ತುಮಕೂರು : ಒಂದು ದೇವಾಲಯಕ್ಕೆ ನೀವೆಲ್ಲಾ ಹೋಗಲೇ ಬೇಕೆಂಬ ಪರೋಕ್ಷ ಒತ್ತಡವನ್ನು ದೇಶದಲ್ಲಿ ಸೃಷ್ಠಿಯಾಗುವಂತೆ ಮಾಡಲು ಹೊರಟಿರುವುದು ದೇಶದ ಜನರ ಧಾರ್ಮಿಕ ಹಕ್ಕಿನ ಮೇಲೆ ಸವಾರಿ ಮಾಡುತ್ತಿರುವುದು ಮಾನವ ಹಕ್ಕುಗಳ ಧಮನಕಾರಿ ಸೂಚನೆಗಳಾಗಿವೆ ಎಂದು ಸಾಹಿತಿ ಹಾಗೂ ಬರಹಗಾರರಾದ ಜಿ.ವಿ.ಆನಂದಮೂರ್ತಿ ತೀವ್ರ ಕಳವಳ ವ್ಯಕ್ತ ಪಡಿಸಿದರು.
ಅವರು ಮೇ 23ರಂದು ವಿಜಯನಗರದ ಸರ್ವೋದಯ ಶಾಲೆಯ ಆವರಣದಲ್ಲಿ ಬೋಧಿಮಂಡಲ ಮತ್ತು ಹಳೇಹಟ್ಟಿ ಸಖೀಗೀತ ಪ್ರಕಾಶನ ಏರ್ಪಡಿಸಿದ್ದ ಬುದ್ಧಪೂರ್ಣಿಮೆ ಕಾರ್ಯಕ್ರದಲ್ಲಿ ಬುದ್ಧಗುರು ಕೆ.ಎಂ.ಶಂಕರಪ್ಪನವರ ‘ಬುದ್ಧ ಬರಲಿ ನಮ್ಮೂರಿಗೆ’ ಪುಸ್ತಕ ಬಿಡುಗಡೆಯಲ್ಲಿ ಪುಸ್ತಕ ಕುರಿತು ಮಾತನಾಡಿದರು.
ಒಮ್ಮೆ ರಾಜ ಬಿಂದು ಸಾರನು ಬುದ್ಧನಿಗೆ ನನಗೆ ದೇಶದ ಪ್ರಜೆಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ನೀನೊಬ್ಬ ಸಂತನಾಗಿ ಸಾವಿರಾರು ಶಿಷ್ಯರನ್ನು ಹೇಗೆ ನಿಭಾಯಿಸುತ್ತಿಯ ಎಂದು ಕೇಳಿದಾಗ, ಬುದ್ಧನು ಯಜ್ಞ-ಯಾಗಾದಿಗಳನ್ನು ಮಾಡುವುದನ್ನು ನಿಲ್ಲಿಸಿ, ಇವುಗಳಿಂದ ಏನೂ ನೆರವೇರುವುದಿಲ್ಲ, ರೈತನಿಗೆ ಸಕಾಲದಲ್ಲಿ ಬಿತ್ತುವ ಬೀಜಗಳನ್ನು ಒದಗಿಸು, ಕುಶಲ ಕರ್ಮಿಗಳಿಗೆ ಕೆಲಸ ಕೊಡು ಆಗ ಅವರೆಲ್ಲಾ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗುತ್ತಾರೆ, ಇದರಿಂದ ಸಕಾಲದಲ್ಲಿ ತೆರಿಗೆ ಪಾವತಿಸುವುದರಿಂದ ರಾಜ್ಯ ಸುಭಿಕ್ಷವಾಗುತ್ತದೆ ಎಂದು ಹೇಳಿದರು.
ಭಯದಿಂದ ಮತ್ತು ನಿಯಮಗಳಿಂದ, ಕಠೋರ ಶಾಸನಗಳಿಂದ ರಾಜ್ಯವನ್ನು ನಡೆಸಬಾರದು ಎಂದು ಬುದ್ಧಗುರು ರಾಜ ಬಿಂದುಸಾರನಿಗೆ ಹೇಳಿದರು, ಅಂದರೆ ಬೌದ್ಧ ದರ್ಶನವು ರಾಜನೀತಿ ಸಾರವನ್ನು ಒಳಗೊಂಡಿದ್ದಾಗಿದೆ ಎಂದು ಆನಂದಮೂರ್ತಿ ಹೇಳಿದರು.
ಕುರುಡಾಗಿರುವ ರಾಜಪ್ರಭುತ್ವಕ್ಕೆ ಬುದ್ಧನ ಇಂತಹ ಚಿಂತನೆಗಳನ್ನು ಹೇಳುವ ಮೂಲಕ ಅವರ ಕಿವಿಗಳಿಗೆ ಮುಟ್ಟಬೇಕು, ಧರ್ಮದ, ದೇವರ ಹೆಸರಿನಲ್ಲಿ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವುದು ರಾಜನೀತಿಯಲ್ಲ, ಇಂದು ಕರಾಳ ಮುಖಗಳು ಮಾನವ ಹಕ್ಕುಗಳನ್ನು ದೊಡ್ಡ ಪ್ರಮಾಣದಲ್ಲಿ ಕಸಿದುಕೊಂಡಿರುವುದರಿಂದ ವಿಚಾರಣೆಯೇ ಇಲ್ಲದೆ ನೂರಾರು ಜನರು ಜೈಲಿನಲ್ಲಿರುವಂತಾಗಿರುವುದು ದುರದೃಷ್ಟಕರ, ಇಂತಹವುದಕ್ಕೆಲ್ಲಾ ಬುದ್ಧ ಅಥವಾ ಬೌದ್ಧಧರ್ಮದ ಬೆಳಕು ರಾಜಪ್ರಭುತ್ವಗಳ ಮೇಲೆ ಬೆಳಕು ಚೆಲ್ಲಬೇಕಿದೆ ಎಂದರು.
ರಾಜ ಪ್ರಭುತ್ವಗಳು ದ್ವೇಷ, ಪ್ರತಿಕಾರ ತುಂಬುವುದೇ ಧರ್ಮ ಎಂಬಂತೆ ಈ ದೇಶದಲ್ಲಿ ಬಿಂಬಿಸುತ್ತಿರುವುದರಿಂದ ದಯವಿಲ್ಲದ ಧರ್ಮ ಯಾವುದಯ್ಯ ಎಂದು ವಚನಕಾರರು ಹೇಳಿದ ಧರ್ಮ ಮರೆಯಾಗುತ್ತಾ ಇದೆ ಎಂದು ಜಿ.ವಿ.ಆನಂದಮೂರ್ತಿ ವಿಷಾದ ವ್ಯಕ್ತಪಡಿಸಿದರು.
ಬುದ್ಧಗುರು ಕೆ.ಎಂ.ಶಂಕರಪ್ಪನವರು ಏನನ್ನೂ ಬಯಸಿದವರೂ ಅಲ್ಲ, ಏನ್ನನ್ನೂ ಹೇರಿದವರಲ್ಲ, ಅವರೊಬ್ಬರ ಏಳ್ಗೆಯನ್ನು ಬಯಸದೇ ಸಕಲ ಜೀವಾತ್ಮಗಳ ಏಳ್ಗೆಯನ್ನು ಬಯಸಿದವರು, ಆದ್ದರಿಂದಲೇ ಅವರು ನಿಜ ಅರ್ಥದಲ್ಲಿ ಸಂತರಾಗಿದ್ದವರು, ಮಠದಲ್ಲಿರುವವರನ್ನು, ದೇವಸ್ಥಾನದಲ್ಲಿರುವವರನ್ನೆಲ್ಲಾ ಸಂತರು ಎನ್ನುತ್ತೇವೆ, ಅವರೆಲ್ಲಾ ತನುವಿನಿಂದ ಯೋಗಿಗಳು, ಆದರೆ ಕೆ.ಎಂ.ಶಂಕರಪ್ಪನವರು ಕಾವಿ ಹಾಕದೆ, ಮನದಿಂದ ಯೋಗಿಯಾದವರು ಏಕೆಂದರೆ ವೃಕ್ಷ, ಸರೋವರ ಮತ್ತು ಸಂತರು ತಮಗಾಗಿ ಏನನ್ನೂ ಇಟ್ಟುಕೊಳ್ಳುವುದಿಲ್ಲ ಎಲ್ಲಾವನ್ನೂ ಸಮಾಜಕ್ಕೆ ಕೊಟ್ಟು ಬದುಕಿದವರು ಎಂದರು.
ಬೌದ್ಧ ಧರ್ಮ ಎಂಬುದು ಒಂದು ದೊಡ್ಡ ಸಾಗರವಿದ್ದಂತೆ ಅದರ ಬಗ್ಗೆ ನನಗೆ ಗೊತ್ತಿರೋದು ಕಣ ಮಾತ್ರ ಎಂದು ಶಂಕರಪ್ಪನವರು ಹೇಳುತ್ತಿದ್ದರು, ಬುದ್ಧಗುರುಗಳೇ ಹಾಗೆ ಹೇಳಿದ ಮೇಲೆ ನಾವೆಲ್ಲಾ ಕಣದೊಳಗಿನ ಅಣು ಮಾತ್ರ ಎಂದು ಹೇಳಿದರು.
ವ್ಯಕ್ತಿಯ ಉನ್ನತಿಗಾಗಿ ಅಲ್ಲ, ಸಮಷ್ಠಿಯ ಉನ್ನತಿಗಾಗಿ ಇರುವುದೇ ಬೌದ್ಧ ಧರ್ಮ, ಬುದ್ಧ ತನ್ನೊಬ್ಬನ ಬಿಡುಗಡೆಯನ್ನು ಬಯಸಲಿಲ್ಲ, ಜಗತ್ತಿನ ಪ್ರತಿ ಜೀವಿಗೂ ಒಳಿತನ್ನೇ ಬಯಸಿದವನು ಎಂದು ಹೇಳಿದ ಅವರು, ಸಕಲರಿಗೂ ಲೇಸನ್ನೇ ಬಯಸಿದ ಬುದ್ಧನ ಬೆಳಕು ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಬೆಳಕು ಬೆಳಗುತ್ತಾ ಇದೆ, ಯಾರು ಇನ್ನೊಬ್ಬರ ಸಾವಿಗೆ ಮರುಗುತ್ತಾರೋ ಅವರಲ್ಲಿ ಬುದ್ಧತ್ವ ಇದೆ ಎಂದು ಅರ್ಥ ಎಂದು ಜಿ.ವಿ.ಆನಂದಮೂರ್ತಿ ಹೇಳಿದರು.
ಕೆ.ಎಂ.ಶಂಕರಪ್ಪನವರ ‘ಬುದ್ಧ ಬರಲಿ ನಮ್ಮೂರಿಗೆ ಪುಸ್ತಕ ಬಿಡುಗಡೆ ಮಾಡಿದ ಹೈಕೋರ್ಟ್‍ನ ಮಾಜಿ ಅಡ್ವೋಕೇಟ್ ಜನರಲ್ ಮಾತನಾಡಿ ಬೌದ್ಧ ಧರ್ಮದ ನಂತರ ಬಂದ ಹಿಂದೂ ಧರ್ಮ ಬೌಧ್ಧದರ್ಮವನ್ನು ನಾಶ ಮಾಡಿತು, ಏಕೆಂದರೆ ಬೌದ್ಧಧರ್ಮ ಹಿಂದೂ ಧರ್ಮಕ್ಕೆ ದೊಡ್ಡ ಸವಾಲಾಗಿತ್ತು, ಬೌದ್ಧ ಸ್ಥೂಪಗಳನ್ನು ನಾಶ ಮಾಡಿ ಹಿಂದೂ ದೇವಾಲಯಗಳನ್ನಾಗಿ ಮಾಡಲಾಯಿತು, ಈ ಹಿನ್ನಲೆಯಲ್ಲಿ ಭಾರತದಲ್ಲಿ ಬೌಧ್ಧ ಧರ್ಮ ನಾಶವಾಯಿತು, ಡಾ.ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮದಲ್ಲಿ ಮಾತ್ರ ಮಾನವನ ಪ್ರೀತಿ, ಕರುಣೆ, ಮೈತ್ರಿ ಕಾಣಲು ಸಾಧ್ಯ, ಹಿಂದೂ ಧರ್ಮದಲ್ಲಿ ಮನುಷ್ಯ ಮನುಷ್ಯರನ್ನು ಕೀಳು ಮತ್ತು ತುಚ್ಚವಾಗಿ ಕಾಣಲಾಗುತ್ತಿದೆ ಈ ಹಿನ್ನಲೆಯಲ್ಲಿ ಅಂಬೇಡ್ಕರ್ ಮಾನವ ಪ್ರೇಮದ ಬೌದ್ಧ ಧರ್ಮಕ್ಕೆ ಹೋದರು ಎಂದು ಹೇಳಿದರು.
ಡಾ||ಹೆಚ್.ವಿ.ರಂಗಸ್ವಾಮಿಯವರು ಬೌದ್ಧ ಧರ್ಮದ ಪಂಚಶೀಲಗಳನ್ನು ವಿವರಿಸಿದರು, ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು, ಕೆ.ಎಂ.ಶಂಕರಪ್ಪನವರ ಮಗಳು ಕೆ.ಎಸ್.ಸ್ನೇಹಲತ ಮಾತನಾಡಿದರು, ಚಿಂತಕ ಕೆ.ದೊರೈರಾಜ್ ಅಧ್ಯಕ್ಷತೆ ವಹಿಸಿದ್ದರು,ಪುಸ್ತಕದ ಪ್ರಕಾಶಕರಾದ ಡಾ.ನರಸಿಂಹಮೂರ್ತಿ ಹಳೇಹಟ್ಟಿ ಉಪಸ್ಥಿತರಿದ್ದರು.
ಸಾಹಿತಿ ಗುರುಪ್ರಸಾದ್ ಕಂಟಲಗೆರೆ ಕಾರ್ಯಕ್ರಮ ನಿರೂಪಿಸಿದರು, ಬೋಧಿಮಂಡಲದ ನಟರಾಜಪ್ಪ ಸ್ವಾಗತಿಸಿ, ವಂದಿಸಿದರು.