ತುಮಕೂರು: ಪಾಶ್ಚತ್ಯ ಆಹಾರ ಪದ್ಧತಿ ಮಾರು ಹೋಗದೆ ನಮ್ಮ ಪೂರ್ವಜರು ಬಳಸುತ್ತಿದ್ದ ಪೌಷ್ಠಿಕ ಆಹಾರ ಬಳಸಿದಲ್ಲಿ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ಮಾನಸ್ಸಿಕ ಸಮತೋಲನ ಕಾಯ್ದುಕೊಳ್ಳ ಬಹುದು ಎಂದು ಮೈಸೂರು ಸಂಸ್ಥಾನದ ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ಅಭಿಪ್ರಾಯಪಟ್ಟರು.
ಅವರಿಂದು ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಮತ್ತು ಶ್ರೀ ಅನ್ನಪೂರ್ಣೇಶ್ವರಿ ವಿತರಣಾ ಸಮಿತಿಯಿಂದ ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕ ಮತ್ತು ಸ್ನಾತಕೋತರ ವಿದ್ಯಾರ್ಥಿಳಿಗೆ ಮಧ್ಯಾಹ್ನದ ಊಟದ ಯೋಜನೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ರೈತರು ಬೆಳೆಯುವ ಆಹಾರ ಪದಾರ್ಥಗಳಲ್ಲಿ ಎಲ್ಲಾ ರೀತಿಯ ಪೌಷ್ಠಿಕಾಂಶಗಳಿದ್ದು, ಆವುಗಳನ್ನೆ ನಮ್ಮ ಆಹಾರ ಪದ್ದತಿಯಲ್ಲಿ ಪ್ರತಿ ದಿನವೂ ಬಳಸಿದಲ್ಲಿ ದೇಹ ಮತ್ತು ಮನಸ್ಸಿನ ಆರೋಗ್ಯ ಚೆನ್ನಾಗಿರುತ್ತದೆ, ಕೆಲ ಪಾಶ್ಚತ್ಯ ಆಹಾರ ಪದ್ಧತಿಗಳಿಂದ ರೋಗ-ರುಜಿನಗಳಿಗೆ ತುತ್ತಾಗುತ್ತಿದ್ದು, ಅವುಗಳಿಂದ ಯುವ ಸಮುದಾಯ ದೂರವಿರುವಂತೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ನೀರು ಮತ್ತು ಆಹಾರ ಪದಾರ್ಥಗಳು ಕಲುಷಿತಗೊಳ್ಳುತ್ತಿರುವುದರ ಬಗ್ಗೆ ಆತಂಕ ವ್ಯಕ್ತ ಪಡಿಸಿದ ಯದುವೀರರು, ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ ಅವರು, ಹೆದ್ದಾರಿ ಇಕ್ಕಲೆಗಳಲ್ಲಿ ಮತ್ತು ಊರುಗಳ ಸರಹದ್ದಿನಲ್ಲಿ ಕಸದ ರಾಶಿಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ, ಸ್ವಚ್ಚ ಪರಿಸರದ ಹಂದಗೆಡಲಿದೆ ಈ ಹಿನ್ನಲೆಯಲ್ಲಿ ಪರಿಸರವನ್ನು ಸ್ವಚ್ಚವಾಗಿಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ನ್ಯಾಯಾಧೀಶರು ಹಾಗೂ ಮಾಜಿ ಲೋಕಾಯುಕ್ತರಾದ ಎನ್.ಸಂತೋಷ ಹೆಗಡೆ ಮಾತನಾಡಿ, ಭಾರತದ ಜನಸಂಖ್ಯೆಯ ಶೇಕಡ 14.8ರಷ್ಟು ಜನರು ಹಸಿವಿನಿಂದ ಬಳಲುತ್ತಿರುವುದು ತುಂಬಾ ವಿಷಾದನೀಯ, ವಿಶ್ವದಲ್ಲಿ ಹಸಿವಿನಿಂದ ನರಳುತ್ತಿರುವವರ ಸಂಖ್ಯೆಯಲ್ಲಿ ಭಾರತ 3ನೇ ಸ್ಥಾನದಲ್ಲಿರುವುದು ನಮ್ಮ ಮೌಲ್ಯಗಳು ಎಲ್ಲಿಗೆ ಹೋದವು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ ಎಂದರು.
ಹಸಿವು ಹೆಚ್ಚಲು ಕೆಲವರು ತಮ್ಮ ನಿರೀಕ್ಷೆಗೂ ಮೀರಿ ಸಂಗ್ರಹಿಸುತ್ತಿರುವುದೇ ಕಾರಣವಾಗಿದ್ದು, ಈ ಅನ್ಯಾಯವಾಗುತ್ತಿರುವುದಕ್ಕೆ ಸಮಾಜವೇ ಕಾರಣವಾಗಿದ್ದು, ಏಕೆಂದರೆ ಶ್ರೀಮಂತಿಕೆಯನ್ನು ಪೂಜಿಸಲಾಗುತ್ತಿದೆಯೇ ಹೊರತು, ಪ್ರಾಮಾಣಿಕತೆಯನ್ನು ಪೂಜಿಸುತ್ತಿಲ್ಲ, ತೃಪ್ತಿ ಇದ್ದರೆ ದುರಾಸೆ ಬರುವುದಿಲ್ಲ, ತೃಪ್ತಿ ಇದ್ದಲ್ಲಿ ಮಾನವೀಯತೆ, ಶಾಂತಿ ಸೌಹಾರ್ದತೆ ಇರಲು ಸಾಧ್ಯ ನಮ್ಮ ಹಿರಿಯರು ಇದನ್ನೇ ಕಟ್ಟಿದ್ದರು, ಆದರೆ ಈಗ ದುರಾಸೆಯು ಎಲ್ಲವನ್ನೂ ನುಂಗಿದೆ, ದುರಾಸೆಯ ಸಮಾಜವನ್ನು ಬದಲಾಯಿಸದಿದ್ದರೆ ಮನುಷ್ಯನೇ ಮನುಷ್ಯನಿಗೆ ಕಂಟಕವಾಗಲಿದ್ದಾನೆ ಎಂದರು.
ಈ ಹಿಂದೆ ಮಕ್ಕಳು ತಂದೆ, ತಾಯಿ, ಅಜ್ಜ, ಅಜ್ಜಿಯರ ಜೊತೆ ಬೆಳೆಯುವುದರಿಂದ ಮಾನವೀಯ ಗುಣಗಳನ್ನು ಕಲಿಯುತ್ತಿದ್ದರು, ಆದರೆ ಈಗ ಐ-ಪ್ಯಾಡ್, ಇಂಟರ್‍ನೆಟ್‍ನಿಂದ ಯಾವ ಮಾನವೀಯ ಗುಣಗಳನ್ನು ಬೆಳಸಿಕೊಳ್ಳಲು ಸಾಧ್ಯ ಎಂದು ವಿಷಾದಿಸಿದಿಸಿದ ಸಂತೋಷ ಹೆಗಡೆಯವರು, ನ್ಯೂಕ್ಲಿಯರ್ ಬಾಂಬ್ ತಯಾರಿಕೆಯನ್ನು ಹೇಳಿ ಕೊಡುತ್ತಿದ್ದವೇಯೆ ಹೊರತು ಅದರ ಬಳಕೆ ಒಳ್ಳೆಯದೋ, ಕೆಟ್ಟದ್ದೋ ಎಂಬ ಬಗ್ಗೆ ಯಾರು ಹೇಳಿ ಕೊಡುತ್ತಿಲ್ಲ ಎಂದರು.
ಭ್ರಷ್ಟಚಾರ ಮಿತಿಮೀರಿದ್ದು, ಜೈಲಿಗೆ ಹೋದವರು ಬೇಲ್ ಮೇಲೆ ಬಿಡುಗಡೆಯಾದರೆ ಏರ್ ಪೋರ್ಟ್‍ಗೆ ಹೋಗಿ ಹಾರ-ತುರಾಯಿ ಹಾಕಿ ಕರೆದುಕೊಂಡು ಬರುತ್ತಾರೆ, ಕೇಳಿದರೆ ಮಹಾತ್ಮ ಗಾಂಧೀಜಿನೂ ಜೈಲಿಗೆ ಹೋಗಿರಲಿಲ್ಲವೆ ಎನ್ನುತ್ತಾರೆ, ಇಂತಹ ಸಂದರ್ಭದಲ್ಲಿ ಯುವಕರು ಸಮಾಜದ ಬದಲಾವಣೆಗೆ ಮುಂದಾಗಬೇಕೆಂದರು.
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ನ್ಯಾಯಾಧೀಶರಾದ ಶ್ರೀಮತಿ ರತ್ನಕಲಾ ಮಾತನಾಡಿದರು, ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು, ಪಾವಗಡದ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದಜೀ ಮಹಾರಾಜ್ ಪ್ರಾಸ್ತಿವಿಕ ಮಾತುಗಳನ್ನಾಡಿದರು, ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಸ್ವಾಗತಿಸಿದರು,ವಿ.ವಿ.ಕುಲಸಚಿವರಾದ ನಾಹಿದ ಜóಮ್ ಜóಮ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಊಟದ ಯೋಜನೆಗೆ ಒತ್ತಾಸೆಯಾಗಿ ನಿಂತವರನ್ನು ಸನ್ಮಾನಿನಿಸಲಾಯಿತು.