ಕನ್ನಡವೇ ನಮ್ಮ ಬದುಕು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕು-ಡಾ: ಎಂ.ವಿ. ನಾಗರಾಜರಾವ್

ತುಮಕೂರು : ಕನ್ನಡ ಒಂದು ಭಾವನೆ, ಕನ್ನಡ ಒಂದು ಆತ್ಮ. ಅದು ನಮಗೆ ಅನ್ನ, ವಸತಿ, ನೆಮ್ಮದಿಯನ್ನು ಕೊಟ್ಟಿದೆ. ಈ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಯೋಚಿಸುವಂತಾಗಬೇಕು. ವರ್ಷಕ್ಕೊಮ್ಮೆ ಕನ್ನಡ ಎನ್ನದೆ ಎಲ್ಲಾ ದಿನಗಳಲ್ಲೂ ಕನ್ನಡ ನಮ್ಮ ಭಾಷೆ, ಕನ್ನಡವೇ ನಮ್ಮ ಬದುಕು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ಸಮ್ಮೇಳಾಧ್ಯಕ್ಷರಾದ ಡಾ. ಎಂ.ವಿ. ನಾಗರಾಜರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ ಜಿಲ್ಲಾ ಕನ್ನಡ¸ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ಸಮರ್ಪಕವಾಗಿ ಅನುಷ್ಠಾನವಾಗಬೇಕು. ಆಗ ಮಾತ್ರ ಕನ್ನಡ ಭಾಷೆಗೆ ಒಳ್ಳೆಯ ಆರಂಭ ಸಿಗುತ್ತದೆ ಎಂದರು.

ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಕನ್ನಡ ಭಾಷೆ ತನ್ನ ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಉನ್ನತ ಸ್ಥಾನಮಾನ ದೊರೆಯುವಂತಾಗಬೇಕು. ಅಲ್ಲಿಯವರೆಗೂ ಕನ್ನಡಕ್ಕೆ ಸಂಕಟ ಇದ್ದದ್ದೇ ಎಂದು ಅವರು ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವ ಅವಕಾಶ ದೊರೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಕನ್ನಡವನ್ನು ಪ್ರಮುಖ ಭಾಷೆಯನ್ನಾಗಿ ಕಲಿಯುವ ವಿದ್ಯಾರ್ಥಿಗಳಲ್ಲಿ ಕೀಳರಿಮೆ ಹೋಗಲಾಡಿಸುವ ಪ್ರಯತ್ನವಾಗಬೇಕು. ಕನ್ನಡವನ್ನು ನಾವು ನಿರ್ಲಕ್ಷಿಸಬಹುದು ಎಂಬ ತಪ್ಪು ಕಲ್ಪನೆಯನ್ನು ಕಳೆಯಬೇಕು. ಇದರಲ್ಲಿ ಪೆÇೀಷಕರ ಪಾತ್ರವು ಪ್ರಮುಖವಾಗಿದೆ ಎಂದು ಅವರು ಹೇಳಿದರು.
ಕನ್ನಡದ ವಿಷಯದಲ್ಲಿ ಪ್ರೀತಿ, ಗೌರವ ಮತ್ತು ವಿಶ್ವಾಸವನ್ನು ಹೊಂದುವವರೆಗೆ ಭಾಷೆಯ ಕಡೆಗಣನೆ ನಡೆಯುತ್ತಲೇ ಇರುತ್ತದೆ. ಬೇರೆ ಬೇರೆ ರಾಜ್ಯಗಳಿಂದ ಬಂದ ಅಧಿಕಾರಿಗಳು ಕನ್ನಡವನ್ನು ಮನತುಂಬಿ ಒಪ್ಪಿಕೊಳ್ಳುತ್ತಿಲ್ಲ. ಇದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ಹೊರ ರಾಜ್ಯದ ಅಧಿಕಾರಿಗಳು ಕನ್ನಡ ಕಲಿಯದಿದ್ದರೆ ಅವರ ಮೇಲೆ ಶಿಸ್ತು ಕ್ರಮದ ಬಗ್ಗೆಯೂ ಯೋಚಿಸಬೇಕಿದೆ ಎಂದರು.

ಜಾಗತೀಕರಣ ಮತ್ತು ಉದಾರೀಕರಣದ ಪ್ರಭಾವ ನಮ್ಮ ಬದುಕಿನ ಮೇಲೆ ಗಾಢವಾಗಿ ಬೀರುತ್ತಿದೆ. ನಮ್ಮ ಸಂಸ್ಕೃತಿ ಮತ್ತು ಬದುಕಿನ ವಿಶಿಷ್ಟ ಲಕ್ಷಣಗಳು ಮರೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ದೇಸಿ ಭಾವನೆಯನ್ನು ತಿಳಿಯದಿದ್ದರೆ ನಮ್ಮ ಅಸ್ತಿತ್ವ ಡೋಲಾಯಮಾನವಾಗುವ ಸಾಧ್ಯತೆ ಇದೆ. ಹಾಗಾಗಿ ಕನ್ನಡಿಗರಿಗೆ ಕನ್ನಡದ ಮೂಲಕ ಬದುಕುವ ಆತ್ಮವಿಶ್ವಾಸವನ್ನು ಮೂಡಿಸಬೇಕಾಗಿದೆ ಎಂದರು.

ಕನ್ನಡ ಭಾಷೆ ಮತ್ತು ಬದುಕುಗಳ ನಡುವೆ ನಿಕಟ ಬಾಂಧವ್ಯವನ್ನು ಬೆಸೆಯುವ ಭಾವವೇ ನಿಜವಾದ ಕನ್ನಡಾಭಿಮಾನವೆಂದು ಅರಿತುಕೊಳ್ಳುವ ಅಗತ್ಯವಿದೆ. ಕನ್ನಡವನ್ನು ಬಳಸುವ, ಬೆಳೆಸುವ ಕೆಲಸವನ್ನು ಮಾಡಬೇಕು. ಕರ್ನಾಟಕದ ಪ್ರತಿ ಮನೆಯಲ್ಲೂ ಕನ್ನಡ ಜ್ಯೋತಿ ಬೆಳಗಬೇಕು ಎಂದರು.
ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ಶಾಲೆಗಳಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸಬೇಕು. ಕಟ್ಟಡ, ಪೀಠೋಪಕರಣ, ಪಾಠೋಪಕರಣ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಗ್ರಂಥಾಲಯ, ಸಮಯಕ್ಕೆ ಸರಿಯಾಗಿ ಪುಸ್ತಕ, ಬಟ್ಟೆ ಸೇರಿದಂತೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ವಿಳಂಬ ಇಲ್ಲದೆ ಒದಗಿಸಬೇಕಾಗಿದೆ ಎಂದರು.

Leave a Reply

Your email address will not be published. Required fields are marked *