ತುಮಕೂರು: ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕರಾದ ಹೊಲತಾಳು ಸಿದ್ಧಗಂಗಯ್ಯ ಅವರ ತೋಟಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ನಾಶ ಮಾಡಿದ್ದಾರೆ.
ನಾನೊಬ್ಬ ‘ಕಾಡಂಚಿನ ರೈತ’ ನೆಂದು ಪರಿಚಯಿಸಿಕೊಳ್ಳುವ ನಮ್ಮೆಲ್ಲರ ಪ್ರೀತಿಯ ಮೇಸ್ಟ್ರು ‘ಸಿದ್ಧಗಂಗಯ್ಯ ಹೊಲತಾಳು’ ಅವರ ‘ಕುರಂಕೋಟೆ’ ಬುಡದಲ್ಲಿರುವ ‘ಹೊಲತಾಳು’ ಎಂಬ ಗ್ರಾಮದಲ್ಲಿರುವ ತೋಟಕ್ಕೆ ಹೋಗುವುದೆಂದರೆ ಎಂಥದ್ದೂ ಖುಷಿ.
ತಮ್ಮ 5 ಎಕರೆ ಜಾಗದಲ್ಲಿ ಮಾವು, ಬಾಳೆ, ತೆಂಗು, ಶ್ರೀಗಂಧ ಹೀಗೆ ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಇವರ ತೋಟದ ಸನಿಹದಲ್ಲೇ ಇರುವ ‘ತಲಪರಿಕೆ’ಗಳು. ತೋಟದ ಹಿಂಬದಿಯಲ್ಲಿ ಕಣ್ಣು ಹಾಯಿಸಿದ್ದಷ್ಟು ಎತ್ತರಕ್ಕೆ ನಿಂತಿರುವ ಬೆಟ್ಟಗಳು. ಸ್ವತಃ ಮೇಷ್ಟ್ರೇ ತಮ್ಮ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಬಳಿಕ ತೋಟವನ್ನು ಅಸ್ಥೆಯಿಂದ ಜೋಪಾನ ಮಾಡಿದ್ದರು.ನನ್ನ ಅನೇಕ ಸ್ನೇಹಿತರನ್ನು ಇವರ ತೋಟಕ್ಕೆ ಕರೆದುಕೊಂಡು ಹೋಗಿದ್ದೇನೆ.
ನಾನು ಕೂಡ ಇವರ ತೋಟಕ್ಕೆ ಹಲವಾರು ಬಾರಿ ಹೋಗಿದ್ದೇನೆ. ತೋಟದಲ್ಲೇ ವಿಚಾರ ಸಂಕಿರಣ ಸೇರಿದಂತೆ ನಾಟಕ, ಸಂಗೀತಕ್ಕಾಗಿ ಪುಟ್ಟ ಕಟ್ಟಡವನ್ನು ನಿರ್ಮಿಸಿದ್ದಾರೆ. ಇಲ್ಲೇ ಇರುವ ‘ಪ್ರೊಫೆಸರ್ ಅಡ್ಡ’ದಲ್ಲಿ ಕುಳಿತು ಅವರ ತರೆಸಿಕೊಟ್ಟ ಹಳ್ಳಿ ಊಟವನ್ನು ಸವೆದಿದ್ದೇವೆ. ಇವರ ತೋಟದಲ್ಲಿ ಇಡೀ ರಾತ್ರಿ ‘ಮೈಲಾರಲಿಂಗನ ಪದ’ವನ್ನು ಓದಿದ್ದೇವೆ.
ನಾನೇ ಬಿತ್ತಿದ್ದ ಬಿತ್ತನೆ ಬೀಜಗಳು ಗಿಡವಾಗಿದ್ದವು. ತಮ್ಮ ತೋಟವನ್ನೇ ಕೇಂದ್ರವಾಗಿಟ್ಟುಕೊಂಡು ‘ಸುವರ್ಣಮುಖಿ’ ಸೇರಿದಂತೆ ಮೂರು ಕೃತಿಗಳನ್ನು ರಚಿಸಿದ್ದಾರೆ. ಒಂದು ಕಡೆ ‘ಸಿದ್ದರಬೆಟ್ಟ’, ಇನ್ನೊಂದು ಕಡೆ ‘ದೊಡ್ಡಕಾಯಪ್ಪ’ ದೇವಸ್ಥಾನ ಅದರ ಸಮೀಪವೆ ಇವರ ತೋಟ. ಯಾರೋ ಬೆಟ್ಟಕ್ಕೆ ಬೆಂಕಿ ಹಾಕಿದ್ದಾರೆ.
ಬೆಂಕಿಯ ಜ್ವಾಲೆ ವ್ಯಾಪಿಸಿ ಇವರ ತೋಟವನ್ನು ಆಹುತಿ ತೆಗೆದುಕೊಂಡಿದೆ. ತೆಂಗು, ಮಾವು, ಶ್ರೀಗಂಧ, ನಿಂಬೆ ಸೇರಿ 300 ಕ್ಕೂ ಹೆಚ್ಚು ಮರಗಳು ಕರಕಲಾಗಿದೆ. ಸ್ವತಃ ‘ಸಿದ್ಧಗಂಗಯ್ಯ ಹೊಲತಾಳು’ ಅವರಂತೂ ಬೆಟ್ಟಕ್ಕೆ ಬೆಂಕಿ ಹಾಕಿದರೆ ಏನೆಲ್ಲ ತೊಂದರೆಯಾಗುತ್ತದೆ ಎಂದು ಕರಪತ್ರ ಹಂಚಿ ಜಾಗೃತಿ ಮೂಡಿಸುತ್ತಿದ್ದರು. ಆದರೆ ಯಾರದ್ದೋ ಬೇಜವಾಬ್ದಾರಿಯಿಂದ ಇವರ ತೋಟ ನಾಶವಾಗಿದೆ.
(ಪತ್ರಕರ್ತರಾದ ಉಗಮ ಶ್ರೀನಿವಾಸ್ ಅವರ ಫೇಸ್‍ಬುಕ್ ವಾಲ್‍ನಿಂದ)