ಯೋಗ-ಯೋಗ ಮ್ಯಾಟ್ ಎಂಬ ಮಾಯಜಾಲ(ಮಾಯಲೋಕ),ಬದಲಾವಣೆ ಬಯಸದ ಬುದ್ದಿಜೀವಿಗಳು-ಜಗತ್ತನ್ನು ಹಲವು ಸಲ ತಿರುವಿ ಹಾಕಿದ ರಾಘು-ಸತೀಶ್

ತುಮಕೂರು : ನಾನು ಮಧ್ಯಾಹ್ನದ ಊಟ ಮಾಡಿ ಬರುವ ವೇಳೆಗೆ ನನ್ನ ಕಛೇರಿಯಲ್ಲಿ ಕೂತಿದ್ದ ಸತೀಶ್-ರಾಘು ಅವರುಗಳು ಸಾರು ಕುದಿಯುವಾಗ ಸೌಟು ಹಾಕಿ ಆಗಾಗ ತಿರುವುತೇವೆಲ್ಲಾ ಹಾಗೆ ಜಗತ್ತನ್ನು ಬದಲಾವಣೆ ಮಾಡುವವರಂತೆ ಹಲವು ಸಲ ತಿರುವಿ ನಗಾಡುತ್ತಿದ್ದರು, ನಾನು ಬಂದಿದ್ದನ್ನು ನೋಡಿ ಮತ್ತಷ್ಟು ನಕ್ಕರು, ಸಾರು ಹದಕ್ಕೆ ಬಂದಿದೆಯೇ ಎಂದು ನೋಡುವವರು ಒಬ್ಬರು ಬೇಕಲ್ಲಾ ಹಾಗೆ ಜಗತ್ತು ಹದಕ್ಕೆ ಬಂದಿದೆಯೇನೋ ನೋಡು ಬಾ ಎಂಬಂತಿತ್ತು ಅವರ ನಗುವಿನಲ್ಲಿ.

ಒಳಕ್ಕೆ ಬಂದವನೇ ಮೋದಿ ಅಮೇರಿಕಾಕ್ಕೆ ಯೋಗ ಮಾಡಲು ಹೋಗಿದ್ದಾರಲ್ಲ ಅಂದೆ, ಸತೀಶ್ ಅವರು ವಿಶ್ವಸಂಸ್ಥೆಯಲ್ಲಿ ವಿಶ್ವ ಯೋಗ ಡೇ ಮಾಡಿಸಿದ್ದು ಪ್ರಧಾನಿ ಮೋದಿ ತಾನೆ, ಅದಕ್ಕೆ ಜಗತ್ತಿನ ಯಾವ ದೇಶದಲ್ಲಿ ಬೇಕಾದರೂ ಪ್ರಧಾನಿ ಮೋದಿ ಯೋಗ ಮಾಡುಬಹುದು ಕಣ್ರೀ ಅಂದರು.

ಆ ವೇಳೆಗೆ ರಾಘು ಪೋನ್ ಬಡಿದುಕೊಂಡಿತು, ಪೋನ್ ಎತ್ತಿಕೊಂಡ ಕೂಡಲೇ ಆ ಕಡೆಯಿಂದ ಅಪ್ಪಾ ತುಮಕೂರಿನಾಗೆ ಇದ್ದೀಯ ಅಂತ ಅವರ ಮಗ ಕೇಳಿದ, ಅದಕ್ಕೆ ರಾಘು ಊನ್ ಕಣೋ ಏನು ಅಂದ್ರು, ನಾಳೆ ಯೋಗ ಡೇ ಕಣಪ್ಪ, ಮೇಷ್ಟ್ರು ಎಲ್ಲಾರೂ ಯೋಗ ಮ್ಯಾಟು ತರಾಕೆ ಹೇಳಿದ್ದಾರೇ ಅಂದ, ದುಡ್ಡು ಎಲ್ಲೈತೆ, ಮನೇಲಿರೋ ಬೆಡ್ ಸೀಟೋ, ಜಮಾಕಾನನೋ ಆದ್ರೆ ಸಾಲದೆ, ಅದು ಬ್ಯಾಡ ಅಂದ್ರೆ ಸತೀಶರಿಗೆ ಹಾಕಿರೋ ಶಾಲುಗಳಿವೆ ಒಂದೆರಡು ಇಸ್ಕಂಡು ಬಂದು ಕೊಡುತೀನಿ ಅವನ್ನೇ ತಗೊಂಡೋಗು ಒಂದಿನಕ್ಕೆ ಯಾಕೆ ಯೋಗ ಮ್ಯಾಟ್ ಅಂತ ರಾಘು ರಾಂಗಾದರು, ಆ ಕಡೆಯಿಂದ ಅವರ ಮಗ ಯಾಕೇಳು ಅಮ್ಮನ ಸೀರೆ ತಂಗಂಡು ಹೋಗು ಅನ್ನು, ರಾಘು ಅದು ಇನ್ನ ಒಳ್ಳೇದು ಕಣೋ, ನಾವೆಲ್ಲಾ ಅಮ್ಮನ ಸೀರೆ ಹೊದ್ದುಕೊಂಡು ಮಲಗುತ್ತಿದ್ದೆವು ಅಂದರು, ಮಗ ಅದು ನಿಮ್ಮ ಕಾಲ ಕಣಪ್ಪ ಅಂದ, ರಾಘು ಈಗೇನು ಅದೇ ಸೂರ್ಯ-ಚಂದ್ರ ಅಲ್ವ, ಅವರೇನಾದರೂ ಚೇಂಜ್ ಆಗಿದ್ದಾರಾ ಎಂದರು.

ರಾಘು ಬಗ್ಗದೆ ಇರೋದ್ರಿಂದ ಆ ಕಡೆಯಿಂದ ಅಪ್ಪ ನಿಟ್ಟೂರು ಮೈದಾನದಲ್ಲಿ ಕಣಪ್ಪ ಯೋಗ ಮಾಡಿಸೋದು ಎಲ್ಲಾರು ಯೋಗ ಮ್ಯಾಟ್ ತರಬೇಕಾದ್ರೆ ನಾನು ಸತೀಶಣ್ಣನ ಶಾಲು ತಗೊಂಡು ಹೋದ್ರೆ ಹ್ಯಂಗಪ್ಪಾಜಿ ಅಂದ, ಮಧ್ಯೆ ಬಾಯಿ ಹಾಕಿದ ಸತೀಶ್ ಪಾಪ ಶಾಲು ತಗೊಂಡು ಹೋದ್ರೆ ನಿನ್ನ ಮಗನ ಪ್ರಿಸ್ಟೇಜ್ ಏನಾಗಬೇಕಯ್ಯ, ನೀನಿನ್ನು ನಿನ್ನ ಕಾಲದಲ್ಲೇ ಇದ್ದೀಯ ಕೊಡ್ಸಯ್ಯ ಒಂದು ಯೋಗ ಮ್ಯಾಟ್ ಅಂದ್ರು, ರಾಂಗ್ ಆಗಿದ್ದ ರಾಘು ಮೆತ್ತಗಾಗಿ ಇಕ್ಕಪ್ಪ ತಂತೀನಿ ಅಂತ ಹೇಳಿದರು.

ಈ ವೇಳೆಗೆ ನಮ್ಮ ಕಾಡಶೆಟ್ಟಿಹಳ್ಳಿ ಶಾಲೆಯಿಂದ ಸತೀಶ್ ಅವರಿಗೆ ಹೆಡ್‍ಮಾಸ್ಟರ್ ಪೋನ್ ಮಾಡಿ ಸಾರ್ ನಾಳೆ ಯೋಗ ಡೇ ಅಂದ್ರು, ಸತೀಶ್ ಅದಕ್ಕೆ ನಾನೇನು ಯೋಗ ಮಾಡ್ಲಾ, ನೀವು ಹೆಡ್‍ಮಾಸ್ಟರ್ ಮಕ್ಕಳಿಗೆ ಯೋಗ ಮಾಡ್ಸಿ ಅಂದ್ರು, ಅದಲ್ಲಾ ಸಾ, ಯೋಗ ಮ್ಯಾಟು ಬೇಕಿತ್ತು ಅಂದರು, ಅಲ್ಲಾರಿ ಮೇಷ್ಟ್ರೇ 350 ಮಕ್ಕಳಿಗೆ ಯೋಗ ಮ್ಯಾಟ್ ಕೊಡಿಸಲು ಆಗುತ್ತಾ, 1,05000.00 (ಒಂದು ಲಕ್ಷದ ಐದು ಸಾವಿರ) ಆಗುತ್ತೆ. ನೀವೆ ಯೋಚ್ನೆ ಮಾಡಿ, ಮಕ್ಕಳಿಗೆಲ್ಲ ಆವರವರ ಮನೆಯ ಬೆಡ್‍ಸೀಟ್, ಜಮಖಾನೆ ತರಲು ಹೇಳಿ ಮಣ್ಣಾದರೆ ಅವರಮ್ಮ ಹತ್ತು ರೂಪಾಯಿ ಸೋಪಿನಲ್ಲಿ ತೊಳೆದು ಹಾಕುತ್ತಾರೆ, ನಮ್ಮ ಮಕ್ಕಳೆಲ್ಲಾ ರೈತರ, ಬಡವರ ಮಕ್ಕಳು ಅಂದರು.

ತುಮಕೂರಿನ ವಿಶಾಲ ಮಾರ್ಟ್‍ಗೆ ಹೋಗಿ ಯೋಗ ಮ್ಯಾಟ್ ತಂದ ರಾಘು ತಮ್ಮ ಹೆಗಲಿಗೆ ತಗುಲಾಕಿಕೊಂಡು ತುಮಕೂರು ಬಿಡುವ ತನಕ ನನ್ನ ಮಗನಿಗೆ ಯೋಗ ಮ್ಯಾಟ್ ತಗೋಡಿರೋದನ್ನು ರೋಡ್‍ನಲ್ಲಿ ಹೋಗಿ-ಬರೋರಿಗೆಲ್ಲಾ ಪ್ರದರ್ಶನ ಮಾಡಿಸಿ ಬೀಗಿದರು.

ಮತ್ತೆ ವಾಸ್ತವ ಜಗತ್ತಿಗೆ ಬರೋಣ, ಸತೀಶ್ ಏನ್ರಿ ನಮ್ಮ ಸ್ಥಿತಿ ಮಕ್ಕಳಿಗೆ ಯೋಗ ಮ್ಯಾಟ್ ಕೊಡಿಸಲು ಆಗದಷ್ಟರ ಮಟ್ಟಿಗೆ ನಮ್ಮ ಸ್ಥಿತಿ ಬಂತಲ್ಲ, ನಮ್ಮ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದ ಬುದ್ದಿಜೀವಿಗಳು, ಪ್ರಗತಿ-ಪರರು ಬದಲಾವಣೆ ಪರವಾಗಿದ್ದರೆ ನಮ್ಮ ಸ್ಥಿತಿ ಹಿಂಗೆ ಇರುತಿತ್ತೇನ್ರಿ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರನ್ನೆಲ್ಲಾ ನಮ್ಮಂತವರ ತಲೆ ಮ್ಯಾಲೆ ಇಟ್ಟು ಇಳಿಸಲು ಆಗುತ್ತಿಲ್ಲ, ಹೊತ್ತುಕೊಂಡು ತಿರುಗಲೂ ಆಗದಂತೆ ಮಾಡಿ ಅವರು ಮಾತ್ರ ಎಲ್ಲದನ್ನೂ, ಎಲ್ಲಾರನ್ನೂ ಬಿಸಾಕಿ ಒಳ್ಳೋಳ್ಳೆ ಏ.ಸಿ.ರೂಂನಲ್ಲಿ ಕೂತುಕೊಂಡು ಸ್ಕಾಚ್ ಕುಡಿತಾ ಜಗತ್ತನ್ನು ಬದಲಾಯಿಸುವುದಾಗಿ ಹೇಳುತ್ತಾ, ಚುನಾವಣೆ ಕಾಲದಲ್ಲಿ ಎಲ್ಲೋ ಒಂದೆರಡು ಕಡೆ ಓಡಾಡಿ ಸರ್ಕಾರ ನಾವೇ ಬರಿಸಿದ್ದು ಅಂತ ಪ್ರಾಧಿಕಾರಗಳಿಗೆ, ನಿಗಮ ಮಂಡಳಿಗಳಿಗೆ, ನಮ್ಮನ್ನೇ ನೇಮಿಸಿ ಅಂತ ಸಿದ್ದರಾಮಯ್ಯನವರ ಮುಂದೆ ಅರ್ಜಿ ಹಿಡ್ಕಂಡು ನಿಂತವ್ರಂತೆ, ಇವರಿಗೆ ಯಾವ ಬದ್ಧತೆ, ತತ್ವ-ಸಿದ್ಧಾಂತ ಇದೆಯೇನ್ರಿ, ಗಾಂಧಿ ತರಹ ಇವ್ರು ಎಂದು ಕ್ರಿಯೇಟಿವಿಟಿಯಾಗಿ ಕೆಲಸ ಮಾಡಿದ್ದಾರೆ ಎಂದರು.

ಮಧ್ಯ ಪ್ರವೇಶಿಸಿದ ನಾಗೇಂದ್ರ ರೀ ಸಂಪಾದಕ್ರೇ ನೀವೆಲ್ಲಾ ಈ ಪ್ರಗತಿ-ಪರರ ಬಗ್ಗೆ ಲಂಕೇಶ್ ತರ ಸಂಪಾದಕೀಯ ಬರೆದಿದ್ರೆ ಯಾಕ್ರೀ ಅವರು ಬಂಗ್ಲೆ ಕಟ್ಟೋರು, ಬಿಎಂಡಬ್ಲು ಕಾರು ತಗೊಳೋರು, ಸಿದ್ದರಾಮಯ್ಯನ ಮುಂದೆ ನಮ್ಮನ್ನೇ ನೇಮಿಸಿ ಅಂತ ಅರ್ಜಿ ಕೊಡೋರು ಮೊದ್ಲು ಇಂತಹ ಸಂಪಾದಕರನ್ನು ಕಂಬಕ್ಕೆ ಕಟ್ಟಿ ಹೊಡೆದು ನಾವೇ ಸಂಪಾದಕೀಯ ಬರೆಯೋ ತನಕ ಈ ವ್ಯವಸ್ಥೆ ಸರಿಯೋಗಲ್ಲ ಸತೀಶ್ ಎಂದು ಚಪ್ಪಾಳೆ ತಟ್ಟುತ್ತಾ ನಕ್ಕರು.

ಸುಮ್ಮನಿರದ ಸತೀಶ್ ಮೈತ್ರಿನ್ಯೂಸ್ ಸಂಪಾದಕ ವೆಂಕಟಾಚಲರನ್ನು ಎಲ್ಲಿ ಕಟ್ಟಿ, ಎಲ್ಲಿ ಹೊಡೀತೀರ ಹೇಳಿ ನಾವು ಬರುತೀವಿ ಅಂದಾಗ ನಾಗೇಂದ್ರ, ಯಾಕೆ ನೀವು ಹೊಡೆತೀರ, ಇಲ್ಲ ಹ್ಯಂಗೆ ಹೊಡಿತೀರ ಅಂತ ನೋಡಾಕೆ ಎಂದು ರಾಘು-ಸತೀಶ್ ಪಕಾರನೇ ನಕ್ಕರು.

ನಾಗೇಂದ್ರ ಮತ್ತಷ್ಟು ರಾಂಗ್ ಮತ್ತು ಸ್ಟ್ರಾಗ್ ಆಗಿ ಒಹೋ ಆಹಾ ಅಂತ ಕೈ ಬೀಸುತ್ತಾ ಮೈತ್ರಿ ಅಂತ ಹೆಸರು ಇಟ್ಟುಕೊಂಡು ಎಲ್ಲರೊಂದಿಗೂ ಮೈತ್ರಿ ಮಾಡಿಕೊಂಡ್ರೆ ಜಗತ್ತು ಬದಲಾಗಲ್ಲ ಸಂಪಾದಕ್ರೇ ನಾಳಿಕ್ಕೇ ಒಂದು ಬಿಗಿಯಾದ ಸಂಪಾದಕೀಯ ಬರೀರಿ, ಅವ್ರರ್ಯಾರಿ ಲೋಹಿಯಾವಾದಿಗಳು, ಸಮಾಜವಾದಿಗಳು, ಒಹೋ ಎಲ್ಲರನ್ನು ಹೊತ್ತುಕೊಂಡು ತಿರುಗುತ್ತೀರ, ನಿಮ್ಮ ಕಷ್ಟ ಯಾವನಾರ ಈ ವಾದಿಗಳು-ವ್ಯಾದಿಗಳು ಕೇಳಿದ್ದಾರೇನ್ರೀ, ಪತ್ರಿಕೆ ನಡೆಸಪ್ಪ ಅಂತ ಒಂದು ಪೈಸೆ ಕೂಡ ಕೊಟ್ಟಿಲ್ಲ, ತುಮಕೂರು ತುಂಬಾ ತಲೆ ಮೇಲೆ ಹೊತ್ತುಕೊಂಡು ಈ ಸಮಾಜವಾದಿಗಳನ್ನು-ಲೋಹಿಯಾವಾದಿಗಳು ತಿರುಗುತ್ತೀರಾ, ಈಗಲಾದರೂ ಬಿಸಾಕಿ ಹೊಟ್ಟೆ-ಬಟ್ಟೆಗೆ ಹೊಂಚಿಕೊಳ್ಳಿ, ನಡೀರಿ ಆ ದೋರೈರಾಜ್ ಮನೆ ಮುಂದೆ ಸ್ಟ್ರೈಕ್ ಮಾಡಾನ, ಅವ್ರು ಇವ್ರಗೆಲ್ಲಾ, ನಿಮ್ಮಂತಹ ಸಂಪಾದಕರಿಗೆಲ್ಲಾ ಬುದ್ದಿ ಹೇಳೋದು ಬಿಟ್ಟು ಸಿಕ್ಕ ಸಿಕ್ಕ ಕಡೆ ಭಾಷಣ ಮಾಡುತ್ತಾರೆ ಎಂದು ಸೈಕ್ಲೋನ್‍ನಿಂದ ಸಣ್ಣಗೆ ಬೀಳುತ್ತಿದ್ದ ಮಳೆಯಲ್ಲೂ, ನನ್ನ, ಸತೀಶ್, ಇಬ್ಬರು ರಾಘುಗಳನ್ನು ಬೆವರುವಂತೆ ಬೆವರು ಇಳಿಸಿದರು.

ಇದರ ಮಧ್ಯೆ ಬಾಯಿ ಹಾಕಿದ ಸತೀಶ್ ಶಿಕ್ಷಣದಲ್ಲಿ ತರಲು ಹೊರಟಿರುವ ಎನ್‍ಇಪಿಯ ಬಗ್ಗೆ ಸುಧೀರ್ಘವಾಗಿ ಮಾತನಾಡಿದರು.

ಈಗ್ಗೆ ಎಂಟು ವರ್ಷಗಳ ಹಿಂದೆ ನನ್ನ ಚಿಕ್ಕ ಮಗ ಅಪ್ಪ ಯೋಗ ಮ್ಯಾಟ್ ಬೇಕು ಅಂತ ಕೇಳಿದ, ಆ ಪದವನ್ನು ಮೊದಲ ಸಲ ನಾನು ನನ್ನ ಕಿವಿಗಳ ಮೇಲೆ ಬಿದಿದ್ದರಿಂದ ಹಂಗದ್ರೆ ಏನ್ಲಾ ಅಂದೆ, ನನ್ನ ಮಗ ಬಿದ್ದು ಬಿದ್ದು ನಗಲು ಪ್ರಾರಂಭಿಸಿದ, ಅವರಣ್ಣನಿಗೆ ಅಣ್ಣ ಅಪ್ಪಾಜಿಗೆ ಯೋಗ ಮ್ಯಾಟ್ ಅಂದ್ರೆ ಗೊತ್ತಿಲ್ಲವಂತೆ ಅಂದ, ಅವನು ಬಂದವನೇ ನೀಜಕ್ಕೂ ಗೊತ್ತಿಲ್ವ, ನೋಡಿಲ್ವ ಅಂದ, ಇಲ್ಲ ಕಣೋ ಕೇಳಿಲ್ಲ, ನೋಡಿಲ್ಲ ಅಂದೆ, ಅವನು ಪಕಾ ಪಕಾ ನಗುತ್ತಾ ಈ ಭೂಮಿ ಮ್ಯಾಲೆ ಇರೋದೆ ವೇಸ್ಟ್ ಅಂದ.

ನನಗೆ ನಾಚಿಕೆ ಆದಂಗೆ ಆಗಿ, ಯಾವ ಅಂಗಡೀಲಿ ಸಿಗುತ್ತೆ ಅಂದೆ, ಎಂ.ಜಿ.ರೋಡ್ ಕೆ.ಕೆ.ಸ್ಟೋರ್‍ನಲ್ಲಿ ಸಿಗುತ್ತೇ ಅಂದ್ರು, ದೊಡ್ಡ ಮಗನ್ನ ಕರಕೊಂಡು ಅಂಗಡಿಗೆ ಹೋಗಿ ಬಿಎಂಡಬ್ಲು ಕಾರು ಕೊಳ್ಳುತ್ತಿರುವಂತೆ ಒಂದು ಯೋಗ ಮ್ಯಾಟ್ ಕೊಡ್ರಿ ಎಂದೆ, ಅವನು ಸುತ್ತಿದ ಚಾಪೆಯಂತಹ ದಪ್ಪ ಬಟ್ಟೆ ತಂದು ಕೈಗಿತ್ತ, ಅಂಗಡಿಯವನಿಗೆ ಏನಯ್ಯ ಯೋಗ ಮ್ಯಾಟು ಇದೇನ ಅಂದೆ, ಅವನು ನನ್ನನ್ನು ವಿಚಿತ್ರವಾಗಿ ನೋಡುತ್ತಾ ಯಾಕೆ ಯೋಗ ಮ್ಯಾಟು ನೋಡಿಲ್ವ ಅಂದ, ನನ್ನ ಮಗನಿಗೆ ನಾಚಿಕೆ ಆದಂಗೆ ಆಗಿ ದುಡ್ಡು ಕೊಟ್ಟು ಬಾರಪ್ಪ ಒಳ್ಳೆ ಹುಚ್ಚನ ತರ ಏನೇನೋ ಮಾತನಾಡುತ್ತೀಯ ಅಂದು ಮನೆಗೆ ಬಂದರೆ ನನ್ನ ಮಗ ಅಮ್ಮ ಅಪ್ಪನ ಜೊತೆ ನಾನು ಯಾವ ಅಂಗಡಿಗೂ ಹೋಗಲ್ಲ, ಅಂಗಡಿಯೋರ ಹತ್ತಿರ ಯೋಗ ಮ್ಯಾಟು ಇದೇನಾ ಅಂತ ಕೇಳುತ್ತೆ ಅಂದ, ನನ್ನ ಹೆಂಡ್ತಿ ಎಲ್ಲಿ ಯೋಗ ಮ್ಯಾಟು ಅಂತ ದಪ್ಪ ಬೆಡ್‍ಸೀಟ್ ತರದ್ದನ್ನು ತಿರುವಿ, ಬಿಚ್ಚಿ ನೋಡಿ, ಕೊಳೆಯಾದ್ರೆ ಒಗೆಯೋದು ಹ್ಯಂಗೆ ಅಂದಾಗ ನಾನು, ನಮ್ಮ ಮಗ ಇಬ್ಬರೂ ಅವಳಿಗೂ ಯೋಗ ಮ್ಯಾಟ್ ದರ್ಶನ ಇಂದೇ ಆಗಿದ್ದು ಎಂದು ಬಿದ್ದು ಬಿದ್ದು ನಕ್ಕೆವು.

ಆದ್ರೆ ರಾಘು ಮಗನಿಗೆ ಯೋಗ ಮ್ಯಾಟ್ ಕೊಡಿಸುವ ವೇಳೆಗೆ ಅದೊಂದು ಮಾಯಲೋಕವಾಗಿ, ಮಾಯಜಾಲವಾಗಿ ಬಿಸಿನೆಸ್ ಆಗಿರುವುದನ್ನು ಕಂಡು, ಯೋಗ ಮ್ಯಾಟ್ ಕಂಪನಿ ಮಾಡಿದ್ರು ಶ್ರೀಮಂತರಾಗಬಹುದಿತ್ತು ಎಂದು ರಾಘು ಹೇಳಿದಾಗ ಎಲ್ಲಾರು ಪಕಾರನೇ ನಗುತ್ತಾ ಮತ್ತಷ್ಟು ಯೋಗ ಮ್ಯಾಟ್ ಇಂದು ವ್ಯಾಪಾರ ಆಗಿರುವುದರ ಬಗ್ಗೆ ಚರ್ಚೆ ನಡೆಯಿತು.

ಈ ಯೋಗ ಬುದ್ಧನಿಂದ ಹುಟ್ಟದ್ದು ಎಂದು ಸಿನಿಮಾ ನಿರ್ದೇಶಕರು ಹಾಗೂ ನಮ್ಮ ಬುದ್ಧ ಗುರುಗಳಾದ ಕೆ.ಎಂ.ಶಂಕರಪ್ಪ ಹೇಳುತ್ತಿದ್ದರು.

ನಮ್ಮ ಸತೀಶ್ ಪ್ರಕಾರ ಯೋಗವನ್ನು ಕ್ರಿಯೇಟಿವಿಟಿಯಾಗಿ ಜಾರಿಗೆ ತಂದವರು ಗಾಂಧಿ. ಗಾಂಧಿ ಯಾವುದೇ ಒಂದು ಚಳುವಳಿಯನ್ನು ಕಟ್ಟುವಾಗ ಮೊದಲು ಜನರ ಜೊತೆಗೂಡಿ ಕಾರ್ಯ(ಕೆಲಸ, ಉಪ್ಪು ತಯಾರಿಸುವುದು, ನೇಯುವುದು) ಮಾಡಿ, ನಂತರ ಚಳುವಳಿ ಮಾಡುತ್ತಿದ್ದರು. ಅದೇ ನಮ್ಮ ಬುದ್ಧಿ ಜೀವಿಗಳು, ಪ್ರಗತಿ ಪರರು ಕ್ರಿಯೇಟಿವಿಟಿಯನ್ನೇ (ಕಾರ್ಯ ಮಾಡದೆ) ಎ.ಸಿ. ಕೆಳಗೆ ಸ್ಕಾಚ್ ಕುಡಿಯುತ್ತಾ, ಜಗತ್ತನ್ನು ಬದಲಾಯಿಸುತ್ತೇವೆ, ಜಾತಿ ಓಡಿಸುತ್ತೇವೆ, ಧರ್ಮ ಓಡಿಸುತ್ತೇವೆ ಎನ್ನುತ್ತಾರಲ್ಲಾ ಇವೆಲ್ಲಾ ಎಲ್ಲಿ ಓಡಿ ಹೋಗಿವೆ, ಈ ದಿನ ಯೋಗದ ಹೆಸರಲ್ಲೂ ರಾಜಕೀಯ ನಡೆಯುತ್ತಿರುವಾಗ, ಈ ಬುದ್ದಿಜೀವಿಗಳು ಮನೆಯ ಒಳಗೆ ಯೋಗ ಮಾಡಿ ಬೀದಿಲಿ ಯೋಗ ಮಾಡುವುದಿಲ್ಲ ಎಂದು ಹೇಳುವುದು ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ತಿಳಿಯುವುದಿಲ್ಲ ಅಂದುಕೊಂಡಿದ್ದಾರೆ ಎಂದು ನಮಗೆ ತಿವಿದರು.

ನಾನು ದಾವಣಗೆರೆಯಲ್ಲಿ 8ನೇ ತರಗತಿ ಓದುವಾಗ ಅತ್ಯುತ್ತಮ ಯೋಗ ಪಟು ಎಂದು ನಮ್ಮ ಪಿ.ಟಿ. ಮೇಷ್ಟರು ಮಲ್ನಾಡಿಹಳ್ಳಿ ಸ್ವಾಮಿಗಳ ಯೋಗಾಸನದ ಪುಸ್ತಕ ಬಹುಮಾನವಾಗಿ ಕೊಟ್ಟಿರುವುದು ಇನ್ನೂ ನನ್ನ ಪುಸ್ತಕದ ಕಪಾಟಿನಲ್ಲಿದೆ.

ಈಗೊಂದು ವರ್ಷದ ಹಿಂದೆ ಕುಸುರಿ ವಂಶದ ಅಧಿಕಾರಿಯೊಬ್ಬರು ಯೋಗ ದಿನಕ್ಕೂ ಮೊದಲು ಯೋಗ ಬಗ್ಗೆ ದೀರ್ಘವಾಗಿ ಬೈದು, ನಮ್ಮ ಕರ್ಮ ನಾಳೆ ನಾವು ಯೋಗ ಡ್ರೆಸ್ ಹಾಕಿಕೊಂಡು ತೋರಿಕೆಗೆ ಯೋಗವನ್ನು ಮೈದಾನದಲ್ಲಿ ಮಾಡಬೇಕೆಂಬ ಮಾತನ್ನು ನೆನಸಿಕೊಂಡು ನಕ್ಕು ನಕ್ಕು ಸಾಕಾಯಿತು.

ಇಂದು ಸರ್ಕಾರಿ ಯೋಗ ಮಾಡಿದವರಿಗೆ ಎಷ್ಟು ಜನಕ್ಕೆ ಬೊಜ್ಜು ಕರೆಗಿತು, ಎಷ್ಟು ಜನ ನೂರು ವರ್ಷ ಆಯಸ್ಸು ಪಡೆದುಕೊಂಡರು ಎಂಬುದು ಮುಖ್ಯವಲ್ಲ, ಯೋಗದ ಮೂಲಕ ಈ ಜಗತ್ತಿಗೆ, ಈ ದೇಶಕ್ಕೆ ನಮ್ಮ ಯೋಗ ಋಷಿಗಳು ಏನು ಹೇಳಲು ಹೊರಟಿದ್ದಾರೆ ಎಂಬುದು ಬಹಳ ಮುಖ್ಯ. ಯೋಗ ಮಾಡಿದ ಎಲ್ಲರ ಮನಸ್ಸು ಬುದ್ಧನ ಮನಸಾಗಿರಲಿ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *