ಜಾಮೀನು ಕೊಟ್ಟು ಲಿಂಗಾಯಿತರ ಹೊಟ್ಟೆ ಮರುಳಯ್ಯನನ್ನು ಬಿಡಿಸಿಕೊಂಡು ಬಂದ ವೆಂಕಟಯ್ಯ

ಆಗಿನ್ನ ಚಿಮು ಚಿಮು ಬೆಳಕಾಗುತಿತ್ತು, ಅನಾತಿ ದೂರದಲ್ಲಿ ಹೆಂಗಸೊಬ್ಬಳು ಬಾಯಿ ಬಡಿದುಕೊಂಡು ವೆಂಕಟಯ್ಯ, ವೆಂಕಟಯ್ಯ ಎಂದು ಬರುತ್ತಿರುವುದನ್ನು ಕಂಡ ನಮ್ಮಮ್ಮ ಏ ಮೂಳ ಎದ್ದೇಳು ಜಗದಮ್ಮ ಬಾಯಿ ಬಡಿದುಕೊಂಡು ಬರುತ್ತಿದ್ದಾಳೆ, ಅಹಾ ಮೂಳ ನೀನು ಮಲಗಿರೋ ಅವತಾರ ನೋಡು, ಥೂ ನಿನ್ನ ಜನ್ಮಕ್ಕೆ ಇಷ್ಟು ಬೆಂಕಿ ಹಾಕ.

ಬರೀ ಪುಟಗೋಸಿಯಲ್ಲಿ ಬೆಳಗಿನ ಸಿವಿಗನಸ್ಸು ಕಾಣುತ್ತಾ ಮಲಗಿದ್ದ ನಮ್ಮಪ್ಪ ತಲೆ ದಿಂಬಾಗಿ ಇಟ್ಟುಕೊಂಡಿದ್ದ ಲುಂಗಿಯನ್ನು ಸೊಂಟಕ್ಕೆ ಬಿಗಿಯಾಗಿ ಕಟ್ಟಿಕೊಳ್ಳುತ್ತಾ ಈ ಲಿಂಗಾಯಿತರ ಹೆಂಗಸ್ರಿಗೆ ಮಕ್ಕಳನ್ನು ಮಾಡಿಕಳ್ರಿ ಅಂದ್ರೆ ಕೇಳಲ್ಲ, ಬೆಳಿಗ್ಗೇನೆ ಬಾಯಿ ಬಡುಕೊಂತಾ ಬರ್ತಾಳೆ, ಎಂದು ನೀಲಿ ಅಂಗಿ ಸಿಗಾಕಿಕೊಂಡು ಹೊರಕ್ಕೆ ಬರುವುದಕ್ಕೂ, ಜಗದಮ್ಮ ಆಕಾಶ ಕಳಚಿ ಬೀಳುವಂತೆ ಬಾಯಿ ಬಡಿದುಕೊಳ್ಳುವುಕ್ಕೂ ಒಂದೇ ಆಗಿ, ನಮ್ಮಪ್ಪ ಅಳಸಿದ ಚಿತ್ತನ್ನ ಕೋಡೋದಕ್ಕೆ ಇಷ್ಟು ಬಾಯಿ ಬಡಕೊಂಡು ಬರುತಿಯಲ್ಲಮ್ಮ, ನನ್ನ ಹಂದಿ ಮರಿ ಹಳಸಿರೋದು ತಿನ್ನಲ್ಲ ಹೋಗಮ್ಮ ಎಂದು ಜಾಡಿಸಿದರು.

ನಮ್ಮೂರಲ್ಲಿ ಹೊಟ್ಟೆ ಮರುಳಯ್ಯನ ಹೆಂಡತಿಯೇ ಜಗದಮ್ಮ, ಈಯಮ್ಮ ಚಿತ್ರನ್ನ ಮಾಡುವುದರಲ್ಲಿ ಎತ್ತಿದ ಕೈ ಆದರೆ ಉಳಿದ ಚಿತ್ರವನ್ನು ಹಳಸುವ ತನಕ ತನ್ನ ಪ್ರಾಣ ಹೋದರೂ ಬೇರೆಯವರಿಗೆ ಕೊಡುತ್ತಿರಲಿಲ್ಲ, ಅವರ ಮನೆ ಹೊಸ್ತಿನಲ್ಲಿ ಮಲಗಿರುತಿದ್ದ ನಮ್ಮ ನಾಯಿ ಟೈಗರ್ ಜಗದಮ್ಮನ್ನ ಚಿತ್ರನ್ನವನ್ನು ತಿರುಗಿಯೂ ನೋಡುತ್ತಿರಲಿಲ್ಲ, ಮೂಸಿಯೂ ನೋಡುತ್ತಿರಲಿಲ್ಲ, ಆಹಾ ಯಲ್ಲಮ್ಮ(ನಮ್ಮಮ್ಮ)ನ ನಾಯಿಗೆ ಬಿಸಿ ಬಿಸಿ ಅನ್ನ ಬೇಕೇನೋ ಅಂತ ಛೂ ಅಂದರೆ ಜಗದಮ್ಮನನ್ನು ಒಂದೇ ಕಣ್ಣಿನಲ್ಲಿ ಕೆಕ್ಕರಿಸಿ ನೋಡಿ ಗುರ್ ಗುರ್ ಅಂದ ಕೂಡಲೇ ಜಗದಮ್ಮ ಹಿಂದಿನ ಬಾಗಿಲಿಂದ ಬಂದು ಪೊರಕೆ ತೆದುಕೊಂಡರೆ ಟೈಗರ್ ಜಗದಮ್ಮನಿಗಿಂತ ಉದ್ದಕ್ಕೆ ನಿಂತು ಬೋ ಅಂದ ಕೂಡಲೇ ಇಡೀ ಮನೆ ಹೆಂಚು ಅಲ್ಲಾಡುವಂತಾಗುತಿತ್ತು, ಜಗದಮ್ಮ ಪೊರಕೆ ಬೀಸಾಕಿ ಅಂಗಡಿ ಬಿಸ್ಕೆಟ್ ಹಾಕಿ ಸಮಾಧಾನ ಮಾಡುತ್ತಿದ್ದರು.

ಈ ಹೊಟ್ಟೆ ಮರುಳಯ್ಯ ಆಗಿನ ಕಾಲಕ್ಕೆ ಮಹಾನ್ ಕುಡುಕನಾಗಿದ್ದನು, ನಮ್ಮಪ್ಪ ಹತ್ತಾರು ವರ್ಷ ಅವರ ತೆಂಗಿನ ತೋಟದಲ್ಲೇ ಹಂದಿ ಮಂದೆ ಹಾಕಿಕೊಂಡು ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು, ಶಕೀಲ್ ಅಹ್ಮದ್ ಬಂದು ಎಷ್ಟು ವರ್ಷದಿಂದ ಈ ತೋಟದಲ್ಲಿ ಇದ್ದೀಯ ಎಂದು ನಮ್ಮಪ್ಪನನ್ನು ಕೇಳಿದಾಗ ಹತ್ತು ವರ್ಷ ಎಂದು ಹೇಳಿದರು, ಆ ತೋಟ ನಿನ್ನ ಹೆಸರಿಗೆ ಮಾಡಿಸುತ್ತೇನೆ ಎಂದು ಇನ್ಸ್‍ಫೆಕ್ಟರ್ ಹೇಳಿದ್ದನ್ನು ಕೇಳಿದ ಹೊಟ್ಟೆ ಮರುಳಯ್ಯ ಮಾರನೆಯ ದಿನವೇ ಬಂದು ನಮ್ಮಪ್ಪನಿಗೆ ಪೂಸಿ ಹೊಡೆದು ತೋಟದಿಂದ ಖಾಲಿ ಮಾಡಿಸಿದ ಮೇಲೆಯೇ ನಮಗೆ ಶಕೀಲ್ ಅಹ್ಮದ್ ಕೊಡಿಸಿದ ಸೈಟ್‍ನಲ್ಲಿ ನಮ್ಮಣ್ಣ ಲಕ್ಷ್ಮಣ ಮನೆ ಕಟ್ಟಿದ್ದು.
ಈ ಹೊಟ್ಟೆ ಮರುಳಯ್ಯ ನಮ್ಮ ಅಪ್ಪನಿಗೆ ಹೆಂಡದ ರುಚಿ ತೋರಿಸಿ ಬ್ಯಾಂಕ್‍ನಲ್ಲಿ ತಾನೇ ಜಾಮೀನುದಾರನಾಗಿ ಹಂದಿ ಸಾಲವನ್ನು ತೆಗೆದು, ಸಬ್ಸಿಡಿ ಹಣವನ್ನೆಲ್ಲಾ ತಾನೆ ಕುಡಿದು ಉಚ್ಚೆ ಹೊಯ್ದದ್ದಲ್ಲದೆ, ಬ್ಯಾಂಕ್ ಸಾಲ ತೀರಿಸಿಲ್ಲ ಎಂದು ನಮ್ಮಪ್ಪ ಸಾಕಿದ್ದ ಎರಡು ಹಂದಿಗಳನ್ನು ಮಾರಿಕೊಂಡು ಹೆಂಡ ಕುಡಿದಿದ್ದ.

ಇದರ ಬಗ್ಗೆ ನಮ್ಮಪ್ಪನಿಗೂ ಮರುಳಯ್ಯನಿಗೂ ಇಬ್ಬರೂ ಹೆಂಡ ಕುಡಿದಾಗ ಜಗಳ ತಾರಕಕ್ಕೆ ಹೋಗುತಿತ್ತು, ನೋಡೋ ಹೊಟ್ಟೆ ಮರುಳ ನಿನ್ನ ಶಕೀಲ್ ಅಹ್ಮದ್‍ಗೆ ಹೇಳಿ ನಿನ್ನ ಜೈಲಿಗೆ ಹಾಕಿಸಲಿಲ್ಲ ಅಂದ್ರೆ ನಮ್ಮಪ್ಪನಿಗೆ ಹುಟ್ಟಿಲ್ಲ ಅಂದುಕೋ ಎಂದು ಸವಾಲು ಹಾಕಿದ್ದರು.

ಇದಾದ 3 ದಿನಕ್ಕೆ ಚಿನ್ನಾಗಿ ಕುಡಿದಿದ್ದ ಮರುಳಯ್ಯ ಆಣೆಗೆರೆಯಲ್ಲಿ ದೊಡ್ಡ ಜಗಳ ಮಾಡಿದ್ದಲದೆ ಆಣೆಗೆರೆಯವರು ನಮ್ಮೂರ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಹ್ಯಂಗೆ ಬರುತ್ತೀರ ಬನ್ನಿ ಎಂದು ಸಿಕ್ಕವರಿಗೆಲ್ಲ ಕಚ್ಚಿದ್ದಲ್ಲದೆ, ಬರೀ ಚೆಡ್ಡಿಯಲ್ಲಿ ಹೊಸಹಳ್ಳಿಗೆ ಬಂದು ತಮ್ಮ ಮನೆಯ ಮುಂದೆ ಇದ್ದ ದೇವರ ಪೂಜಾರಿ ಮನೆಗಳ ಕದಗಳನ್ನೆಲ್ಲಾ ಮುರಿದು, ತನ್ನ ಅಂಗಡಿಯಲ್ಲಿ ಮೈಸೂರು ಬಾರ್‍ಸೋಪು ಕಟ್ಟು ಮಾಡಲು ಇಟ್ಟಿದ್ದ ಚಾಕು ತಗೊಂಡು ಪಚಿಡಿ ರಂಗಪ್ಪ, ಅವರ ಅಣ್ಣನ್ನೆಲ್ಲಾ ಬೆರಸಾಡಿ, ಆಣೆಗೆರೆಯವರು ಬಂದರೆ ಪೂಜೆ ಮಾಡಿದರೆ ನಿಮಗೆ ಒಂದು ಗತಿ ಕಾಣಿಸುತ್ತೇನೆ ಎಂದು ರಸ್ತೆಯಲ್ಲಿ ಕುಣಿಯುತ್ತಿರುವಾಗಲೇ ಪೊಲೀಸ್ ಜೀಪ್ ಬಂದು ಮರುಳಯ್ಯನನ್ನು ಎತ್ತಿ ಹಾಕಿಕೊಂಡು ಹೋಗಿತ್ತು.

ಮರುಳಯ್ಯನನ್ನು ಎತ್ತಿ ಹಾಕಿಕೊಂಡು ಹೋಗಿದ್ದನ್ನು ನೋಡಿದ ಆತನ ಹೆಂಡತಿ ಜಗದಮ್ಮ ವೆಂಕಟಯ್ಯನೇ ಶಕೀಲ್ ಅಹ್ಮದ್‍ಗೆ ಹೇಳಿ ಆರೆಸ್ಟ್ ಮಾಡಿಸಿದ್ದಾರೆ ಎಂದು ತಿಳಿದುಕೊಂಡು, ಬೆಳಿಗ್ಗೆ ಬಿಟ್ಟು ಕಳಿಸುತ್ತಾರೆ ಅಂತ ತಿಳಿದುಕೊಂಡರೂ ಮರುಳಯ್ಯನನ್ನು 3 ದಿನವಾದರೂ ಪೊಲೀಸ್ ಠಾಣೆಯಿಂದ ಬಿಡುಗಡೆಯಾಗದ್ದನ್ನು ಕಂಡ ಜಗದಮ್ಮ ಬಾಯಿ ಬಡಿದುಕೊಂಡು ವೆಂಕಟಯ್ಯನ ಮನೆ ಮುಂದೆ ಅಳುತ್ತಾ ನಿಂತಿದ್ದಳು.

ನಮ್ಮಪ್ಪ ಇದ್ಯಾವುದಕ್ಕೂ ಕೇರ್ ಮಾಡದೆ ಗೂಡಿನಲ್ಲಿದ್ದ ಹಂದಿಗಳನ್ನು ಇಣುಕಿ ನೋಡುತ್ತಾ, ರಂಗನ ಪೂಜಾರಿಗಳನ್ನು ಹೊಡೆದ್ರೆ ದೇವರು ಸುಮ್ನೆ ಬಿಡ್ತಾನ, ಹೋಗಮ್ಮ ಯಾರಾದ್ರು ಲಿಂಗಾಯಿತ್ರು ಇದ್ರೆ ಜಾಮೀನು ಕೊಟ್ಟು ಬಿಡಿಸಿಕೊಂಡು ಬಾ ಅನ್ನೋದಕ್ಕೂ ನಮ್ಮಮ್ಮ ಏ ಮೂಳ ಮೊದ್ಲು ಬಿಡಿಸಿಕೊಂಡು ಬಾ, ಅಮ್ಯಾಕೆ ದ್ಯಾವ್ರು ಅಂದಾಗ ನಮ್ಮಮ್ಮನಿಗೆ ಸುಟ್ಟು ಎಡೆ ದಿಮ್ಮೀಲಿ ಎರಡು ಏಟು ಬೀಳುತ್ತಲೇ ಜಗದಮ್ಮನನ್ನು ದುರುಗುಟ್ಟಿ ನೋಡುತ್ತಾ ನಿನ್ನ ಗಂಡ ನನ್ನವು ಎರಡು ಹಂದಿ ಮಾರಿಕಂಡು ಕುಡಿದ್ನಲ್ಲ, ಅದರ ದುಡ್ಡು ಕೊಟ್ರೆ ಮುಂದಕ್ಕೆ ನೋಡಾನಾ ಅಂದ್ರು.

ಜಗದಮ್ಮ ಬಿರುಗಾಳಿಯಂತೆ ತನ್ನ ಚಿಲ್ಲರೆ ಅಂಗಡಿಗೆ ನುಗ್ಗಿ ಗಲ್ಲದಲಿದ್ದ ದುಡ್ಡನ್ನೆಲ್ಲಾ ತಂದು ನಮ್ಮಪ್ಪನಿಗೆ ಕೊಟ್ಟು ಹೋಗು ಬಿಡಿಸಿ ಕಂಡು ಬಾ, ಸಂಜೆ ಒಳಗೆ ಮರುಳಯ್ಯ ಮನೇಲಿ ಇರಬೇಕು ಅಂದ್ರು, ಇನ್ನ ಮನೀಗೆ ಹೋಗಿ ಚಿತ್ತನ್ನ ಮಾಡೋಗಮ್ಮ ನಿಮ್ಮ ಗಂಡ ಎಲ್ಲಿಗೇನು ಹೋಗಿಲ್ಲ ಅಂತ ವೆಂಕಟಯ್ಯ ಹಂದಿಗೂಡಿನ ಬಾಗಿಲು ತೆಗೆದು ಆಣೆಗೆರೆಗೆ ಹಂದಿಗಳನ್ನು ತವ್ರಿ, 11ಗಂಟೆ ಪಂಚನಹಳ್ಳಿ ಬಸ್ಸಿಗೆ ಹತ್ತಿ ಪೊಲೀಸ್ ಠಾಣೆಗೆ ಹೋಗುವ ವೇಳೆಗೆ 12ಗಂಟೆ ಆಗಿತ್ತು.

ಬಂದೂಕ ಹಿಡಿದು ನಿಂತಿದ್ದ ಸೆಂಟ್ರಿ ಪಿಸಿಯನ್ನು ನಮ್ಮಪ್ಪ ಶಕೀಲ್ ಅಹ್ಮದ್ ಇದಾರ ಎಂದಾಗ ಇಲ್ಲ ಕಣಯ್ಯ, ಎಂದರು, ಹಂಗಾರೆ ಬಾಯಿ ಒಣಗಿದೆ ಒಂದು ಬಾಟ್ಲಿ ಸೇಂದಿ ಕುಡಿದು ಬರ್ಲಾ ಅಂದಾಗ ಪೊಲೀಸ್ ಪೇದೆ ಹಂಗೆ ಮಾಡಿದ್ರೆ ನಿನ್ನು ಸೆಲ್ ಒಳಕ್ಕೆ ಹಾಕ್ತಾರೆ ಎಂದಾಗ, ದೇವಾನು ದೇವತೆಗಳೆ ಕುಡಿದು ಕುಣಿತಾವೆ, ಇನ್ನ ನಾನು ಕುಡಿದ್ರೆ ಏನು ಆಗುತ್ತೆ, ನನ್ನ ಸೆಲ್ ಒಳಕ್ಕೆ ಹಾಕಿದ್ರೆ ಇನ್ನೂ ಒಳ್ಳೇದೆ, ಹೆಂಡ, ಚಾಕ್ಣ (ಮೀನು ಪ್ರೈ) ಇಲ್ಲಿಗೆ ಬರುತ್ತೇ ಅನ್ನುವುದಕ್ಕೂ ಬುಲೆಟ್ ಬೈಕಿನಲ್ಲಿ ಶಕೀಲ್ ಅಹ್ಮದ್ ಬರುವುದಕ್ಕೂ ಸರಿ ಹೋಯಿತು.

ವೆಂಕಟಯ್ಯನನ್ನು ನೋಡಿದ ಇನ್ಸ್‍ಫೆಕ್ಟರ್ ಒಳಗೆ ಕರದುಕೊಂಡು ಹೋಗಿ ಏನು ಅಂತ ಕೇಳಿದರು, ನಮ್ಮಪ್ಪ ಅದೇ ಸ್ವಾಮಿ ಆ ಲಿಂಗಾಯಿತರ ಹೊಟ್ಟೆ ಮರುಳಯ್ಯನನ್ನು ಕರೆದುಕೊಂಡು ಹೋಗಲು ಯಾವ ಗಂಡಸು ಲಿಂಗಾಯಿತರು ಹೋಗಿಲ್ಲ ಅಂತ ಅವನ ಹೇಂಡ್ತಿ ನಮ್ಮನೆ ಮುಂದೆ ಬಾಯಿ ಬಡಿದುಕೊಳ್ತಾ ಇದ್ದಾಳೆ ಎಂದಾಗ, ಜಮೀನು ಪತ್ರ ಬೇಕು ಜಾಮೀನು ಕೊಡೋದಕ್ಕೆ ಅಂದರು.

ಜಮೀನು ಇದ್ರೆ ಹಂದಿ ಯಾಕೆ ಸಾಕುತಿದ್ದೆ ಸ್ವಾಮಿ, ಬೇಕಾದ್ರೆ ಹೇಳಿ ಎರಡು ಹಂದಿ ಜಾಮೀನು ಕೊಟ್ಟು ಇಲ್ಲಿಗೆ ತಂದು ಬಿಡ್ತಿನಿ ಅವಕ್ಕೆ ಸೀಲು, ಓಲೆ ಹಾಕಿ ಇಲ್ಲೆ ಮೇಸಿಕೊಳಿ ಸ್ವಾಮಿ ಅಂದಾಗ, ಶಕೀಲ್ ಅಹ್ಮದ್ ಗಂಭೀರವಾದ ಇನ್‍ವೆಸ್ಟಿಗೇಸಿನಲ್ಲಿ ಇದ್ದುದರಿಂದ ಇವರ ಹೆಬ್ಬಟ್ಟು ತಗಂಡು ಮರುಳಯ್ಯನನ್ನು ಬಿಡಲು ಹೇಳಿದರು.

ಪೊಲೀಸ್ ಪೇದೆ ಹೆಬ್ಬಟ್ಟು ಒತ್ತಿಸಿಕೊಳ್ಳಲು ಪ್ಯಾಡ್ ತಂದ ಕೂಡಲೇ ನಮ್ಮಪ್ಪ ಇರಯ್ಯ ಮರುಳಯ್ಯನನ್ನು ಮಾತನಾಡಿಸಿದ ಮೇಲೆ ಹೆಬ್ಬಟ್ಟು ಹಾಕುತ್ತೇನೆ ಎಂದು ಹೊಟ್ಟೆ ಮರುಳಯ್ಯನನ್ನು ಕೂಡಿದ್ದ ಸೆಲ್ ಹತ್ತಿರ ಹೋಗಿ ನಿನ್ನ ಬಿಡಿಸಿಕೊಂಡು ಹೋಗಲು ನಮ್ಮೂರ ಸಾವಕ್ಕಾರು ಬರಲಿಲ್ಲವೆ, ನನ್ನ ಮೇಲೆ ಜಗಳ ಮಾಡಿದ್ರೆ ಇಲ್ಲೇ ಇರಬೇಕಾಗುತ್ತೆ, ನನ್ನ ಎರಡು ಹಂದಿ ಮಾರಿಕೊಂಡು ಕುಡಿದಿರೋದು ವಾಪಸ್ಸು ಕೊಡುತ್ತೀನಿ ಅಂತ ರಂಗನ ಮೇಲೆ ಆಣೆ ಮಾಡಿದ್ರೆ ಜಾಮೀನು ಕೊಟ್ಟು ಬಿಡಿಸಿಕೊಂಡು ಹೋಗುವುದಾಗಿ ವೆಂಕಟಯ್ಯ ಹೇಳಿದ್ದೆ ತಡ, ಮರುಳಯ್ಯ ಮೊದಲು ಬಿಡಿಸು ಅಂತ ಗೋಗೆರದನು.

ನಮ್ಮಪ್ಪ ಮತ್ತಷ್ಟು ಉಗಿದು ಉಪ್ಪಿನ ಕಾಯಿ ಹಾಕಿ ಹೆಬ್ಬಟು ಒತ್ತಿ ಜಾಮೀನು ಕೊಟ್ಟು ಹೊಟ್ಟೆ ಮರುಳಯ್ಯನನ್ನು ಬಿಡಿಸಿಕೊಂಡು ಬಂದರು, ಇದನ್ನು ಕಂಡ ಜಗದಮ್ಮ ತಮ್ಮ ಅಣ್ಣ ತಮ್ಮಂದಿರು, ಲಿಂಗಾಯಿತರಿಗೆಲ್ಲಾ ವಾಚಾಮಗೋಚರ ಬೈದುಕೊಂಡು ತಿಂಗಳಾನುಗಟ್ಟಲೆ ನಮ್ಮಪ್ಪನ ಗುಣಗಾನ ಮಾಡಿದ್ದೇ ಮಾಡಿದ್ರು, ಮರುಳಯ್ಯ ಇದೇ ಕೊರಗಿನಲ್ಲಿ ಒಂದಷ್ಟು ದಿನ ಮನೆಯಿಂದ ಹೊರಗೆ ಬರಲಿಲ್ಲ.

Leave a Reply

Your email address will not be published. Required fields are marked *