲ್ಲಿ ಕೋರೋನ ಖಾಯಿಲೆ ಆವರಿಸಿದಾಗ,ಕೆ.ಪಿ.ಸಿ.ಸಿ. ನಿರ್ದೇಶನದಂತೆ ಕಚೇರಿಯಲ್ಲಿಯೇ ಹೆಲ್ಪ್‍ಲೈನ್ ತೆರೆದು ಎನ್.ಎಸ್.ಯು.ಐ, ಯುವ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕಗಳ ಸಹಕಾರದೊಂದಿಗೆ ನೂರಾರು ಕೋರೋನ ರೋಗಿಗಳಿಗೆ ಚಿಕಿತ್ಸೆಗಾಗಿ ಬೆಡ್ ಒದಗಿಸಿದ್ದಲ್ಲದೆ,ಲಾರಿ, ಟ್ರಕ್ ಚಾಲಕರಿಗೆ ಮದ್ಯಾಹ್ನದ ಬಿಸಿಯೂಟ ನೀಡಿ, ಅವರ ಹಸಿವು ನೀಗಿಸುವ ಕೆಲಸ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ವತಃ ಕೋರೋನ ಸೋಂಕಿಗೆ ಒಳಗಾಗಿ ಸುಮಾರು ಒಂದುವರೆ ತಿಂಗಳ ಕಾಲ ಸಾವು ಬದುಕಿನೊಂದಿಗೆ ಹೋರಾಟ ನಡೆಸಿ, ಗುಣಮುಖನಾಗಿ ಬಂದು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ.ಖಾಯಿಲೆ ನೆಪ ಹೇಳಿ ಪಕ್ಷ ಸಂಘಟನೆಯಲ್ಲಿ ಹಿಂದೆ ಉಳಿದಿಲ್ಲ ಎಂದು ಆರ್.ರಾಮಕೃಷ್ಣ ಹೇಳಿದರು.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ 2019ರಲ್ಲಿ ನಡೆದ ಚುನಾವಣೆ ಮತ್ತು 2020ರಲ್ಲಿ ನಡೆದ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಅಲ್ಲದೆ ಉತ್ತರ ಕರ್ನಾಟಕದ ಮುಳುಗಡೆ ಪ್ರದೇಶಗಳಿಗೆ ಒಂದು ಲಾರಿ ಲೋಡ್ ದಿನಸಿ,ಇನ್ನಿತರ ಅಗತ್ಯ ವಸ್ತುಗಳನ್ನು ನನ್ನ ನೇತೃತ್ವದಲ್ಲಿ ಸಂಗ್ರಹಿಸಿ ಜಮಕಂಡಿಗೆ ಕಳುಹಿಸಿ,ಅಗತ್ಯವಿರುವವರಿಗೆ ಹಂಚಲಾಗಿದೆ.ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಅವರ ಪದಗ್ರಹಣ ಸಮಾರಂಭ ವನ್ನು ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚುರ ಪಡಿಸುವಂತೆ ಮಾಡಲಾಯಿತು.ಅಲ್ಲದೆ 100 ನಾಟೌಟ್ ಕಾರ್ಯಕ್ರಮವನ್ನು ಗಾಜಿನಮನೆಯಲ್ಲಿ ಏರ್ಪಡಿಸಿ,ಸರಕಾರದ ವಿರುದ್ದ ಹೋರಾಟ ನಡೆಸಲಾಯಿತು ಎಂದು ಹೇಳಿದರು.
ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಪಕ್ಷದ ನಮ್ಮ ನೀರು, ನಮ್ಮ ಹಕ್ಕು ಪಾದಯಾತ್ರೆಯಲ್ಲಿ ತುಮಕೂರಿನಿಂದ ಹೆಚ್ಚು ಜನ ಪಾಲ್ಗೊಳ್ಳುವಂತೆ ಮಾಡಲಾಯಿತು.ಸ್ವಾತಂತ್ರದ 75ನೇ ವರ್ಷದ ಅಂಗವಾಗಿ ನೀಡಿದ್ದ 75 ಕಿ.ಮಿ. ಪಾದಯಾತ್ರೆ ಯಶಸ್ವಿಗೊಳಿ ಸಲಾಗಿದೆ.ರಾಹುಲ್‍ಗಾಂಧಿ ಅವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುವ ಭಾರತ್ ಜೋಡೋ ಯಾತ್ರೆ ನನ್ನ ಕಾಲದಲ್ಲಿ ನಡೆದು ಯಶಸ್ವಿಯಾಯಿತು ಎಂಬುದೇ ನನಗೊಂದು ಹೆಮ್ಮೆಯ ವಿಚಾರವಾಗಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ನನಗೆ ಸಹಕಾರ ನೀಡಿದ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಆರ್.ರಾಮಕೃಷ್ಣ ತಿಳಿಸಿದರು.
ನನ್ನ ಸ್ಥಾನಕ್ಕೆ ಕೆಪಿಸಿಸಿ ಚಂದ್ರಶೇಖರ್‍ಗೌಡ ಎಂಬುವವರನ್ನು ನೇಮಕ ಮಾಡಿದೆ.ಪಕ್ಷದಲ್ಲಿ ಸಕ್ರಿಯನಾಗಿದ್ದು, ಪಕ್ಷ ನೀಡುವ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ದ.ಉದಯಪುರದ ಕಾಂಗ್ರೆಸ್ ಅಧಿವೇಶನದ ತೀರ್ಮಾನದಂತೆ ಅಧ್ಯಕ್ಷರ ಬದಲಾವಣೆಯಾಗಿದೆ. ಪಕ್ಷದ ಆದೇಶಕ್ಕೆ ತಲೆಬಾಗುತ್ತದೆ ಎಂದು ಆರ್.ರಾಮಕೃಷ್ಣ ಹೇಳಿದರು.
ಕಳೆದ 6 ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಸುಸೂತ್ರವಾಗಿ ಅಧಿಕಾರ ನಡೆಸಲು ಸಹಕರಿಸಿದ ಜಿಲ್ಲೆಯ ಎಲ್ಲಾ ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾ ಕಾಂಗ್ರೆಸ್ ನಿಗರ್ಮಿತ ಅಧ್ಯಕ್ಷ ಆರ್.ರಾಮಕೃಷ್ಣ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಕೆಂಚಮಾರಯ್ಯ ಮಾತನಾಡಿ,ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದಿನಿಂದಲೂ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಯಾವುದೇ ಸ್ಥಾನಮಾನಗಳನ್ನು ನೀಡಿಲ್ಲ.ಪ್ರಸ್ತುತ ಪಾವಗಡ ಕ್ಷೇತ್ರದಿಂದ ಟಿಕೇಟ್ ಬಯಸಿ, ನಾನು ಮತ್ತು ಡಾ.ಅರುಂಧತಿ ಅವರು ಅರ್ಜಿ ಸಲ್ಲಿಸಿದ್ದು, ಪಕ್ಷದ ಹೈಕಮಾಂಡ್ ಇಬ್ಬರಲ್ಲಿ ಒಬ್ಬರಿಗೆ ಟಿಕೇಟ್ ನೀಡಿದರೆ ಪಕ್ಷದ ನಿಲುವಿನಿಂದ ಬೇಸತ್ತಿರುವ ಎಡಗೈ ಸಮುದಾಯದ ಯುವಕರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯರಾದ ಮರಿಚನ್ನಮ್ಮ,ಮೆಹಬೂಬ್ ಪಾಷ,ಮಂಜುನಾಥ್, ಕೆಂಪಣ್ಣ,ಸುಜಾತ, ತರಕಾರಿ ವೆಂಕಟೇಶ್,ಗೀತಮ್ಮ, ಸಂಜೀವಕುಮಾರ್, ಸುಮುಖ್ ಕೊಂಡವಾಡಿ, ಡಾ|| ಡಿ.ಅರುಂಧತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.