ನೀವು ಸಾಬ್ರು ಮುಂಜಿ ಮಾಡಿಸಿಕೊಂಡಿಲ್ಲವೇ?ವೆಂಕಟಯ್ಯನ ಮಾತಿಗೆ ಬೆಚ್ಚಿಬಿದ್ದ ಪಿಎಸ್‍ಐ ಶಕೀಲ್ ಆಹ್ಮದ್

ನಿಲ್ಲಿ ಸ್ವಾಮಿ ಅವರಿಗೆ ದನಿಗೆ ಹೊಡದಂಗೆ ಯಾಕೆ ಹೊಡಿತೀರ, ನೀವು ಸಾಬ್ರು ಮುಂಜಿ ಮಾಡಿಸಿಕೊಂಡಿದ್ದೀರ ಅಂತ ಊರಿಗೆಲ್ಲಾ ಹೇಳಾಕೆ ಆಗುತ್ತಾ ಎಂದು ಮುಂದೆ ಕೂತಿದ್ದ ಗಿಡ್ಡನೆಯ ವ್ಯಕ್ತಿ ಎದ್ದು ಕೇಳಿದ ಪ್ರಶ್ನೆಗೆ ಸಬ್ ಇನ್ಸ್‍ಪೆಕ್ಟರ್ ಶಕೀಲ್ ಅಹ್ಮದ್ ಬೆಚ್ಚಿಬಿದ್ದು ಅವಕ್ಕಾಗಿ ನಿಂತು ವೆಂಕಟಯ್ಯನನ್ನೇ ದುರಗುಟ್ಟಿ ನೋಡಿದ ಸಬ್‍ಇನ್ಸ್‍ಫೆಕ್ಟರ್ ನಿಮ್ಮದು ಯಾವೂರು ಎಂದು ಕೇಳಿದರು.

ಪಂಚನಹಳ್ಳಿಗೆ ಸಬ್‍ಇನ್ಸ್‍ಪೆಕ್ಟರ್ ಶಕೀಲ್ ಅಹ್ಮದ್ ಬಂದು 3ತಿಂಗಳಾಗಿತ್ತು, ಆ ವೇಳೆಗೆ ತಮ್ಮ ಅಧಿಕಾರ
ವ್ಯಾಪ್ತಿಗೆ ಬರುವ ಸಾಮಾಜಿಕ ಸುಧಾರಣೆಗಳನ್ನು ಅವರದೇ ಆದ ಆಲೋಚನೆಯಲ್ಲಿ ಜನ ಮೆಚ್ಚುವಂತೆ ಮಾಡುತ್ತಿದ್ದರು. ಆ ದಿನ ಪರಿಶಿಷ್ಟಜಾತಿಯ ಕುಂದು-ಕೊರತೆ ಸಭೆಯನ್ನು ಕರೆದಿದ್ದರು.

ಇನ್ಸ್‍ಫೆಕ್ಟರ್ ಮುಸ್ಲಿಂ ಧರ್ಮದವರಾಗಿದ್ದರಿಂದ ಅವರಿಗೆ ಹಿಂದೂ ಧರ್ಮದ ಕೆಲ ಆಚರಣೆಗಳು ತಿಳಿದಿರಲಿಲ್ಲ. ದೇವದಾಸಿ ಮಕ್ಕಳಾದ ಕದುರಪ್ಪ, ಕರಿಯಪ್ಪ ಮತ್ತು ಮಾರಪ್ಪ ಅವರುಗಳು ಹೆಸರು ಬರೆಸುವಾಗ ಇನ್ಸ್‍ಪೆಕ್ಟರ್ ಎಷ್ಟು ಸಲ ಕೇಳಿದರೂ ಅಪ್ಪ ಇಲ್ಲ ಎಂದು ಮೂರು ನಾಲ್ಕು ಸಲ ಹೇಳಿದಾಗ ಶಕೀಲ್ ಅಹ್ಮದ್ ಅವರಿಗೆ ತಲೆ ಬಿಸಿಯಾಗಿ ಹೋಯಿತು.

ನನ್ನ ನೆಚ್ಚಿನ ಸಬ್‍ಇನ್ಸ್‍ಪೆಕ್ಟರ್ ಶಕೀಲ್ ಅಹ್ಮದ್ 

ಅಪ್ಪನಿಲ್ಲದೆ ಅದು ಹೇಗೆ ಹುಟ್ಟಿದರು, ನನ್ನನ್ನು ಕಿಂಡಲ್ ಮಾಡುವುದಕ್ಕೆ ಈ ರೀತಿ ಹೇಳುತ್ತಿದ್ದಾರೆ ಎಂದು ಆ ಮೂವರ ಕಪಾಳಕ್ಕೆ ಹೊಡೆದಾಗ ವೆಂಕಟಯ್ಯ ಎದ್ದು, ಹೀಗೆ ಹೇಳುತ್ತಿದಂತೆ ಶಕೀಲ್ ಅಹ್ಮದ್ ಅವರು ಅಪ್ಪ ಇಲ್ಲ ಅಂದ್ರೆ ಹ್ಯಂಗಯ್ಯ ಅಂದ್ರು, ಅದಕ್ಕೆ ವೆಂಕಟಯ್ಯ ಅದೆಲ್ಲಾ ಎಲ್ಲರೂ ಮುಂದೆ ಹೇಳಾಕೆ ಆಗುವುದಿಲ್ಲ ಸ್ವಾಮಿ, ಸಭೆ ಮುಗಿದ ಮೇಲೆ ಹೇಳ್ತೀನಿ ಅಂದ್ರು. 

ಸಭೆ ಮುಗಿದ ನಂತರ ವೆಂಕಟಯ್ಯನನ್ನು ಕರೆಸಿದ ಶಕೀಲ್ ಅಹ್ಮದ್ ಅವರು ಅವರ ಬಗ್ಗೆ ಹೇಳಲು ತಿಳಿಸಿದರು, ವೆಂಕಟಯ್ಯ ಅವರು, ಆ ಜನಾಂಗದಲ್ಲಿ ದೇವರಿಗೆ ಅಂತ ಹೆಣ್ಣು ಮಕ್ಕಳು ದೊಡ್ಡವರಾದ ಮೇಲೆ ದೇವದಾಸಿ ಅಂತ ಬಿಡುತ್ತಾರೆ, ಅವರ ಬಳಿಗೆ ಯಾವ ಗಂಡಸರು ಬೇಕಾದರೂ ಹೋಗಬಹುದು ಸ್ವಾಮಿ, ನಿಮಗೆ ಅಧಿಕಾರ ಇದ್ದರೆ ದೇವದಾಸಿ ಪದ್ದತಿ ನಿಲ್ಲಿಸಿ ಅಂದಾಗ ಶಕೀಲ್ ಅಹ್ಮದ್ ಅವರು ಹಣೆ ಹಣೆ ಚೆಚ್ಚಿಕೊಂಡು ಇಂತಹದೊಂದು ಪದ್ದತಿ ಇದೆಯೇ ಎಂದು ಪೊಲೀಸರನ್ನು ವಿಚಾರಸಿದಾಗ ಪೊಲೀಸರು ಹೌದು ಸ್ವಾಮಿ ಎಂದು ಗೋಣು ಹಾಕಿದರು.

ಮಾರನೆಯ ದಿನ ಶಕೀಲ್ ಅಹ್ಮದ್ ಅವರು ವೆಂಕಟಯ್ಯನವರನ್ನು ಹುಡುಕಿಕೊಂಡು ದೇವರ ಹೊಸಹಳ್ಳಿಗೆ ಬಂದು ವಿಚಾರಸಿದಾಗ ಅವರು ಯಾವುದೋ ತೋಟದಲ್ಲಿ ಗುಡಿಸಿನಲ್ಲಿ ವಾಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸ್ ಜೀಪ್ ವೆಂಕಟಯ್ಯ ಇರುವ ಲಿಂಗಾಯತರ ತೋಟದ ಗುಡಿಸಲ ಬಳಿಗೆ ಹೋಗಿ ಊರ ಮಧ್ಯದಲ್ಲಿ ಜೀಪು ನಿಲ್ಲಿಸಿ ಶಕೀಲ್ ಅಹ್ಮದ್ ವೆಂಕಟಯ್ಯ ನಿನಗೆ ಮನೆ ಇಲ್ಲವೆ ಎಂದು ಕೇಳಿದರು.

ಆಯ್ಯೋ ಸ್ವಾಮಿ ಒಳ್ಳೆ ಚೆನ್ನಾಗಿ ಕೇಳುತ್ತೀರ ನನಗೆ ಮನೆ ಕೊಡುವುದಕ್ಕೆ ನಾನೇನು ಲಿಂಗಾಯಿತರ ಜಾತೀಲಿ ಹುಟ್ಟಿದ್ದೀನ, ಲಿಂಗಾಯಿತರಿಗೆ ಲಿಂಗಾಯತ ಗ್ರಾಮ ಪಂಚಾಯಿತಿ ಸದಸ್ಯರು ಕೋಡ್ತಾರೆ ಎಂದರು.

ಆಣೆಗೆರೆ ಗ್ರಾಮ ಪಂಚಾಯಿತಿಗೆ ಪೊಲೀಸ್ ಜೀಪ್‍ನ್ನು ಕಳಿಸಿ ಪಂಚಾಯಿತಿ ಕಾರ್ಯದರ್ಶಿ ಕರೆಸಿ ಪಂಚಾಯಿತಿಯಿಂದ ಯಾರ್ಯಾರಿಗೆ ಮನೆ ಕೊಟ್ಟಿದ್ದಾರೆ ತೆಗೆಯಿರಿ ಎಂದು ತೆಗೆಸಿದರು.

ಮನೆ ಕೊಟ್ಟವರ ಪಟ್ಟಿಯಲ್ಲಿ ಬಡವರ, ದಲಿತರ, ಹಿಂದುಳಿದವರ, ಮನೆ ಇಲ್ಲದವರ ಹೆಸರು ಒಂದೂ ಇಲ್ಲದೆ ಬರೀ ಲಿಂಗಾಯಿತರ ಮನೆ ಇದ್ದುದನ್ನು ನೋಡಿ, ತಮ್ಮ ಪೊಲೀಸ್‍ಗೆ ಹೇಳಿ ಯಾರ್ಯಾರು ಗ್ರಾ.ಪಂ.ನಿಂದ ಮನೆಯಿದ್ದು ಮನೆ ಪಡೆದವರಿಗೆ ಕರೆಸಿ ನೀವಾಗಿ ಮನೆ ಬೇಡ ಎಂದು ಬರೆದು ಕೊಟ್ಟರೆ ಸರಿ ಇಲ್ಲದಿದ್ದರೆ ಜೈಲಿಗೆ ಕಳಿಸುತ್ತೇನೆ ಎಂದು ಅಬ್ಬರಿಸಿದರು.

ವೆಂಕಟಯ್ಯನನ್ನು ಕರೆದು ಊರಿಗೆ ಮೊದಲ ಮನೆ ನಿನ್ನದೇ ಇರಬೇಕು ಕಣಯ್ಯ ಎಂದು ವೈಷ್ಣವರ ಮನೆ ಮುಂಭಾಗದ ಸ್ಥಳದಲ್ಲೇ ಸೈಟ್ ಮಂಜೂರು ಮಾಡಿಸಿ ಮನೆ ಇಲ್ಲದವರಿಗೆಲ್ಲ ಸೈಟ್ ಕೊಡಿಸಿದರು.

ನಂತರ ವೆಂಕಟಯ್ಯನನ್ನು ದೇವದಾಸಿ ಮಕ್ಕಳ ಮನೆ ತೋರಿಸಲು ಕರೆದುಕೊಂಡು ಹೋದರು, ದೇವದಾಸಿ ಮಕ್ಕಳ ಸಭೆ ಕರೆದು ಈ ಪದ್ದತಿ ಕೆಟ್ಟದ್ದು ಇನ್ನು ಮುಂದೆ ಇದನ್ನು ಯಾರಾದರೂ ಆಚರಣೆ ಮಾಡುವುದು, ಗರುಗದಹಳ್ಳಿ ದೊಡ್ಡಮ್ಮ ಜಾತ್ರೆಯಲ್ಲಿ ಬೇವಿನ ಸೀರೆ ಉಡುಗೆ ಹರಕೆ ತೀರಿಸುವಿಕೆ ಮಾಡಿದರೆ ಎಲ್ಲರನ್ನೂ ಚಿಕ್ಕಮಗಳೂರು ಜೈಲಿಗೆ ಕಳುಹಿಸುವುದಾಗಿ ಕಾನೂನು ರೀತ್ಯ ಕ್ರಮ ಜರುಗಿಸಿ ದೇವದಾಸಿ ಪದ್ದತಿ ರದ್ದಾಗುವಂತೆ ಮಾಡಿದರು.

ವೆಂಕಟಯ್ಯ ಒಂದು ದಿನ ಆಣೆಗೆರೆಯಿಂದ ತಮ್ಮೂರಾದ ದೇವರ ಹೊಸಹಳ್ಳಿಗೆ ಬರುತ್ತಿರುವಾಗ ಕಡೂರಿಗೆ ಹೊರಟ್ಟಿದ್ದ ಶಕೀಲ್ ಅಹ್ಮದ್ ಜೀಪು ಅಡ್ಡವಾಯಿತು. ವೆಂಕಟಯ್ಯನನ್ನು ನೋಡಿದ ಸಬ್‍ಇನ್ಸ್‍ಪೆಕ್ಟರ್ ಜೀಪು ನಿಲ್ಲಿಸಿ ಯಾಕೆ ಇಷ್ಟೊಂದು ಜೋರಾಗಿ ಹೋಗ್ತಾ ಇದ್ದೀರಿ ಎಂದು ವಿಚಾರಿಸಿದರು.

ಅಯ್ಯೋ ಸ್ವಾಮಿ ಇವತ್ತು ಶನಿವಾರ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹೋಗಿ ಅಪ್ಪಣೆ ಕೇಳಬೇಕು, ಹೊರಡೋ ದೇವರಿಗೆ ಸಿರೆ ಬ್ಯಾರೆ ಕೊಡಿಸಿದ್ದೀನಿ, ಪೂಜಾರಿ ದೇವರಿಗೆ ಸೀರೆ ಉಡಿಸಿದ್ದಾನೋ ಇಲ್ಲವೋ ಎಂದು ಪೂಜೆಗೆ ಮುಂಚೆ ನೋಡಬೇಕು ಸ್ವಾಮಿ, ಆಮೇಲೆ ನನ್ನ ಮಗ ಡಾಕುಡ್ರು ಓದ್ತಾವ್ನೆ ಕಾರ್ಡು ಬರೆದಿಲ್ಲ, ಚೆನ್ನಾಗಿದ್ದಾನ ಅಂತ ದೇವರ ಅಪ್ಪಣೆ ಕೇಳುಬೇಕು ಅಂತ ಹೊರಟಿದ್ದೀನಿ ಅಂತ ವೆಂಕಟಯ್ಯ ಹೇಳಿದರು.

ಇಷ್ಟಕ್ಕೆ ಸುಮ್ಮನಿರದ ವೆಂಕಟಯ್ಯ, ಸ್ವಾಮಿ ನಮ್ಮ ದೇವಸ್ಥಾನ ನೋಡಿದ್ದೀರ ಅಂತ ಕೇಳಿದಾಗ, ಸಬ್‍ಇನ್ಸ್‍ಪೆಕ್ಟರ್ ಶಕೀಲ್ ಅಹ್ಮದ್ ಇಲ್ಲ ಎಂದಾಗ, ಬನ್ನಿ ಸ್ವಾಮಿ ಹೋಗಾನ ಯಾವ ನನ್ನಮಗ ನಿಮ್ಮನ್ನು ಸಾಬ್ರು ಅಂತ ಒಳಕ್ಕೆ ಬಿಡಲ್ಲ ನೋಡಾನಾ ಅಂದರು.

ಶಕೀಲ್ ಅಹ್ಮದ್ ಅವರು ಕಡೂರಿನಲ್ಲಿ ಎಸ್ಪಿ ಮೀಟಿಂಗ್ ಕರೆದಿದ್ದಾರೆ ಹೋಗ್ತಾ ಇದ್ದಾನೆ ಅಂದಾಗ, ನಿಮಗೆ ಯಾವ ಎಸ್ಪಿ ಬನ್ನಿ ಸ್ವಾಮಿ, ನೀವು ಬರಲ್ಲ ಅಂದ್ರೆ ಜೀಪಿಗೆ ಅಡ್ಡ ಮಲಗುತ್ತೇನೆ ಅಂದಾಗ , ಪಿಎಸ್‍ಐ ಅವರು ಅನ್ಯ ಮಾರ್ಗವಿಲ್ಲದೆ ಪಂಚನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಪೊಲೀಸ್ ಡ್ರೆಸ್ ಹಾಕಿಕೊಂಡು ದೇವಸ್ಥಾನಕ್ಕೆ ಬಂದಾಗ ದೇವಸ್ಥಾನದ ಪೌಳಿಯಲ್ಲಿ ಇಸ್ಪೀಟ್ ಆಡುತ್ತಿದ್ದವರೆಲ್ಲಾ ಯಾವ ಕೇರಿ, ಯಾವ ಅಟ್ಟ ಹತ್ತಿ ಕುಳಿತರು ಎಂದು ಆ ನಂತರ ಹೇಳುವೆ.

ಶಕೀಲ್ ಅಹ್ಮದ್ ಬಂದ ಕೂಡಲೇ ವೆಂಕಟಯ್ಯ ದೇವಸ್ಥಾನದಲ್ಲಿ ಮಹಾಮಂಗಳಾರತಿ ಮಾಡಿಸಿ ಅಂದಿನ ಪೂಜಾರಿಯವರನ್ನು ಕರೆದು ದೇವರಿಗೆ ನೀಡಿರುವ ಒಡವೆ, ಸೀರೆ, ಬೆಳ್ಳಿ ಒಡವೆಗಳನ್ನೆಲ್ಲಾ ತೋರಿಸಿ ಎಂದಾಗ ಆಗಿನ ಕಾಲಕ್ಕೆ ಅವೆಲ್ಲಾ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ದೇವರ ಒಡವೆಗಳನ್ನು ಕಂಡ ಶಕೀಲ್ ಅಹ್ಮದ್ ಕಂಡು ದಂಗಾಗಿ ಹೋದರು.

ಸಬ್ ಇನ್ಸ್‍ಫೆಕ್ಟರ್ ಅವರು ಈ ಒಡವೆ ಎಲ್ಲಾ ಇವರೇನಾ ಕೊಟ್ಟಿರೋದು ಎಂದು ಕೇಳಿದಾಗ ಹೌದು ಸ್ವಾಮಿ ಇವರ ತಾತನ ಕಾಲದಿಂದ ಕೊಟ್ಟಿರೋದು, ನಿನ್ನೆ ತಂದ ಸೀರೆಯನ್ನು ದೇವರಿಗೆ ಉಡಿಸಿದ್ದೇವೆ, ಉಡಿಸಲಿಲ್ಲ ಅಂದ್ರೆ ಗುಡಿಗೌಡ ನೀಲಪ್ಪನಿಗೆ ವೆಂಕಟಯ್ಯ ಬಿಡಲ್ಲ ಸಾರ್ ಈ ಪೌಳಿ ಒಳಕ್ಕೆ ಅವನು ಹ್ಯಂಗೆ ಬರ್ತಾನೆ, ಗುಡಿಗೌಡಿಕೆ ಹ್ಯಂಗೆ ಮಾಡ್ತಾನೆ ದೇವರ ಗುಡೀನೆ ನಂದು.

ದೇವರಿಗೆ ಅಡ್ಡ ಬಿದ್ದು ಒಡೆವೆಯೆಲ್ಲಾ ಸೀರೇಲಿ ಕಟ್ಟಿಕೊಂಡು ಗೋವಿಂದ ಅಂತ ಹೋಗ್ತೀನಿ ಎಂದು ಹೆದುರುಸುತ್ತಾರೆ ಅಂತ ಪೂಜಾರಿ ಹೇಳಿದ್ದಕ್ಕೆ ಇನ್ಸ್‍ಪೆಕ್ಟರ್ ದೇವರಿಗೆ ವೆಂಕಟಯ್ಯನ ಹೆಸರಲ್ಲಿ ವಾರಕ್ಕೊಮ್ಮೆ ಮಹಾಮಂಗಳಾರತಿ ಮಾಡ್ರಿ ಟಿಪ್ಪು ಸುಲ್ತಾನ್‍ಗೆ ಶ್ರೀರಂಗಪಟ್ಟಣದಲ್ಲಿ ಮೊದಲ ಮಹಾಮಂಗಳಾರತಿಯಂತೆ ಅಂದಾಗ ಪೂಜಾರಿಗೆ ಪೀಕಲಾಟವಯಿತು.

ಕೊನೆಗೆ ನನಗೆ ಅದೆಲ್ಲಾ ಬ್ಯಾಡ ಸ್ವಾಮಿ ನಾನು ಬದುಕಿರುವ ತನಕೆ ರಂಗನನ್ನು ಅಪ್ಪಣೆ ಕೇಳುವಂತೆ ಮಾಡಿ ಬಿಡಿ, ದಿನವೆಲ್ಲಾ ಅಪ್ಪಣೆ ಕೇಳಿಕೊಂಡಿರುತ್ತೇನೆ ಸ್ವಾಮಿ ಪಾದದಲ್ಲಿ ಬಿದ್ದಿರುತ್ತೇನೆ ಅಂದಾಗ ಇನ್ಸ್‍ಫೆಕ್ಟರ್ ಶಕೀಲ್ ಅವರು ನಗುತ್ತಾ ದೇವಸ್ಥಾನದಿಂದ ಹೊರಡಲು ಅನುವಾದಾಗ, ವೆಂಕಟಯ್ಯ, ಪೂಜಾರಿಗೆ ಸಾಹೇಬರಿಗೆ ಪ್ರಸಾದ ಕೊಡದೆ ಕಳ್ಸಿತೀಯ, ಅಂದು ದೇವಸ್ಥನದಲ್ಲಿ ತುಂಬಾ ರುಚಿಕಟ್ಟಾಗಿ ಮಾಡುವ ಬೆಲ್ಲದ ಅನ್ನವನ್ನು ಬಡಿಸಿದಾಗ ಅದನ್ನು ತಿಂದ ಶಕೀಲ್ ಅಹ್ಮದ್ ಅವರು ನನ್ನ ಜೀವಮಾನದಲ್ಲಿ ಇಂತಹ ರುಚಿಕಟ್ಟಾದ ಅನ್ನವನ್ನು ತಿಂದಿಲ್ಲ ಎಂದು ಹೇಳಿದರಂತೆ.

ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *