
ತುಮಕೂರು:ಪಕ್ಷಕ್ಕೆ ನಿಷ್ಠಾವಂತನಾಗಿ ದುಡಿದರೆ ಅವಕಾಶಗಳು ಹುಡುಕಿಕೊಂಡು ಬರಲಿವೆ ಎಂಬುದಕ್ಕೆ ನನಗಿಂತ ಇನ್ನೊಂದು ಉದಾಹರಣೆಯಿಲ್ಲ ಎಂದು ತುಮಕೂರು ನಗರ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್ ತಿಳಿಸಿದ್ದಾರೆ.
ಇಂದು ತಮ್ಮ ಅಪಾರ ಬೆಂಬಲಿಗರ ಮೆರವಣಿಗೆಯ ಮೂಲಕ ಉಮೇದುವಾರಿಕೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ 20 ವರ್ಷಗಳಿಂದ ದುಡಿದ ನನಗೆ ಟಿಕೇಟ್ ದೊರೆಕಿರುವುದು. ಭವಿಷ್ಯದಲ್ಲಿ ಯುವಜನತೆ ಪಕ್ಷದ ಮೇಲೆ ಭರವಸೆ ಇಟ್ಟು ದುಡಿಯಲು ಪ್ರೇರಣೆಯಾಗಿದೆ ಎಂದರು.
ಭಾರತೀಯ ನ್ಯಾಷನಲ್ ಕಾಂಗ್ರೆಸ್ ಪಕ್ಷ ನನಗೆ ಏಪ್ರಿಲ್ 06 ರಂದೇ ತುಮಕೂರು ನಗರ ಕ್ಷೇತ್ರ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರೂ ಸಹ ಇದುವರೆಗೂ ಪಕ್ಷದಲ್ಲಿ ನನಗೆ ಟಿಕೇಟ್‍ನೀಡಿದ್ದರಿಂದ ಸಹಜವಾಗಿಯೇ ಬೇಸರಗೊಂಡಿದ್ದ ಹಿರಿಯರು,ನನ್ನ ಸಹಪಾಠಿಗಳನ್ನು ಸಮಾಧಾನ ಪಡಿಸುವುದು ನನಗೆ ದೊಡ್ಡ ತಲೆನೋವಾಗಿತ್ತು. ಹಂತ ಹಂತವಾಗಿ ಹಿರಿಯ ನಾಯಕರೊಂದಿಗೆ ಸಮನ್ವಯ ಸಾಧಿಸಿ, ಇಂದು ಎಲ್ಲಾ ನಾಯಕರೊಂದಿಗೆ ಬಂದು ಉಮೇದುವಾರಿಕೆ ಸಲ್ಲಿಸಿದ್ದೇನೆ.ಎಲ್ಲಾ ನಾಯಕರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಇಕ್ಬಾಲ್ ಅಹಮದ್ ನುಡಿದರು.
ಈ ಸಾಲಿನಲ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಅತಿ ಮುಖ್ಯವಾಗಿದೆ. ಹಾಗಾಗಿ ಎಲ್ಲಾ ನಾಯಕರು ಭಿನ್ನಮತ ಮೆರೆತು ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ,ತುಮಕೂರು ನಗರವನ್ನು ನಿರುದ್ಯೋಗ ಮುಕ್ತ ನಗರವನ್ನಾಗಿಸುವುದು ನಮ್ಮ ಗುರಿಯಾಗಿದೆ.ಅಲ್ಲದೆ ಸ್ಮಾರ್ಟ್‍ಸಿಟಿ ಎಂಬುದಕ್ಕೆ ಅಪವಾದವಾಗಿರುವ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವುದು,ಅಲ್ಲದೆ ನಗರದ ಮಳೆನೀರು ಯಾವುದೇ ಅಡೆತಡೆಯಿಲ್ಲದೆ ನಗರಿಂದ ಆಚೆಗೆ ಹೋಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಶಕ್ತಿ ಮೀರಿ ಕೆಲಸ ಮಾಡಲಿದ್ದೇನೆ.ಶೀಘ್ರದಲ್ಲಿಯೇ ನಗರದ ಪ್ರತ್ಯೇಕ ಪ್ರಾಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಇಕ್ಬಾಲ್ ಅಹಮದ್ ತಿಳಿಸಿದರು.
ಪ್ರಸ್ತುತ ರಾಜ್ಯ ಸರಕಾರ ಶೇ40 ಸರಕಾರ. ಕುದುರೆ ವ್ಯಾಪಾರದಿಂದ ಅಧಿಕಾರ ಹಿಡಿದು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ಎಸ್ಸಿ, ಎಸ್ಟಿ ಜನರನ್ನು ತೀರ ಕಡೆಗಣಿಸಿದೆ.ಕಾಂಗ್ರೆಸ್ ಈ ಎಲ್ಲಾ ಸಮುದಾಯಗಳ ಬೆಳವಣಿಗೆಗೆ ಕಾರ್ಯಕ್ರಮಗಳನ್ನು ನೀಡಿದೆ.ಕಾಂಗ್ರೆಸ್‍ನ ಗೃಹಲಕ್ಷ್ಮಿ,ಅನ್ನಭಾಗ್ಯ, ನಿರುದ್ಯೋಗ ಭತ್ಯೆ ಕಾರ್ಯಕ್ರಮಗಳು ಜನರು ಕಾಂಗ್ರೆಸ್‍ಗೆ ಮತ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಇಕ್ಬಾಲ್ ಅಹಮದ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ನಯಾಜ್ ಅಹಮದ್, ಜಿಲ್ಲಾ ಓಬಿಸಿ ಘಟಕದ ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಬಿ.ಜಿ.ಪಾಳ್ಯ ಸರ್ಕಲ್‍ನಿಂದ ಬಿಜಿಎಸ್ ಸರ್ಕಲ್‍ವರೆಗೆ ಮೆರವಣಿಗೆಯಲ್ಲಿ ಬಂದು ಮಹಾನಗರ ಪಾಲಿಕೆಯಲ್ಲಿ ನಾಮಪತ್ರ ಸಲ್ಲಿಸಿದರು.